ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಗರ್ಭಕೋಶ ಶಸ್ತ್ರಚಿಕಿತ್ಸೆ: ನಾಲ್ವರಿಗೆ ಯಶಸ್ವಿ ಶಸ್ತ್ರಕ್ರಿಯೆ

ಸಿಮ್ಸ್‌ ಆಸ್ಪತ್ರೆಯಲ್ಲಿ ಲ್ಯಾಪ್ರೊಸ್ಕೊಪಿಕ್‌ ಮೂಲಕ ಗರ್ಭಕೋಶ ಶಸ್ತ್ರಚಿಕಿತ್ಸೆ ಸೌಲಭ್ಯ ಆರಂಭ
Published 2 ಜೂನ್ 2024, 5:52 IST
Last Updated 2 ಜೂನ್ 2024, 5:52 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ (ಜಿಲ್ಲಾಸ್ಪತ್ರೆ) ಇದೇ ಮೊದಲ ಬಾರಿಗೆ ಲ್ಯಾಪ್ರೊಸ್ಕೊಪಿಕ್‌ ತಂತ್ರಜ್ಞಾನದ ಮೂಲಕ ಗರ್ಭಕೋಶದ ಶಸ್ತ್ರಕ್ರಿಯೆಯನ್ನು (ಲ್ಯಾಪ್ರೊಸ್ಕೊಪಿಕ್‌ ಹಿಸ್ಟರೆಕ್ಟಮಿ) ಯಶಸ್ವಿಯಾಗಿ ನಡೆಸಲಾಗಿದೆ.

ಇದರೊಂದಿಗೆ ಜಿಲ್ಲಾಸ್ಪತ್ರೆಯಲ್ಲೂ ಲ್ಯಾಪ್ರೊಸ್ಕೊಪಿಕ್‌ ಗರ್ಭಕೋಶದ ಶಸ್ತ್ರಕ್ರಿಯೆ ಸೌಲಭ್ಯ ರೋಗಿಗಳಿಗೆ ಸಿಕ್ಕಿದಂತಾಗಿದೆ.

ಶನಿವಾರ ಮೊದಲ ಬಾರಿಗೆ ವೈದ್ಯರು ನಾಲ್ವರು ಮಹಿಳೆಯರಿಗೆ ಶಸ್ತ್ರಕ್ರಿಯೆ ನಡೆಸಿದ್ದಾರೆ. ಮೈಸೂರಿನಿಂದ ಬಂದಿದ್ದ ತಜ್ಞ ವೈದ್ಯ ಡಾ.ಪ್ರತಾಪ್‌ ಅವರ ಮಾರ್ಗದರ್ಶನದಲ್ಲಿ ಸಿಮ್ಸ್‌ ವೈದ್ಯರು ಶಸ್ತ್ರಕ್ರಿಯೆ ನಡೆಸಿದ್ದಾರೆ.

ಲ್ಯಾಪ್ರೊಸ್ಕೊಪಿಕ್‌ ಶಸ್ತ್ರಚಿಕಿತ್ಸೆಗೆ ಬೇಕಾದ, ₹40 ಲಕ್ಷ ಮೌಲ್ಯದ ಯಂತ್ರೋಪಕರಣಗಳು ವರ್ಷದ ಹಿಂದೆಯೇ ಆಸ್ಪತ್ರೆಗೆ ಬಂದಿದ್ದವು. ಆದರೆ, ಸೌಲಭ್ಯ ಶುರುವಾಗಿರಲಿಲ್ಲ. ಈಗ ಹೊರಗಿನಿಂದ ತಜ್ಞ ವೈದ್ಯರನ್ನು ಕರೆಸಿ ಅವರ ಸಮ್ಮುಖದಲ್ಲಿ ಶಸ್ತ್ರಕ್ರಿಯೆ ನಡೆಸಲಾಗಿದೆ.

ದುಬಾರಿ ಶಸ್ತ್ರಕ್ರಿಯೆ: ‘ಖಾಸಗಿ ಆಸ್ಪತ್ರೆಗಳಲ್ಲಿ ಈ ಶಸ್ತ್ರಚಿಕಿತ್ಸೆಗೆ ₹75 ಸಾವಿರದವರೆಗೂ ವೆಚ್ಚವಾಗುತ್ತದೆ. ನಾವಿಲ್ಲಿ ಉಚಿತವಾಗಿ ಮಾಡಿದ್ದೇವೆ. ಶಸ್ತ್ರಕ್ರಿಯೆ ನಡೆಸಿದ ಮೂರನೇ ದಿನಕ್ಕೆ ರೋಗಿ ಆರಾಮವಾಗಿ ನಡೆದುಕೊಂಡು ಹೋಗಬಹುದು. ಇನ್ನು ಮುಂದೆ ಜಿಲ್ಲೆಯ ಸ್ತ್ರೀ ರೋಗಿಗಳಿಗೆ ಈ ಸೌಲಭ್ಯ ಸಿಗಲಿದೆ’ ಎಂದು ಸಿಮ್ಸ್‌ ಡೀನ್‌ ಮತ್ತು ನಿರ್ದೇಶಕ ಡಾ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಜ್ಞ ವೈದ್ಯರು ಈ ಶಸ್ತ್ರಕ್ರಿಯೆ ನಡೆಸಲು ನಮ್ಮ ವೈದ್ಯರಿಗೆ ತರಬೇತಿ ನೀಡಲಿದ್ದಾರೆ. ನಂತರ ನಮ್ಮ ವೈದ್ಯರೇ ಶಸ್ತ್ರಕ್ರಿಯೆಗಳನ್ನು ನಡೆಸಲಿದ್ದಾರೆ ಎಂದು ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ಎಂ.ಮಹೇಶ್‌ ಹೇಳಿದರು.

ಲಾಭ ಏನು?: ಇದುವರೆಗೆ ಜಿಲ್ಲಾಸ್ಪತ್ರೆಯಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ವೈದ್ಯರು ಸಾಂಪ್ರದಾಯಿಕ ವಿಧಾನವನ್ನು ಅನುಸರಿಸುತ್ತಿದ್ದರು. ಅಂದರೆ, ಹೊಟ್ಟೆಯನ್ನು ಕೊಯ್ದು, ಗರ್ಭಕೋಶವನ್ನು ಹೊರ ತೆಗೆಯುತ್ತಿದ್ದರು.

ಆದರೆ ‌ಲ್ಯಾಪ್ರೊಸ್ಕೊಪಿಕ್‌ ವಿಧಾನದಲ್ಲಿ ಸಣ್ಣ ರಂದ್ರ ಮಾಡಿ, ಅದರ ಮೂಲಕ ಟ್ಯೂಬ್‌ ಒಂದನ್ನು ಒಳಗಡೆ ಹಾಕಿ, ಶಸ್ತ್ರಕ್ರಿಯೆ ನಡೆಸಲಾಗುತ್ತದೆ.

‘ಹಳೆಯ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯನ್ನು 15 ಸೆಂ.ಮೀನಷ್ಟು ಕತ್ತರಿಸಬೇಕಿತ್ತು. ಇಲ್ಲಿ 1 ಸೆಂ.ಮೀ ನಷ್ಟು ದೊಡ್ಡ ರಂದ್ರ ಮಾಡಲಾಗುತ್ತದೆ. ಹಾಗಾಗಿ, ಗಾಯದ ಪ್ರಮಾಣ ಕಡಿಮೆ. ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ ಎರಡೇ ದಿನಗಳಲ್ಲಿ ಮನೆಗೆ ತೆರಳಬಹುದು. ಹಿಂದಿನ ವಿಧಾನದಲ್ಲಿ ಶಸ್ತ್ರಕ್ರಿಯೆ ಮಾಡಿದ್ದರೆ, 7ರಿಂದ 10 ದಿನಗಳ ವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗಿತ್ತು. ನೋವು ಕೂಡ ಹೆಚ್ಚು ತಿನ್ನಬೇಕಾಗಿತ್ತು’ ಎಂದು ತಜ್ಞ ವೈದ್ಯ ಡಾ.ಪ್ರತಾಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸ ವಿಧಾನದಲ್ಲಿ  ಶಸ್ತ್ರಚಿಕಿತ್ಸೆಗೆ ಒಳಗಾದವರು ಹೆಚ್ಚು ನೋವು ಅನುಭವಿಸಬೇಕಾಗಿಲ್ಲ. ನೋವಿನ ಅನುಭವ ಶೇ 50ರಷ್ಟು ಕಡಿಮೆ ಇರುತ್ತದೆ. ಹೆಚ್ಚು ಔಷಧಿಗಳೂ ಬೇಕಾಗುವುದಿಲ್ಲ. ಗಾಯ ಸಣ್ಣದಿರುವುದರಿಂದ ಬಹುಬೇಗ ಒಣಗಿ ಸಹಜ ಸ್ಥಿತಿಗೆ ಬರುತ್ತದೆ. ಕೆಲವೇ ದಿನಗಳಲ್ಲಿ ಎಲ್ಲ ರೀತಿಯ ಕೆಲಸಗಳನ್ನು ಮಾಡಬಹುದು’ ಸಿಮ್ಸ್‌ ಆಸ್ಪತ್ರೆ ಸ್ತ್ರೀರೋಗ ತಜ್ಞ ಡಾ.ಪ್ರದೀಪ್‌ ವಿವರಿಸಿದರು.

ಆಸ್ಪತ್ರೆಯ ಮೇಲಿನ ಒತ್ತಡ ಇಳಿಕೆ

‘ಲ್ಯಾಪ್ರೊಸ್ಕೊಪಿ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ನಡೆಸಿದರೆ ಆಸ್ಪತ್ರೆಯ ಮೇಲಿನ ಹೊರೆಯೂ ಇಳಿಯಲಿದೆ. ವಾರಗಟ್ಟಲೆ ರೋಗಿಗಳು ಇರಬೇಕಾಗಿಲ್ಲ. ಒಂದೆರಡು ದಿನಗಳಲ್ಲಿ ಮನೆಗೆ ತೆರಳಬಹುದು. ಇದರಿಂದಾಗಿ ನಮ್ಮಲ್ಲಿ ಬರುವ ರೋಗಿಗಳಿಗೆ ಹಾಸಿಗೆ ಕೊರತೆ ಕಾಡುವುದಿಲ್ಲ. ರೋಗಿಗಳು ಮತ್ತು ಅವರ ಸಂಬಂಧಿಕರು ಕೂಡ ಹೆಚ್ಚು ದಿನ ಉಳಿಯಬೇಕಾಗಿಲ್ಲ. ಇದರಿಂದ ಆಸ್ಪತ್ರೆ ರೋಗಿಗಳಿಗೂ ಅನುಕೂಲವಾಗುತ್ತದೆ’ ಎಂದು ಡಾ.ಮಹೇಶ್‌ ಹೇಳಿದರು.

ಹೊಸ ಸೌಲಭ್ಯವನ್ನು ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ ಜಿಲ್ಲೆಯ ಜನರಿಗೆ ಇನ್ನಷ್ಟು ಅನುಕೂಲಗಳನ್ನು ಕಲ್ಪಿಸಲಿದ್ದೇವೆ.
-ಡಾ.ಎಚ್‌.ಜಿ.ಮಂಜುನಾಥ್‌, ಸಿಮ್ಸ್‌ ಡೀನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT