ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಹಿಂಗಾರು ಬಿತ್ತನೆ: ಉತ್ತಮ ಸಾಧನೆ

Published 19 ಡಿಸೆಂಬರ್ 2023, 5:24 IST
Last Updated 19 ಡಿಸೆಂಬರ್ 2023, 5:24 IST
ಅಕ್ಷರ ಗಾತ್ರ

ಚಾಮರಾಜನಗರ: ಮಳೆ ಕೊರತೆಯಿಂದ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಪ‍್ರಮಾಣ ಕುಂಠಿತವಾಗಿತ್ತು. ಹಿಂಗಾರು ಅವಧಿಯಲ್ಲಿ ಮಳೆ ನಿರೀಕ್ಷೆಯಷ್ಟು ಬಾರದಿದ್ದರೂ, ಬಿತ್ತನೆ ಚೆನ್ನಾಗಿ ಆಗಿದೆ. 

ಕೃಷಿ ಇಲಾಖೆಯು 33,304 ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ ಹೊಂದಿತ್ತು. 30,536 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಶೇಕಡವಾರು ಲೆಕ್ಕಾಚಾರದಲ್ಲಿ 91.69ರಷ್ಟು ಸಾಧನೆಯಾಗಿದೆ. 

ಸಾಮಾನ್ಯವಾಗಿ ಹಿಂಗಾರಿನಲ್ಲಿ ಜಿಲ್ಲೆಯ ರೈತರು ಹುರುಳಿಯೊಂದಿಗೆ ರಾಗಿ, ಅಲಸಂದೆ, ತೊಗರಿ, ಅವರೆ ಬೆಳೆಗಳನ್ನು ಬಿತ್ತನೆ ಮಾಡುತ್ತಾರೆ. ಈ ಬಾರಿ ಮಳೆಯ ಕೊರತೆ ಇದ್ದುದರಿಂದ ಹುರುಳಿಯನ್ನು ಹೆಚ್ಚು ಬಿತ್ತನೆ ಮಾಡಿದ್ದಾರೆ.

20,450 ಹೆಕ್ಟೇರ್‌ ಪ್ರದೇಶದಲ್ಲಿ ಹುರುಳಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. 20,305 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಈ ಪೈಕಿ ಗುಂಡ್ಲುಪೇಟೆಯಲ್ಲೇ ಹೆಚ್ಚು ಬಿತ್ತನೆಯಾಗಿದೆ. ಅಲ್ಲಿ ಗುರಿ ಮೀರಿದ ಬಿತ್ತನೆಯಾಗಿದೆ. 11,880 ಹೆಕ್ಟೇರ್‌ ಪ್ರದೇಶದಲ್ಲಿ ಹುರುಳಿ ಬಿತ್ತನೆಯಾಗುವ ನಿರೀಕ್ಷೆ ಹೊಂದಲಾಗಿತ್ತು. 13,722 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆಯಾಗಿದೆ. 

ರಾಗಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. 315 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇತ್ತು. 129 ಹೆಕ್ಟೇರ್‌ನಲ್ಲಿ ಮಾತ್ರ ರೈತರು ಬೆಳೆದಿದ್ದಾರೆ. ನೀರಾವರಿ ವ್ಯವಸ್ಥೆ ಹೊಂದಿರುವವರು ಮಾತ್ರ ರಾಗಿ ಬಿತ್ತನೆ ಮಾಡಿದ್ದಾರೆ ಎಂದು ಹೇಳುತ್ತಾರೆ ರೈತರು. ಕೊಳ್ಳೇಗಾಲ ಮತ್ತು ಯಳಂದೂರು ಭಾಗಗಳಲ್ಲಿ ನಾಲೆ, ಕೊಳವೆ ಬಾವಿಗಳ ನೀರನ್ನು ಬಳಸಿಕೊಂಡು ರೈತರು 531 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆದಿದ್ದಾರೆ.

‘ಹಿಂಗಾರು ಅವಧಿಯಲ್ಲಿ ಮಳೆಯಾದರೆ ರೈತರು ರಾಗಿ, ಅವರೆ, ಅಲಸಂದೆ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಮಳೆ ಕಡಿಮೆ ಇದ್ದರೆ, ಹೆಚ್ಚು ನೀರು ಬೇಡದ ಹುರುಳಿಯನ್ನು ಬಿತ್ತನೆ ಮಾಡುತ್ತಾರೆ’ ಎಂದು ತಾಲ್ಲೂಕಿನ ಹೆಗ್ಗವಾಡಿಪುರದ ರೈತ ರಾಮಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು. 

ಇಳುವರಿ ಕುಂಠಿತ

ಬಿತ್ತನೆ ಮಾಡಿರುವ ಹುರುಳಿ ಈಗ ಕಟಾವಿಗೆ ಬಂದಿದೆ. ಹಲವು ಕಡೆಗಳಲ್ಲಿ ರೈತರು ಕಟಾವು ಮಾಡಿ, ಒಕ್ಕಣೆ ಮಾಡುತ್ತಿದ್ದಾರೆ. ಕಣ ಇಲ್ಲದಿರುವುದರಿಂದ ಡಾಂಬರು ರಸ್ತೆಗಳಲ್ಲೇ ಹರವಿ ಒಕ್ಕಣೆ ಮಾಡುತ್ತಿದ್ದಾರೆ. 

ನೀರು ಸಾಕಷ್ಟು ಪ್ರಮಾಣದಲ್ಲಿ ಸಿಗದೇ ಇದ್ದುದರಿಂದ ಈ ಬಾರಿ ಹುರುಳಿ ಇಳುವರಿ ಕಡಿಮೆಯಾಗಿದೆ. ಶೇ 40ರಿಂದ ₹50ರಷ್ಟು ಕಡಿಮೆಯಾಗಿದೆ. 

‘10 ಗುಂಟೆಯಲ್ಲಿ ಹುರುಳಿ ಹಾಕಿದ್ದೆ, ಕಳೆದ ವರ್ಷ ಒಂದು ಕ್ವಿಂಟಲ್‌ ಇಳುವರಿ ಸಿಕ್ಕಿತ್ತು. ಈ ಬಾರಿ 60 ಕೆಜಿಯಷ್ಟೇ ಬಂದಿದೆ. ಹೋದ ಹಿಂಗಾರಿನಲ್ಲಿ ಮನೆ ಖರ್ಚಿಗೆ ಇಟ್ಟುಕೊಂಡು ಉಳಿದಿದ್ದನ್ನು ಮಾರಾಟ ಮಾಡಿದ್ದೆವು. ಈ ಬಾರಿ ಮಾರಾಟಕ್ಕೆ ಹೆಚ್ಚು ಹುರುಳಿ ಸಿಗುವುದಿಲ್ಲ’ ಎಂದು ಸಂತೇಮರಹಳ್ಳಿ ನಂಜಮ್ಮ ಹೇಳಿದರು. 

ಮಳೆ ಚೆನ್ನಾಗಿದ್ದರೆ ಒಂದು ಎಕರೆಗೆ 4ರಿಂದ 5 ಕ್ವಿಂಟಲ್‌ಗಳಷ್ಟು ಹುರುಳಿ ಬರುತ್ತದೆ. ಈ ಬಾರಿ ಇಳುವರಿ ಗಣನೀಯ ಕಡಿಮೆಯಾಗಿದೆ. 2ರಿಂದ 2.5 ಕ್ವಿಂಟಲ್‌ಗಳಷ್ಟೇ ಬಂದಿದೆ ಎಂದು ರಾಮಯ್ಯ ಹೇಳಿದರು.  

ಉತ್ತಮ ಬೆಲೆ

ಸದ್ಯ ಮಾರುಕಟ್ಟೆಯಲ್ಲಿ ಹುರುಳಿಗೆ ಉತ್ತಮ ಬೆಲೆ ಇದೆ. ಕ್ಚಿಂಟಲ್‌ಗೆ ₹10,000ವರೆಗೆ ಸಿಗುತ್ತಿದೆ ಎಂದು ಹೇಳುತ್ತಾರೆ ರೈತರು. ಆದರೆ, ಇಳುವರಿ ಕಡಿಮೆಯಾಗಿರುವುದರಿಂದ ಹೆಚ್ಚು ಆದಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಅವರ ಮಾತು. 

‘ಹೆಚ್ಚು ಮಳೆಯ ಅಗತ್ಯವಿಲ್ಲ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಆಬೀದ್‌ ಎಸ್‌.ಎಸ್‌., ‘ಹಿಂಗಾರಿನಲ್ಲಿ ಮಳೆ ಕೊರತೆ‌ಯಾಗಿದ್ದರೂ, ಬಿತ್ತನೆ ಚೆನ್ನಾಗಿ ಆಗಿದೆ. ಈ ಅವಧಿಯಲ್ಲಿ ಬೆಳೆಯಲಾಗುವ ಬೆಳೆಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಸ್ವಲ್ಪ ಮಳೆ ಬಂದರೂ ಸಾಕು. ನಂತರ, ಇಬ್ಬನಿ, ತಂಪಾದ ವಾತಾವರಣ ಇದ್ದರೆ ಫಸಲು ಚೆನ್ನಾಗಿ ಬರುತ್ತದೆ.  ಹುರುಳಿ ಬಿತ್ತನೆ ಹೆಚ್ಚಾಗಿದ್ದು, ಕೆಲವು ಕಡೆಗಳಲ್ಲಿ ರೈತರು ಕಟಾವು ಆರಂಭಿಸಿದ್ದಾರೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT