ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಲಗಿ: ಹೈನುಗಾರಿಕೆಯಲ್ಲಿ ಹೊನ್ನು ಕಂಡ ಹೊನ್ನಪ್ಪ

ಪ್ರತಿ ದಿನ 200 ಲೀಟರ್‌ ಹಾಲು ಉತ್ಪಾದನೆ, ಬೆಳಗಾವಿ ಜಿಲ್ಲೆಯಲ್ಲಿ ಗರಿಷ್ಠ ಸಾಧನೆ
Published 1 ಡಿಸೆಂಬರ್ 2023, 4:10 IST
Last Updated 1 ಡಿಸೆಂಬರ್ 2023, 4:10 IST
ಅಕ್ಷರ ಗಾತ್ರ

ಮೂಡಲಗಿ: ‘ಮನಸ್ಸಿದ್ದರೆ ಏನೆಲ್ಲ ಮಾಡಬಹುದು, ಛಲವಿದ್ದರೆ ಏನೆಲ್ಲ ಸಾಧಿಸಬಹುದು’ ಎನ್ನುವುದಕ್ಕೆ ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದ ಯುವ ರೈತ ಹೊನ್ನಪ್ಪ ಸಾವಳಗೆಪ್ಪ ಬೂದಿಹಾಳ ಮಾದರಿಯಾಗಿದ್ದಾರೆ.

2008ರಲ್ಲಿ ಬಿಎ ಪದವಿ ಮುಗಿಸಿ ನೌಕರಿ ದೊರೆಯದಿದ್ದಾಗ ಒಂದೇ ಆಕಳು ಸಾಕಿ ಹೈನುಗಾರಿಕೆ ಆರಂಭಿಸಿ ಹೊನ್ನಪ್ಪ ಅವರ ಹೊಲದಲ್ಲಿ ಇಂದು 20ಕ್ಕೂ ಅಧಿಕ ಎಚ್‌ಎಫ್‌ ತಳಿಯ ಹಸುಗಳು ಇವೆ. ಪ್ರತಿ ದಿನ ಬೆಳಿಗ್ಗೆ 100 ಲೀಟರ್‌, ಸಂಜೆ 100 ಲೀಟರ್‌ ಹೀಗೆ ನಿತ್ಯ 200 ಲೀಟರ್‌ ಹಾಲು ಉತ್ಪಾದಿಸಿ ಗ್ರಾಮದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರೈತ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ. 2022–23ನೇ ಸಾಲಿನಲ್ಲಿ ಬೆಳಗಾವಿಯ ಕೆಎಂಎಫ್‌ ಕೊಡಮಾಡಿರುವ ಇಡೀ ಬೆಳಗಾವಿ ಜಿಲ್ಲೆಯಲ್ಲಿ ‘ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿರುವ ರೈತ’ ಎನ್ನುವ ಪ್ರಶಸ್ತಿಗೂ ಭಾಜನರಾಗಿದ್ದಾರೆ.

‘ಕೇವಲ ಒಂದುವರೆ ಎಕರೆ ಭೂಮಿ ಇತ್ತರೀ. ನಮ್ಮಪ್ಪ ಗೊಂಜಾಳದಂಥ ಸಣ್ಣ ಪುಟ್ಟ ಬೆಳೆ ಬೆಳೆತಿದ್ರರೀ. ಮೊದಲಿನಿಂದಲೂ ನಾವು ಬಡತನದಾಗ ಬೆಳೆದ ಬಂದಿವ್ರೀ. ಹೈನುಗಾರಿಕೆಯಿಂದ ಈಗ ನಮ್ಮ ಜೀವನ ಚಲೋ ಆಗೈತ್ರೀ’ ಎಂದು ಹೊನ್ನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದೂವರೆ ಎಕರೆಯಲ್ಲಿ ಬೆಳೆಯುವ ಸಜ್ಜೆ, ಗೋವಿನಜೋಳ ಮತ್ತು ಕಬ್ಬು ಎಲ್ಲವನ್ನೂ ಹಸುಗಳ ಆಹಾರಕ್ಕಾಗಿ ಬಳಸುತ್ತಿದ್ದು, ಮೂರು ಬೆಳೆಗಳನ್ನು ಚಾಪರ್‌ ಕಟರ್‌ ಮೂಲಕ ಸಣ್ಣಗೆ ಕತ್ತರಿಸಿ ರಸಮೇವು ಮಿಶ್ರಣ ಸಿದ್ಧಗೊಳಿಸಿ ಹಸುಗಳಿಗೆ ನೀಡುತ್ತಾರೆ. ಹಾಲಿಗೆ ಉತ್ತಮ ಫ್ಯಾಟ್‌ ಬರುವುದರಿಂದ ಡೇರಿಯಲ್ಲಿ ಪ್ರತಿ ಲೀಟರ್‌ ಹಾಲಿಗೆ ₹ 32ರಿಂದ ₹ 35ರಷ್ಟು ದರ ನಿಗದಿಯಾಗುತ್ತದೆ. ಅದರೊಂದಿಗೆ ಸರ್ಕಾರದ ₹ 5 ಪ್ರೋತ್ಸಾಹ ಧನ ಸೇರುತ್ತದೆ. ತಿಂಗಳಿಗೆ ಒಟ್ಟು ₹ 1.50 ಲಕ್ಷ ಹಣಕ್ಕೆ ಕೊರತೆ ಇಲ್ಲ. ಅದರಲ್ಲಿ ಪಶು ಆಹಾರ ಇತ್ಯಾದಿಗಳಿಗಾಗಿ ತಿಂಗಳಿಗೆ ₹ 50 ಸಾವಿರ ಖರ್ಚು ತೆಗೆದರೆ ಹೈನುಗಾರಿಕೆಯಿಂದ ಬರೋಬ್ಬರಿ ₹ 1 ಲಕ್ಷ ಗಳಿಕೆ ಆಗುತ್ತದೆ.

‘2022–23ರ ಸಾಲಿನಲ್ಲಿ ಒಟ್ಟು 73,215 ಲೀಟರ್ ಹಾಲು ಉತ್ಪಾದಿಸುವ ಮೂಲಕ ಹೊನ್ನಪ್ಪ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸಿರುವ ದಾಖಲೆ ಮಾಡಿದ್ದಾರೆ. ಖಾನಟ್ಟಿ ಊರಿಗೂ ಹೆಸರು ತಂದಿದ್ದಾರೆ’ ಎಂದು ಖಾನಟ್ಟಿಯ ಸಹಕಾರಿ ಹಾಲು ಉತ್ಪಾದಕರ ಸಂಘದ ಗೌರವ ಕಾರ್ಯನಿರ್ವಾಹಕ ಅಧಿಕಾರಿ ಚಂದಪ್ಪ ಅರಗಿ ಹೊನ್ನಪ್ಪ ಅವರ ಹೈನುಗಾರಿಕೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ 5ಕ್ಕೆ ಕಾಯಕ ಶುರು: ಪ್ರತಿ ದಿನ ಬೆಳಿಗ್ಗೆ 5ಕ್ಕೆ ಕಾಯಕ ಶುರುವಾಗುತ್ತದೆ. ಹಸುಗಳನ್ನು ಕಟ್ಟಲು ₹ 5 ಲಕ್ಷ ಖರ್ಚು ಮಾಡಿ 40X60 ಉದ್ದಗಲದ ಸುಸಜ್ಜಿತ ಕೊಟ್ಟಿಗೆ ನಿರ್ಮಿಸಿದ್ದಾರೆ. ಹಸುಗಳ ಸಗಣಿ, ಗಂಜಲ ಮತ್ತು ಕೊಟ್ಟಿಗೆ ತೊಳೆದ ನೀರು ಸರಾಗವಾಗಿ ಹರಿದು ಹೋಗಲು ಪೈಪ್‌ಗಳನ್ನು ಜೋಡಿಿರುವುದರಿಂದ ಅದು ಹೊರಗೆ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ. ಮೇವು, ಪಶು ಆಹಾರ ಸುಲಭವಾಗಿ ತಿನ್ನಲು ಮತ್ತು ನೀರು ಕುಡಿಯಲು ಅನುಕೂಲವಾಗುವಂತೆ ಕೊಟ್ಟಿಗೆಯಲ್ಲಿ ತೊಟ್ಟಿಗಳನ್ನು ನಿರ್ಮಿಸಿದ್ದಾರೆ. ತಮಗೆ ಬೇಕಾದಾಗ ನೀರು ಕುಡಿದು ಹಸುಗಳು ವಿಶ್ರಮಿಸುತ್ತವೆ. ಕೊಟ್ಟಿಗೆ ಸ್ವಚ್ಛತೆಗಾಗಿ ಅಲ್ಲಲ್ಲಿ ನೀರಿನ ನಲ್ಲಿಗಳನ್ನು ಜೋಡಿಸಿದ್ದು, ಪ್ರತಿನಿತ್ಯ ಮೂರು ಬಾರಿ ಕೊಟ್ಟಿಗೆ ಸ್ವಚ್ಛಗೊಳಿಸುತ್ತಾರೆ. ಹಸುಗಳ ಆರೋಗ್ಯದ ಕಡೆಗೂ ಗಮನ ನೀಡುತ್ತಾರೆ.

ಸಗಣಿ ಸಂಗ್ರಹ: ಪ್ರತಿ ತಿಂಗಳು 2 ಟ್ರಾಲಿಗಳಷ್ಟು ಸಗಣಿ ಸಂಗ್ರಹವಾಗುತ್ತದೆ. ಒಂದಿಷ್ಟು ತೋಟಕ್ಕೆ ಬಳಿಸಿ ಹೆಚ್ಚಿನ ಸಗಣಿಯನ್ನು ಬೇರೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಅದರಿಂದಲೂ ವರ್ಷದಲ್ಲಿ ₹ 2.50 ಲಕ್ಷವರೆಗೆ ಆದಾಯ ಪಡೆಯುತ್ತಿದ್ದಾರೆ. (ಸಂಪರ್ಕ ಮೊ: 9742550040)

ಹೊನ್ನಪ್ಪ ಬೂದಿಹಾಳ
ಹೊನ್ನಪ್ಪ ಬೂದಿಹಾಳ

ಮನೆಯವರ ಉತ್ತಮ ಬೆಂಬಲ

ಕೊಟ್ಟಿಗೆಯ ಕೆಲಸಕ್ಕೆ ತಾಯಿ ಮಹಾದೇವಿ ಮತ್ತು ಪತ್ನಿ ಸವಿತಾ ಸಾಥ್‌ ನೀಡುತ್ತಿರುವುದರಿಂದ ನಾನು ಡೇರಿಗೆ ಹೋಗಿ ಹಾಲು ಕೊಡುವುದು ಪಶು ಆಹಾರ ತರುವುದು ಇತ್ಯಾದಿ ಕೆಲಸ ಮಾಡಲು ನನಗೆ ಅನುಕೂಲವಾಗುತ್ತದೆ. ಸ್ಥಳೀಯ ಸಹಕಾರಿ ಹಾಲು ಉತ್ಪಾದಕರ ಸಂಘದಿಂದ ಉತ್ತಮ ಸಹಕಾರ ಪ್ರೋತ್ಸಾಹ ಇರುವುದರಿಂದ ಹೈನುಗಾರಿಕೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೊನ್ನಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT