ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾಂಬಿಕಾ ಮುಕ್ತಿಕ್ಷೇತ್ರದಲ್ಲಿ ಜಾತ್ರೆ ಇಂದಿನಿಂದ

ಎಸ್.ಬಿ.ವಿಭೂತಿಮಠ
Published 15 ಜನವರಿ 2024, 4:13 IST
Last Updated 15 ಜನವರಿ 2024, 4:13 IST
ಅಕ್ಷರ ಗಾತ್ರ

ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಬಳಿಯ ಮಲಪ್ರಭಾ ನದಿ ಮಧ್ಯದಲ್ಲಿರುವ ಜಗಜ್ಯೋತಿ ಬಸವೇಶ್ವರ ಧರ್ಮಪತ್ನಿ ಶರಣೆ ಗಂಗಾಂಬಿಕೆ ಐಕ್ಯ ಕ್ಷೇತ್ರ ಮಕರ ಸಂಕ್ರಮಣಕ್ಕೆ ಸಿದ್ಧಗೊಂಡಿದೆ.

ಜ.15 ಮತ್ತು 16ರಂದು ಜಾತ್ರೆ ನಡೆಯಲಿದ್ದು, ಮಕರ ಸಂಕ್ರಮಣ ಪುಣ್ಯಸ್ನಾನಕ್ಕಾಗಿ ಮಲಪ್ರಭಾ ನದಿಯತ್ತ ಜನ ಸಾಗರವೇ ಹರಿದು ಬರಲಿದ್ದು, ನದಿ ತಟದಲ್ಲಿ ಸ್ಥಳೀಯ ಪಟ್ಟಣ ಪಂಚಾಯತಿ ವತಿಯಿಂದ ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ನದಿ ಮಧ್ಯದ ಶರಣೆ ಗಂಗಾಂಬಿಕಾ ಐಕ್ಯಮಂಟಪಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಗಂಗಾಂಬಿಕಾ ಮುಕ್ತಿಕ್ಷೇತ್ರ ಟ್ರಸ್ಟ್ ವತಿಯಿಂದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಐಕ್ಯಮಂಟಪದ ಎದುರು ಪೆಂಡಾಲ್ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.  

ಎರಡು ದಿನ ನದಿ ತೀರದಲ್ಲಿ ಜಾತ್ರೆ ನಡೆಯುವುದರಿಂದ ಬಳೆ, ಆಟಿಕೆ ಮತ್ತು ವಿವಿಧ ವಸ್ತುಗಳ ಮಾರಾಟ ಮಳಿಗೆಗಳು ವ್ಯಾಪಾರಕ್ಕಾಗಿ ಸಿದ್ಧಗೊಂಡಿವೆ. ಕಿತ್ತೂರು ಪೊಲೀಸ್ ಠಾಣೆಯಿಂದ ನದಿ ತೀರದಲ್ಲಿ ಅಗತ್ಯ ಭದ್ರತೆ ಕಲ್ಪಿಸಲಾಗಿದೆ.

ಹಿನ್ನೆಲೆ: 12ನೇ ಶತಮಾನದಲ್ಲಿ ನಡೆದ ಕ್ರಾಂತಿಯಿಂದಾಗಿ ವಚನ ಸಾಹಿತ್ಯ ರಕ್ಷಣೆಗಾಗಿ ಶರಣರ ತಂಡ ಕಲ್ಯಾಣ ತೊರೆಯಿತು. ಒಂದು ತಂಡ ಕೂಡಲಸಂಗಮದ ಕಡೆಗೆ, ಇನ್ನೊಂದು ತಂಡ ಉಳವಿಯತ್ತ ಸಾಗಿತು. ಉಳವಿಯತ್ತ ಸಾಗಿದ ಚನ್ನಬಸವಣ್ಣನವರ ನೇತೃತ್ವದ ಶರಣರ ತಂಡದ ಮೇಲೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಕಾದರವಳ್ಳಿ(ಆಗಿನ ಕಾದಾಡಿದ ಹಳ್ಳಿ)ಯಲ್ಲಿ ಬಿಜ್ಜಳನ ಸೈನ್ಯ ದಾಳಿ ನಡೆಸಿದಾಗ ಶರಣರ ತಂಡದಲ್ಲಿದ್ದ  ಬಸವೇಶರ ಧರ್ಮಪತ್ನಿ ಶರಣೆ ಗಂಗಾಂಬಿಕೆ ವೀರಮರಣ ಹೊಂದಿದರೆಂಬ ಪ್ರತೀತಿ ಇದೆ. ಆಗ ಅವರ ಮೃತ ಶರೀರವನ್ನು ಎಂ.ಕೆ.ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿ ದಡದಲ್ಲಿ ಸಮಾಧಿ ಮಾಡಲಾಯಿತು ಎನ್ನಲಾಗಿದೆ.

ಆಕರ್ಷಕ ಐಕ್ಯ ಮಂಟಪ: ನದಿ ಹರಿವು ಹೆಚ್ಚಾಗುತ್ತಿದ್ದಂತೆ ಕ್ರಮೇಣ ನದಿ ಮಧ್ಯದಲ್ಲಿ ಬಂದ ಗಂಗಾಂಬಿಕೆಯವರ ಸಮಾಧಿ ಮೇಲೆ ಹಳೆಯ ಗರ್ಭಗುಡಿ ಇತ್ತು. ನೀರಿನ ಹರಿವು ಹೆಚ್ಚಾದಂತೆ ಆ ಗರ್ಭಗುಡಿಯು ವಾಲುತ್ತ ಸಾಗಿತು. ಇದನ್ನು ಮನಗಂಡ ಶರಣೆ ಗಂಗಾಂಬಿಕಾ ಮುಕ್ತಿಕ್ಷೇತ್ರ ಟ್ರಸ್ಟ್ ನೂತನ ಐಕ್ಯಮಂಟಪಕ್ಕಾಗಿ ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ನಿರಂತರ ಮನವಿ ಮತ್ತು ಒತ್ತಾಯ ಮಾಡಲಾರಂಭಿಸಿತು. ಹೋರಾಟದ ಫಲವಾಗಿ 2012ರಲ್ಲಿ ₹ 5.20ಕೋಟಿ ವೆಚ್ಚದಲ್ಲಿ ವಿನೂತನ ಶೈಲಿಯ ಶರಣೆ ಗಂಗಾಂಬಿಕೆಯ ನೂತನ ಐಕ್ಯ ಮಂಟಪ ಲೋಕಾರ್ಪಣೆಗೊಂಡಿತು. ಪ್ರವಾಸಿಗರ ಆಕರ್ಷಿಣಿಯ ತಾಣವಾಗಿ ಗುರುತಿಸಿಕೊಂಡಿರುವ ಐಕ್ಯಮಂಟಪ ವೀಕ್ಷಣೆಗೆ ಪ್ರತಿದಿನ ನೂರಾರು ಜನರು ಭೇಟಿನೀಡುತ್ತಾರೆ. ಸುಂದರ ಉದ್ಯಾನವು ಇಲ್ಲಿದೆ.

ಒಂದೇ ಕಡೆ ಮೂರು ದೇವಸ್ಥಾನ: ಮಲಪ್ರಭಾ ನದಿ ಮಧ್ಯದ ಶರಣೆ ಗಂಗಾಂಬಿಕಾ ಐಕ್ಯಮಂಟಪಕ್ಕೆ ಬರುವ ಭಕ್ತರಿಗೆ ಒಂದೇ ಕಡೆ ಮೂರು ಐತಿಹಾಸಿಕ ದೇವಸ್ಥಾನಗಳ ದರ್ಶನವಾಗುತ್ತದೆ. ನೂರಾರು ವರ್ಷಗಳ ಹಿನ್ನೆಲೆ ಹೊಂದಿರುವ ಅಶ್ವತ್ಥ ಲಕ್ಷ್ಮೀನರಸಿಂಹ ದೇವಸ್ಥಾನ ಹಾಗೂ ವಿಠ್ಠಲ ರುಕ್ಮೀಣಿ ದೇವಸ್ಥಾನಗಳು ಇಲ್ಲೇ ಇವೆ.  

ಸಂಕ್ರಮಣದ ಮುನ್ನಾ ದಿನವಾದ ಭಾನುವಾರವೂ ಕಾದರವಳ್ಳಿ ಸೇರಿ ಕೆಲವೆಡೆ ಮಕರ ಸಂಕ್ರಮಣ ಆಚರಿಸಲಾಗಿದೆ. ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಿ, ದೇವರ ದರ್ಶನ ಪಡೆದರು. ಕುಟುಂಬ ಸಮೇತರಾಗಿ ಮನೆಯಿಂದ ತಂದಿದ್ದ ಊಟ ಸವಿದರು.

ಎಂ.ಕೆ.ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿ ಮಧ್ಯದ ಶರಣೆ ಗಂಗಾಂಬಿಕಾ ಐಕ್ಯಮಂಟಪ.
ಎಂ.ಕೆ.ಹುಬ್ಬಳ್ಳಿ ಬಳಿಯ ಮಲಪ್ರಭಾ ನದಿ ಮಧ್ಯದ ಶರಣೆ ಗಂಗಾಂಬಿಕಾ ಐಕ್ಯಮಂಟಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT