ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕಾಲು– ಬಾಯಿ ಬೇನೆ; ಬೇಕಿದೆ ಅರಿವು

5ನೇ ಸುತ್ತಿನ ಲಸಿಕಾ ಆಂದೋಲನ ಆರಂಭಿಸಿದ ಇಲಾಖೆ, ಸಿಬ್ಬಂದಿ ಕೊರತೆಯೇ ವೇಗಕ್ಕೆ ತೊಡಕು
Published 15 ಏಪ್ರಿಲ್ 2024, 3:57 IST
Last Updated 15 ಏಪ್ರಿಲ್ 2024, 3:57 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ದನಗಳಿಗೆ ಕಾಲುಬಾಯಿ ರೋಗ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಲಸಿಕಾಕರಣ ನಡೆಸಿದೆ. ಏ.1ರಿಂದ ಲಸಿಕೆ ನೀಡಲು ಶುರು ಮಾಡಿದ್ದು 30 ದಿನಗಳವರೆಗೆ ನೀಡುವ ಗುರಿ ಹೊಂದಲಾಗಿದೆ. ಆದರೆ, ಒಂದೆಡೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಇನ್ನೊಂದೆಡೆ ಜಿಲ್ಲೆಯ ವ್ಯಾಪ್ತಿ ದೊಡ್ಡದಿರುವುದು ಲಸಿಕಾಕರಣಕ್ಕೆ ತುಸು ಅಡ್ಡಿಯಾಗಿದೆ. ಕೊರತೆಗಳನ್ನು ಮೀರಿಯೂ ಇಲಾಖೆಯಿಂದ ಲಸಿಕಾ ಅಭಿಯಾನ ನಡೆಸಲಾಗಿದೆ.

ಪ್ರತಿ ಬಾರಿ ಬೇಸಿಗೆಯಲ್ಲಿ ಕಾಲು– ಬಾಯಿ ರೋಗ ಅಥವಾ ಗೊರಸು– ಬಾಯಿ ರೋಗ ಹರಡುವುದು ಸಾಮಾನ್ಯ. ಮಾರ್ಚ್‌ ಕೊನೆಯ ವಾರದ ಹೊತ್ತಿಗೆ ಹುಟ್ಟು ಈ ರೋಗದ ವೈರಾಣುಗಳು ದನಗಳ ಕಾಲು ಹಾಗೂ ಬಾಯಿಗೆ ದೊಡ್ಡ ಹುಣ್ಣು ಮಾಡುತ್ತವೆ. ಇದೇ ಕಾರಣಕ್ಕೆ ಇದನ್ನು ಕಾಲು– ಬಾಯಿ ಬೇನೆ ಎಂದೇ ಕರೆಯಲಾಗುತ್ತದೆ. ಯಾವುದಾದರೂ ದನ ಐದಾರು ದಿನಗಳವರೆಗೆ ಜ್ವರದಿಂದ ಬಳಲಿದರೆ ಅದು ಕಾಲ–ಬಾಯಿ ಬೇನೆಯ ಲಕ್ಷಣ ಎಂಬುದು ಅಧಿಕಾರಿಗಳ ಮಾಹಿತಿ.

ಈ ವೈರಾಣುವಿನಿಂದ ಬಳಲುವ ದನಗಳು ಕುಂಟುತ್ತವೆ. ಅದು ಪ್ರಾಥಮಿಕ ಲಕ್ಷಣ ಎಂದು ಪರಿಗಣಿ ತಕ್ಷಣ ಚಿಕಿತ್ಸೆ ಕೊಡಿಸಬೇಕು. ನಿರ್ಲಕ್ಷ್ಯ ಮಾಡಿದರೆ ದನಗಳು ಕುಂಟಾಗುವ ಸಾಧ್ಯತೆ ಇರುತ್ತದೆ.

ಮುಂಜಾಗ್ರತಾ ಲಸಿಕೆ: ನಾಲ್ಕು ವರ್ಷಗಳ ಹಿಂದೆ ಈ ಸೋಂಕು ಬಹಳ ಕಾಡಿತ್ತು. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಲಸಿಕಾ ಆಂದೋಲನ ಶುರು ಮಾಡಲಾಗಿದೆ. 5ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವು ಜಿಲ್ಲೆಯಲ್ಲಿ ಸಾಗಿದೆ. ಬ್ಯಾನರ್‌, ಪೋಸ್ಟರ್‌ಗಳ ಮೂಲಕ ರೈತರಿಗೆ ಅರಿವು ಮೂಡಿಸಲಾಗುತ್ತಿದೆ.

ಜಿಲ್ಲೆಯಲ್ಲಿ 20ನೇ ಜಾನುವಾರು ಗಣತಿಯ ಪ್ರಕಾರ ಒಟ್ಟು 13,93,711 ಜಾನುವಾರುಗಳಿವೆ. ಆದರೆ ವಾಸ್ತವದಲ್ಲಿ ಜಾನುವಾರು ಸಂಖ್ಯೆ ಕಡಿಮೆ ಇರುತ್ತದೆ ಎಂಬುದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ರಾಜೀವ ಕೋಲೇರ ಅವರ ಮಾಹಿತಿ.

913 ಲಸಿಕೆದಾರರು: ಜಿಲ್ಲೆಯಲ್ಲಿ ಎಲ್ಲ 15 ತಾಲ್ಲೂಕುಗಳು ಸೇರಿ 913 ಲಸಿಕೆದಾರರು ಇದ್ದಾರೆ. ಇವರನ್ನು ಒಳಗೊಂಡ 457 ಲಸಿಕಾ ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಯ ವ್ಯಾಪ್ತಿ ದೊಡ್ಡದು. ದನಗಳ ಸಂಖ್ಯೆಯೂ ದೊಡ್ಡದು. ಹೀಗಾಗಿ, ಈ ಇನ್ನೂ ಹೆಚ್ಚಿನ ಲಸಿಕೆ ತಂಡಗಳು ಅಗತ್ಯ ಎಂಬುದು ಜನರ ಬೇಡಿಕೆ.

ಲಸಿಕಾಕರಣವನ್ನು ಇನ್ನಷ್ಟು ಖಾತ್ರಿ ಮಾಡಲು ಪ್ರತಿ ದಿನ ತಂತ್ರಾಂಶ ಅಪ್ಡೇಟ್‌ ಪಡೆಯಲಾಗುತ್ತಿದೆ. ಜಾನುವಾರುಗಳಿಗೆ ಲಸಿಕೆ ಹಾಕಿದ ಮೇಲೆ ಅದರ ಮಾಹಿತಿಯನ್ನು ‘ಭಾರತ್‌ ಪಶುಧನ’ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗುತ್ತಿದೆ. ಪ್ರತಿಯೊಬ್ಬ ಲಸಿಕೆದಾರರಿಗೆ ಪ್ರತ್ಯೇಕ ಯೂಸರ್ ಐಡಿ ನೀಡಲಾಗಿದೆ.

ಇಲಾಖೆಯ ವೆಬ್‌ಸೈಟ್ AHVS KDP-MIS ತಂತ್ರಾಂಶದಲ್ಲಿ ಲಸಿಕೆ ಹಾಕಲಾದ ಜಾನುವಾರು, ಗ್ರಾಮಗಳು, ಜಾನುವಾರು ಮಾಲೀಕರ ಮಾಹಿತಿ ಅಪ್ಡೇಟ್‌ ಮಾಡಲಾಗುತ್ತಿದೆ ಎನ್ನುತ್ತಾರೆ ಡಾ.ರಾಜೀವ್ ಕೊಲೇರ.

ಪಶು ಸಖಿಯರ ಕಾರ್ಯ ಏನು?: ಪಶುಗಳ ನಿರ್ವಹಣೆ ಜವಾಬ್ದಾರಿ ನೋಡಿಕೊಳ್ಳಲು ಪಶು ಸಖಿಯರನ್ನು ನೇಮಿಸಲಾಗಿದೆ. ಇಲಾಖೆ ಹಾಗೂ ರೈತರ ಸಂಪರ್ಕ ಕೊಂಡಿಯಂತೆ ಇವರ ಕೆಲಸ ಮಾಡಬೇಕು. ದನಗಳ ಸಂಖ್ಯೆ, ಕರುಗಳ ಸಂಖ್ಯೆ ಹಾಗೂ ಲಸಿಕೆ ಪ್ರಗತಿಯ ಕುರಿತು ಮಾಹಿತಿ ಸಂಗ್ರಹಿಸುವುದು. ರೈತರಿಗೆ ಅರಿವು ಮೂಡಿಸುವ ಜವಾಬ್ದಾರಿ ನೀಡಲಾಗಿದೆ.

ಹಿರೇಬಾಗೇವಾಡಿಯಲ್ಲಿ ದನಕ್ಕೆ ಲಸಿಕೆ ಹಾಕಿದ ಸಿಬ್ಬಂದಿ
ಹಿರೇಬಾಗೇವಾಡಿಯಲ್ಲಿ ದನಕ್ಕೆ ಲಸಿಕೆ ಹಾಕಿದ ಸಿಬ್ಬಂದಿ
ರಾಯಬಾಗ ಪಶುಪಾಲನಾ ಇಲಾಖೆಯಲ್ಲಿ ಶಾಸಕ ಡಿ.ಎಂ. ಐಹೊಳೆ ಅವರು ಹಸುವಿಗೆ ಪೂಜೆ ಸಲ್ಲಿಸಿ ಲಸಿಕಾಕರಣಕ್ಕೆ ಚಾಲನೆ ನೀಡಿದರು
ರಾಯಬಾಗ ಪಶುಪಾಲನಾ ಇಲಾಖೆಯಲ್ಲಿ ಶಾಸಕ ಡಿ.ಎಂ. ಐಹೊಳೆ ಅವರು ಹಸುವಿಗೆ ಪೂಜೆ ಸಲ್ಲಿಸಿ ಲಸಿಕಾಕರಣಕ್ಕೆ ಚಾಲನೆ ನೀಡಿದರು

ಜಾನುವಾರು ಮಾಲೀಕರ ಮನೆ ಬಾಗಿಲಿಗೆ ತೆರಳಿ ಹಸು ಎತ್ತು ಎಮ್ಮೆ ಮತ್ತು ಕರುಗಳಿಗೆ ಉಚಿತವಾಗಿ ಲಸಿಕೆದಾರರು ಕಾಲು -ಬಾಯಿ ಬೇನೆ ಲಸಿಕೆ ಹಾಕುವುದನ್ನು ಕಡ್ಡಾಯ ಮಾಡಲಾಗಿದೆ

–ನಿತೇಶ್ ಪಾಟೀಲ ಜಿಲ್ಲಾಧಿಕಾರಿ

ಜಿಲ್ಲೆಯ ವ್ಯಾ‍ಪ್ತಿ ನೋಡಿದರೆ ಸಿಬ್ಬಂದಿ ಕಡಿಮೆ ಇದ್ದಾರೆ. ಅದಾಗಿಯೂ ಅತ್ಯಂತ ಪರಿಣಾಮಕಾರಿಯಾಗಿ ಲಸಿಕಾಕರಣ ನಡೆದಿದೆ. ರಾಜ್ಯದಲ್ಲೇ ಮುಂಚೂಣಿ ಸಾಧಿಸಿದ್ದೇವೆ

–ಡಾ.ರಾಜೀವ್‌ ಕೋಲೇರ ಉಪ ನಿರ್ದೇಶಕ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ

ಕಳೆದ ವರ್ಷ ನಮ್ಮ ದನಗಳು ಸೋಂಕಿಗೆ ಒಳಗಾದವು. ಲಸಿಕೆ ತಡವಾಗಿ ಹಾಕಿದ್ದರಿಂದ ಸಮಸ್ಯೆಯಾಗಿತ್ತು. ಜಿಲ್ಲೆಯಲ್ಲಿ ಲಸಿಕಾಕರಣವನ್ನು ಇನ್ನಷ್ಟು ವೇಗ ಮಾಡಬೇಕಾಗಿದೆ

–ಮಲ್ಲಪ್ಪ ದೇಗಾವಿ ರೈತ ಕಟಕೋಳ

ಪ್ರತಿ ಬಾರಿ ಬೇಸಿಗೆಯಲ್ಲಿ ಕಾಲು– ಬಾಯಿ ರೋಗ ಸಾಮಾನ್ಯವಾಗಿದೆ. ಲಸಿಕೆ ಬೇಗ ಹಾಕಿದರೆ ದನಗಳಲ್ಲಿ ವೈರಾಣು ನಿರೋಧಕ ಶಕ್ತಿ ವೃದ್ಧಿಸುತ್ತದೆ. ಮೇ ತಿಂಗಳಲ್ಲಿ ಸೋಂಕು ಹೆಚ್ಚಬಹುದು

–ಸಿದಗೌಡ ಮೋದಗಿ ಅಧ್ಯಕ್ಷ ಭಾರತೀಯ ಕೃಷಿಕ ಸಮಾಜ (ಸಂಯುಕ್ತ)

ಕಾಲು– ಬಾಯಿ ಬೇನೆ ಲಸಿಕೆ ವಿವರ

11.20 ಲಕ್ಷ ಜಿಲ್ಲಾ ಕೇಂದ್ರದಿಂದ ಸರಬರಾಜು ಮಾಡಿದ ಲಸಿಕೆ ಡೋಸ್‌ಗಳು 1.65 ಲಕ್ಷ  ಕಳೆದ ವರ್ಷದಲ್ಲಿ ಉಳಿದಿದ್ದ ಲಸಿಕೆ ಡೋಸ್‌ಗಳು 12.85 ಲಕ್ಷ ಈ ಬಾರಿ ಒಟ್ಟಾರೆ ಲಭ್ಯ ಇರುವ ಡೋಸ್‌ಗಳ ಪ್ರಮಾಣ 1393711 ಜಿಲ್ಲೆಯಲ್ಲಿರುವ ದನಗಳ ಸಂಖ್ಯೆ

ಸಂಚಾರಿ ಶೀಥಲೀಕರಣ ವ್ಯವಸ್ಥೆ

ಜಿಲ್ಲೆಯ ವ್ಯಾಪ್ತಿ ದೊಡ್ಡದಾದ ಕಾರಣ ಲಸಿಕೆಯನ್ನು ಸೂಕ್ತ ಸಮಯಕ್ಕೆ ತಲುಪಿಸುವುದು ಸವಾಲು. ಹೀಗಾಗಿ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿ ಶೀಥಲೀಕರಣ ವ್ಯವಸ್ಥೆ ಮಾಡಲಾಗಿದೆ. ಅದರೊಂದಿಗೆ ‘ವಾಕ್ ಇನ್ ಕೂಲರ್’ ವ್ಯವಸ್ಥೆ ಕೂಡ ಮಾಡಲಾಗಿದೆ. ಶೀಥಲೀಕರಣ ವ್ಯವಸ್ಥೆಯುಳ್ಳ ಆರು ವಾಹನಗಳಲ್ಲಿ ಲಸಿಕೆ ಸರಬರಾಜು ಮಾಡಲಾಗುತ್ತಿದೆ. ಬೆಳಗಾವಿ ಗೋಕಾಕ ಚಿಕ್ಕೋಡಿ ಅಥಣಿ ಹುಕ್ಕೇರಿ ಕಾಗವಾಡ ಖಾನಾಪುರ ಚನ್ನಮ್ಮನ ಕಿತ್ತೂರು ಮೂಡಲಗಿ ನಿಪ್ಪಾಣಿ ರಾಮದುರ್ಗ ಬೈಲಹೊಂಗಲ ಸವದತ್ತಿ ಯರಗಟ್ಟಿ ರಾಯಬಾಗ ತಾಲ್ಲೂಕುಗಳಲ್ಲಿ ಲಸಿಕೆಯನ್ನು ಪಶು ಸಂಸ್ಥೆಗಳಿಗೆ ಸರಬರಾಜು ಮಾಡಲಾಗಿದೆ. ಒಟ್ಟು 847 ಲಸಿಕಾ ವಾಹನಗಳು ಲಭ್ಯ ಇವೆ ಎಂಬುದು ಅಧಿಕಾರಿಗಳ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT