ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಂದರ್ಶನ | ಕೈಹಿಡಿಯಲಿವೆ ಗ್ಯಾರಂಟಿ, ಗೆಲುವು ನನ್ನದೇ- ಸುನಿಲ್‌ ಬೋಸ್‌

ನನ್ನ ವಿರುದ್ಧದ ಅಪಪ್ರಚಾರಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಗಮನ–ಸುನಿಲ್‌ ಬೋಸ್‌
ಸೂರ್ಯನಾಯರಾಣ ವಿ.
Published 21 ಏಪ್ರಿಲ್ 2024, 6:55 IST
Last Updated 21 ಏಪ್ರಿಲ್ 2024, 6:55 IST
ಅಕ್ಷರ ಗಾತ್ರ

ಕಲ್ಯಾಣ ಸಚಿವ ಡಾ.ಎಚ್‌.ಸಿ ಮಹದೇವಪ್ಪ ಅವರ ಮಗ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕುಟುಂಬ ರಾಜಕಾರಣ, ಕ್ಷೇತ್ರದಲ್ಲಿನ ಚಿತ್ರಣ ಹಾಗೂ ಇತರ ವಿಚಾರಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. 

* ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ. ಏನನ್ನಿಸುತ್ತಿದೆ?

ಉತ್ತರ: ನಾನು ಚುನಾವಣಾ ರಾಜಕೀಯಕ್ಕೆ ಹೊಸಬ. ಆದರೆ. ರಾಜಕಾರಣಕ್ಕಲ್ಲ. ನಾನೇ ಸ್ಪರ್ಧಿಸಿರುವುದರಿಂದ ಜವಾಬ್ದಾರಿ ಹೆಚ್ಚಾಗಿದೆ. ಈ ಮೊದಲು ತಂದೆಯವರು ಸ್ಪರ್ಧಿಸಿದ್ದ ನಾಲ್ಕು ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಮೂರು ಲೋಕಸಭೆ, ಮೂರು ವಿಧಾನ ಪರಿಷತ್‌ ಸೇರಿದಂತೆ ಚುನಾವಣೆಗಳಲ್ಲಿ ದುಡಿದಿದ್ದೇನೆ. ನಾನೇ ಸ್ಪರ್ಧಿಸಿರುವುದು ಹೊಸ ಅನುಭವ ನೀಡಿದೆ. ಅದು ಬಿಟ್ಟರೆ ಕಾರ್ಯತಂತ್ರದಲ್ಲಿ ವ್ಯತ್ಯಾಸವಾಗುವುದಿಲ್ಲ.  

* ನೀವು ವಿಧಾನಸಭೆಗೆ ಸ್ಪರ್ಧಿಸಲು ಬಯಸಿದ್ದಿರಿ. ಈಗ ಲೋಕಸಭೆಯತ್ತ ದೃಷ್ಟಿ ನೆಟ್ಟಿದ್ದೀರಿ...

 ಉತ್ತರ: ವಿಧಾನಸಭೆಗೆ ಆಕಾಂಕ್ಷಿಯಾಗಿದ್ದು ನಿಜ. ಮೂರು ಬಾರಿ ಟಿಕೆಟ್‌ ಬಯಸಿದ್ದೆ. ಪಕ್ಷವು ಬೇರೆಯವರಿಗೆ ಅವಕಾಶ ಮಾಡಿಕೊಟ್ಟಾಗ ಪಕ್ಷದ ಸೂಚನೆಯಂತೆ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ತಿ.ನರಸೀಪುರದಿಂದ ಆಕಾಂಕ್ಷಿಯಾಗಿದ್ದೆ. ತಂದೆಯವರು ನಂಜನಗೂಡಿನಿಂದ ಟಿಕೆಟ್‌ ಬಯಸಿದ್ದರು. ಆದ‌ರೆ, ಧ್ರುವನಾರಾಯಣ ಅವರ ಅಕಾಲಿಕ ಮರಣದಿಂದಾಗಿ ಅವರ ಮಗನಿಗೆ ನಂಜನಗೂಡು ಟಿಕೆಟ್‌ ನೀಡಲಾಯಿತು. ನರಸೀಪುರದಲ್ಲಿ ತಂದೆಯವರು ಸ್ಪರ್ಧಿಸಿದರು. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಅವಕಾಶ ಕೊಡಿ ಎಂದು ಕೇಳಿದೆ. ಎಂಟು ಜನ ಆಕಾಂಕ್ಷಿಗಳಲ್ಲಿ ನಾನೂ ಒಬ್ಬನಾಗಿದ್ದೆ. ಅಂತಿಮವಾಗಿ ಹೈಕಮಾಂಡ್‌ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ.

ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ವಿಷಯಗಳು ಚರ್ಚೆಗೆ ಬರುತ್ತವೆ. ರಾಷ್ಟ್ರೀಯ ವಿಷಯಗಳ ಆಧಾರದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ದೇಶದಾದ್ಯಂತ ಗಮನಸೆಳೆಯಲು ಇಲ್ಲಿ ಅವಕಾಶ ಇದೆ. 

* ಸಚಿವರ ಮಕ್ಕಳಿಗೆ ಟಿಕೆಟ್‌ ನೀಡಿರುವುದನ್ನು ಬಿಜೆಪಿ ಟೀಕಿಸಿದೆ. ಕುಟುಂಬ ರಾಜಕಾರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಉತ್ತರ: ನನ್ನನ್ನು ಸಚಿವರ ಮಗನಾಗಿ ನೋಡಬೇಡಿ. ಕಾರ್ಯಕರ್ತನಾಗಿ ನೋಡಿ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇನೆ. ರಾಜಕೀಯ ಪಕ್ಷದ ಯಶಸ್ಸಿನ ಮಾನದಂಡವೇ ಗೆಲುವು. ಪ್ರಜಾಪ್ರಭುತ್ವವು ಸಂಖ್ಯೆಗಳ ಆಟ. ಚುನಾವಣೆಗಳಲ್ಲಿ ಗೆಲುವೇ ಮುಖ್ಯ. ಯಾರಿಗೆ ಗೆಲುವು ಸಾಧಿಸಲು ಶಕ್ತಿ ಇರುತ್ತದೆಯೋ ಅವರಿಗೆ ಅವಕಾಶ ಸಿಗುತ್ತದೆ. ಜನರಿಗೆ ಸಹಾಯ ಮಾಡಬೇಕು ಎಂದರೆ ಅಧಿಕಾರ ಬೇಕು. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ? ಬಿಜೆಪಿಯ ಯಡಿಯೂರಪ್ಪ ಒಬ್ಬ ಮಗ ಸಂಸದರಾಗಿಲ್ಲವೇ? ಮೊದಲಬಾರಿ ಗೆದ್ದಿರುವ ವಿಜಯೇಂದ್ರ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲವೇ? ಕುಟುಂಬ ರಾಜಕಾರಣ ಕಾಂಗ್ರೆಸ್‌ ಮಾತ್ರ ಮಾಡಿಕೊಂಡು ಬಂದಿದ್ದರೆ, ಅದರ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇರುತ್ತಿತ್ತು. ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನದ್ದೇನು? ಆದರೆ, ಅವರಂತಹ ಕುಟುಂಬ ರಾಜಕಾರಣ ಮಾಡಬಾರದು.    

* ಚಾಮರಾಜನಗರ ಕ್ಷೇತ್ರದ ಚುನಾವಣೆಯಲ್ಲಿ ಸಿದ್ದರಾಮಯ್ಯ, ಮಹದೇವಪ್ಪ ಅವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರಲ್ಲಾ? 

ಉತ್ತರ: ಚುನಾವಣೆಯನ್ನು ಯಾರೂ ‍ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದಿಲ್ಲ. ಎಲ್ಲ ಕ್ಷೇತ್ರಗಳನ್ನೂ ಗೆಲ್ಲಬೇಕು ಎಂದು ಕಾರ್ಯತಂತ್ರ ರೂಪಿಸಲಾಗುತ್ತದೆ. ರಾಜ್ಯದ 28 ಕ್ಷೇತ್ರಗಳನ್ನೂ ಮುಖ್ಯಮಂತ್ರಿಯವರು ಸವಾಲಾಗಿ ತೆಗೆದುಕೊಂಡಿದ್ದಾರೆ. ನಗರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ.  ಆದರೆ, ಈ ಕ್ಷೇತ್ರವು ಅವರು ಪ್ರತಿನಿಧಿಸುವ ಕ್ಷೇತ್ರ. ಹಾಗಾಗಿ ವಿರೋಧ ಪಕ್ಷಗಳು ಚಾಮರಾಜನಗರ ಮತ್ತು ಮೈಸೂರನ್ನು ವಿಶೇಷವಾಗಿ ನೋಡುತ್ತಿದ್ದಾರೆ. ನಮ್ಮ ಪಕ್ಷದವರು ಎಲ್ಲ ಕ್ಷೇತ್ರಗಳನ್ನು ಸಮಾನವಾಗಿ ಕಾಣುತ್ತಿದ್ದು, ಗೆಲುವಿಗೆ ಪ್ರಯತ್ನ ಪಡುತ್ತಿದ್ದಾರೆ. 

* ಕ್ಷೇತ್ರದ ಚಿತ್ರಣವನ್ನು ಹೇಗೆ ವಿಶ್ಲೇಷಿಸುತ್ತೀರಿ?

ಉತ್ತರ: ಹೋದ ಕಡೆಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ಬೆಂಬಲ ಕೊಡುತ್ತಿದ್ದಾರೆ. ವಿಶೇಷವಾಗಿ ಯುವಜನರು ಮತ್ತು ಮಹಿಳೆಯರು ಸ್ಪಂದಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕೊಟ್ಟಿರುವ ಗ್ಯಾರಂಟಿಗಳನ್ನು ನೆನೆಯುತ್ತಾ ತಾಯಂದರು ಬೆಂಬಲ ಸೂಚಿಸುತ್ತಿದ್ದಾರೆ. ಹಾಗಾಗಿ, ಕಾಂಗ್ರೆಸ್‌ಗೆ ಉತ್ತಮ ವಾತಾವರಣ ಇದೆ. ಕಳೆದ ಬಾರಿ ಪಕ್ಷವು ಅತಿಯಾದ ಆತ್ಮವಿಶ್ವಾಸದಿಂದ ಸೋಲು ಕಂಡಿತು. ಕ್ಷೇತ್ರ ಈಗಲೂ ಕಾಂಗ್ರೆಸ್‌ನ ಭದ್ರಕೋಟೆ. ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆದ್ದಿರುವುದು ಅದಕ್ಕೆ ಸಾಕ್ಷಿ. ಅಂದ ಮಾತ್ರಕ್ಕೆ ನಾವು ಮೈಮರೆಯುವುದಿಲ್ಲ. ಕೊನೆ ದಿನದವರೆಗೂ ನಾವು ಕ್ಷೇತ್ರವ್ಯಾಪ್ತಿಯಲ್ಲಿ ಕೆಲಸ ಮಾಡಲಿದ್ದೇವೆ.  

*  ಸಿ.ಎಂ, ಮಹದೇವಪ್ಪ ಅವರು ಸೋಲಿನ ಭಯದಿಂದ ಶ್ರೀನಿವಾಸ ಪ್ರಸಾದ್‌ ಅವರನ್ನು ಭೇಟಿ ಮಾಡಿದ್ದಾರೆಯೇ?

ಉತ್ತರ: ಶ್ರೀನಿವಾಸ ಪ್ರಸಾದ್‌ ಅವರು ಈ ಭಾಗದ ಹಿರಿಯ ನಾಯಕ. 50 ವರ್ಷಗಳ ಬಳಿಕ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿದ್ದಾರೆ. ತಾವು ಸಕ್ರಿಯ ರಾಜಕಾರಣದಲ್ಲಿ ಗುರುತಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಹಿರಿಯರು ಎಂಬ ಕಾರಣಕ್ಕೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ನಾನು ಹೋಗಿದ್ದೆ. ಅವರ ಆರೋಗ್ಯ ವಿಚಾರಿಸಿಲು ಸಿದ್ದರಾಮಯ್ಯ ಹಾಗೂ ತಂದೆ ಹೋಗಿದ್ದರು. ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಲ್ಲಿ ರಾಜಕೀಯ ಚರ್ಚೆಗಳು ನಡೆದಿಲ್ಲ. 

* ಶ್ರೀನಿವಾಸ ಪ್ರಸಾದ್‌ ಅವರು ನಿಮಗೆ ‘ಆಶೀರ್ವಾದ’ ಮಾಡಿದ್ದಾರೆಯೇ?

ಉತ್ತರ: ಅವರಿಗೆ ಈ ಭಾಗದಲ್ಲಿ ಸಾಕಷ್ಟು ಬೆಂಬಲಿಗರು, ಮುಖಂಡರು ಇದ್ದಾರೆ. ಅವರ ಬೆಂಬಲಿಗರಲ್ಲಿ ಕೆಲವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಬೆಂಬಲ ಸೂಚಿಸಿದ್ದಾರೆ. ಶ್ರೀನಿವಾಸ ಪ್ರಸಾದ್‌ ಅನುಮತಿ ಪಡೆಯದೇ ಬೆಂಬಲಿಗರು ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲು ಸಾಧ್ಯವೇ? ಇದನ್ನು ನೀವೇ ಅರ್ಥಮಾಡಿಕೊಳ್ಳಬೇಕು. ಅದನ್ನು ಬಿಡಿಸಿ ಹೇಳುವುದಕ್ಕೆ ಆಗುವುದಿಲ್ಲ. 

* ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಿಜೆಪಿ ನಡುವೆ ನೇರ ಹಣಾಹಣಿ ಇದೆಯೇ? ಅಥವಾ ಬಿಎಸ್‌ಪಿ ನಿರ್ಣಾಯಕ ಪಾತ್ರವಹಿಸುತ್ತದೆಯೇ?

ಉತ್ತರ: ಇಲ್ಲಿ ರಾಷ್ಟ್ರ ವಿಚಾರಗಳ ನಡುವೆ ಚುನಾವಣೆ ನಡೆಯುವುದರಿಂದ ನಮ್ಮ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. 

* ನಿಮ್ಮ ಪ್ರತಿ ಸ್ಪರ್ಧಿ ಎಸ್‌.ಬಾಲರಾಜು ಕಾಂಗ್ರೆಸ್‌ನಲ್ಲಿದ್ದವರು. ಅವರ ಬಗ್ಗೆ ಏನು ಹೇಳುತ್ತೀರಿ?

ಉತ್ತರ: ಅವರಿಗೆ ಎಲ್ಲಿ ಅನುಕೂಲವೋ ಅಲ್ಲಿಗೆ ಹೋಗಿದ್ದಾರೆ. ಯಾವ ಅಭ್ಯರ್ಥಿಯನ್ನೂ ನಾವು ಲಘುವಾಗಿ ಪರಿಗಣಿಸುವುದಿಲ್ಲ. ಅವರು ನಮ್ಮ ರಾಜಕೀಯ ಎದುರಾಳಿಯಷ್ಟೇ ಗೆಲುವಿಗೆ ಏನು ಕಾರ್ಯತಂತ್ರ ಬೇಕೋ ಅದೆಲ್ಲವನ್ನೂ ಮಾಡುತ್ತೇವೆ. 

ಸುನಿಲ್‌ ಬೋಸ್‌
ಸುನಿಲ್‌ ಬೋಸ್‌

* ಬಿಜೆಪಿಯವರು ನಿಮ್ಮ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ? ನನ್ನ ಮದುವೆ ವಿಚಾರ ವೈಯಕ್ತಿಕ. ಅದನ್ನು ಪ್ರಸ್ತಾಪ ಮಾಡಿ ಬಿಜೆಪಿಯವರು ಜನರಿಗೆ ಏನು ಸಂದೇಶ ಕೊಡುವುದಕ್ಕೆ ಹೊರಟಿದ್ದಾರೆ? ಪ್ರಧಾನಿ ಮೋದಿಯವರೇ ತಮ್ಮ ಪತ್ನಿಯ ವಿವರಗಳನ್ನು ನೀಡಿರಲಿಲ್ಲ. ಆ ಬಗ್ಗೆ ಇವರು ಯಾಕೆ ಮಾತನಾಡಿಲ್ಲ? ಪ್ರಮಾಣಪತ್ರದಲ್ಲಿ ಉಲ್ಲೇಖ ಮಾಡುವುದು ನನಗೆ ಬಿಟ್ಟದ್ದು. ಅಷ್ಟು ಅನುಮಾನ ಇದ್ದರೆ ಅವರು ಪ್ರಕರಣ ದಾಖಲಿಸಲಿ ನನಗೆ ನೋಟಿಸ್‌ ಬರುತ್ತದೆ. ಅದನ್ನು ನಾನು ಎದುರಿಸುತ್ತೇನೆ.  ಈ ವಿಚಾರಗಳನ್ನು ಪ್ರಸ್ತಾಪಿಸಿ ನನ್ನನ್ನು ಮಾನಸಿಕವಾಗಿ ಕುಗ್ಗಿಸಬಹುದು ಎಂದು ಅವರು ಯೋಚಿಸಿದ್ದಾರೆ. ನಾನು ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಏನೂ ಮಾಡದೇ ಇದ್ದರೂ ನನ್ನ ಮೇಲೆ ಲೋಕಾಯುಕ್ತ ಪ್ರಕರಣ ದಾಖಲಾಗಿತ್ತು. ಅದನ್ನು ನಾನು ಯಶಸ್ವಿಯಾಗಿ ಎದುರಿಸಿದ್ದೇನೆ. ಹೊಸ ಮರಳು ನೀತಿಯನ್ನೇ ಜಾರಿಗೆ ತಂದವರು ನಮ್ಮ ತಂದೆ. ನಾನು ಮರಳು ಕದ್ದು ಹೊಡೆಯುತ್ತಿದ್ದರೆ ನಾವೇ ಮರಳು ನೀತಿ ಯಾಕೆ ಜಾರಿಗೆ ತರುತ್ತಿದ್ದೆವು?   ಕ್ಷೇತ್ರಕ್ಕೆ ನಾನು ಏನು ಮಾಡುತ್ತೇನೆ. ಪಕ್ಷ ಏನೇನು ಯೋಜನೆಗಳನ್ನು ಕೊಡುತ್ತದೆ ಎಂಬುದರ ಬಗ್ಗೆ ಚರ್ಚೆಯಾಗಬೇಕು. ನಾನು ಆ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದೇನೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT