ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ‘ಆದರ್ಶ ವಿದ್ಯಾಲಯ’ ತೆರೆಯದ ಸರ್ಕಾರ: ಹೆಚ್ಚಿದ ಬೇಡಿಕೆ

ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಕನಸು: 8,880 ಸೀಟುಗಳಿಗೆ 63,865 ಮಕ್ಕಳಿಂದ ಸ್ಪರ್ಧೆ
Published 14 ಡಿಸೆಂಬರ್ 2023, 4:34 IST
Last Updated 14 ಡಿಸೆಂಬರ್ 2023, 4:34 IST
ಅಕ್ಷರ ಗಾತ್ರ

ಬೆಳಗಾವಿ: ಶೂನ್ಯ ಪ್ರವೇಶಾತಿ ಕಾರಣ ರಾಜ್ಯದ ಹಲವು ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿವೆ. ಇನ್ನೊಂದೆಡೆ, ಸರ್ಕಾರಿ ‘ಆದರ್ಶ ವಿದ್ಯಾಲಯ’ಗಳ ಪ್ರವೇಶಕ್ಕೆ ಪ್ರತಿ ವರ್ಷ ಸ್ಪರ್ಧೆ ಹೆಚ್ಚುತ್ತಲೇ ಇದೆ. ಆದರೂ ಇವುಗಳನ್ನು ರಾಜ್ಯದಾದ್ಯಂತ ತೆರೆಯುವಲ್ಲಿ ಸರ್ಕಾರ ಮನಸ್ಸು ಮಾಡಿಲ್ಲ.

‘ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ’ದಡಿ ಈ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರತಿ ಶೈಕ್ಷಣಿಕ ವಲಯಕ್ಕೊಂದು ವಿದ್ಯಾಲಯ ತೆರೆಯಬೇಕು ಎಂಬುದು ನಿಯಮ. ರಾಜ್ಯದ 204 ಶೈಕ್ಷಣಿಕ ವಲಯಗಳ ಪೈಕಿ 74ರಲ್ಲಿ ಮಾತ್ರ ವಿದ್ಯಾಲಯಗಳು ಇವೆ. ಇನ್ನೂ 130 ವಲಯಗಳ ಮಕ್ಕಳು ಈ ಮಾದರಿ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮೇಲಾಗಿ, ಆಯಾ ವಲಯದ ವ್ಯಾಪ್ತಿಯ ಗ್ರಾಮಗಳ ಮಕ್ಕಳು ಮಾತ್ರ ಇವುಗಳಿಗೆ ಪ್ರವೇಶ ಪಡೆಯಬೇಕು. ಈ ನಿಯಮ ಮತ್ತಷ್ಟು ತೊಡಕಾಗಿದೆ.

ಕಳೆದ ವರ್ಷ (2022) ರಾಜ್ಯದಲ್ಲಿ ಒಟ್ಟು 5,920 ಸೀಟುಗಳಿಗೆ 67,381 ವಿದ್ಯಾರ್ಥಿಗಳು ಅರ್ಜಿ ಹಾಕಿದ್ದರು. ಪ್ರಸಕ್ತ (2023) ವರ್ಷ 8,880 ಸೀಟುಗಳಿಗೆ ಬರೋಬ್ಬರಿ 63,865 ಅರ್ಜಿಗಳು ಬಂದವು.  ಇಷ್ಟೊಂದು ಬೇಡಿಕೆ ಇದ್ದರೂ ಸರ್ಕಾರ ಮಾತ್ರ ಇವುಗಳ ಬಲವರ್ಧನೆ ಮಾಡುವ ಅಥವಾ ಬೇಡಿಕೆ ಇದ್ದಲ್ಲಿ ತೆರೆಯಲು ಮುಂದಾಗಿಲ್ಲ ಎಂಬ ದೂರು ಪಾಲಕರದ್ದು.

ಕೇಂದ್ರದ ಶಾಲೆಗಳು:

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಕನಸಿನ ಶಾಲೆಗಳು ಇವು. 2007ರಲ್ಲಿ ಏಕಕಾಲಕ್ಕೆ ದೇಶದಾದ್ಯಂತ 6,000 ಶಾಲೆಗಳನ್ನು ಅವರು ನಿರ್ಮಿಸಿದರು. ಈ ಪೈಕಿ ಕರ್ನಾಟಕದ ಪಾಲಿಗೆ 74 ಶಾಲೆಗಳು ಬಂದವು. 2010ರಲ್ಲಿ ಕೇಂದ್ರವು ಇವುಗಳನ್ನು ಆಯಾ ರಾಜ್ಯ ಸರ್ಕಾರಗಳ ಸುಪರ್ದಿಗೆ ಒಪ್ಪಿಸಿತು. ಇಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮವಿದೆ.

ಶೈಕ್ಷಣಿಕವಾಗಿ ಹಿಂದುಳಿದ ವಲಯ (ಇಬಿಪಿ– 3500 ಶಾಲೆ) ಹಾಗೂ ಸಾರ್ವಜನಿಕ ಸಹಭಾಗಿತ್ವದ ವಲಯ (ಪಿಪಿಪಿ– 2500 ಶಾಲೆ) ಎಂದು ಎರಡು ವಿಭಾಗಳಲ್ಲಿ ಇವುಗಳನ್ನು ಆರಂಭಿಸಲಾಯಿತು. ರಾಜ್ಯದಲ್ಲಿ ಈಗ ಶೈಕ್ಷಣಿಕವಾಗಿ ಹಿಂದುಳಿದ ವಲಯಗಳಲ್ಲಿ ಮಾತ್ರ ಶಾಲೆಗಳಿವೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಶಿವಮೊಗ್ಗ, ದಾವಣಗೆರೆ, ಮಂಗಳೂರು, ಕಾರವಾರ ಸೇರಿದಂತೆ ಒಟ್ಟು 130 ಶೈಕ್ಷಣಿಕ ವಲಯಗಳಲ್ಲಿ ಈ ವಿದ್ಯಾಲಯಗಳನ್ನು ತೆರೆದಿಲ್ಲ. 13 ಜಿಲ್ಲೆಗಳಲ್ಲಿ ಒಂದೂ ಶಾಲೆ ಇಲ್ಲ.

ಪಿಯುಸಿ ಆರಂಭಕ್ಕೆ ಒತ್ತಡ:

ಎಲ್ಲ ಶಾಲೆಗಳಲ್ಲಿ ತಲಾ 33 ಕೊಠಡಿಗಳು ಇವೆ. ಪ್ರತ್ಯೇಕ ಪ್ರಯೋಗಾಲಯ, ಕ್ರೀಡಾಚಟುಟಿಕೆ, ಮೆಡಿಕಲ್‌ ರೂಮ್‌, ಶಿಕ್ಷಕರ ಬಳಗ, ಆಟದ ಮೈದಾನ ಹೀಗೆ ಮೌಲ್ಯಯುತ ಶಿಕ್ಷಣಕ್ಕೆ ಬೇಕಾದ ಎಲ್ಲವೂ ಇಲ್ಲಿದೆ.

6ರಿಂದ 12ನೇ ತರಗತಿಯವರೆಗೆ ಇಲ್ಲಿ ತರಗತಿ ನಡೆಯಬೇಕೆಂಬುದು ಯೋಜನೆಯ ಉದ್ದೇಶವಾಗಿತ್ತು. 13 ವರ್ಷ ಕಳೆದರೂ 6ರಿಂದ 10ನೇ ತರಗತಿಗಳು ಮಾತ್ರ ನಡೆಯುತ್ತಿವೆ. ಪಿಯುಸಿಗೆ ಮೀಸಲಿರುವ ಕಟ್ಟಡಗಳು ದೂಳು ತಿನ್ನುತ್ತಿವೆ.

ಶೈಕ್ಷಣಿಕ ವಲಯಕ್ಕೊಂದು ಆದರ್ಶ ವಿದ್ಯಾಲಯ ತೆರೆದರೆ ಪ್ರತಿ ವರ್ಷ 81600 ಬಡ ಮಕ್ಕಳ ಭವಿಷ್ಯ ನಿರ್ಮಾಣವಾಗಲಿದೆ. ಹೆಚ್ಚು ಹಣ ಸುರಿದು ಖಾಸಗಿ ಶಾಲೆ ಆಶ್ರಯಿಸುವುದು ನಿಲ್ಲಲಿದೆ
–ಧನಂಜಯ ಹೊನ್ನತ್ತಿ, ಪಾಲಕರು

65 ವಿದ್ಯಾಲಯ ಮಂಜೂರು: ಸಚಿವ

‘ಆದರ್ಶ ವಿದ್ಯಾಲಯಗಳು ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಉಚಿತ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮತ್ತೆ 65 ವಲಯಗಳಲ್ಲಿ ಶಾಲೆ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ‍ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು ‘ಸದ್ಯ ಇರುವ ವಿದ್ಯಾಲಯಗಳಿಗೆ ಸೌಕರ್ಯ ಕಲ್ಪಿಸುವುದು ಪಿಯುಸಿ ಆರಂಭಿಸುವುದಕ್ಕೂ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಪ್ರತಿ ವಲಯಕ್ಕೂ ₹1ಕೋಟಿ ಅನುದಾನ ನೀಡಲಾಗುವುದು. ಇದನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗುವುದು. ಬೆಳಗಾವಿ ಅಧಿವೇಶನದಲ್ಲೇ ನಿರ್ಧಾರ ಪ್ರಕಟಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT