‘ಬಂದ್‌ಗೆ ಜೆಡಿಎಸ್‌ ಬೆಂಬಲ’

7

‘ಬಂದ್‌ಗೆ ಜೆಡಿಎಸ್‌ ಬೆಂಬಲ’

Published:
Updated:

ಬೆಳಗಾವಿ: ತೈಲ ದರ ಏರಿಕೆ ವಿರೋಧಿಸಿ ಕಾಂಗ್ರೆಸ್‌ ಸೋಮವಾರ ಕರೆ ನೀಡಿರುವ ಬಂದ್‌ಗೆ ಜೆಡಿಎಸ್‌ ಸಂಪೂರ್ಣ ಬೆಂಬಲ ನೀಡಿದೆ ಎಂದು ಪಕ್ಷದ ಮುಖಂಡ ಎನ್‌.ಎಚ್‌. ಕೋನರಡ್ಡಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರಿದೆ. ಇದರಿಂದ ಜೀವನಾವಶ್ಯಕ ವಸ್ತುಗಳೂ ದುಬಾರಿಯಾಗಿವೆ. ಸಾಮಾನ್ಯ ಜನರು ಜೀವನ ಸಾಗಿಸಲು ದುಸ್ತರ ಪಡಬೇಕಾದ ಸ್ಥಿತಿ ಎದುರಾಗಿದೆ’ ಎಂದು ತಿಳಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಗೇ ಇದಕ್ಕೆಲ್ಲ ಕಾರಣವಾಗಿದೆ. ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಜನರ ಬವಣೆಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಯಲಿ ಎನ್ನುವ ಉದ್ದೇಶದಿಂದ ದೇಶದಾದ್ಯಂತ ಬಂದ್‌ ಕರೆ ನೀಡಲಾಗಿದೆ ಎಂದು ಹೇಳಿದರು.

ಮಹದಾಯಿ ನ್ಯಾಯ ಮಂಡಳಿಯ ತೀರ್ಪಿನ ಅನ್ವಯ ರಾಜ್ಯಕ್ಕೆ ದೊರೆತ ನೀರನ್ನು ಸದ್ಬಳಕೆ ಮಾಡಲು ಯೋಜನೆಗಳನ್ನು ರೂಪಿಸಬೇಕಾಗಿದೆ. ಇದಕ್ಕಾಗಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರು ಎಲ್ಲ ಪಕ್ಷದವರ ಜೊತೆ ಚರ್ಚಿಸಬೇಕು. ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಜನರ ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಒಂಬತ್ತು ಪ್ರಮುಖ ಕಚೇರಿಗಳನ್ನು ಬೆಂಗಳೂರಿನಿಂದ ಇಲ್ಲಿಗೆ ಸ್ಥಳಾಂತರಿಸಿದ್ದಾರೆ. ಕೆ–ಶಿಪ್‌ ಯೋಜನೆಗಳು ಪೂರ್ಣಗೊಂಡಿದ್ದರಿಂದ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಇದನ್ನೇ ದೊಡ್ಡ ವಿಷಯವನ್ನಾಗಿಸಬಾರದು ಎಂದು ನುಡಿದರು.

ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದ ಆಯುಷ್‌ ಔಷಧ ತಯಾರಿಕಾ ಘಟಕವು ಬೆಳಗಾವಿಗೆ ಸದ್ಯದಲ್ಲಿಯೇ ಮರಳಿ ಬರಲಿದೆ. ಕುಮಾರಸ್ವಾಮಿ ಅವರು ಭರವಸೆ ನೀಡಿದ್ದು, ಶೀಘ್ರದಲ್ಲಿ ಆದೇಶವಾಗಬಹುದು ಎಂದು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !