‘ಎಲ್ಲ ವಾರ್ಡ್‌ಗಳಲ್ಲೂ ಯೋಗ ಕೇಂದ್ರ’

7
ಬಿಬಿಎಂಪಿ ಮೇಯರ್‌ ಸಂಪತ್‌ರಾಜ್ ಭರವಸೆ; ಮುಖ್ಯಮಂತ್ರಿ ಜತೆ ಚರ್ಚೆ

‘ಎಲ್ಲ ವಾರ್ಡ್‌ಗಳಲ್ಲೂ ಯೋಗ ಕೇಂದ್ರ’

Published:
Updated:

ಬೆಂಗಳೂರು: ‘ನಗರದ ಎಲ್ಲ ವಾರ್ಡ್‌ಗಳಲ್ಲೂ ಯೋಗ ಕೇಂದ್ರ ಸ್ಥಾಪನೆ ಮಾಡಲಾಗುವುದು ಹಾಗೂ ಉದ್ಯಾನಗಳಲ್ಲಿ ಯೋಗ ಮಾಡಲು ಸ್ಥಳಾವಕಾಶ ಕಲ್ಪಿಸಲಾಗುವುದು’
ಎಂದು ಮೇಯರ್‌ ಸಂಪತ್‌ರಾಜ್ ಹೇಳಿದರು.

ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್‌ ಸೇವೆಗಳ ಇಲಾಖೆ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 4ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾರ್ವಜನಿಕರು ನನ್ನನ್ನು ಭೇಟಿಯಾದಾಗ, ವಾರ್ಡ್‌ಗಳಲ್ಲಿ ಯೋಗ ಕೇಂದ್ರ ಸ್ಥಾಪನೆ ಮತ್ತು ಉದ್ಯಾನಗಳಲ್ಲಿ ಯೋಗ ಮಾಡಲು ಸ್ಥಳಾವಕಾಶ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಿ.ಪರಮೇಶ್ವರ ಅವರೊಂದಿಗೆ ಚರ್ಚಿಸಿದ್ದೇನೆ. ಅನುಷ್ಠಾನಕ್ಕೆ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಬಜೆಟ್‌ನಲ್ಲಿ ಹಣವೂ ಬಿಡುಗಡೆಯಾಗಿದೆ’ ಎಂದರು. 

‘ನಿಮ್ಮ ವಾರ್ಡ್‌ ಮತ್ತು ಉದ್ಯಾನಗಳಲ್ಲಿ ಏನೇ ಸವಲತ್ತುಗಳು ಬೇಕಿದ್ದರೂ ನನ್ನನ್ನು ಕೇಳಿ. ಖಂಡಿತ ಸಹಕಾರ ನೀಡುವೆ’ ಎಂದು ಭರವಸೆ ನೀಡಿದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಕಾರ ಇಲಾಖೆ ಸಚಿವ ಬಂಡೆಪ್ಪ ಕಾಶೆಂಪುರ, ‘ರಾಜ್ಯದ ಪ್ರತಿ ಹಳ್ಳಿಗಳಲ್ಲೂ ಯೋಗಾಭ್ಯಾಸ ನಡೆಯಬೇಕು. ಆರೋಗ್ಯವೆ ನಮ್ಮ ಭಾಗ್ಯವಾಗಬೇಕು. ಗಡಿಬಿಡಿ ಬದುಕಿನ ಪದ್ಧತಿ ಬದಲಿಸಿಕೊಂಡು, ನಿತ್ಯವೂ ಕನಿಷ್ಠ 45 ನಿಮಿಷ ಯೋಗ ಮಾಡಬೇಕು. ಇರುವಷ್ಟು ಕಾಲ ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ನಡೆಸೋಣ’ ಎಂದರು. 

ಮುಖ್ಯಮಂತ್ರಿ ಗೈರು: ನಿಯೋಜಿತ ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಬರಲಾಗಿಲ್ಲ ಎಂದು ಬಂಡೆಪ್ಪ ಕಾಶೆಂಪುರ ತಿಳಿಸಿದರು. 

ಯೋಗ ಪೋಸ್ಟರ್‌ ಅನಾವರಣ

ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದಂತಹ ಯೋಗಾಸನಗಳ ಕುರಿತ ಪೋಸ್ಟರ್‌ ಅನ್ನು ಆಯುಷ್‌ ಇಲಾಖೆಯ ವತಿಯಿಂದ ಬಿಡುಗಡೆ ಮಾಡಲಾಯಿತು.  

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ‌ಪಾಟೀಲ, ವಿಧಾನ‌ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮತ್ತು ವಿಧಾನ‌ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿದರು. 

ಶ್ವಾಸ ಗುರು ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಯೋಗ ಸ್ವಾಮೀಜಿಗಳು, ನೂರಾರು ಜನರು ಮತ್ತು ಶಾಲಾ ಮಕ್ಕಳು ಯೋಗ ಪ್ರದರ್ಶನ ಮಾಡಿದರು. 

ಹೀಗಿತ್ತು ವಾತಾವರಣ‌...

ಎಳೆ ಬಿಸಿಲಿನ ಸೂರ್ಯನ ಕಿರಣಗಳು, ಸುತ್ತೆಲ್ಲ ಬಣ್ಣದ ಪುಟ್ಟ ಪುಟ್ಟ ಹಾಸುಗಳು, ಸಹಸ್ರಾರು ಸಂಖ್ಯೆಯ ಹಳದಿ ಬಣ್ಣದ ಟೀಶರ್ಟ್‌ ಧಾರಿಗಳು ದಣಿದದೇಹವನ್ನು ಬೆವರಿಳಿಸಲು ಸನ್ನದ್ಧರಾಗುತ್ತಿದ್ದರು.

ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಹಿರಿಯರು– ಕಿರಿಯರು ಎನ್ನದೇ ಎಲ್ಲರೂ ವ್ಯಾಯಮ ನಿರತರಾಗಲು ಕಾತುರರಾಗಿದ್ದ ದೃಶ್ಯ ಕಂಡದ್ದು ಕಂಠೀರವ ಹೊರಾಂಗಣ ಮೈದಾನದಲ್ಲಿ.

ಮೈ ನವಿರೇಳಿಸುವಂತಹ ಬಗೆ ಬಗೆಯ ಆಸನಗಳನ್ನು ಯೋಗ ಸ್ವಾಮೀಜಿಗಳು, ಯೋಗಪಟುಗಳು ಪ್ರದರ್ಶಿಸಿದರು.

ಯೋಗಾಸಕ್ತರಿಂದ ತುಂಬಿದ ಕ್ರೀಡಾಂಗಣವೆಲ್ಲ ಶ್ವಾಸಗುರು ವಚನಾನಂದ ಸ್ವಾಮೀಜಿ‌ ಮಾರ್ಗದರ್ಶನದಂತೆಯೇ ಹೊರಳಾಡುತ್ತಿತ್ತು. ಏಕಕಾಲಕ್ಕೆ
ನಡೆದ ಯೋಗಾಭ್ಯಾಸ ಒಂದು ಕ್ಷಣ ರೋಮಾಂಚನ ಉಂಟು ಮಾಡುವಂತಿತ್ತು. 

‘ಬಾಲ್ಯದಲ್ಲೇ ಯೋಗ ಅಭ್ಯಾಸ ಮಾಡಿ’

‘ಮುಪ್ಪಿನಲ್ಲಿ ಯೋಗ ಕಲಿಯುವ ಬದಲು, ಬಾಲ್ಯದಲ್ಲೇ ರೂಢಿಸಿಕೊಂಡರೆ ರೋಗಗಳಿಂದ ದೂರ ಇರಬಹುದು’ ಎಂದು ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಹೇಳಿದರು.

ನಗರದ ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನ ಭಾರತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಯೋಗ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಶಾಲಾ ಹಂತದಿಂದಲೇ ಯೋಗ ಶಿಕ್ಷಣ ನೀಡುವಂತಾದರೆ ಬಹುಬೇಗ ರೋಗಮುಕ್ತ ದೇಶ ನಿರ್ಮಾಣ ಮಾಡಬಹುದು’ ಎಂದರು.

ಪ್ರೊ.ಎ.ಲೋಕೇಶ್ ಮಾತಾನಾಡಿ, ‘ಮನುಜನ ಏಳ್ಗೆಗೆ ಮತ್ತು ಬದುಕಿನ ಜಂಜಾಟಗಳ ಮುಕ್ತಿಗೆ ಯೋಗ ಪರಿಹಾರ’ ಎಂದರು.

ಕುಲಸಚಿವ ಪ್ರೊ.ಬಿ.ಕೆ.ರವಿ ಮಾತನಾಡಿ,‘ಪ್ರಕ್ಷುಬ್ಧ ವಾತಾವರಣದಿಂದಾಗಿ ಯೋಗವನ್ನು ಕೆಲವು ಧರ್ಮಗಳಿಗೆ ಸೀಮಿತಗೊಳಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯೋಗದಿಂದ ಆಸ್ಪತ್ರೆ ಸಹವಾಸ ದೂರ’

‘ಯೋಗ, ಪ್ರಾಣಾಯಾಮ ಮತ್ತು ಧ್ಯಾನ ನಮ್ಮನ್ನು ‌ಆಸ್ಪತ್ರೆಗಳಿಂದ ದೂರವಿರಿಸುತ್ತವೆ’ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ ಕುಮಾರ್‌ ಹೇಳಿದರು. 

ನಗರದ ಪಿಇಎಸ್‌ ವಿಶ್ವವಿದ್ಯಾಲಯ 4ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

‘ಯೋಗದಿಂದಾಗಿ ವಿಶ್ವದ ಎಲ್ಲ ದೇಶಗಳು ಭಾರತದತ್ತ ನೋಡುವಂತಾಗಿದೆ. ಯೋಗ ದಿನವನ್ನು ಅಂತರರಾಷ್ಟ್ರೀಯ ದಿನವಾಗಿ ಘೋಷಿಸಿರುವುದರ ಹಿಂದೆ ಪ್ರಧಾನಿ ಮೋದಿ ಅವರ ಶ್ರಮವಿದೆ’ ಎಂದು ಅವರು ಶ್ಲಾಘಿಸಿದರು.  

ಕುಲಪತಿ ಡಾ.ಎಮ್‌.ಆರ್‌.ದೊರೆಸ್ವಾಮಿ ಮಾತನಾಡಿ, ‘ವಿಶ್ವಕ್ಕೆ ಭಾರತ ನೀಡಿದ ಹಲವಾರು ಕೊಡುಗೆಗಳಲ್ಲಿ ಯೋಗವು ಒಂದು ಎನ್ನುವುದು ಹೆಮ್ಮೆ ಪಡಬೇಕಾದ ವಿಷಯ. ಯೋಗದಿಂದ ಮಾತ್ರ ದೇಹ, ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯ’ ಎಂದರು. 

‘ಯೋಗದಿಂದ ದೈಹಿಕ ಮತ್ತು ಮಾನಸಿಕ ಶಿಸ್ತನ್ನು ಕಟ್ಟಿಕೊಳ್ಳಬಹುದು. ಇದರಿಂದ ಒತ್ತಡ ಮತ್ತು ಆತಂಕವನ್ನು ನಿರ್ವಹಿಸಿಕೊಳ್ಳಲು ಸಾಧ್ಯ. ಪ್ರಸ್ತುತ ದಿನಗಳಲ್ಲಿ ಯೋಗ, ಜಾತ್ಯತೀತ
ಮತ್ತು ಜಾಗತಿಕ ವಿದ್ಯಮಾನವಾಗಿದೆ’ ಎಂದು ಅವರು ಹೇಳಿದರು. 

ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪಿಇಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪಾಲುದಾರರು ಭಾಗವಹಿಸಿದ್ದರು.

‘ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಯೋಗ’

‘ಸಮತೋಲಿತ ಮನಸ್ಸು, ಸದೃಢ ಶರೀರದ ಮೂಲಕ ನೆಮ್ಮದಿಯ ಬದುಕು ನಡೆಸಲು ಯೋಗ ರೂಢಿಸಿಕೊಳ್ಳಬೇಕು’ ಎಂದು ಯೋಗಶ್ರೀ ಯೋಗ ಸಂಸ್ಥೆ ನಿರ್ದೇಶಕಿ ವನಿತಾ ಹೇಳಿದರು.

ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ವ್ಯಕ್ತಿತ್ವ ವಿಕಸನಕ್ಕಾಗಿ ಯೋಗಾಸನ ಕಲಿಯುವುದು ಸೂಕ್ತ. ಈ ನಿಟ್ಟಿನಲ್ಲಿ ಯುವ ಶಿಕ್ಷಕರು ಒತ್ತಡಗಳನ್ನು ಮೀರಿ, ಸಮಾಧಾನದ ವೃತ್ತಿ ಬದುಕನ್ನು ನಡೆಸಬಹುದು’ ಎಂದರು. 

‘ಯೋಗದ ಮೂಲಕ ವೈಯಕ್ತಿಕ ಆರೋಗ್ಯದ ಜತೆಗೆ ಸ್ವಸ್ಥ ಸಮಾಜವನ್ನೂ ರೂಪಿಸಬಹುದು. ಯುವತಿ ಮಧ್ಯರಾತ್ರಿ ನಿರ್ಭೀತಿಯಿಂದ ಓಡಾಡಬಲ್ಲ ರಾಮರಾಜ್ಯದ ಕನಸು ನನಸಾಗಲು ಯೋಗ ಪ್ರಧಾನ ಜೀವನಶೈಲಿ ಅತಿ ಅಗತ್ಯ. ಧಾವಂತದ ಬದುಕಿನ ಈ ಸಮಯದಲ್ಲಿ ಕನಿಷ್ಠ ನಿತ್ಯ 15 ನಿಮಿಷಗಳ ಯೋಗಾಭ್ಯಾಸ ಮಾಡಬೇಕು’ ಎಂದು ಅವರು ಹೇಳಿದರು.


ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಕಬ್ಬನ್‌ ಉದ್ಯಾನದಲ್ಲಿ ದಿ ಸಿಲ್ವರ್‌ ಸರ್ಫರ್ಸ್‌ ಕ್ಲಬ್‌ (ಟಿಎಸ್ಎಸ್‌ಸಿ) ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು ಯೋಗ ‍ಪ್ರದರ್ಶನ ಮಾಡಿದರು – ಪ್ರಜಾವಾಣಿ ಚಿತ್ರ


ನಗರದ ಪಿಇಎಸ್‌ ವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂವಾಗಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್‌, ಭಾರತದ ಮಾಜಿ ಹಾಕಿ ಆಟಗಾರ ಅಶೀಶ್‌ ಬಲ್ಲಾಳ್‌, ಡಾ.ಐ.ಬಿ.ವಿಜಯಲಕ್ಷ್ಮೀ, ಎಂ.ಆರ್‌.ದೊರೆಸ್ವಾಮಿ ಯೋಗ ಪ್ರದರ್ಶನ ಮಾಡಿದರು –ಪ್ರಜಾವಾಣಿ ಚಿತ್ರ


ಇಂದಿರಾನಗರದ ನ್ಯೂ ಹಾರಿಜನ್‌ ಶಾಲೆಯಲ್ಲಿ  ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯ್‌ ವಾಲಾ ವಿದ್ಯಾರ್ಥಿಗಳೊಂದಿಗೆ ಯೋಗ ಪ್ರದರ್ಶನ ಮಾಡಿದರು -ಪ್ರಜಾವಾಣಿ ಚಿತ್ರ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !