ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೌಜಲಗಿ: ನನಸಾಗದ ಸಿಪಿಐ ಕಚೇರಿ, ಪೊಲೀಸ್ ಠಾಣೆ

ವಾಣಿಜ್ಯ, ಆರೋಗ್ಯ, ಶಿಕ್ಷಣ ಕೇಂದ್ರವಾಗಿ ಬೆಳೆದ ಕೌಜಲಗಿ, 30 ಹಳ್ಳಿಗಳ ಜನರಿಗೆ ಬೇಕಿದೆ ಸೌಕರ್ಯ
ರಾಜು ಕಂಬಾರ
Published 21 ಮೇ 2024, 4:10 IST
Last Updated 21 ಮೇ 2024, 4:10 IST
ಅಕ್ಷರ ಗಾತ್ರ

ಕೌಜಲಗಿ: ಗೋಕಾಕ ತಾಲ್ಲೂಕಿನ ಅರಭಾವಿ ವಿಧಾನಸಭಾ ಮತಕ್ಷೇತ್ರದ ಕೌಜಲಗಿ ದೊಡ್ಡ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಹಾಗೂ ಭೌಗೋಳಿಗವಾಗಿ ಇದು ತಾಲ್ಲೂಕು ಕೇಂದ್ರವಾಗಿ ಅರ್ಹತೆ ಹೊಂದಿದೆ. ಈ ಪ್ರದೇಶದಲ್ಲಿ ಅಪರಾಧ, ಅಪಘಾತಗಳ ಸಂಖ್ಯೆಯೂ ಹೆಚ್ಚು. ಹೊಸ ಪೊಲೀಸ್‌ ಠಾಣೆ ಮತ್ತು ಸಿಪಿಐ ಕಚೇರಿ ಮಂಜೂರು ಮಾಡಬೇಕು ಎಂಬ ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ.

ಅಂದಾಜಿನ ಪ್ರಕಾರ ಈಗ 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ವ್ಯಾಪಾರ ವಹಿವಾಟಿಗಾಗಿ ಪಟ್ಟಣದ ಸುತ್ತಲಿನ 30 ಗ್ರಾಮಗಳ ಜನ ನಿತ್ಯ ಓಡಾಡುತ್ತಾರೆ. ಇದರಿಂದ ದ್ವಿಚಕ್ರ ವಾಹನ, ಕಾರ್‌, ಬಸ್‌, ಲಾರಿಗಳ ಓಡಾಟವೂ ಹೆಚ್ಚಾಗಿದೆ. ಸಂಚಾರ ದಟ್ಟಣೆ ಸಹಜವಾಗಿಯೇ ಹೆಚ್ಚಾಗುತ್ತ ಸಾಗಿದೆ.

ಗುರುವಾರ ವಾರದ ಸಂತೆಯ ದಿನದಂದು ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್‌ನಿಂದ ರವಿವರ್ಮ ಚೌಕ್‌ವರಿಗೆ ವಾಹನಗಳನ್ನು ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಾರೆ. ಇಲ್ಲಿ ಸಂಚಾರ ನಿಯಂತ್ರಣ ಸರಿಯಾಗಿ ಆಗುತ್ತಿಲ್ಲ. ಶಾಲೆ, ಕಾಲೇಜುಗಳ ಸಂಖ್ಯೆಯೂ ಹೆಚ್ಚುತ್ತ ಸಾಗಿದೆ. ಶಾಲಾ– ಕಾಲೇಜು ವಾಹನಗಳ ಓಡಾಟ ಕೂಡ ದೊಡ್ಡ ಸಂಖ್ಯೆಯಲ್ಲಿದೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಳ್ಳಿಗಳ ಜನ ಕೂಡ ಬರುತ್ತಾರೆ.

ಗೊಡಚನಮಲ್ಕಿ– ಬಾದಾಮಿ ರಾಜ್ಯ ಹೆದ್ದಾರಿ ಮತ್ತು ಜಾಂಬೋಟಿ– ರಬಕವಿ ರಾಜ್ಯ ಹೆದ್ದಾರಿಗಳು ಪಟ್ಟಣಕ್ಕೆ ಸಂಪರ್ಕ ಕೊಂಡಿಯಾಗಿವೆ. ಎರಡು ರಾಜ್ಯ ಹೆದ್ದಾರಿಗಳು ಪಟ್ಟಣದಲ್ಲಿ ಹಾಯ್ದು ಹೋಗಿದ್ದು ಭಾರಿ ವಾಹನಗಳ ದಟ್ಟಣೆ ದಿನವೂ ಇರುತ್ತದೆ. ಆದರೆ, ಸಂಚಾರ ನಿಯಂತ್ರಣಕ್ಕೆ ಬೇಕಾದಷ್ಟು ಪೊಲೀಸ್ ಬಲ ಇಲ್ಲ.

ಸದ್ಯ ಪಟ್ಟಣ ಸುತ್ತಲಿನ 30 ಗ್ರಾಮಗಳು ಮೂಡಲಗಿ ತಾಲ್ಲೂಕಿನ ಕುಲಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿವೆ. ಚಿಗಡೊಳ್ಳಿ, ಅಡಿಬಟ್ಟಿ, ಮೆಳವಂಕಿ, ಉದಗಟ್ಟಿ, ನಿಂಗಾಪುರ, ತಪಸಿ, ಕೆಮ್ಮನಕೋಲ, ಬೇಟಗೇರಿ, ಬಗರನಾಳ, ಮನ್ನಿಕೇರಿ, ಕಳ್ಳಿಗುದ್ದಿ, ಗೋಸಬಾಳ, ರಡ್ಡೇರಟ್ಟಿ, ಬಿಲಕುಂದಿ ಮುಂತಾದ ಗ್ರಾಮಗಳು ಗೋಕಾಕ ತಾಲೂಕಿನಲ್ಲಿವೆ. ಆದರೆ, ಮೂಡಲಗಿ ತಾಲ್ಲೂಕಿನ ಕುಲಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗ್ರಾಮಗಳನ್ನು ಸೇರಿಸಲಾಗಿದೆ. ತಾಲ್ಲೂಕು ಕೇಂದ್ರದಿಂದ ಸುಮಾರು 25 ಕಿ.ಮೀ ದೂರದಲ್ಲಿವೆ.

ಗೋಕಾಕ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕೌಜಲಗಿಗೆ ಪೊಲೀಸ್‌ ಠಾಣೆ ಮಂಜೂರು ಮಾಡಿದರೆ; ಈ ಎಲ್ಲ ಹಳ್ಳಿಗಳಿಗೂ ಅನುಕೂಲ ಆಗಲಿದೆ. ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿ ಆರಂಭಿಸಿದರೆ ಜನರು ದೂರು ದುಮ್ಮಾನ ಸಲ್ಲಿಸಲು ಅನುಕೂಲ ಆಗಲಿದೆ. ಈ ಎರಡು ಕಚೇರಿಗಳ ಕೊರತೆಯ ಕಾರಣ ಹಳ್ಳಿಗಳ ಜನ ನ್ಯಾಯಕ್ಕಾಗಿ ಪರದಾಡುವಂತಾಗಿದೆ.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ಎರಡು ಕಚೇರಿಗಳನ್ನು ತೆರೆದು ಜನತೆಗೆ ಅನುಕೂಲ ಮಾಡಿ ಕೊಡಬೇಕು ಎಂಬುದು ಗ್ರಾಮಸ್ಥರ ದಶಕಗಳ ಬೇಡಿಕೆ.

ಕೌಜಲಗಿ ಪಟ್ಟಣಕ್ಕೆ ಸಿಪಿಐ ಕಚೇರಿ ಜೆಎಂಎಫ್‌ಸಿ ನ್ಯಾಯಾಲಯ ವಿಶೇಷ ತಹಶೀಲ್ದಾರ್ ಕಚೇರಿ ಸರ್ಕಾರಿ ಪದವಿ ಕಾಲೇಜು ಸ್ಥಾಪನೆಯ ಅಗತ್ಯವಿದೆ

-ಅನಿಲಕುಮಾರ ದಳವಾಯಿ ಮುಖಂಡ

ಹಳ್ಳಿ ಜನರ ಸಣ್ಣಪುಟ್ಟ ತಂಟೆಗಳನ್ನು ನಿಭಾಯಿಸಲು ಶಾಂತಿ– ಸುವ್ಯವಸ್ಥೆ ಕಾಪಾಡಲು ಪೊಲೀಸ್ ಠಾಣೆ ಮಂಜೂರಾತಿಗಾಗಿ ಅರಭಾವಿ ಶಾಸಕರಿಗೆ ಮನವಿ ಮಾಡಿದ್ದೇವೆ

-ಶಿವಪ್ಪ ಭಜಂತ್ರಿ ಅಧ್ಯಕ್ಷ ಗ್ರಾಮ ಪಂಚಾಯಿತಿ ಕೌಜಲಗಿ

ಇಲ್ಲಿ 50 ವರ್ಷಗಳ ಹಿಂದೆ ಪೊಲೀಸ್ ಠಾಣೆ ಸ್ಥಾಪನೆ ಆಗಬೇಕಾಗಿತ್ತು. ಈಗಲಾದರೂ ಠಾಣೆ ತೆರೆದರೆ ಗೃಹರಕ್ಷಕದಳ ಸಿಬ್ಬಂದಿ ಸೇವೆಯನ್ನೂ ಬಳಸಿಕೊಳ್ಳಬಹುದು

-ಬಿ.ಆರ್. ಶಿವಾಪುರ ಘಟಕಾಧಿಕಾರಿ ಗೃಹರಕ್ಷಕ ದಳ ಕೌಜಲಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT