ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಹಾಡಿಗಳಲ್ಲಿ ಅಬಕಾರಿ ಕಾರ್ಯಾಚರಣೆ

ಗಿರಿಜನರ ಪೋಡುಗಳಲ್ಲಿ ಮದ್ಯ ಸಂಗ್ರಹದ ಮೇಲೆ ಅಧಿಕಾರಿಗಳ ಕಣ್ಣು
ಸೂರ್ಯನಾರಾಯಣ ವಿ.
Published 10 ಡಿಸೆಂಬರ್ 2023, 5:12 IST
Last Updated 10 ಡಿಸೆಂಬರ್ 2023, 5:12 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿರುವ ಗಿರಿಜನರ ಹಾಡಿಗಳಲ್ಲಿ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ, ಗಿರಿಜನರು ಮದ್ಯ ಸೇವನೆಯ ಚಟಕ್ಕೆ ದಾಸರಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವುದರ ನಡುವೆಯೇ ಜಿಲ್ಲಾ ಅಬಕಾರಿ ಇಲಾಖೆಯು ವಾರದಿಂದೀಚೆಗೆ ಜಿಲ್ಲೆಯ ಹಾಡಿಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. 

ಜಿಲ್ಲೆಯ ಎಲ್ಲ ತಾಲ್ಲೂಕು ವ್ಯಾಪ್ತಿಯ ಹಾಡಿಗಳಿಗೆ ಪ್ರತಿ ಸಂಜೆ ಭೇಟಿ ನೀಡುತ್ತಿರುವ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದಾರೆ. 

ವಾರದಲ್ಲಿ ಎರಡು ಹಾಡಿಗಳಲ್ಲಿ ಅಕ್ರಮವಾಗಿ ಮದ್ಯ ಸಂಗ್ರಹಿಸಿರುವುದು ಮತ್ತೆಯಾಗಿದೆ. ಚಾಮರಾಜನಗರ ತಾಲ್ಲೂಕಿನ ಎತ್ತೇಗೌಡನದೊಡ್ಡಿ ಹಾಗೂ ಗುಂಡ್ಲುಪೇಟೆಯ ಜಕ್ಕಹಳ್ಳಿಯಲ್ಲಿ ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹಿಸಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಚಾಮರಾಜನಗರ ತಾಲ್ಲೂಕಿನಲ್ಲಿ 29, ಗುಂಡ್ಲುಪೇಟೆಯಲ್ಲಿ 33, ಕೊಳ್ಳೇಗಾಲ–ಹನೂರು ತಾಲ್ಲೂಕುಗಳಲ್ಲಿ 90 ಮತ್ತು ಯಳಂದೂರಿನಲ್ಲಿ 10 ಹಾಡಿಗಳಿವೆ. 

ಅಬಕಾರಿ ಇಲಾಖೆಯು ಚಾಮರಾಜನಗರ, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲದಲ್ಲಿ ಕಚೇರಿಗಳನ್ನು ಹೊಂದಿದೆ. ಆಯಾ ತಾಲ್ಲೂಕಿನ ಸಿಬ್ಬಂದಿಯಲ್ಲದೆ ಇಲಾಖೆಯ ಉಪ ಆಯುಕ್ತರ ಅಧೀನದಲ್ಲಿರುವ ವಿಶೇಷ ತಂಡವೂ ಕಾರ್ಯಾಚರಣೆ ನಡೆಸುತ್ತಿದೆ. 

‘ಯಾರೇ ಆಗಲಿ ಮದ್ಯವನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸಂಗ್ರಹಿಸಿಟ್ಟುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಹಾಡಿಗಳಲ್ಲಿ ಮದ್ಯವನ್ನು ಅಕ್ರಮ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಹಿಂದಿನಿಂದಲೇ ಇದೆ. ಗಿರಿಜನರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಮದ್ಯದ ಅಕ್ರಮ ಮಾರಾಟ, ಸಂಗ್ರಹದ ಬಗ್ಗೆ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ’ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಆರ್‌.ನಾಗಶಯನ ‘ಪ್ರಜಾವಾಣಿ’ಗೆ ತಿಳಿಸಿದರು. 

ಅಬಕಾರಿ ನಿಯಮದ ಪ್ರಕಾರ, 2.4 ಲೀಟರ್‌ಗಳಷ್ಟು ಮದ್ಯ, 8.6 ಲೀಟರ್‌ಗಳಷ್ಟು ಬಿಯರ್‌ ಅನ್ನು ಮನೆಯಲ್ಲಿಡಲು ಅವಕಾಶ ಇದೆ. ಇದಕ್ಕಿಂತ ಹೆಚ್ಚು ಇದ್ದರೆ ಅದು ಅಕ್ರಮ ಸಂಗ್ರಹವಾಗುತ್ತದೆ. 

‘ವಾರದಿಂದ ಐದು ತಾಲ್ಲೂಕುಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಹಾಡಿಗಳಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ. ಈವರೆಗೆ ಎರಡು ಪ್ರಕರಣಗಳು ಮಾತ್ರ ವರದಿಯಾಗಿವೆ’ ಎಂದು ನಾಗಶಯನ ಮಾಹಿತಿ ನೀಡಿದರು.

ಬೆಟ್ಟದಲ್ಲಿ ಕಡಿವಾಣ: ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮದ್ಯದ ಅಕ್ರಮ ಮಾರಾಟಕ್ಕೆ ಇಲಾಖೆ ಕಡಿವಾಣ ಹಾಕಿದೆ. ಕೆಲವು ವಾರಗಳಿಂದ ಬೆಟ್ಟದ ವ್ಯಾಪ್ತಿಯಲ್ಲಿ ಮದ್ಯ ಸಿಗುತ್ತಿಲ್ಲ. 

‘ಮುಖ್ಯಮಂತ್ರಿ ಭೇಟಿ ನೀಡಿದ ಬಳಿಕ ನಿರಂತರವಾಗಿ ಬೆಟ್ಟದ ವ್ಯಾಪ್ತಿಯಲ್ಲಿ ಮದ್ಯ ಮಾರಾಟದ ಮೇಲೆ ನಿಗಾ ಇಟ್ಟಿದ್ದು, ಕಾರ್ಯಾಚರಣೆ ನಡೆಸುತ್ತಿದ್ದೇವೆ. ಮನೆಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಮದ್ಯ ಪತ್ತೆಯಾದರೆ, ಪ್ರಕರಣ ದಾಖಲಿಸುತ್ತಿದ್ದೇವೆ. ಈಗ ನಮಗೆ ಅಲ್ಲಿಂದ ದೂರುಗಳು ಬರುತ್ತಿಲ್ಲ’ ಎಂದು ನಾಗಶಯನ ಹೇಳಿದರು. 

ಆರ್‌.ನಾಗಶಯನ
ಆರ್‌.ನಾಗಶಯನ
ಐದು ತಾಲ್ಲೂಕುಗಳ ಕೆಲವು ಹಾಡಿಗಳಲ್ಲಿ ಕಾರ್ಯಾಚಾರಣೆ ನಡೆಸಿದ್ದೇವೆ. ಮುಂದೆಯೂ ನಿರಂತರವಾಗಿ ನಡೆಸಲಿದ್ದೇವೆ
ಆರ್‌.ನಾಗಶಯನ ಅಬಕಾರಿ ಉಪ ಆಯುಕ್ತ

ಮಾರಾಟ ಗುರಿ ಹೆಚ್ಚಳ: ಅಡಕ್ಕತ್ತರಿಯಲ್ಲಿ ಅಧಿಕಾರಿಗಳು ಸರ್ಕಾರ ಜಿಲ್ಲಾ ಅಬಕಾರಿ ಇಲಾಖೆಗೆ ಮದ್ಯ ಮಾರಾಟದ ಗುರಿಯನ್ನು ಹೆಚ್ಚಿಸಿದೆ. ಒಂದು ಕಡೆ ಮದ್ಯದ ಅಂಗಡಿಗಳಲ್ಲಿ ಮಾರಾಟ ಹೆಚ್ಚಾಗುವಂತೆ ಮಾಡುವುದರ ಜೊತೆಗೆ ಮತ್ತೊಂದು ಕಡೆ ಅಕ್ರಮ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿಂದೆ ತಿಂಗಳಿಗೆ 85 ಸಾವಿರ ಪೆಟ್ಟಿಗೆಗಳಷ್ಟು (ಬಾಕ್ಸ್‌) ಮದ್ಯ ಮಾರಾಟದ ಗುರಿಯನ್ನು ಜಿಲ್ಲೆಗೆ ನೀಡಲಾಗಿತ್ತು. ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡ ನಂತರ ಈ ಗುರಿಯನ್ನು 97 ಸಾವಿರ ಪೆಟ್ಟಿಗೆಗಳಿಗೆ ಹೆಚ್ಚಿಸಲಾಗಿದೆ.  ‘ನಮ್ಮ ತಿಂಗಳ ಗುರಿ ಹೆಚ್ಚಳವಾಗಿರುವುದು ನಿಜ. ಪರವಾನಗಿ ಹೊಂದಿರುವ ಎಲ್ಲ ಮಳಿಗೆಗಳ ಮಾಲೀಕರೊಂದಿಗೆ ಮಾತನಾಡಿದ್ದು ಹೆಚ್ಚು ಮಾರಾಟ ಮಾಡಲು ಸೂಚಿಸಿದ್ದೇವೆ. ಆದರೆ ಯಾವುದೇ ಕಾರಣಕ್ಕೂ 'ನೀವು ಮದ್ಯವನ್ನು ತೆಗೆದುಕೊಂಡು ಹೋಗಿ ಬೇರೆ ಕಡೆಗಳಲ್ಲಿ ಮಾರಾಟ ಮಾಡಬಾರದು‘ ಎಂದೂ ಹೇಳಿದ್ದೇವೆ. ಮಳಿಗೆಗಳಿಗೆ ಗ್ರಾಹಕರು ಬರಲಿ ಮದ್ಯ ಖರೀದಿಸಿ ಕೊಂಡು ಹೋಗಲಿ’ ಎಂದು ಸ್ಷಷ್ಟವಾಗಿ ತಿಳಿಸಿದ್ದೇವೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT