ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ–ವನ್ಯಜೀವಿ ಸಂಘರ್ಷದ ವರ್ಷ

2019ರ ಸಿಂಹಾವಲೋಕನ: ರಾಜಕೀಯ ಪಲ್ಲಟಗಳಿಗೂ ಸಾಕ್ಷಿ, ಉತ್ತಮ ಮಳೆ ಬೆಳೆಯಾಗಿ ರೈತರಲ್ಲಿ ತಂದಿತು ಹರ್ಷ
Last Updated 30 ಡಿಸೆಂಬರ್ 2019, 15:31 IST
ಅಕ್ಷರ ಗಾತ್ರ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರವು 2019ನೇ ಇಸವಿಯಲ್ಲಿ ಬೇರೆ ಬೇರೆ ಕಾರಣಗಳಿಗೆ ರಾಜ್ಯ, ದೇಶದ ಗಮನ ಸೆಳೆಯಿತು.

ಸುಳ್ವಾಡಿ ವಿಷಪ್ರಸಾದ ದುರಂತದ ಸೂತಕದಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದ ಜಿಲ್ಲೆಯು ಈ ವರ್ಷ ಮಾನವ–ವನ್ಯಜೀವಿ ಸಂಘರ್ಷದಿಂದಾಗಿ ಸುದ್ದಿಯಾಯಿತು. ಬಂಡೀಪುರ ಕಾಳ್ಗಿಚ್ಚು, ಹುಲಿ, ಆನೆ, ಚಿರತೆಗಳ ದಾಳಿಗಳಿಗೆ ಜನ ಹಾಗೂ ಜಾನುವಾರುಗಳ ಬಲಿ ಈ ವರ್ಷದಲ್ಲಿ ಹೆಚ್ಚು ನಡೆದವು.

ರಾಜಕೀಯದಲ್ಲಿ ಸಂಭವಿಸಿದ ಅನಿರೀಕ್ಷಿತ ಪಲ್ಲಟಕ್ಕೂ ಈ ವರ್ಷ ಜಿಲ್ಲೆ ಸಾಕ್ಷಿಯಾಯಿತು.ವರ್ಷಾರಂಭದಲ್ಲೇ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರ ಮೇಲೆ ಲಂಚ ಪಡೆದ ಆರೋಪ ಬಂದು ಸ್ವತಃ ಅವರು, ಜಿಲ್ಲೆಯ ಜನತೆಯೂ ಮುಜುಗರ ಪಟ್ಟುಕೊಳ್ಳುವಂತಾಯಿತು. ಗುಂಡ್ಲುಪೇಟೆಯ ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ನಡೆದ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ರಾಜ್ಯದಾದ್ಯಂತ ಭಾರಿ ಸದ್ದು ಮಾಡಿತು.

ಉತ್ತಮವಾಗಿ ಮಳೆ ಸುರಿದು, ಬೆಳೆ ಬಂದು ರೈತರ ಮುಖದಲ್ಲಿ ಹರ್ಷ ಕಾಣುವಂತಾಯಿತು. ಭಾರಿ ಮಳೆಯಿಂದಾಗಿ ಕೊಳ್ಳೇಗಾಲ ತಾಲ್ಲೂಕಿನ ಆರು ಗ್ರಾಮಗಳು ಜಲಾವೃತವಾದವು. ನನೆಗುದಿಗೆ ಬಿದ್ದಿದ್ದ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆ ನೀರು ಹರಿಸುವ ಯೋಜನೆಗೂ ಚಾಲನೆ ಸಿಕ್ಕಿತು.

ಶಿಕ್ಷಣ ಸಚಿವರು ಜಿಲ್ಲೆಯ ಗಡಿಭಾಗ ಗೋಪಿನಾಥಂನಲ್ಲಿ ಶಾಲಾ ವಾಸ್ತವ್ಯ ಹೂಡುವ ಮೂಲಕ ಅಲ್ಲಿ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಗುವುದಕ್ಕೆ ಕಾರಣವಾದರು. ವರ್ಷಾಂತ್ಯಕ್ಕೆ ಚಾಮುಲ್‌ನಲ್ಲಿ ನಡೆದ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿ ಬಂದು, ಜಿಲ್ಲಾಧಿಕಾರಿ ಅವರು ಜಂಟಿ ತನಿಖೆಗೆ ಆದೇಶಿಸುವಂತಾಯಿತು.

ಕಾಳ್ಗಿಚ್ಚು, ಹುಲಿ, ಆನೆ ದಾಳಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ವನ್ಯಧಾಮ, ಕಾವೇರಿ ವನ್ಯಧಾಮಗಳು ಜಿಲ್ಲೆಯ ನಾಲ್ಕು ಮುಕುಟಗಳು.ಒಟ್ಟು ಭೂಭಾಗದಲ್ಲಿ ಶೇ 50ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವುದು ಜಿಲ್ಲೆಯ ಹೆಗ್ಗಳಿಕೆ. ಹಾಗಾಗಿ ಇಲ್ಲಿ ಮಾನವ–ವನ್ಯಜೀವಿ ಸಂಘರ್ಷ ನಡೆಯುತ್ತಲೇ ಇರುತ್ತದೆ. ಈ ವರ್ಷ ಇದು ಸ್ವಲ್ಪ ಹೆಚ್ಚಿತ್ತು.

ಫೆಬ್ರುವರಿ ತಿಂಗಳ ಅಂತ್ಯದಲ್ಲಿ (ಫೆ.22) ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ಕುಂದುಕೆರೆ, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ವಲಯಗಳಲ್ಲಿ ಕಂಡು ಬಂದ ಕಾಳ್ಗಿಚ್ಚು 11,046 ಎಕರೆಯಷ್ಟು ಕಾಡನ್ನು‌ಭಸ್ಮ ಮಾಡಿತು. ಹುಲಿಗೆ ಬೆದರಿ, ಪ್ರಾಣಿಗಳ ಹಾವಳಿಯಿಂದ ಬೇಸತ್ತು ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಗೆ ಐದು ದಿನಗಳ ಕಾಲ ಕಾಡು ಹೊತ್ತಿ ಉರಿಯಿತು. ಅರಣ್ಯ ಇಲಾಖೆಯು ಸೇನಾ ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಂಬದಿಗೆ ತಂದಿತು. ಇಲ್ಲದಿದ್ದರೆ, ಇನ್ನಷ್ಟು ಅರಣ್ಯ ಬೆಂಕಿಗೆ ಆಹುತಿಯಾಗುತ್ತಿತ್ತು. ಘಟನೆಯ ಸಂಬಂಧ ಮೂವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದರು.

ಅತ್ತ ಬಿಆರ್‌ಟಿ, ಮಲೆಮಹದೇಶ್ವರ ವನ್ಯಧಾಮ ಹಾಗೂ ಕಾವೇರಿ ವನ್ಯಧಾಮಗಳಲ್ಲೂ ನೂರಾರು ಎಕರೆ ಕಾಡು ಸುಟ್ಟು ಭಸ್ಮವಾಯಿತು.

ಜಿಲ್ಲೆಯಲ್ಲಿ ಈ ವರ್ಷ ಕಾಡಾನೆ ದಾಳಿಯಲ್ಲಿ ಜಿಲ್ಲೆಯಲ್ಲಿ ಅರಣ್ಯ ವೀಕ್ಷಕ ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಮಲೆಮಹದೇಶ್ವರ, ಕಾವೇರಿ ವನ್ಯಧಾಮದಲ್ಲಿ ನಾಲ್ವರು, ಬಿಆರ್‌ಟಿಯಲ್ಲಿ ಇಬ್ಬರು ಮತ್ತು ಬಂಡೀಪುರದಲ್ಲಿ ಒಬ್ಬರು. ಆನೆ ದಾಳಿ ಮಾಡಿ ಫಸಲು ನಾಶ ಮಾಡಿದ ಪ್ರಕರಣಗಳಿಗೆ ಲೆಕ್ಕವೇ ಇಲ್ಲ.

ಬಂಡೀಪುರದಲ್ಲಿ ಹುಲಿಯ ಹಾವಳಿ ಕೂಡ ಈ ವರ್ಷ ಕಾ‌ಡಂಚಿನ ಜನರನ್ನು ಹೈರಾಣವಾಗಿಸಿತು. ಏಳು ವರ್ಷದ ಗಂಡು ಹುಲಿಯೊಂದು ಇಬ್ಬರು ರೈತರನ್ನೂ ಬಲಿ ತೆಗೆದುಕೊಂಡಿತು. ಒಂದು ತಿಂಗಳ ಕಾರ್ಯಾಚರಣೆ ಬಳಿಕ ಹುಲಿಯನ್ನು ಹಿಡಿಯಲು ಅರಣ್ಯ ಇಲಾಖೆ ಯಶಸ್ವಿಯಾಯಿತು.

ಬಂಡೀಪುರದಲ್ಲಿ ಆರ್‌ಎಫ್‌ಒ, ವಾಚರ್‌ ಮೇಲೆ ಹುಲಿ ದಾಳಿ ನಡೆಸಿದ ಪ್ರಕರಣ ನಡೆಯಿತು. ಶಿಕ್ಷಕಿಯೊಬ್ಬರು ಅದೃಷ್ಟವಶಾತ್‌ ವ್ಯಾಘ್ರನ ದಾಳಿಯಿಂದ ಬಚಾವದರು.

ಬಿಆರ್‌ಟಿ ಕಾಳಿಕಾಂಬ ಕಾಲೊನಿಯಲ್ಲೂ ಹುಲಿ, ಮೂರ್ನಾಲ್ಕು ಜಾನುವಾರುಗಳನ್ನು ಬಲಿ ತೆಗೆದುಕೊಂಡಿತು. ಜನರು ಭಯದಿಂದಲೇ ವಾಸಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಮೇ 29ರಂದು ಗುಂಡ್ಲುಪೇಟೆಯ ಪಾರ್ವತಿಬೆಟ್ಟದ ಬಳಿ ಗಂಡು ಚಿರತೆ ಹಾಗೂ ಹೆಣ್ಣು ಹುಲಿಯ ಕಳೆಬರಗಳು ಪತ್ತೆಯಾದವು. ವಿಷ ಪ್ರಶಾನ ಮಾಡಿ ಅವುಗಳನ್ನು ಕೊಲ್ಲಲಾಗಿತ್ತು ಎಂಬುದು ತನಿಖೆಯಿಂದ ದೃಢಪಟ್ಟಿತು.

ರೈತರಲ್ಲಿ ಹರ್ಷ: ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿ ಜಿಲ್ಲೆಯ ರೈತರಲ್ಲಿ ಮಂದಹಾಸ ಮೂಡಿಸಿದ್ದು ಈ ವರ್ಷದ ಅತ್ಯಂತ ಸ್ಮರಣೀಯ ಬೆಳವಣಿಗೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಏಪ್ರಿಲ್‌ ಆರಂಭದಲ್ಲಿ ಸುರಿಯಲು ಆರಂಭಿಸಿದ್ದ ಮಳೆ, ನವೆಂಬರ್‌ ಮಧ್ಯಭಾಗದವರೆಗೂ ಸುರಿದು ದಾಖಲೆ ಬರೆಯಿತು. ಮುಂಗಾರು ಅವಧಿಯಲ್ಲಿ ಸ್ವಲ್ಪ ಕೊರತೆಯಾಗಿ ಕೃಷಿಗೆ ಹಿನ್ನಡೆಯಾದರೂ ನಂತರ ಎಡೆಬಿಡದೆ ಸುರಿದು ಕೃಷಿಗೆ ಅನುಕೂಲ ಮಾಡಿತು. ಒಳ್ಳೆಯ ಇಳುವರಿಯೂ ಬಂದು ರೈತರು ಖುಷಿಪಡುವಂತಾಯಿತು.

ಆಗಸ್ಟ್‌ ಎರಡನೇ ವಾರದಲ್ಲಿ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಕೊಳ್ಳೇಗಾಲ ಸಮೀಪ‍ದಲ್ಲಿರುವ ನದಿ ದಂಡೆಯ ಗ್ರಾಮಗಳು ಪ್ರವಾಹದಿಂದಾಗಿ ಜಲಾವೃತವಾದವು. ಸಣ್ಣ ಪ್ರಮಾಣದಲ್ಲಿ ಆಸ್ತಿ ಹಾನಿ ಹಾಗೂ ಬೆಳೆ ಹಾನಿ ಸಂಭವಿಸಿತು. ಜಿಲ್ಲಾಡಳಿತ ಸಂತ್ರಸ್ತರಿಗಾಗಿ ಪರಿಹಾರ ಕೇಂದ್ರಗಳನ್ನು ತೆರೆದು ವ್ಯವಸ್ಥೆ ಮಾಡಿತ್ತು.

ವಡ್ಡಗೆರೆ ಕೆರೆಗೆ ನೀರು: ರೈತರ ಹೋರಾಟದ ಫಲವಾಗಿ ವರ್ಷದಿಂದ ನನೆಗುದಿಗೆ ಬಿದ್ದಿದ್ದ ಹುತ್ತೂರು ವಡ್ಡೆಗೆರೆ ಹಾಗೂ ಇತರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿತು.

ಸಚಿವರ ವಾಸ್ತವ್ಯ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ನವೆಂಬರ್‌ 18ರಂದು ಹನೂರು ತಾಲ್ಲೂಕಿನ ಗೋಪಿನಾಥಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಿ ಮಕ್ಕಳ ಹಾಗೂ ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದ್ದರು.

ವರ್ಷದ ಕೊನೆಯಲ್ಲಿ ಚಾಮುಲ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂತು. ಸಂಘಟನೆಗಳೂ ಪ್ರತಿಭಟನೆ ನಡೆಸಿದವು. ಜಿಲ್ಲಾಧಿಕಾರಿ ಬಿ.ಬಿ ಕಾವೇರಿ ಅವರು ಜಂಟಿ ತನಿಖೆಗೆ ಆದೇಶಿಸಿದ್ದಾರೆ.

ರಾಜಕೀಯ ಪಲ್ಲಟ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈ ವರ್ಷ ಮೊದಲ ಬಾರಿಗೆ ಗೆದ್ದು ಬಿಜೆಪಿ ಇತಿಹಾಸ ಬರೆಯಿತು.

ಏಪ್ರಿಲ್‌ 18ರಂದು ನಡೆದಿದ್ದ ಚುನಾವಣೆಯಲ್ಲಿಕಾಂಗ್ರೆಸ್‌ ಭದ್ರಕೋಟೆ ಎಂದೇ ಕರೆದುಕೊಳ್ಳುತ್ತಿದ್ದ ಕ್ಷೇತ್ರದಲ್ಲಿ ಬಿಜೆಪಿಯ ಶ್ರೀನಿವಾಸ್‌ ಪ್ರಸಾದ್‌ ಅವರು ಕಾಂಗ್ರೆಸ್‌ನ ಆರ್‌.ಧ್ರುವನಾರಾಯಣ ಅವರನ್ನು 1,817 ಮತಗಳಿಂದ ಸೋಲಿಸಿ ಲೋಕಸಭೆಗೆ ಆಯ್ಕೆಯಾದರು.

ಕೊನೆಯ ನಾಲ್ಕು ಸುತ್ತಿನ ಮತ ಎಣಿಕೆವರೆಗೂ ಮುನ್ನಡೆಯಲ್ಲಿದ್ದ ಎರಡು ಬಾರಿಯ ಸಂಸದ ಧ್ರುವನಾರಾಯಣ ಅವರು ಹ್ಯಾಟ್ರಿಕ್‌ ಗೆಲುವಿನಿಂದ ವಂಚಿತರಾದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನಗೊಂಡಿದ್ದರಿಂದ ಮೊದಲ ಬಾರಿ ಸಚಿವ ಪದವಿಗೆ ಏರಿದ್ದ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸಚಿವ ಸ್ಥಾನವನ್ನು ಕಳೆದುಕೊಳ್ಳಬೇಕಾಯಿತು. ವಿಧಾನಸೌಧದಲ್ಲಿ ಅವರ ಕಚೇರಿ ಸಿಬ್ಬಂದಿ ಕೈಯಲ್ಲಿ ₹ 26.75 ಲಕ್ಷ ನಗದು ಪತ್ತೆಯಾಗಿದ್ದು, ಭಾರಿ ಸುದ್ದಿಯಾಯಿತು. ಪುಟ್ಟರಂಗಶೆಟ್ಟಿ ಅವರು ಎಸಿಬಿ ವಿಚಾರಣೆಯನ್ನೂ ಎದುರಿಸಬೇಕಾಯಿತು.

ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎಸ್‌.ಸುರೇಶ್‌ ಕುಮಾರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡರು.

ಎನ್‌.ಮಹೇಶ್‌ ಉಚ್ಚಾಟನೆ: ರಾಜಕೀಯವಾಗಿ ಈ ವರ್ಷ ರಾಜ್ಯದ ಗಮನ ಸೆಳೆದಿದ್ದು, ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರನ್ನು ಬಿಎಸ್‌ಪಿಯಿಂದ ಉಚ್ಚಾಟನೆ ಮಾಡಿದ ಬೆಳವಣಿಗೆ.

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಮಹೇಶ್‌ ಅವರು ಮಂತ್ರಿಯಾದ ನಾಲ್ಕು ತಿಂಗಳಿಗೇ ರಾಜೀನಾಮೆ ಕೊಡಬೇಕಾಯಿತು. ಕುಮಾರಸ್ವಾಮಿ ಅವರು ವಿಶ್ವಾಸ ಮತ ಯಾಚನೆ ಮಾಡುವ ಸಂದರ್ಭದಲ್ಲಿ ಸದನಕ್ಕೆ ಹಾಜರಾಗದೆ ಇದ್ದುದಕ್ಕೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಮಹೇಶ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಿದರು. ಇದರಿಂದಾಗಿ ಜಿಲ್ಲೆಯಲ್ಲಿ ಬಿಎಸ್‌ಪಿ ಇಬ್ಭಾಗವಾಯಿತು.

ಸ್ಥಳೀಯ ಸಂಸ್ಥೆಯ ಚುನಾವಣೆ: ಮೇ ತಿಂಗಳಲ್ಲಿ ಗುಂಡ್ಲುಪೇಟೆ ಪುರಸಭೆ, ಯಳಂದೂರು ಹಾಗೂ ಹನೂರು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. ಗುಂಡ್ಲುಪೇಟೆಯಲ್ಲಿ ಬಿಜೆಪಿ ಗೆದ್ದರೆ, ಯಳಂದೂರಿನಲ್ಲಿ ಕಾಂಗ್ರೆಸ್‌ ಬಹುಮತ ಪಡೆಯಿತು. ಹನೂರಿನಲ್ಲಿ ಜೆಡಿಎಸ್‌ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತು.

ಬೆತ್ತಲೆ ಮೆರವಣಿಗೆ–ಅಮಾನವೀಯ ಘಟನೆ

ಜೂನ್‌ ತಿಂಗಳ 3ರಂದು ಗುಂಡ್ಲುಪೇಟೆ ಬಳಿಯ ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದಲ್ಲಿ ಯುವಕನೊಬ್ಬನನ್ನು ಬೆತ್ತಲೆಯಾಗಿ ಹಾಡಹಗಲೇ ರಸ್ತೆಯಲ್ಲಿ ಕರೆದುಕೊಂಡು ಹೋಗಿದ್ದು, ನಂತರ ತೆಂಗಿನ ಮರಕ್ಕೆ ಆತನನ್ನು ಕಟ್ಟಿ ಹೊಡೆದ ಅಮಾನವೀಯ ಘಟನೆ ರಾಜ್ಯದಾದ್ಯಂತ ಭಾರಿ ಗದ್ದಲ ಸೃಷ್ಟಿಸಿತು.

ಜೂನ್‌ 3ರಂದು ಘಟನೆ ನಡೆದಿದ್ದರೂ, 10ರಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ ಜನರ ಆಕ್ರೋಶಕ್ಕೆ ಕಾರಣವಾಯಿತು. ಯುವಕ ದಲಿತ ಸಮುದಾಯಕ್ಕೆ ಸೇರಿದವರು ಎಂಬುದು ಗೊತ್ತಾಗುತ್ತಿದ್ದಂತೆಯೇ ಪ್ರಕರಣಕ್ಕೆ ಜಾತಿ ಬಣ್ಣ ಬಂದಿತು. ಜಿಲ್ಲೆ ಹಾಗೂ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದವು.ಪ್ರಕರಣ ಸಂಬಂಧ ಪೊಲೀಸರು ಆರು ಜನರನ್ನು ಬಂಧಿಸಬೇಕಾಯಿತು. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಯುವಕ ದೇವಸ್ಥಾನಕ್ಕೆ ಬರುವಾಗಲೇ ಬೆತ್ತಲೆಯಾಗಿದ್ದ. ಆತನನ್ನು ನಿಯಂತ್ರಿಸಲು ಸಾಧ್ಯವಾಗದೇ ಮರಕ್ಕೆ ಕಟ್ಟಬೇಕಾಯಿತು ಎಂದು‍ಪ್ರತ್ಯಕ್ಷದರ್ಶಿಗಳು ಹೇಳಿದ್ದರು. ಯುವಕನಿಗೆ ಮಾನಸಿಕವಾಗಿ ಅನಾರೋಗ್ಯ ಇದ್ದುದನ್ನು ನಂತರ ವೈದ್ಯರು ಕೂಡ ದೃಢೀಕರಿಸಿದರು.

ಹನೂರು ತಾಲ್ಲೂಕಿನ ಹೂಗ್ಯಂನಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವ ವಿಚಾರವೂ ಬೆಳಕಿಗೆ ಬಂತು. ಜಿಲ್ಲಾಡಳಿತ ತಕ್ಷಣವೇ ಅಧಿಕಾರಿಗಳನ್ನು ಕಳುಹಿಸಿ ಸ‌ಮಸ್ಯೆಯನ್ನು ಬಗೆಹರಿಸಿತು.

ಬೆಚ್ಚಿ ಬೀಳಿಸಿದ ಸಾಮೂಹಿಕ ಆತ್ಮಹತ್ಯೆ ಪ್ರಕರಣ

ಮೈಸೂರಿನ ಕುಟುಂಬದ ಐವರು ಗುಂಡ್ಲುಪೇಟೆ ಸಮೀಪದ ಜಮೀನಿನಲ್ಲಿ ಸಾಮೂಹಿಕ ಆತ್ಮಹತ್ಯೆಗೆ ಶರಣಾದ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತು. ಆಗಸ್ಟ್‌ 16ರ ಮುಂಜಾವು ಖಾಸಗಿ ಜಮೀನೊಂದರಲ್ಲಿ ಉದ್ಯಮಿಯೊಬ್ಬರು ತಮ್ಮ ತಂದೆ, ತಾಯಿ, ಪತ್ನಿ ಹಾಗೂ ನಾಲ್ಕು ವರ್ಷದ ಮಗನ ಹಣೆಗೆ ಗುಂಡಿಕ್ಕಿ ಕೊಂದು, ನಂತರ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ವರ್ಷದಲ್ಲಿ ಮೂರು ಸಿಇಒ

ಚಾಮರಾಜನಗರ ಜಿಲ್ಲಾ ಪಂಚಾಯಿತಿಯು 2019ರಲ್ಲಿ ಮೂರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಕಂಡಿತು. ಹಿಂದೆ ಸಿಇಒ ಆಗಿದ್ದ ಹರೀಶ್‌ ಕುಮಾರ್‌ ಅವರು ಕಾರವಾರದ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದರು. ಅವರ ಜಾಗಕ್ಕೆ ಸಿ.ಸತ್ಯಭಾಮ ಅವರನ್ನು ನಿಯೋಜಿಸಲಾಗಿತ್ತು. ಅವರು ಫೆಬ್ರುವರಿ 27ರಂದು ಅಧಿಕಾರ ಸ್ವೀಕರಿಸಿದ್ದರು. ಆದರೆ, ಅದೇ ದಿನ ಅವರು ವರ್ಗವಾದರು. ನಂತರ ಕೆ.ಎಸ್‌.ಲತಾಕುಮಾರಿ ಅವರು ಬಂದರು. ಆರು ತಿಂಗಳ ಬಳಿಕ ಅವರು ವರ್ಗವಾದರು. ಅವರ ನಂತರ ಬಿ.ಎಚ್‌.ನಾರಾಯಣರಾವ್‌ ಅವರು ಸಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT