ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ನಿಜಗುಣ ದೇವರ ‘ಷಷ್ಠ್ಯಬ್ಧಿ ಸಂಭ್ರಮ’ಕ್ಕೆ ಸಜ್ಜು

Published 1 ಜನವರಿ 2024, 8:53 IST
Last Updated 1 ಜನವರಿ 2024, 8:53 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಹುಣಶಾಳ ಪಿ.ಜಿ ಗ್ರಾಮದ ಸಿದ್ಧಲಿಂಗ ಕೈವಲ್ಯಾಶ್ರಮದ ಪೀಠಾಧಿಪತಿ ನಿಜಗುಣ ದೇವರು ತಲಸ್ಪರ್ಷಿಯ ಪ್ರವಚನ, ಆಧ್ಯಾತ್ಮಿಕ ಚಿಂತನೆ, ಸಾಹಿತ್ಯ ರಚನೆ ಮತ್ತು ವಚನ ಸಾಹಿತ್ಯದ ಅಧ್ಯಯನದಿಂದ ಭಕ್ತರ ಮನದಲ್ಲಿ ನೆಲೆಸಿದ್ದಾರೆ. ಅವರು 60 ವಸಂತ ಪೂರೈಸಿದ ಹಿನ್ನೆಲೆಯಲ್ಲಿ, ಅಪಾರ ಭಕ್ತರು ಜ.1ರಿಂದ ಜ.3ರ ವರೆಗೆ ‘ಷಷ್ಠ್ಯಬ್ಧಿ ಸಂಭ್ರಮ’ ಆಯೋಜಿಸಿದ್ದಾರೆ. ಕೊನೆಯ ದಿನ ಸಂಜೆ ಸಿದ್ಧಲಿಂಗೇಶ್ವರ ರಥೋತ್ಸವ ಜರುಗಲಿದೆ.

ಮೂರು ದಿನಗಳ ಕಾರ್ಯಕ್ರಮದ ಅಂಗವಾಗಿ ಇಡೀ ಗ್ರಾಮ ತಳಿರು–ತೋರಣಗಳಿಂದ ಸಿಂಗಾರಗೊಂಡಿದೆ. ಕಾರ್ಯಕ್ರಮಕ್ಕೆ ನಾಡಿನ ವಿವಿಧೆಡೆಯಿಂದ ಆಗಮಿಸುವ ನೂರಾರು ಪೂಜ್ಯರ ಸ್ವಾಗತಕ್ಕೆ ಭಕ್ತರು ಅಣಿಯಾಗಿದ್ದಾರೆ.

ಶ್ರೀಶೈಲದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆದಿ ಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ, ಬೀದರ್‌ನ ಶಿವಕುಮಾರ ಸ್ವಾಮೀಜಿ, ಮುಗಳಖೋಡದ ಮುರುಘರಾಜೇಂದ್ರ ಸ್ವಾಮೀಜಿ, ಕೊಪ್ಪಳದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಮುರಗೋಡದ ನೀಲಕಂಠ ಸ್ವಾಮೀಜಿ, ಗದಗ–ಡಂಬಳದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಹೊಸದುರ್ಗದ ಪುರುಷೋತ್ತಮಾನಂದ ಸ್ವಾಮೀಜಿ, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಇಂಚಲದ ಶಿವಾನಂದ ಭಾರತೀ ಸ್ವಾಮೀಜಿ ಸೇರಿದಂತೆ ಮಠಾಧೀಶರು ಭಾಗವಹಿಸಲಿದ್ದಾರೆ.

ಮಹಾದ್ವಾರದ ಉದ್ಘಾಟನೆ, ರಥದ ಕಳಸಾರೋಹಣ, ಸದ್ಭಾವ ಸದನ ಉದ್ಘಾಟನೆ, ಮಹಿಳೆಯರಿಗೆ ಉಡಿ ತುಂಬುವುದು, ಸಹಸ್ರ ಕುಂಭೋತ್ಸವ, ಲಕ್ಷದೀಪೋತ್ಸವ, 108 ದೇವಿಯರ ಪೂಜೆ, ತುಲಾಭಾರ ಸೇವೆ, ಸಾಮೂಹಿಕ ವಿವಾಹ, ಸನ್ಮಾನ, ಸತ್ಸಂಗ ಸಮ್ಮೇಳನ, ಮಹಾತ್ಮರ ತತ್ವಾಮೃತ, ತೊಟ್ಟಿಲೋತ್ಸವ, ಸಂಗೀತ ಕಾರ್ಯಕ್ರಮ ಜರುಗಲಿವೆ.

ಬಾಲ್ಯದಿಂದಲೇ ಆಧ್ಯಾತ್ಮದತ್ತ ಒಲವು:

ಅಥಣಿ ತಾಲ್ಲೂಕಿನ ನಂದೇಶ್ವರದ ಮಲ್ಲಿಕಾರ್ಜುನ ಮತ್ತು ಗಂಗಮ್ಮ ದಂಪತಿ ಪುತ್ರನಾಗಿ 1961ರ ನ.18ರಂದು ಜನಿಸಿದ ನಿಜಗುಣ ದೇವರು, ಬಾಲ್ಯದಲ್ಲೇ ಆಧ್ಯಾತ್ಮಿಕತೆ ಬಗ್ಗೆ ಒಲವು ಬೆಳೆಸಿಕೊಂಡರು. ಜಮಖಂಡಿಯ ಮದುರಖಂಡಿಯ ಸಿದ್ಧಲಿಂಗೇಶ್ವರರ ಪ್ರೇರಣೆಯಿಂದ ಈ ರಂಗದಲ್ಲಿ ಮುನ್ನಡೆದರು.

ಬೈಲಹೊಂಗಲದ ಮಹಾದೇವಾನಂದ ಸರಸ್ವತೀ ಆಶ್ರಮದಲ್ಲಿ ಸಂಸ್ಕೃತ ಅಧ್ಯಯನ, ಇಂಚಲದ ಶಿವಾನಂದ ಭಾರತೀ ಸ್ವಾಮೀಜಿ ಮಾರ್ಗದರ್ಶನದಲ್ಲಿ ತತ್ವ ಚಿಂತನೆ, ವಚನ ಅಧ್ಯಯನ ಮಾಡಿದರು. ಸಾಹಿತ್ಯ ಮತ್ತು ಸಂಗೀತ ಸೇವೆಯಲ್ಲಿ ತೊಡಗಿದ ಅವರು, ಪ್ರವಚನಕಾರರಾಗಿ ಜನರಿಗೆ ಆಧ್ಯಾತ್ಮಿಕ ಮತ್ತು ತತ್ವಗಳನ್ನು ತಿಳಿಸಿದರು. ವಿಶಿಷ್ಟ ಪ್ರವಚನ ಶೈಲಿ ಮೂಲಕ ಅಪಾರ ಸಂಖ್ಯೆಯ ಭಕ್ತರ ಮನಗೆದ್ದರು.

ನಿಜಗುಣ ದೇವರ ಅನೇಕ ಹಾಡುಗಳು ಧ್ವನಿಸುರಳಿಗಳ ಮೂಲಕ ಭಕ್ತರ ಮನತಣಿಸಿವೆ. ಅಲ್ಲದೆ, ಕೈವಲ್ಯ ಕಿರಣ, ಗೀತ ಕುಸಮ, ಭಾರತಕೊಬ್ಬ ಭಾರತೀಯ, ಶಿವಾವತಾರಿ ಸಿದ್ಧಲಿಂಗ, ಕೈವಲ್ಯ ಕನ್ನಡಿ ಪ್ರವಚನ ಸೇರಿದಂತೆ ಹಲವು ಗ್ರಂಥ ಸ್ವಾಮೀಜಿ ರಚಿಸಿದ್ದಾರೆ. ವಿವಿಧ ರಂಗಗಳಲ್ಲಿ ಮಾಡಿದ ಸಾಧನೆಗಾಗಿ ಕೇದಾರದ ಪಂಚಪೀಠ ಜಗದ್ಗುರುಗಳಿಂದ ‘ಪ್ರವಚನ ಪ್ರಾಜ್ಞ’, ಹುಕ್ಕೇರಿ ಹಿರೇಮಠದಿಂದ ದಸರಾ, ವಿವಿಧ ಸಂಘ–ಸಂಸ್ಥೆಗಳು ರೇಣುಕಶ್ರೀ, ಕರ್ನಾಟಕ ಭೂಷಣ, ಸಾಹಿತ್ಯ ಸುಧಾಕರ ಪ್ರಶಸ್ತಿಗೆ ಭಾಜನವಾಗಿದ್ದಾರೆ.

1995ರಲ್ಲಿ ಶ್ರೀಗಳು ಹುಣಶಾಳ ಪಿ.ಜಿ ಗ್ರಾಮಕ್ಕೆ ಪ್ರವಚನ ಹೇಳಲು ಬಂದರು. ಶ್ರೀಗಳ ಪ್ರವಚನಕ್ಕೆ ಪ್ರಭಾವಿತರಾದ ಗ್ರಾಮಸ್ಥರು, ಅದೇ ಗ್ರಾಮದಲ್ಲಿ ಅವರನ್ನು ಉಳಿಸಿಕೊಂಡರು. ಊರಿನ ಚಿಕ್ಕ ಕುಟೀರದಲ್ಲಿ ನೆಲೆಸಿ, ಆಧ್ಯಾತ್ಮಿಕ ಬದುಕು ಕಟ್ಟಿಕೊಂಡರು. ಸದ್ಯ 13 ಎಕರೆ ವಿಸ್ತೀರ್ಣದಲ್ಲಿ ಮಠ ಬೆಳೆದುನಿಂತಿದೆ. ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ ಶಿವಾನಂದ ಕೌಜಲಗಿ ನೆರವಿನಿಂದ ಮಠದ ಆವರಣದಲ್ಲಿ ರಂಗಮಂದಿರ, ಯಾತ್ರಿ ನಿವಾಸ, ಆಧ್ಯಾತ್ಮಿಕ ಚಿಂತನ ಭವನ ನಿರ್ಮಾಣವಾಗಿವೆ. ಶಿಕ್ಷಣ ಪ್ರಸಾರಕ್ಕಾಗಿ ಪ್ರಾಥಮಿಕ ಶಾಲೆ ತೆರೆದಿದ್ದು, ಭಾರತೀಯ ಸನಾತನ ಸಂಸ್ಕೃತಿಯ ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ‘ಘಟದಿಂದ ಮಠ ಬೆಳೆಯಬೇಕು. ಮಠದಿಂದ ಘಟ ಬೆಳೆಯಬಾರದು’ ಎನ್ನುವ ಸೂಕ್ತಿ ಇಲ್ಲಿ ಸಾಕಾರಗೊಂಡಿದೆ.

ಈ ಮಠಕ್ಕೆ ಹಿಂದೂಗಳಷ್ಟೇ ಅಲ್ಲ; ಸರ್ವಧರ್ಮೀಯರು ಭೇಟಿ ನೀಡಿ ಭಾವೈಕ್ಯತೆ ಮೆರೆಯುತ್ತಾರೆ. ಕಳೆದ ಮೂರು ದಶಕಗಳಲ್ಲಿ ಹಲವು ಮಠಾಧೀಶರು, ಗಣ್ಯರು ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ.

ನಿಜಗುಣ ದೇವರು
ನಿಜಗುಣ ದೇವರು
ನಿಜಗುಣದೇವರು ಕೈವಲ್ಯಾಶ್ರಮ ನಿರ್ಮಿಸಿ ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೈಂಕರ್ಯದಲ್ಲಿ ತೊಡಗಿದ್ದಾರೆ. ಈ ಆಶ್ರಮವನ್ನು ಅನುಭಾವದ ತಾಣವನ್ನಾಗಿಸಿದ್ದಾರೆ
ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಷಷ್ಠ್ಯಬ್ಧಿ ಸಂಭ್ರಮ ಸಮಾರಂಭದ ಗೌರವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT