ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕರಂಗನಾಥನಕೆರೆಯಲ್ಲಿ ಕೊಳಚೆ ನೀರು

ಬಿಸಿಲಿಗೆ ಸಿಹಿ ನೀರು ಬರಿದು, ಬಡಾವಣೆಗಳ ಕಲುಷಿತ ನೀರು ಕೆರೆಗೆ, ಮೀನುಗಳ ಸಾವು
ಅವಿನ್ ಪ್ರಕಾಶ್ ವಿ.
Published 6 ಮೇ 2024, 6:05 IST
Last Updated 6 ಮೇ 2024, 6:05 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದ ಹೃದಯ ಭಾಗದಲ್ಲಿರುವ ಚಿಕ್ಕ ರಂಗನಾಥನಕೆರೆಗೆ ಚರಂಡಿಗಳ ಕೊಳಚೆ ನೀರು ಸೇರುತ್ತಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ. 

ಮಳೆ ಇಲ್ಲದ ಕಾರಣ ಕೆರೆಯಲ್ಲಿ ನೀರು ಬತ್ತಿ ಹೋಗಿದೆ. ಆದರೆ, ಕೊಳಚೆ ನೀರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾರ್ವಜನಿಕರು ರಸ್ತೆಯಲ್ಲಿ ಹೋಗಬೇಕಾದರೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ.

ಹನೂರು–ಮಹದೇಶ್ವರ ಬೆಟ್ಟದ ರಸ್ತೆಗೆ ಹೊಂದಿಕೊಂಡಂತೆ ಈ ಕೆರೆ ಇದೆ. 95 ಎಕರೆಯಷ್ಟು ಜಾಗದಲ್ಲಿ ಹರಡಿರುವ ಈ ಕೆರೆಯ ಸುತ್ತಲೂ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಹಲವು ಬಡಾವಣೆಗಳಿವೆ.

ವಿದ್ಯಾನಗರ, ಕ್ರೈಸ್ತರ ಬೀದಿ, ಆದರ್ಶ ನಗರ ಸಿದ್ದನಪುರ ಬಡಾವಣೆಗಳಲ್ಲಿ ಉತ್ಪತ್ತಿಯಾಗುವ ಚರಂಡಿ ನೀರು ಕೆರೆಯಲ್ಲಿ ಸಂಗ್ರಹವಾಗುತ್ತಿದೆ. 

ಮೀನುಗಳ ಸಾವು: ಚರಂಡಿ ನೀರಲ್ಲಿ ಬದುಕಲು ಸಾಧ್ಯವಿಲ್ಲದೆ ಮೀನುಗಳು ಸಾಯುತ್ತಿವೆ. ಸತ್ತ ಮೀನುಗಳು ಕೊಳೆತು ಗಬ್ಬುನಾರುತ್ತಿವೆ. ಬಡಾವಣೆಯ ಸಮೀಪದಲ್ಲಿ ಹಾಗೂ  ರಸ್ತೆಗಳಲ್ಲಿ ಓಡಾಡಲು ತೊಂದರೆ ಉಂಟಾಗುತ್ತಿದೆ.

‘ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದರು. ಈ ಬಾರಿ ನೀರಿನ ಕೊರತೆ ಇದ್ದ ಕಾರಣ ಫೆಬ್ರುವರಿ ತಿಂಗಳಲ್ಲಿ ಬಹುತೇಕ ಮೀನುಗಳನ್ನು ಹಿಡಿಯಲಾಗಿತ್ತು. ಉಳಿದ ಮೀನುಗಳು ಈಗ ಸಾಯುತ್ತಿವೆ.

‘ಕಲುಷಿತ ನೀರನ್ನು ಕೆರೆಗೆ ಬಿಡುತ್ತಿರುವುದರಿಂದ ಜಲಚರಗಳು ಮೃತಪಡುತ್ತಿವೆ. ಬಡಾವಣೆಗಳ ಕೊಳಚೆ ನೀರು ಕೆರೆ ಸೇರುವುದನ್ನು ತಪ್ಪಿಸಬೇಕು. ನಗರಸಭೆಯವರು ಹಾಗೂ ನೀರಾವರಿ ಇಲಾಖೆಯವರು ಈ ಬಗ್ಗೆ ಗಮನಹರಿಸಬೇಕು’ ಎಂದು ಪರಿಸರ ಪ್ರೇಮಿ ಮನೋರಂಜನ್ ಒತ್ತಾಯಿಸಿದರು. 

ಬಾರದ ಪಕ್ಷಿಗಳು: ಪ್ರತಿ ವರ್ಷ ಈ ಕೆರೆಗೆ ಬೇರೆ ಕಡೆಗಳಿಂದ ನೂರಾರು ಪಕ್ಷಿಗಳು ವಲಸೆ ಬರುತ್ತಿದ್ದವು. ಈ ಬಾರಿ ಕೆರೆಯಲ್ಲಿ ನೀರು ಇಲ್ಲದ ಕಾರಣ ಹಾಗೂ ಕೆರೆ ಕಲುಷಿತವಾಗಿರುವ ಕಾರಣ ಈ ಬಾರಿ ಪಕ್ಷಿಗಳು ಬಂದಿಲ್ಲ. 

‘ಪ್ರತಿ ವರ್ಷ ಬೇಸಿಗೆಯಲ್ಲೂ ವಿವಿಧ ಜಾತಿಯ ಪಕ್ಷಿಗಳು ಕೆರೆಯಲ್ಲಿ ಆಶ್ರಯ ಪಡೆಯುತ್ತಿದ್ದವು. ಸಾರ್ವಜನಿಕರು ಕೂಡ ಕುತೂಹಲದಿಂದ ಪಕ್ಷಿಗಳನ್ನು ವೀಕ್ಷಿಸಿದ್ದರು. ಈ ಬಾರಿ ನೀರೆಲ್ಲ ಖಾಲಿಯಾಗಿ, ಮಲಿನ ನೀರು ಸಂಗ್ರಹಗೊಂಡಿರುವುದರಿಂದ ಹಕ್ಕಿಗಳೂ ವಲಸೆ ಬಂದಿಲ್ಲ’ ಎಂದು ಪಕ್ಷಿ ಪ್ರೇಮಿ ಮನೋಜ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಬಡಾವಣೆಯ ನಿವಾಸಿಗಳು ಕಲುಷಿತ ನೀರು ಬಿಡದಂತೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಆದರೂ ನೀರನ್ನು ಬಿಡುತ್ತಿದ್ದಾರೆ.

-ರಾಮಕೃಷ್ಣ ಕಾವೇರಿ ನೀರಾವರಿ ನಿಗಮದ ಎಇಇ .

ಕೆರೆಯ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಕಾಮಗಾರಿ ಮುಕ್ತಾಯವಾದ ಬಳಿಕ ಕೆರೆ ಕಲುಷಿತವಾಗದಂತೆ ನೋಡಿಕೊಳ್ಳುತ್ತೇವೆ

-ರಮೇಶ್ ನಗರಸಭೆ ಆಯುಕ್ತ

ಕೃಷಿ ಮಾಡಲು ಹಿಂದೇಟು... ಚಿಕ್ಕ ರಂಗನಾಥನಕೆರೆ ನೀರನ್ನು ನಂಬಿ ಅನೇಕ ರೈತರು ಕೃಷಿಯನ್ನು ಮಾಡುತ್ತಿದ್ದರು. ಆದರೆ ಈ ಬಾರಿ ಕೆರೆಯಲ್ಲಿ ನೀರಿಲ್ಲದಿರುವುದರಿಂದ ಕೃಷಿ ಮಾಡಲು ರೈತರು ಹಿಂದೇಟು ಹಾಕಿದ್ದಾರೆ. ಈ ಭಾಗದಲ್ಲಿ ಕೊಳವೆ ಬಾವಿ ಇದ್ದವರು ಮಾತ್ರ ವ್ಯವಸಾಯ ಮಾಡಿದ್ದಾರೆ. ‘30 ವರ್ಷಗಳಿಂದಲೂ ಇದೇ ನೀರನ್ನು ನಂಬಿ ಕೃಷಿ ಮಾಡುತ್ತಿದ್ದೆವು. ಇದೇ ಮೊದಲ ಬಾರಿಗೆ ಕೆರೆ ನೀರು ಖಾಲಿಯಾದ ಕಾರಣ ಹಾಗೂ ಕೆರೆ ಕಲುಷಿತವಾದ ಕಾರಣ ನಾವು ಜಮೀನಿನಲ್ಲಿ ವ್ಯವಸಾಯ ಮಾಡಿಲ್ಲ. ಈಗ ಸಂಗ್ರಹವಾಗಿರುವ ನೀರು ವ್ಯವಸಾಯ ಮಾಡಲು ಯೋಗ್ಯವಿಲ್ಲ’ ಎಂದು ಸ್ಥಳೀಯ ರೈತ ರವಿ ‘ಪ್ರಜಾವಾಣಿ’ಗೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT