ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ: ‘ಗುರುಕುಲ ವನ’ ಪ್ರಯೋಗ ಯಶಸ್ವಿ

ಚಿಕ್ಕೋಡಿ ವಲಯ ಅರಣ್ಯಾಧಿಕಾರಿಗಳ ಮುತುವರ್ಜಿ, ಶಾಲೆ– ಕಾಲೇಜುಗಳ ಕಾಳಜಿಯ ಫಲ
ಚಂದ್ರಶೇಖರ ಎಸ್. ಚಿನಕೇಕರ
Published 7 ಮೇ 2024, 5:23 IST
Last Updated 7 ಮೇ 2024, 5:23 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ವಿವಿಧೆಡೆ ಅರಣ್ಯ ಇಲಾಖೆ ನಿರ್ಮಾಣ ಮಾಡಿದ ‘ಗುರುಕುಲ ವನ’ಗಳು ವಿದ್ಯಾರ್ಥಿಗಳ, ಪಾಲಕರ ಹಾಗೂ ಗ್ರಾಮಸ್ಥರ  ಗಮನ ಸೆಳೆಯುತ್ತಿವೆ. ಬೋಳಾಗಿದ್ದ ಶಾಲಾ ಆವರಣಗಳು ಈಗ ನೆರಳು– ನೆಮ್ಮದಿಯ ತಾಣಗಳಾಗುತ್ತಿವೆ.

ಕೇರೂರು ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ, ಪಟ್ಟಣದ ಸರ್ಕಾರಿ ಉಪಕಾರಣಾಗಾರ (ಜಿಟಿಟಿಸಿ) ಹಾಗೂ ನಿಪ್ಪಾಣಿಯ ಸಮಾಧಿ ಮಠದ ಆವರಣದಲ್ಲಿ ಈ ವನಗಳನ್ನು ನಿರ್ಮಾಣ ಮಾಡಲಾಗಿದೆ. ನಾಲ್ಕು ಗೋಡೆಗಳ ನಡುವಿನ ಶಿಕ್ಷಣಕ್ಕಿಂತ ನಿಸರ್ಗದ ಮಧ್ಯದಲ್ಲಿ ಶಿಕ್ಷಣ ನೀಡುವುದು ಪರಿಣಾಮಕಾರಿ ಎಂಬ ಕಾರಣಕ್ಕಾಗಿ; ಚಿಕ್ಕೋಡಿ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ಮುತುವರ್ಜಿ ವಹಿಸಿ ಪ್ರಕೃತಿಯ ಮಡಿಲಲ್ಲಿ ಗುರುಕುಲ ಶಿಕ್ಷಣಕ್ಕೆ ಅನುಕೂಲ ಮಾಡಿದ್ದಾರೆ.

ಆಲ, ಅರಳಿ, ಅತ್ತಿ, ಶಿವನಿ, ಬೇವು, ಹೊಂಗೆ ಮುಂತಾದ ಸಸಿಗಳನ್ನು ನೆಡಲಾಗಿದೆ. ಇವು ಹೆಚ್ಚಿನ ಪ್ರಮಾಣದಲ್ಲಿ ನೆರಳು ಕೊಡುವಂತವು. ಇವು ವಿಶಾಲವಾಗಿ ಬೆಳೆಯುವುದರಿಂದ ಪಕ್ಷಿಗಳು ಗೂಡು ಕಟ್ಟಿ ಇಲ್ಲಿ ವಾಸವಾಗುತ್ತವೆ. ಹೀಗಾಗಿ ಪಕ್ಷಿ ಸಂಕುಲವನ್ನು ರಕ್ಷಣೆ ಮಾಡಿದಂತಾಗುತ್ತದೆ ಎಂಬ ಕಾರಣದಿಂದಾಗಿ ಗುರುಕುಲ ವನ ನಿರ್ಮಾಣ ಮಾಡಲಾಗುತ್ತಿದೆ. ಹೀಗೆ 2024–25ನೇ ಸಾಲಿನಲ್ಲಿ ತಾಲ್ಲೂಕಿನಾದ್ಯಂತ 10ಕ್ಕೂ ಹೆಚ್ಚು ಗುರುಕುಲ ವನಗಳನ್ನು ನಿರ್ಮಾಣ ಮಾಡಬೇಕೆಂಬ ಕ್ರಿಯಾ ಯೋಜನೆ ಅರಣ್ಯ ಇಲಾಖೆಯದ್ದಾಗಿದೆ.

ಟ್ಯಾಂಕರ್‌ ನೀರು: ಬೇಸಿಗೆಯ ಬೇಗೆಯಲ್ಲಿ ಬಿಸಿಲುನಿಂದ ಗಿಡಗಳು ಬಾಡಿ ಹೋಗುತ್ತಿದ್ದರಿಂದ ಪ್ರತಿ ದಿನ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡಿ ಸಸಿಗಳನ್ನು ಪೋಷಣೆ ಮಾಡಲಾಗುತ್ತಿದೆ. ಬೇಸಿಗೆಯ ಮೂರು ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿಯಾದರೂ ನೀರು ಪೂರೈಕೆ ಮಾಡಿದ್ದಲ್ಲಿ ಮಳೆಗಾಲದಲ್ಲಿ ಇವು ತನ್ನಿಂತಾನೇ ಬೆಳೆಯುತ್ತವೆ. ಮೂರು ವರ್ಷಗಳ ಬಳಿಕ ಗುರುಕುಲ ವನದ ಅಡಿಯಲ್ಲಿ ಕುಳಿತು ಪಾಠ ಮಾಡಬಹುದು.

ಗುರುಗಳು ಪಾಠ ಮಾಡಲೆಂದೇ ಗುರುಕುಲ ವನದಲ್ಲಿ ವಿಶಾಲವಾದ ಕಟ್ಟೆಯನ್ನು ಗಿಡದ ಕೆಳಗೆ ಕಟ್ಟಲಾಗುತ್ತಿದೆ. ಹೀಗೆ ಈ ಕಟ್ಟೆಯ ಮೇಲೆ ಶಿಕ್ಷಕರು ಕುಳಿತು 60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮುಖವನ್ನು ನೇರವಾಗಿ ನೋಡಿಕೊಂಡು ಪಾಠ ಮಾಡಬಹುದು.

ಪ್ರತಿ ವರ್ಷ ಹೀಗೆ 10ಕ್ಕೂ ಹೆಚ್ಚು ಕಡೆಗೆ ಗುರುಕುಲವನ ನಿರ್ಮಾಣ ಮಾಡುವ ಗುರಿಯನ್ನು ಚಿಕ್ಕೋಡಿ ಅರಣ್ಯ ಇಲಾಖೆ ಹೊಂದಿದೆ. ಅರಣ್ಯ ಇಲಾಖೆಯು ಹೀಗೆ ಗುರುಕುಲವನ ನಿರ್ಮಾಣ ಮಾಡಲು ಮುಂದಾಗಿದ್ದರಿಂದ ಹೊಂಗೆ, ಆಲ, ಅತ್ತಿ, ಬೇವು, ಅರಳಿ ಮುಂತಾದ 80 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಅರಣ್ಯ ಇಲಾಖೆಗೆ ಸೇರಿದ ಚಿಂಚಣಿ– ಜೈನಾಪೂರ ನರ್ಸರಿಗಳಲ್ಲಿ ಬೆಳೆಯಲಾಗುತ್ತಿದೆ. ಸಾಕಷ್ಟು ಶಾಲೆ, ಕಾಲೇಜು, ಕಚೇರಿಗಳಲ್ಲಿ ಕೂಡ ಈ ಮಳೆಗಾಲದಲ್ಲಿ ಗುರುಕುಲ ವನ ನಿರ್ಮಾಣ ಮಾಡುವ ಆಲೋಚನೆ ಹೊಂದಿದ್ದು, ಇಂತಹ ಸಸಿಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಇದೆ.

ಗುರುಕುಲ ಶಿಕ್ಷಣ ಪದ್ಧತಿಗೆ ಮರುಜೀವ ಕೊಡುವುದಲ್ಲದೇ, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಬೆಳೆಸುವ ಉದ್ದೇಶ ಗುರುಕುಲ ವನ ನಿರ್ಮಾಣದ್ದಾಗಿದೆ. ಕಳೆದ ಕೆಲವು ವರ್ಷಗಳಿಂದ ವರ್ಷಕ್ಕೆ ಒಂದೋ ಎರಡೋ ಗುರುಕುಲ ವನ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ ಇದೀಗ ವರ್ಷಕ್ಕೆ 5–10 ಗುರುಕುಲ ವನ ನಿರ್ಮಾಣ ಮಾಡಲಾಗುತ್ತಿದೆ.

ಚಿಕ್ಕೋಡಿ ಪಟ್ಟಣದ ಗುರುಕುಲ ವನ ಪರಿಶೀಲಿಸಿದ ಅರಣ್ಯ ಇಲಾಖೆ ಹಾಗೂ ಕಾಲೇಜು ಸಿಬ್ಬಂದಿ
ಚಿಕ್ಕೋಡಿ ಪಟ್ಟಣದ ಗುರುಕುಲ ವನ ಪರಿಶೀಲಿಸಿದ ಅರಣ್ಯ ಇಲಾಖೆ ಹಾಗೂ ಕಾಲೇಜು ಸಿಬ್ಬಂದಿ
ಶಾಲೆ ಕಾಲೇಜುಗಳು ಗುರುಕುಲ ವನ ನಿರ್ಮಾಣ ಮಾಡಲು ಮುಂದೆ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಇದರಿಂದ ಶೈಕ್ಷಣಿಕ ಸುಧಾರಣೆಯೂ ಸಾಧ್ಯ
ಪ್ರಶಾಂತ ಗೌರಾಣಿ ವಲಯ ಅರಣ್ಯಾಧಿಕಾರಿ ಚಿಕ್ಕೋಡಿ
ನಮ್ಮ ಕಾಲೇಜು ಆವರಣದಲ್ಲಿ ಗುರುಕುಲ ವನ ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದಕ್ಕೂ ಇದು ಸಹಕಾರಿಯಾಗಿದೆ
ಶ್ರೀಶೈಲ ಕೊಲ್ಹಾರ ಉಪನ್ಯಾಸಕ ಸರ್ಕಾರಿ ಪಿಯು ಕಾಲೇಜು ಕೇರೂರ
ವರ್ಷದಿಂದ ವರ್ಷಕ್ಕೆ ಗುರುಕುಲ ವನ ನಿರ್ಮಾಣಕ್ಕೆ ಬೇಡಿಕೆ ಹೆಚ್ಚುತ್ತಿದೆ. ಶಾಲೆ ಕಾಲೇಜು ಮಠ ಗ್ರಾಮಗಳಲ್ಲಿ ಸ್ಥಳೀಯರೇ ಸಸಿಗಳ ಪಾಲನೆ ಪೋಷಣೆ ಮಾಡುತ್ತಿದ್ದಾರೆ
ರೋಹಿಣಿ ದೀಕ್ಷಿತ ಸಾಮಾಜಿಕ ಕಾರ್ಯಕರ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT