ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ | ನೀರಿಗಾಗಿ ಉಮರಾಣಿ ಗ್ರಾಮಸ್ಥರು ಹೈರಾಣ

ಮೂರು ದಿನಗಳಿಗೊಮ್ಮೆ ಟ್ಯಾಂಕರ್‌ ಮೂಲಕ ಪೂರೈಕೆ, ತೋಟಪಟ್ಟಿ ನಿವಾಸಿಗಳ ಪರದಾಟ
ಚಂದ್ರಶೇಖರ ಎಸ್ ಚಿನಕೇಕರ
Published 16 ಮಾರ್ಚ್ 2024, 4:18 IST
Last Updated 16 ಮಾರ್ಚ್ 2024, 4:18 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ಉಮರಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಮರಾಣಿ ಹಾಗೂ ಇಟ್ನಾಳ್‌ ಗ್ರಾಮಗಳಲ್ಲಿ, ಬೇಸಿಗೆ ಆರಂಭದಿಂದಲೇ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಬಂದಿದೆ. ದಿನ ಬೆಳಗಾದರೆ ಮಹಿಳೆಯರು ಕೊಡಗಳನ್ನು ಹೊತ್ತು ಅಲೆಯುವುದು ಅನಿವಾರ್ಯವಾಗಿದೆ.

ಉಮರಾಣಿ ಗ್ರಾಮದಲ್ಲಿ 6,000 ಜನಸಂಖ್ಯೆ ಇದೆ. 12 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಗ್ರಾಮದ ತೋಟಪಟ್ಟಿ ವಸತಿಗಳಲ್ಲಿ ಕಳೆದ 10 ದಿನಗಳಿಂದ 4 ಟ್ಯಾಂಕರ್‌ನಿಂದ ಸರದಿಯಂತೆ ನೀರು ಪೂರೈಸಲಾಗುತ್ತಿದೆ.

ಪರಿಶಿಷ್ಟ ಜಾತಿ ಕಾಲೊನಿ, ಬಾಗೇವಾಡಿ ತೋಟ, ಕರೆನ್ನವರ ತೋಟ, ಮಖಣಿ ತೋಟ, ಪಾಶ್ಚಾಪೂರ ತೋಟದ ವಸತಿಗಳಿಗೆ ಎರಡು ದಿನಗಳಿಗೊಮ್ಮೆ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ.

2022-23ನೇ ಸಾಲಿನಲ್ಲಿ ಪೂರ್ಣಗೊಳ್ಳಬೇಕಿದ್ದ ₹2.6 ಕೋಟಿ ವೆಚ್ಚದ ಜಲ ಜೀವನ ಮಿಷನ್ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ ಜೆಜೆಎಂ ಯೋಜನೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಗೊಂಡಿಲ್ಲ. ಗ್ರಾಮದ 804 ನಲ್ಲಿಗಳಲ್ಲಿ ನೀರು ಬರಬೇಕಿತ್ತು. ಅಪೂರ್ಣಗೊಂಡ ಕಾಮಗಾರಿಯಿಂದ 400 ನಲ್ಲಿಗಳಿಗೆ ಮಾತ್ರ ಬರುತ್ತಿದೆ. ಅದರಲ್ಲೂ 1 ತಾಸು ಮಾತ್ರ ನೀರು ಬರುತ್ತದೆ. ಗ್ರಾಮದ ಅರ್ಧ ಭಾಗದ ಜನರಿಗೆ ಮನೆಮನೆ ಗಂಗೆ ಬರುತ್ತಿದ್ದರೆ, ಇನ್ನರ್ಧ ಊರು ಗಂಗೆಯನ್ನು ಹುಡುಕಿಕೊಂಡು ಹೋಗಬೇಕಾಗಿದೆ.

ಈ ಹಿಂದೆಯೇ ಕೊರೆಸಿದ 24 ಕೊಳವೆಬಾವಿಗಳು ಇದ್ದರೂ 9 ಬಂದ್ ಆಗಿ ತಿಂಗಳುಗಳೇ ಕಳೆದಿವೆ. 2 ಕೊಳವೆಬಾವಿಗಳಲ್ಲಿ ಒಂದು ಗಂಟೆಯವರೆಗೆ ಮಾತ್ರ ನೀರು ಬರುತ್ತದೆ. ಇನ್ನುಳಿದ ಕೊಳವೆಬಾವಿಗಳು ಬತ್ತಿ ಹೋಗಿವೆ. ಇಡೀ ದಿನ ಕಾದರೂ ಹತ್ತು ಕೊಡ ನೀರು ಸಿಗುವುದಿಲ್ಲ.

ಈ ಊರು ಎತ್ತರ ಪ್ರದೇಶದಲ್ಲಿರುವ ಕಾರಣ ಅಂತರ್ಜಲ ಮಟ್ಟ ಕಡಿಮೆ ಇದೆ. ಇದರ ನಡುವೆ ಪ್ರತಿ ದಿನ ಮೂರು ತಾಸು ಮಾತ್ರ ವಿದ್ಯುತ್ ಪೂರೈಕೆ ಆಗುತ್ತಿರುವುದು ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳಲು ಕಾರಣ.

ತಹಶೀಲ್ದಾರ್‌ ಚಿದಂಬರ ಕುಲಕರ್ಣಿ ಅವರ ಸೂಚನೆ ಮೇರೆಗೆ ಕಳೆದ 10 ದಿನಗಳಿಂದ 4 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ಇದ್ಯಾವುದಕ್ಕೂ ಸಾಲುತ್ತಿಲ್ಲ. ತೋಟಪಟ್ಟಿಗಳಿಗೇ ಮೂರು ದಿನಕ್ಕೊಮ್ಮೆ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡುತ್ತಿರುವುದರಿಂದ ಜನರು ನೀರು ಸಂಗ್ರಹಿಸಿ ಇಟ್ಟುಕೊಳ್ಳಲು ಹರಸಾಹಸ ಮಾಡುವಂತಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಮಾರ್ಚ್ ತಿಂಗಳಲ್ಲಿಯೇ ಇಷ್ಟೊಂದು ಸಮಸ್ಯೆ ಇರುವಾಗ ಏಪ್ರಿಲ್, ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುವುದು ಹೇಗೆ ಎಂಬುದು ಜನರ ಚಿಂತೆ. ಅರ್ಧಕ್ಕೆ ನಿಂತ ಜಲ ಜೀವನ ಮಿಷನ್ ಕಾಮಗಾರಿ ಪೂರ್ಣಗೊಳಿಸಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬುದು ಅವರ ಬೇಡಿಕೆ.

ಕೈ ಪಂಪ್ ದುರಸ್ತಿ ಮಾಡಿದರೂ ಅರ್ಧ ಗಂಟೆಗೆ ನಾಲ್ಕು ಕೊಡ ತುಂಬುತ್ತಿಲ್ಲ. ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚುತ್ತಿದೆ. ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡಿದ್ದು ಕ್ರಮಕ್ಕೆ ಕಾಯಲಾಗುತ್ತಿದೆ- ಸಂಜಯ ಚನ್ನವರ ಪಿಡಿಒ

ಮೂರು ದಿನಕ್ಕೊಮ್ಮೆ ಟ್ಯಾಂಕರ್‌ ನೀರು ಬರುತ್ತದೆ. ಬಟ್ಟೆ ತೊಳೆಯಲು ಸ್ನಾನ ಮಾಡಲು ಜಾನುವಾರುಗಳಿಗೆ ಹೇಗೆ ಸಂಗ್ರಹಿಸಿಕೊಳ್ಳುವುದು ಎಂಬುದೇ ದೊಡ್ಡ ಚಂತೆಯಾಗಿದೆ.- ಹೌಸಾಬಾಯಿ ದಾನನ್ನವರ ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT