ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ | ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಯಾವಾಗ?

ಕೊಳ್ಳೇಗಾಲ; ಬಾಡಿಗೆ ಕಟ್ಟಡದಲ್ಲಿ ಕಚೇರಿಗಳು, ಸಾರ್ವಜನಿಕರಿಗೆ ತೊಂದರೆ
ಅವಿನ್ ಪ್ರಕಾಶ್ .ವಿ
Published 14 ಫೆಬ್ರುವರಿ 2024, 6:31 IST
Last Updated 14 ಫೆಬ್ರುವರಿ 2024, 6:31 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದಲ್ಲಿ ಬಹುತೇಕ ಸರ್ಕಾರಿ ಇಲಾಖೆಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ತಿಂಗಳು ಸರ್ಕಾರದ ಲಕ್ಷಾಂತರ ರೂಪಾಯಿ ಹಣ ಬಾಡಿಗೆ ಉದ್ದೇಶಕ್ಕೆ ವ್ಯಯವಾಗುತ್ತಿದೆ.

20 ವರ್ಷಗಳ ಹಿಂದೆ ತಾಲ್ಲೂಕು ಕೇಂದ್ರದಲ್ಲಿ ಮಿನಿ ವಿಧಾನಸೌಧ ನಿರ್ಮಾಣಗೊಂಡು ತಾಲೂಕು ಕಚೇರಿ ಅಲ್ಲಿಗೆ ಸ್ಥಳಾಂತರ ಗೊಂಡಿದೆ. ಇಲ್ಲಿ ಕಂದಾಯ ಇಲಾಖೆ, ಉಪ ವಿಭಾಗಾಧಿಕಾರಿ ಕಚೇರಿ, ಭೂಮಾಪನಾ ಇಲಾಖೆ, ಉಪಖಜಾನೆ ಕಚೇರಿಗಳನ್ನು ಬಿಟ್ಟು ಉಳಿದ ಎಲ್ಲ ಇಲಾಖೆಗಳ ಕಚೇರಿಗಳು ಬೇರೆ ಬೇರೆ ಕಡೆಗಳಲ್ಲಿವೆ. ಕೆಲವು ಇಲಾಖೆಗಳ ಕಚೇರಿಗಳಿಗೆ ಮಾತ್ರ ಸ್ವಂತ ಕಟ್ಟಡಗಳಿದ್ದು, ಬಹುತೇಕ ಇಲಾಖೆಗಳ ಕಚೇರಿಗಳು ಬಾಡಿಗೆ ಮನೆಗಳು ಇಲ್ಲವೇ ಕಟ್ಟಡದಲ್ಲಿವೆ.

ಅಲ್ಲಲ್ಲಿ ಕಚೇರಿಗಳು: ಪ್ರಮುಖವಾದ ಮತ್ತು ಸರ್ಕಾರಕ್ಕೆ ಹೆಚ್ಚು ಆದಾಯ ಕೊಡುವ ಇಲಾಖೆಗಳ ಕಚೇರಿಗಳಿಗಳಿಗೇ ಸ್ವಂತ ಕಟ್ಟಡಗಳಿಲ್ಲ. ನಗರದ ಹೃದಯಭಾಗ, ಬಡಾವಣೆ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಕಚೇರಿಗಳು ಹರಡಿಕೊಂಡಿವೆ.

‘ಎಲ್ಲ ಕಚೇರಿಗಳು ಒಂದೇ ಕಡೆ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಯಾವ ಕಚೇರಿ ಎಲ್ಲಿದೆ ಎಂಬ ಗೊಂದಲವಾಗುತ್ತಿದೆ. ಗ್ರಾಮೀಣ ಭಾಗಗಳ ಜನರಿಗೆ ಕಚೇರಿಗಳನ್ನು ಹುಡುಕುವುದರಲ್ಲೇ ದಿನ ಕಳೆದು ಹೋಗುತ್ತಿದೆ. ಅಧಿಕಾರಿಗಳು ಹಾಗೂ ಶಾಸಕರು ಇನ್ನಾದರೂ ಸರ್ಕಾರದ ಗಮನಕ್ಕೆ ತಂದು ಎಲ್ಲ ಕಚೇರಿಗಳು ಸಹ ಒಂದೇ ಕಡೆ ಇರುವಂತೆ ನೋಡಿಕೊಳ್ಳಬೇಕು’ ಎಂದು ಸತ್ತೇಗಾಲದ ಕುಮಾರ್ ಒತ್ತಾಯಿಸುತ್ತಾರೆ.

ಯಾವ್ಯಾವ ಕಚೇರಿಗಳು: ಅಬಕಾರಿ ಇಲಾಖೆ, ಕಾರ್ಮಿಕ ಇಲಾಖೆ, ವಾಣಿಜ್ಯ ತೆರಿಗೆ, ಭೂ ಸೇನಾ ನಿಗಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೀಗೆ ಹಲವು ಇಲಾಖೆಗಳ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ.

‘ನಗರದ ಹೃದಯ ಭಾಗದಲ್ಲಿ ರೇಷ್ಮೆ ವಿಸ್ತರಣಾಧಿಕಾರಿಗಳ ಕಚೇರಿ ಹಾಗೂ ರೇಷ್ಮೆ ವಿನಿಮಯ ಕೇಂದ್ರವು ದೊಡ್ಡ ಕಟ್ಟಡ ಹೊಂದಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಮೊದಲ ಮಹಡಿಯಲ್ಲಿ ರೇಷ್ಮೆ ಇಲಾಖೆ ಕಚೇರಿಗಳಿವೆ. ಉಳಿದ ಎರಡು ಅಂತಸ್ತುಗಳು ಖಾಲಿ ಇವೆ. ಎರಡು-ಮೂರು ಇಲಾಖೆಗಳು ಇಲ್ಲಿ ಕಾರ್ಯಾಚರಿಸಬಹುದು. ಇಲಾಖೆಗಳ ಅಧಿಕಾರಿಗಳು ಮನಸು ಮಾಡಿದರೆ ಸರ್ಕಾರಕ್ಕೆ ಹಣ ಉಳಿಯುತ್ತದೆ’ ಎಂದು ಮುಖಂಡ ಪ್ರಭುಸ್ವಾಮಿ ಹೇಳಿದರು.

ಪಾಳು ಬಿದ್ದಿವೆ ನಿವೇಶನಗಳು: ನಗರದಲ್ಲಿ ಸರ್ಕಾರಕ್ಕೆ ಸೇರಿದ ಜಮೀನು, ನಿವೇಶನಗಳಿವೆ. ಅವು ಪಾಳು ಬಿದ್ದಿವೆ. ತಾಲ್ಲೂಕು ಕಚೇರಿ ಹಿಂಭಾಗದಲ್ಲಿರುವ ಖಾಲಿ ನಿವೇಶನಗಳು ಗಿಡಗಂಟಿಗಳು ಬೆಳೆದು ಹಂದಿಗಳ ವಾಸ ಸ್ಥಾನವಾಗಿ ಮಾರ್ಪಟ್ಟಿವೆ.

‘ತಾಲ್ಲೂಕು ಪಂಚಾಯಿತಿ ಆವರಣದಲ್ಲೂ ಖಾಲಿ ಜಾಗಗಳಿವೆ. ಕೆಲವು ಕಡೆ ಜಾಗ ಇದ್ದರೂ ಕಚೇರಿ ಕಟ್ಟಡ ನಿರ್ಮಾಣ ಮಾಡಿಲ್ಲ. ಶಾಸಕರು, ಜಿಲ್ಲಾಧಿಕಾರಿಯವರು ಇದರ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಬೇಕು’ ಎಂದು ಪ್ರಗತಿಪರ ಹೋರಾಟಗಾರ ಮಹಮ್ಮದ್ ಮತ್ತೀನ್ ಒತ್ತಾಯಿಸಿದರು.

ಎ.ಆರ್‌.ಕೃಷ್ಣಮೂರ್ತಿ
ಎ.ಆರ್‌.ಕೃಷ್ಣಮೂರ್ತಿ

ಎಲ್ಲ ಸರ್ಕಾರಿ ಕಚೇರಿಗಳು ತಾಲ್ಲೂಕು ಕಚೇರಿಗೆ ಸ್ಥಳಾಂತರವಾಗಬೇಕು. ಶಾಸಕರು ಮನಸ್ಸು ಮಾಡಿದರೆ ಈ ಸಮಸ್ಯೆಗೆ ಮುಕ್ತಿ ಸಿಗುತ್ತದೆ- ಎಜಾಜ್ ಸಾಮಾಜಿಕ ಕಾರ್ಯಕರ್ತ

ಸ್ವಂತ ಕಟ್ಟಡಕ್ಕೆ ಮನಸ್ಸಿಲ್ಲ! ಕೆಲವು ಇಲಾಖೆಗಳ ಅಧಿಕಾರಿಗಳಿಗೆ ಸ್ವಂತ ಕಟ್ಟಡ ಬೇಕಾಗಿಲ್ಲ. ಬಾಡಿಗೆ ನೆಪದಲ್ಲಿ ತಿಂಗಳಿಗೆ ಬರುವ ಹಣವನ್ನು ಬಿಟ್ಟು ಬಿಡಲು ಅವರು ತಯಾರಿಲ್ಲ ಎಂದು ಆರೋಪಿಸುತ್ತಾರೆ ಸಾಮಾಜಿಕ ಕಾರ್ಯಕರ್ತರು. ಮನೆ ಅಥವಾ ಕಟ್ಟಡ ಮಾಲೀಕರಿಗೆ ಕಡಿಮೆ ಬಾಡಿಗೆ ನಿಗದಿ ಮಾಡಿ ಸರ್ಕಾರಿ ಲೆಕ್ಕದಲ್ಲಿ ಹೆಚ್ಚು ಬಾಡಿಗೆ ತೋರಿಸಿ ಹಣ ಮಾಡುವವರೂ ಇದ್ದಾರೆ. ಅದೇ ಸಮಯದಲ್ಲಿ ಇಲಾಖೆಯಿಂದ ಅನುದಾನ ಬಾರದೆ ಬಾಡಿಗೆ ಪಾವತಿಸಲು ಸಾಧ್ಯವಾಗದ ಅಧಿಕಾರಿಗಳೂ ಇದ್ದಾರೆ. ‘ಕಚೇರಿ ಕಟ್ಟಡಗಳ ಬಾಡಿಗೆ ನೆಪದಲ್ಲಿ ಅಧಿಕಾರಿಗಳು ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಖಾಲಿ ನಿವೇಶನ ಇದ್ದರೂ ಕೆಲವು ಇಲಾಖೆಯವರು ಬಾಡಿಗೆ ಕಟ್ಟಡಗಳಲ್ಲೇ ಕಾರ್ಯಾಚರಿಸುತ್ತಿದ್ದಾರೆ. ಬಾಡಿಗೆ ದಾರರ ಜೊತೆ ಅಧಿಕಾರಿಗಳೂ ಶಾಮೀಲಾಗಿ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ದಶರಥ್‌ ಆರೋಪಿಸಿದರು.

ಸ್ವಂತ ಕಟ್ಟಡಕ್ಕೆ ಕ್ರಮ: ಶಾಸಕ ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ಎ.ಆರ್‌.ಕೃಷ್ಣಮೂರ್ತಿ ‘ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಇರುವುದು ಸರಿಯಲ್ಲ. ಸಂಬಂಧಿಸಿ ಸಚಿವರ ಜೊತೆ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ವಿಶೇಷವಾಗಿ ಮುಖ್ಯಮಂತ್ರಿಗಳ ಗಮನ ಸೆಳೆದು ಕೊಳ್ಳೇಗಾಲಕ್ಕೆ ಹೆಚ್ಚಿನ ಅನುದಾನ ತಂದು ಶೀಘ್ರವೇ ಕಚೇರಿಗಳಿಗೆ ಸ್ವಂತ ಸೂರನ್ನು ಕಲ್ಪಿಸಿ ಕೊಡಲಾಗುವುದು’ ಎಂದರು.  ‘20 ವರ್ಷಗಳ ಹಿಂದೆ ಇಲ್ಲಿ ಮಿನಿವಿಧಾನಸೌಧ ನಿರ್ಮಾಣವಾಗಿದೆ. ಎಲ್ಲ ಕಚೇರಿಗಳಿಗೆ ಬೇಕಾಗುವಷ್ಟು ಜಾಗ ಇಲ್ಲ. ತಾಲ್ಲೂಕು ಕಚೇರಿ ಆವರಣದಲ್ಲಿಎರಡು ಮೂರು ಇಲಾಖೆಗಳನ್ನು ಸ್ಥಳಾಂತರಿಸುವಷ್ಟು ಜಾಗ ಇದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಸ್ಥಳ ಗುರುತಿಸಿ ಎಲ್ಲ ಇಲಾಖೆಗಳ ಕಚೇರಿಗಳು ಒಂದೇ ಕಡೆ ತರಲು ಕ್ರಮವಹಿಸಲಾಗುವುದು’ ಎಂದು ತಹಶೀಲ್ದಾರ್‌ ಮಂಜುಳ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT