ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಸಳೆಗಳಿವೆ ಎಚ್ಚರಿಕೆ!

Published 19 ಮೇ 2024, 0:30 IST
Last Updated 19 ಮೇ 2024, 0:30 IST
ಅಕ್ಷರ ಗಾತ್ರ

ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮನುಷ್ಯ ಮತ್ತು ಮೊಸಳೆಗಳ ಸಂಘರ್ಷ ಬೇಸಿಗೆಯಲ್ಲಿ ಅಧಿಕ. ಕೃಷ್ಣಾ ನದಿಯಲ್ಲಿ ನೀರು ಕಡಿಮೆ ಆದ ಕೂಡಲೇ ಆಹಾರ ಅರಸಿ ದಡಕ್ಕೆ ಬರುವ ಮೊಸಳೆಗಳನ್ನು ಅಲ್ಲಿಯ ಜನರು ಏನು ಮಾಡುತ್ತಾರೆ?

ನದಿಯಿಂದ ದಡಕ್ಕೆ ಮೊಸಳೆ ಬಂದಿದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ದೊಡ್ಡ ಗುಂಪೇ ಸೇರುತ್ತದೆ. ಹೊರ ಬಂದ ಮೊಸಳೆಯನ್ನು ಭಯದಿಂದಾಗಿ ಕಲ್ಲು, ಬಡಿಗೆಗಳಿಂದ ಹೊಡೆದು ಇಲ್ಲವೆ ಟ್ರ್ಯಾಕ್ಟರ್‌ ಹಾಯಿಸಿ ಕೊಂದ ಉದಾಹರಣೆಗಳು ಇವೆ. ಆದರೆ, ಈಗ ಪರಿಸ್ಥಿತಿ ಸುಧಾರಿಸಿದೆ. ಮೊಸಳೆ ಕಾಣುತ್ತಿದ್ದಂತೆಯೇ ಅದನ್ನು ಹಗ್ಗದಿಂದ ಕಟ್ಟಿಹಾಕಿ ಅರಣ್ಯ ಇಲಾಖೆ ಇಲ್ಲವೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡುವಷ್ಟು ಜನ ಕಕ್ಕುಲತೆ ಬೆಳೆಸಿಕೊಂಡಿದ್ದಾರೆ.

ಇಂತಹ ಚಿತ್ರಣಗಳನ್ನು ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಕೃಷ್ಣಾ ನದಿ ತೀರದಲ್ಲಿ ಬೇಸಿಗೆ ಸಂದರ್ಭದಲ್ಲಿ ಹೆಚ್ಚಾಗಿ ಕಾಣಬಹುದು. ನೆರೆಯೋ, ಬರವೋ; ಏನೇ ಬಂದರೂ ಮೊಸಳೆಗಳು ನದಿಯಿಂದ ಹೊರಬರುವುದು ಗ್ಯಾರಂಟಿ.

ಚಿಕ್ಕೋಡಿ ತಾಲ್ಲೂಕಿನ ಸದಲಗಾ ಬಳಿ ಈಚೆಗೆ ದೂದ್‌ಗಂಗಾ (ಕೃಷ್ಣೆಯ ಉಪನದಿ) ನದಿಗೆ ಸ್ನಾನಕ್ಕೆ ತೆರಳಿದ್ದ ರೈತನನ್ನು ಮೊಸಳೆಯು ಕಚ್ಚಿ ಸಾಯಿಸಿತು. ಇದೇ ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ನಾಲ್ಕು ಮೊಸಳೆಗಳನ್ನು ಜನರೇ ಹಿಡಿದು ನದಿಗೆ ಬಿಟ್ಟಿದ್ದಾರೆ.

ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಉಗಮವಾಗುವ ಕೃಷ್ಣಾ ನದಿ ಚಿಕ್ಕೋಡಿ ಮೂಲಕ ಕರ್ನಾಟಕ ಪ್ರವೇಶಿಸುತ್ತದೆ. ನದಿ ಉಗಮ ಸ್ಥಳ ಘಟ್ಟ ಪ್ರದೇಶದಲ್ಲಿ ಮೊಸಳೆಗಳ ಸಂತಾನೋತ್ಪತ್ತಿ ಹೆಚ್ಚು. ಕೃಷ್ಣಾ ನದಿಗೆ ಪ್ರವಾಹ ಬಂದಾಗ ಮರಿಗಳು ಹರಿದುಬರುತ್ತವೆ. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕೃಷ್ಣೆಯ ಹರಿವು ಜಾಸ್ತಿ. ಮೊಸಳೆಗಳಿಗೆ ಸಮೃದ್ಧ ಆಹಾರ ದೊರೆಯುತ್ತದೆ. ಹೀಗಾಗಿ ಈ ಪ್ರದೇಶದಲ್ಲೇ ಮೊಸಳೆಗಳು ಹೆಚ್ಚು.

‘ಮಾನವನ ವಾಸಸ್ಥಳಕ್ಕೆ ಯಾವುದೇ ವನ್ಯಜೀವಿ ಲಗ್ಗೆ ಇಡಲು ಆಹಾರದ ಕೊರತೆಯೇ ಕಾರಣ. ಹೊಟ್ಟೆಪಾಡಿಗಾಗಿ ಮನುಷ್ಯ ಗುಳೆ ಹೋಗುವ ರೀತಿ ಇದು ಕೂಡ ಮೊಸಳೆಗಳ ಗುಳೆ’ ಎನ್ನುತ್ತಾರೆ ಗೋಕಾಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ನಾಯಕವಾಡಿ.

ಈ ಬಾರಿ ಬರಗಾಲದಿಂದಾಗಿ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿದಿದೆ. ಜಲಚರಗಳು ಸತ್ತಿವೆ. ಮೊಸಳೆಗಳ ವಲಸೆ ದೊಡ್ಡ ಪ್ರಮಾಣದಲ್ಲಿ ನಡೆದಿದೆ.

ಮೊಸಳೆ– ಮಾನವ ಸಂಘರ್ಷ ಏಕೆ, ಹೇಗೆ?

ಕೃಷ್ಣಾ ನದಿ ಹರಿಯುವ ಮಹಾರಾಷ್ಟ್ರ ಹಾಗೂ ಕರ್ನಾಟಕದ ಉದ್ದಕ್ಕೂ ಕಬ್ಬನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಬ್ಬು ಬೆಳೆಗೆ ಅಪಾರ ಪ್ರಮಾಣದ ನೀರು ಬೇಕು. ಅದರಲ್ಲೂ ಬೇಸಿಗೆಯಲ್ಲಿ ನದಿ ನೀರನ್ನು ವಿಪರೀತ ಬಳಸಲಾಗುತ್ತದೆ. ಏತ ನೀರಾವರಿ ಮೂಲಕ ಕೆರೆಕಟ್ಟೆಗಳನ್ನು ತುಂಬಿಸಲಾಗುತ್ತದೆ. ಕಬ್ಬು ಬೆಳೆಗೆ ತಕ್ಕಂತೆ ಸಕ್ಕರೆ ಕಾರ್ಖಾನೆಗಳು ಸಂಖ್ಯೆಯೂ ಹೆಚ್ಚಿವೆ. ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ ನದಿ ನೀರು ಅವಲಂಬಿಸಿದ 17 ಸಕ್ಕರೆ ಕಾರ್ಖಾನೆಗಳಿವೆ. ಹಿಂದಕ್ಕೆ ಸಾಗಿದರೆ ಮಹಾರಾಷ್ಟ್ರ, ಮುಂದಕ್ಕೆ ಸಾಗಿದರೆ ಬಾಗಲಕೋಟೆ ಜಿಲ್ಲೆಯಲ್ಲಿ ಕೂಡ ಸಕ್ಕರೆ ಕಾರ್ಖಾನೆಗಳು ಹೆಚ್ಚು. ಕಾರ್ಖಾನೆಗಳಿಗೆ ವರ್ಷವಿಡೀ ಅಪಾರ ಪ್ರಮಾಣದ ನೀರು ಬಳಸಲಾಗುತ್ತದೆ.

ಕಾರ್ಖಾನೆಗಳಿಂದ, ಕೃಷಿ ಭೂಮಿಯಿಂದ ಉತ್ಪತ್ತಿಯಾಗುವ ಕಲ್ಮಷ ನೇರವಾಗಿ ಕೃಷ್ಣೆಯ ಒಡಲು ಸೇರುತ್ತದೆ. ಜಲಚರಗಳ ಸಾವಿಗೆ ಇದು ಕೂಡ ಕಾರಣ. ನದಿತೀರದಲ್ಲಿ ಮರಳುಗಾರಿಕೆ ಕೂಡ ನಿರಂತರ ನಡೆದೇ ಇದೆ. ಈ ಎಲ್ಲ ಕಾರಣಗಳಿಂದ ಪ್ರತಿ ಬೇಸಿಗೆಯಲ್ಲಿ ನದಿ ನೀರಿನ ಪ್ರಮಾಣ ಕುಸಿಯುತ್ತದೆ. ಜಲಚರಗಳು ಸಾಯುತ್ತವೆ. ಮೊಸಳೆಗಳು ಹಸಿವಿನಿಂದ ಬಳಲುತ್ತವೆ.

ನದಿ ತೀರಕ್ಕೆ ತಾಗಿಕೊಂಡು ಸುಮಾರು 200 ಹಳ್ಳಿಗಳಿವೆ. ಊರು ವಿಸ್ತಾರವಾಗುತ್ತ, ನದಿ ಒಡಲು ಕಡಿಮೆಯಾಗುತ್ತಿದೆ. ಬೇಸಿಗೆಯಲ್ಲಿ ನೀರು ಕೆಳಗಿಳಿದ ತಕ್ಷಣ ನದಿ ಬಯಲಲ್ಲೇ ರೈತರು ಉಳುಮೆ ಮಾಡುತ್ತಾರೆ. ಇದನ್ನೇ ಜಲಚರಗಳ ಪ್ರದೇಶದ ಅತಿಕ್ರಮಣ ಎನ್ನುತ್ತಾರೆ ಪರಿಸರ ತಜ್ಞರು.

ಮೊಸಳೆ ನೀರೊಳಗಿದ್ದರೆ ಮೀನು, ಏಡಿ ಸೇರಿದಂತೆ ಜಲಚರಗಳನ್ನು ತಿನ್ನುತ್ತದೆ. ಹೊರಬಂದಾಗ ಆಡು, ಕುರಿ, ಹಸು, ಎತ್ತು, ಎಮ್ಮೆ, ನಾಯಿ, ಕುದುರೆ ಹೀಗೆ ಪ್ರಾಣಿಗಳನ್ನೂ ಬೇಟೆಯಾಡುತ್ತದೆ.

ಬೈಲಹೊಂಗಲ ಸಮೀಪದ ಹೊಸೂರಿನಲ್ಲಿ ಸೆರೆ ಹಿಡಿದ ಮೊಸಳೆ

ಬೈಲಹೊಂಗಲ ಸಮೀಪದ ಹೊಸೂರಿನಲ್ಲಿ ಸೆರೆ ಹಿಡಿದ ಮೊಸಳೆ

(ಸಂಗ್ರಹ ಚಿತ್ರ)

ಸಂಘರ್ಷಕ್ಕೆ ಕೊನೆಯಿಲ್ಲ

ಮಾನವ–ವನ್ಯಮೃಗಗಳ ಸಂಘರ್ಷ ಜಗತ್ತಿನ ಎಲ್ಲೆಡೆಯೂ ನಡೆದಿದೆ. ಹುಲಿ, ಚಿರತೆ, ಆನೆಗಳಿಂದ ಉಪಟಳ ತಪ್ಪಿಸಲು ವಿದ್ಯುತ್‌ ತಂತಿಬೇಲಿ, ಕಂದಕ, ಗೋಡೆ ನಿರ್ಮಾಣ ಮುಂತಾದ ಕ್ರಮಗಳು ಇವೆ. ಆದರೆ ಮೊಸಳೆಗಳನ್ನು ನಿಯಂತ್ರಣ ಮಾಡಲು ಯಾವುದೇ ಉಪಾಯವಿಲ್ಲ. ಏಕೆಂದರೆ; ಮೊಸಳೆಗೆ ನಿರ್ದಿಷ್ಟ ಆವಾಸ ಸ್ಥಾನವಿಲ್ಲ. ಅದು ಆಹಾರಕ್ಕಾಗಿ ವಲಸೆ ಹೋಗುತ್ತಲೇ ಇರುತ್ತದೆ. ‘ಇಲ್ಲಿ ಮೊಸಳೆಗಳಿವೆ ಎಚ್ಚರಿಕೆ’ ಎಂಬ ಫಲಕ ಹಾಕುವುದು ಮಾತ್ರ ಈಗಿರುವ ಮಾರ್ಗ.

ಮೊಸಳೆ ‘ಮಿಲನ’ ಮತ್ತ ‘ಬಾಣಂತನ’ದ ಅವಧಿಯಲ್ಲೇ ಸಂಘರ್ಷ ಹೆಚ್ಚಾಗಿ ನಡೆಯುತ್ತದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ಮೊಸಳೆಗಳು ನವೆಂಬರ್‌– ಡಿಸೆಂಬರ್‌ ಮಧ್ಯದಲ್ಲಿ ಮಿಲನ ಕ್ರಿಯೆ ನಡೆಸುತ್ತವೆ. ಫೆಬ್ರುವರಿ– ಮಾರ್ಚ್‌ನಲ್ಲಿ ಮೊಟ್ಟೆ ಇಡುತ್ತವೆ. ಮೊಸಳೆ ಬಾಣಂತನಕ್ಕೆ ನದಿ ದಡದ ಮರಳು, ಪೊದೆಯೇ ಬೇಕು. ಬಾಣಂತಿಗೆ ಮತ್ತು ಮರಿಗಳಿಗೆ ಬೇಕಾದ ಹಸಿ–ಬಿಸಿ ಎರಡೂ ಈ ಮರಳಿನಲ್ಲಿ ಮಾತ್ರ ಸಿಗುತ್ತದೆ.

ಮೂರು ದಶಕಗಳ ಹಿಂದೆ ಬೇಸಿಗೆಯಲ್ಲಿ ಕೃಷ್ಣಾ ನದಿ ಸಂಪೂರ್ಣ ಒಣಗುತ್ತಿತ್ತು. ಮೊಸಳೆಗಳೂ ಸಾಯುತ್ತಿದ್ದವು. ಆದರೆ, ಈಗ ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ಆಗಾಗ ನೀರು ಹರಿಯುತ್ತಲೇ ಇರುತ್ತದೆ. ಹೀಗಾಗಿ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲೂ ಮೊಸಳೆಗಳು ಸಂತಾನೋತ್ಪತ್ತಿ ಮಾಡುತ್ತಿವೆ. ಒಂದು ಮೊಸಳೆ ಒಂದು ಬಾರಿಗೆ 40 ರಿಂದ 100 ಮೊಟ್ಟೆಗಳನ್ನು ಇಡುತ್ತದೆ. ಉಡ, ಹಾವು, ಹಕ್ಕಿಗಳು ಈ ಮೊಟ್ಟೆಗಳನ್ನು ತಿನ್ನಲು ಬರುತ್ತವೆ. ಹೆಣ್ಣು ಹಾಗೂ ಗಂಡು ಮೊಸಳೆ ಜೋಡಿ ಪಾಳಿ ಪ್ರಕಾರ ತಮ್ಮ ಮೊಟ್ಟೆಗಳನ್ನು ಕಾಯುತ್ತವೆ. ಇಂಥ ಅವಧಿಯಲ್ಲಿ ನದಿತೀರಕ್ಕೆ ಯಾರೇ ಸುಳಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಮೊಸಳೆ ಪೀಡಣೆಗೆ ಒರಿಸ್ಸಾದ ಕೇಂದ್ರಪಾರ್‌ ಜಿಲ್ಲೆಯ ನ್ಯಾಷನಲ್ ಪಾರ್ಕ್‌ ಜ್ವಲಂತ ಸಾಕ್ಷಿ. ಮೊಸಳೆಗಳ ಸಂತತಿ ರಕ್ಷಣೆಗಾಗಿ ಅಲ್ಲಿನ ಸರ್ಕಾರ ‘ಕ್ರೊಕೊಡೈಲ್‌ ಪ್ರಾಜೆಕ್ಟ್‌’ ಘೋಷಣೆ ಮಾಡಿತು. ಒಂದೇ ದಶಕದಲ್ಲಿ ಮೊಸಳೆಗಳ ಸಂಖ್ಯೆ ಮಿತಿಮೀರಿತು. ಆದರೆ, ಆವಾಸಸ್ಥಳ ಮಾತ್ರ ಅಷ್ಟೇ ಉಳಿಯಿತು. ಕಿರಿದಾದ ಆವಾಸಸ್ಥಾನ ಬಿಟ್ಟು ಮೊಸಳೆಗಳು ಹೊರಬಂದು ಮನುಷ್ಯರ ಮೇಲೆ ದಾಳಿ ಇಡಲು ಶುರು ಮಾಡಿದವು. ದಶಕಗಳಿಂದಲೂ ಅಲ್ಲಿ ಮಾನವ– ಮೊಸಳೆ ಸಂಘರ್ಷ ನಿಂತಿಲ್ಲ. ಮೊಸಳೆ ಪ್ರದೇಶವನ್ನು ಅತಿಕ್ರಮಣ ಮಾಡುತ್ತ ಹೋದರೆ ಅಂಥದ್ದೇ ಪರಿಸ್ಥಿತಿ ಕೃಷ್ಣಾತೀರಕ್ಕೂ ಬರಬಹುದು ಎಂಬ ಅಂದಾಜು ತಜ್ಞರದು.

‘ನದಿ ದಡಗಳಲ್ಲಿರುವ ಕಟ್ಟಡಗಳಿಗೆ ಮೊಸಳೆಗಳು ನಿರಾಕ್ಷೇಪಣಾ ಪತ್ರ ಕೇಳಿದರೆ ಅರ್ಧದಷ್ಟು ಕಟ್ಟಡಗಳನ್ನು ಬೀಳಿಸಬೇಕಾಗುತ್ತದೆ. ಅಷ್ಟರಮಟ್ಟಿಗೆ ಮಾನವ ಅತಿಕ್ರಮಣ ಮಾಡಿಕೊಂಡಿದ್ದಾನೆ’ ಎಂದೂ ಆತಂಕ ವ್ಯಕ್ತಪಡಿಸುತ್ತಾರೆ ಅರಣ್ಯಾಧಿಕಾರಿಗಳು.

‘ವನ್ಯಮೃಗದ ಬದುಕಿನ ಮೇಲಿನ ಹಸ್ತಕ್ಷೇಪವೇ ಅವು ಹೊರಗೆ ಬರಲು ಕಾರಣ. ದಾಂಡೇಲಿ ಅರಣ್ಯ ಪ್ರದೇಶ ಇದಕ್ಕೆ ಸೂಕ್ತ ಉದಾಹರಣೆ. 2020ರವರೆಗೆ ಮೊಸಳೆಗಳು ಯಾರನ್ನೂ ಸಾಯಿಸಿದ ಉದಾಹರಣೆ ಇಲ್ಲ. ಈ ಎರಡು ದಶಕಗಳ ಅವಧಿಯಲ್ಲಿ ಪ್ರವಾಸೋದ್ಯಮದ ನೆಪದಲ್ಲಿ ಹೋಮ್‌ ಸ್ಟೇ, ಹೋಟೆಲ್‌, ಪ್ರವಾಸಿ ತಾಣಗಳ ನಿರ್ಮಾಣ ಮಾಡಲಾಯಿತು. ಜನಸಂದಣಿ ಹೆಚ್ಚಿತು. ಮೊಸಳೆಗಳ ಜೀವನಕ್ರಮದ ಮೇಲೆ ಪೆಟ್ಟು ಬಿತ್ತು. ಅವು ಹೊರಕ್ಕೆ ಬರಲಾರಂಭಿಸಿದವು. 2022ರಲ್ಲಿ ದಾಂಡೇಲಿ ಪ್ರದೇಶದಲ್ಲಿ ಐದು ಮಂದಿ ಮೊಸಳೆಗಳಿಗೆ ತುತ್ತಾಗಿದ್ದನ್ನು ಮರೆಯುವಂತಿಲ್ಲ’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಹೇಳುತ್ತಾರೆ.

ನದಿಗಳ ನಿಜವಾದ ವಾರಸುದಾರರು ಜಲಚರಗಳು. ನದಿಗಳು ಇರುವುದು ಕೇವಲ ಮನುಷ್ಯರಿಗಾಗಿ ಅಲ್ಲ. ಇದನ್ನು ಅರಿತಾಗ ವನ್ಯಪ್ರಾಣಿ ಮತ್ತು ಮಾನವನ ನಡುವೆ ಸಹಬಾಳ್ವೆ ಸಾಧ್ಯವಾಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಬೇಕು ಅಷ್ಟೆ.

ಗೋಕಾಕ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಸಿಕ್ಕ ಮೊಸಳೆ ಮರಿ ರಕ್ಷಿಸಿದ ಗ್ರಾಮಸ್ಥ

ಗೋಕಾಕ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಸಿಕ್ಕ ಮೊಸಳೆ ಮರಿ ರಕ್ಷಿಸಿದ ಗ್ರಾಮಸ್ಥ

(ಸಂಗ್ರಹ ಚಿತ್ರ)

ಚಿಕ್ಕೋಡಿ ತಾಲ್ಲೂಕಿನ ಕೃಷ್ಣಾ ನದಿ ತೀರದ ಇಂಗಳಿ ಗ್ರಾಮದಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ ಹಿಡಿದು ಅರಣ್ಯ ಇಲಾಖೆಗೆ  ಪ್ಪಿಸಿದ ಜನ

ಚಿಕ್ಕೋಡಿ ತಾಲ್ಲೂಕಿನ ಕೃಷ್ಣಾ ನದಿ ತೀರದ ಇಂಗಳಿ ಗ್ರಾಮದಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ ಹಿಡಿದು ಅರಣ್ಯ ಇಲಾಖೆಗೆ  ಪ್ಪಿಸಿದ ಜನ

(ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT