ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಆಧಾರ್‌ ಆಧಾರಿತ ಹಾಜರಾತಿ; ತಪ್ಪಿದ ದುರ್ಬಳಕೆ

ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಅನುಷ್ಠಾನ
Published 21 ಜನವರಿ 2024, 6:24 IST
Last Updated 21 ಜನವರಿ 2024, 6:24 IST
ಅಕ್ಷರ ಗಾತ್ರ

ಚಾಮರಾಜನಗರ: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ವರ್ಷದಿಂದೀಚೆಗೆ ವಿದ್ಯಾರ್ಥಿಗಳು ಆಧಾರ್‌ ಆಧಾರಿತ ಬಯೊ ಮೆಟ್ರಿಕ್‌ ಹಾಜರಾತಿ ಹಾಕುವುದು ಕಡ್ಡಾಯವಾಗಿದ್ದು, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದಿದೆ. 

ಹಾಸ್ಟೆಲ್‌ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ವಿವರಗಳು ಇಲಾಖೆ ರೂಪಿಸಿರುವ ಆಧಾರ್‌ ಆಧಾರಿತ ಆನ್‌ಲೈನ್‌ ವ್ಯವಸ್ಥೆಯಲ್ಲಿ ದಾಖಲಾಗಿದ್ದು, ಅದನ್ನು ಬಯೊ ಮೆಟ್ರಿಕ್‌ ಹಾಜರಾತಿ ವ್ಯವಸ್ಥೆಗೆ ಜೋಡಿಸಲಾಗಿದೆ. ನೋಂದಣಿಯಾಗಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಪ್ರತಿ ದಿನ ಬಯೊಮೆಟ್ರಿಕ್‌ ಸಾಧನದಲ್ಲಿ ಹೆಬ್ಬೆಟ್ಟು ಒತ್ತಿ ಹಾಜರಿ ಹಾಕಬೇಕು.  

‘ಇದರಿಂದ ಹಾಸ್ಟೆಲ್‌ಗಳ ನಿರ್ವಹಣೆ ಪರಿಣಾಮಕಾರಿಯಾಗಿದ್ದು, ಹಾಸ್ಟೆಲ್‌ಗಳಲ್ಲಿರುವ ಮಕ್ಕಳ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತಿದೆ. ಮೇಲ್ವಿಚಾರಣೆಯೂ ಸುಲಭವಾಗಿದೆ. ದಾಖಲಾಗಿರುವ ವಿದ್ಯಾರ್ಥಿಗಳನ್ನು ಬಿಟ್ಟು ಉಳಿದವರು ಹಾಸ್ಟೆಲ್‌ ಅನ್ನು ದುರ್ಬಳಕೆ ಮಾಡುವುದು ತಪ್ಪಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ. ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು. 

ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಜಿಲ್ಲೆಯಲ್ಲಿ 56 ಹಾಸ್ಟೆಲ್‌ಗಳಿವೆ. ಈ ಪೈಕಿ 40 ಮೆಟ್ರಿಕ್‌ ಪೂರ್ವ ಹಾಗೂ 16 ಮೆಟ್ರಿಕ್‌ ನಂತರದ ಹಾಸ್ಟೆಲ್‌ಗಳಿವೆ. 2,891 ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿದ್ದಾರೆ. ಈ ಪೈಕಿ 2,799 ಮಂದಿ ಆಧಾರ್‌ ಆಧಾರಿತ ವ್ಯವಸ್ಥೆಯಲ್ಲಿ ನೋಂದಣಿಯಾಗಿದ್ದಾರೆ. ಪ್ರತಿ ದಿನವೂ ಶೇ 70ಕ್ಕೂ ಹೆಚ್ಚು ಬಯೊ ಮೆಟ್ರಿಕ್ ಹಾಜರಾತಿ ದಾಖಲಾಗುತ್ತಿದೆ. 

‘ಹಾಸ್ಟೆಲ್‌ಗಳಲ್ಲಿ ಆಶ್ರಯ ಪಡೆದಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ದಿನ ಶೇಕಡವಾರು ಹಾಜರಾತಿಯಲ್ಲಿ ವ್ಯತ್ಯಾಸ ಇರುತ್ತದೆ. ಜಿಲ್ಲೆಯಲ್ಲಿ ಗರಿಷ್ಠ ಶೇ 76ರಷ್ಟು ಹಾಜರಾತಿ ದಾಖಲಾಗಿದೆ. ಇಲಾಖೆಯ ಪೋರ್ಟಲ್‌ನಲ್ಲಿ ಪ್ರತಿ ದಿನ ಹಾಜರಾತಿ ವಿವರ ದಾಖಲಾಗುತ್ತಿದ್ದು, ಜಿಲ್ಲೆ ಮೊದಲ 10 ಸ್ಥಾನಗಳ ಒಳಗೆ ಬರುತ್ತಿದೆ. ಗರಿಷ್ಠ ಎಂದರೆ 5ನೇ ಸ್ಥಾನಕ್ಕೂ ಬಂದಿದೆ’ ಎಂದು ಮಲ್ಲಿಕಾರ್ಜುನ ಮಾಹಿತಿ ನೀಡಿದರು. 

‘ಪೋರ್ಟಲ್‌ನಲ್ಲಿ ನೋಂದಣಿಯಾಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಬಯೊ ಮೆಟ್ರಿಕ್‌ ಹಾಜರಾತಿ ಹಾಕಲು ಅವಕಾಶ ಇದೆ. ತಾಂತ್ರಿಕ ಕಾರಣಗಳಿಗಾಗಿ ಇನ್ನೂ ಕೆಲವು ವಿದ್ಯಾರ್ಥಿಗಳ ನೋಂದಣಿ ಬಾಕಿ ಇದೆ. ಅದನ್ನು ಮಾಡಲಾಗುತ್ತಿದೆ’ ಎಂದರು. 

ಪ್ರಯೋಜನ ಏನು?: ‘ಹಿಂದೆ ಎಲ್ಲ ವಾರ್ಡನ್‌ಗಳು ಲಿಖಿತವಾಗಿ ಮಕ್ಕಳ ಹಾಜರಾತಿ ತೆಗೆದುಕೊಳ್ಳುತ್ತಿದ್ದರು. ಈಗ ಆ ಕೆಲಸ ಇಲ್ಲ. ಡಿಜಿಟಲೀಕರಣ ವ್ಯವಸ್ಥೆಯಲ್ಲಿ ಹಾಜರಿ ದಾಖಲಾಗುವುದರಿಂದ ತಿದ್ದುಪಡಿ ಮಾಡಲು ಅವಕಾಶ ಇಲ್ಲ. ರಾಜ್ಯದ ಯಾವ ಭಾಗದಿಂದಲೂ ಹಾಜರಾತಿಯ ಮೇಲೆ ಅಧಿಕಾರಿಗಳು ನಿಗಾ ಇಡಬಹುದು’ ಎಂದು ಹೇಳುತ್ತಾರೆ ವಾರ್ಡನ್‌ಗಳು.    

‘ಹಿಂದೆ ಅರ್ಹ ವಿದ್ಯಾರ್ಥಿಗಳು ಮಾತ್ರವಲ್ಲದೇ, ಸಂಘಟನೆಗಳು, ಅಧಿಕಾರಿಗಳು, ಮುಖಂಡರ ಪ್ರಭಾವ ಬಳಸಿ ಹೊರಗಿನವರೂ ಹಾಸ್ಟೆಲ್‌ಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಬಯೊ ಮೆಟ್ರಿಕ್‌ ಹಾಜರಾತಿಯಿಂದ ಇದು ತಪ್ಪಿದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.  

ಬಿ.ಮಲ್ಲಿಕಾರ್ಜುನ
ಬಿ.ಮಲ್ಲಿಕಾರ್ಜುನ

ಜಿಲ್ಲೆಯಲ್ಲಿವೆ 56 ಹಾಸ್ಟೆಲ್‌ಗಳು ಬಯೊಮೆಟ್ರಿಕ್‌ ಹಾಜರಿಯಲ್ಲಿ ಮುಂಚೂಣಿ ಆನ್‌ಲೈನ್‌ನಲ್ಲೇ ಹಾಜರಿ ವಿವರ ಲಭ್ಯ 

ಜಿಪಿಎಸ್‌ ವಿವರದ ಫೋಟೊ ಹಂಚಿಕೆ ಈ ನಡುವೆ ಇಲಾಖೆ ಸಿದ್ಧಪಡಿಸಿರುವ ಮೆನುವಿನ ವೇಳಾಪಟ್ಟಿಯಂತೆ ಹಾಸ್ಟೆಲ್‌ಗಳಲ್ಲಿ ಆಹಾರ ನೀಡಲಾಗುತ್ತಿದೆಯೇ? ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆಯೇ? ದಿನಸಿ ತರಕಾರಿಗಳು ನಿಗದಿತ ಪ್ರಮಾಣದಷ್ಟೇ ಬರುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಲು.  ಜಿಪಿಎಸ್‌ ವಿವರ ಸಹಿತ ಫೋಟೊಗಳನ್ನು ಹಂಚಿಕೊಳ್ಳುವ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೆ ತರಲಾಗಿದೆ.  ‘ಹಾಸ್ಟೆಲ್‌ ವಾರ್ಡನ್‌ಗಳು ಅಧಿಕಾರಿಗಳು ಇರುವ ವಾಟ್ಸ್‌ಆ್ಯಪ್‌ ಗ್ರೂಪ್‌ಗಳನ್ನು ರಚಿಸಲಾಗಿದೆ. ಪ್ರತಿ ಹಾಸ್ಟೆಲ್‌ನ ವಾರ್ಡನ್‌ಗಳು ಸಿದ್ಧಪಡಿಸಿದ ಆಹಾರ ಸಮಯಕ್ಕೆ ಸರಿಯಾಗಿ ಪೂರೈಸುತ್ತಿರುವ ಖರೀದಿ ಮಾಡಿರುವ ದಿನಸಿ ತರಕಾರಿಗಳ ಜಿಪಿಎಸ್‌ ವಿವರ ಸಹಿತ ಚಿತ್ರಗಳನ್ನು ತೆಗೆದು ಗ್ರೂಪ್‌ಗಳಿಗೆ ಕಡ್ಡಾಯವಾಗಿ ಹಂಚಬೇಕು. ಈ ಫೋಟೊಗಳಲ್ಲಿ ಸಮಯ ಸ್ಥಳದ ವಿವರಗಳು ದಾಖಲಾಗುವುದರಿಂದ ಮೇಲ್ವಿಚಾರಣೆ ಸುಲಭ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ ತಿಳಿಸಿದರು.  ‘ಮೆನು ಪ್ರಕಾರ ಆಹಾರ ನೀಡಲಾಗುತ್ತಿಲ್ಲ ಸಮಯಕ್ಕೆ ಸರಿಯಾಗಿ ಆಹಾರ ಕೊಡಲಾಗುತ್ತಿಲ್ಲ ಎಂಬುದೂ ಸೇರಿದಂತೆ ವಿವಿಧ ರೀತಿಯ ದೂರುಗಳು ಬರುತ್ತಿದ್ದವು. ಈ ಕಾರಣಕ್ಕೆ ಈ ವ್ಯವಸ್ಥೆ ಜಾರಿಗೆ ತಂದಿದ್ದೇವೆ’ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT