ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು: ವರ್ಷಗಂಧಿ ‘ಮಲೆನಾಡು ಗಿಡ್ಡ’ಕ್ಕೆ ಬೇಡಿಕೆ!

Published 19 ಜನವರಿ 2024, 7:40 IST
Last Updated 19 ಜನವರಿ 2024, 7:40 IST
ಅಕ್ಷರ ಗಾತ್ರ

ಯಳಂದೂರು: ಪಶ್ಚಿಮ ಘಟ್ಟದ ಕೃಷಿಕರ ಬೇಸಾಯದ ಭಾಗವಾಗಿದ್ದ ಸ್ಥಳೀಯ ಗೋವುಗಳು ಅಳಿವಿನಂಚಿನಲ್ಲಿ ಇವೆ. ಅವುಗಳಲ್ಲಿ ಮಲೆನಾಡು ಗಿಡ್ಡಗಳಿಗೆ ಮೊದಲ ಸ್ಥಾನ ನೀಡಲಾಗಿದೆ. ಇಂತಹ ಅಪರೂಪದ ತಳಿ ಬಯಲು ಸೀಮೆಯಲ್ಲೂ ಜನಪ್ರಿಯವಾಗುತ್ತಿದೆ.

ಔಷಧೀಯ ಗುಣಗಳ ಹಾಲು, ಗಂಜಳ ಮತ್ತು ಸಗಣಿಗಾಗಿ ಮಲೆನಾಡು ಗಿಡ್ಡಗಳ ಸಾಕಣೆಗೆ ಒಲವು ತೋರುತ್ತಿದ್ದಾರೆ.

ತಾಲ್ಲೂಕಿನಲ್ಲಿ ನಾಟಿ ಹಸುಗಳ ಸಂಕುಲ ಬಹುತೇಕ ನಶಿಸಿದೆ. ವಿದೇಶಿ ಜಾತಿಯ ಜರ್ಸಿ ಅವುಗಳ ಸ್ಥಾನ ಅಲಂಕರಿಸಿದೆ. ಇವು ಹೆಚ್ಚು ಆರ್ಥಿಕ ಮೌಲ್ಯ ಹೊಂದಿದ್ದು, ಹೆಚ್ಚಿನ ಸಾಕಣೆ ಖರ್ಚು, ರೋಗಗಳ ಹಾವಳಿಗೂ ಈಡಾಗುತ್ತಿವೆ. ಆದರೆ, ಮಲೆನಾಡು ಭಾಗದ ‌ದೇಸೀ ರಾಸುಗಳು ಎಲ್ಲ ಪರಿಸರಕ್ಕೂ ಹೊಂದಿಕೊಂಡು ಬೆಳೆಯುತ್ತವೆ. ಇವುಗಳ ಪಾಲನೆ ಮತ್ತು ಪೋಷಣೆ ಸುಲಭ.

‘ಗಿಡ್ಡ ರಾಸುಗಳ ದೇಹ ಚಿಕ್ಕದು. ಬಲವಾದ ಗೊರಸು ಮತ್ತು ಚಂಗನೆ ನೆಗೆಯುವ ಸಾಮರ್ಥ್ಯ ಹೊಂದಿದ್ದು, ಕೃಷಿ ಚಟುವಟಿಕೆಗೂ ಬಳಸಬಹುದು. ಕಡಿಮೆ ಆಹಾರ ಮತ್ತು ನೀರು ಬಳಸಿಕೊಂಡು, ದೀರ್ಘಾವಧಿ ಬದುಕುತ್ತವೆ. ಕೃಷಿ ಭೂಮಿಯಲ್ಲಿ ಸಿಗುವ ಚಿಗುರು, ಹಸಿ ಹುಲ್ಲು ಸೇವಿಸಿ, ಉತ್ಕೃಷ್ಟ ದರ್ಜೆಯ ಸಗಣಿ ವಿಸರ್ಜಿಸುತ್ತದೆ. ಸದಾ ದೇಹಕ್ಕೆ ಕೊಳೆ ಸೋಂಕದಂತೆ ಎಚ್ಚರ ವಹಿಸುವ ಇವುಗಳನ್ನು ತಿಂಗಳಿಗೆ ಒಂದೆರಡು ಬಾರಿ ಸ್ವಚ್ಛಗೊಳಿಸಿದರೆ ಸಾಕು. ₹10 ಸಾವಿರದಲ್ಲಿ ಕೊಳ್ಳಬಹುದು’ ಎಂದು ಕಂದಹಳ್ಳಿ ಗ್ರಾಮದ ಸಾಕಣೆದಾರ ನಾಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. 

ವೇದಗಳಲ್ಲಿ ವರ್ಣನೆ: ಭೌಗೋಳಿಕವಾಗಿ ಈ ಜಾತಿಯ ಗಿಡ್ಡ ಕಾಡು ಮೇಡು, ಬೆಟ್ಟಗುಡ್ಡ ಏರಿಳಿಯುವ ಸಾಮರ್ಥ್ಯ ಹೊಂದಿವೆ. ಇವುಗಳಿಗೆ ರೋಗ ರುಜಿನ ಬಂದರೆ ಬಹುಬೇಗ ಗುಣವಾಗುತ್ತದೆ. ದೇಹದ ಮೇಲೆ ಸೂರ್ಯಕೇತು ನಾಡಿ ಇದ್ದು. ಬಿಸಿಲಿನ ಸ್ವರ್ಣಕ್ಷಾರವನ್ನು ಹೀರಿಕೊಂಡು ಗುಣಮಟ್ಟದ ಕ್ಷೀರ ನೀಡುತ್ತವೆ. ನೈಸರ್ಗಿಕವಾಗಿ ಸಿಗುವ ಕ್ಷಾರ ಗುಣವನ್ನು ಗಂಜಳದ ರೂಪದಲ್ಲಿ ಹೊರಹಾಕುತ್ತದೆ. ಇದನ್ನು ಬಳಸಿಕೊಂಡು ಜೀವಾಮೃತ ತಯಾರಿಸಿ ಭೂಮಿಗೆ ನೀಡಿದಲ್ಲಿ, ಎರೆಹುಳು ಸಮೃದ್ಧವಾಗಿ ಸಾಗುವಳಿ ಸುಲಭವಾಗುತ್ತದೆ ಎಂಬುದನ್ನು ವೇದಗಳಲ್ಲಿ ವರ್ಣಿಸಲಾಗಿದೆ.

ಗಿಡ್ಡದ ಲಕ್ಷಣ: ‘ಮಲೆನಾಡು ಗಿಡ್ಡಗಳು ಕಪ್ಪು, ಕಂದು, ಬಿಳಿ ಬಣ್ಣದಲ್ಲಿ ಮಾತ್ರ ಇವೆ.  ಕೊರಳಲ್ಲಿ ಮಾಲೆ (ಗಂಗೆ ತೊಗಲು), ಉದ್ದಬಾಲ ಹಾಗೂ ಉಬ್ಬಿದ ಹೆಗಲು ಹೊಂದಿದ್ದು, ವರ್ಷಕ್ಕೆ 1 ಕರುವನ್ನು ಹಾಕುತ್ತದೆ. 20 ರಿಂದ 25 ವರ್ಷ ಬದುಕುತ್ತದೆ ಎಂತಲೆ ಇವಕ್ಕೆ ‘ವರ್ಷಗಂಧಿ’ ಎಂಬ ಹೆಸರು ಬಂದಿದೆ. ಸದಾ ತುಂಟಾಟ ಮತ್ತು ವೇಗ ಸಂಚಾರ ಸಾಮರ್ಥ್ಯದ ಇವುಗಳನ್ನು ಸುಲಭವಾಗಿ ನಿರ್ವಹಿಸಬಹುದು’ ಎನ್ನುತ್ತಾರೆ ಹೊನ್ನೂರು ಕೃಷಿಕ ಪ್ರಸನ್ನ.

ಮಲೆನಾಡು ಭಾಗದ ತಳಿ ಗುಣಮಟ್ಟದ ಹಾಲಿಗೆ ಹೆಸರುವಾಸಿ ರೋಗ ನಿರೋಧಕ ಶಕ್ತಿ ಹೆಚ್ಚು
ಹಾಲು ಲೀಟರ್‌ಗೆ ₹125 
‘ಮಲೆನಾಡು ಗಿಡ್ಡ ಹಸುವಿನ ಹಾಲಿನಲ್ಲಿ ಪೌಷ್ಠಿಕಾಂಶ ಹೆಚ್ಚು. ಲ್ಯಾಕ್ಟೋಪೆರೇನ್ ಅಧಿಕ ಪ್ರಮಾಣದಲ್ಲಿ ಇದೆ. ಕ್ಷೀರದಲ್ಲಿ ಆ್ಯಂಟಿ ಡಯಾಬಿಟಿಕ್ ಗುಣ ಇರುವುದನ್ನು ನ್ಯಾಷನಲ್ ಡೇರಿ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಸಂಶೋಧನೆ ದೃಢಪಡಿಸಿದೆ. ಆದರೆ ಒಮ್ಮೆಗೆ 1 ಲೀಟರ್ ಮಾತ್ರ ಹಾಲು ನೀಡುತ್ತದೆ. ಪ್ರತಿ ಲೀಟರ್‌ಗೆ ₹125 ರೂಪಾಯಿ ಬೆಲೆ ಇದೆ’ ಎಂದು ಪಶು ವೈದ್ಯ ಸುಗಂಧರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.  ‘ಇವುಗಳ ಸಣ್ಣ ಕರುಳಿನ ರಚನೆ 150 ಮೀಟರ್ ಇದ್ದು ಮೇವನ್ನು ಜೀರ್ಣಿಸಿಕೊಂಡು ಸಗಣಿ ವಿಸರ್ಜಿಸಿದಾಗ ಸುವಾಸನೆ ಬೀರುತ್ತದೆ. ಉತ್ತಮ ಸಾವಯವ ಗೊಬ್ಬರವಾಗಿ ಬಳಸಿ ಬೆಳೆ ಇಳುವರಿ ಹೆಚ್ಚಿಸಿಕೊಳ್ಳಬಹುದು. ಗಿಡ್ಡ ಹೆಚ್ಚಿನ ರೋಗ ನಿರೋಧಕ ಗುಣ ಹೊಂದಿದ್ದು ಸಾಕಣೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಇವುಗಳ ತಳಿವರ್ಧನೆಗೂ ಮುಂದಾಗಿದೆ. ರೈತರು ಇದರ ಸದ್ಭಳಕ್ಕೆ ಮಾಡಿಕೊಂಡು ದೇಶಿ ರಾಸುಗಳನ್ನು ಉಳಿಸಬೇಕಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT