ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಕುಗ್ರಾಮಗಳಿಗೆ ಗಾಂಜಾ, ಮದ್ಯವೇ ಶಾಪ

ಮಹದೇಶ್ವರ ಬೆಟ್ಟ: ಧಾರ್ಮಿಕ ಕೇಂದ್ರ, ಸುತ್ತಮುತ್ತಲಿನ ಜಾಗದಲ್ಲಿ ಗಾಂಜಾ, ಮದ್ಯ ಮಾರಾಟ
Published 23 ಮೇ 2024, 5:32 IST
Last Updated 23 ಮೇ 2024, 5:32 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಬೆಟ್ಟ ವ್ಯಾಪ್ತಿಯ ಇಂಡಿಗನತ್ತ, ಮೆಂದರೆ, ತುಳಸಿಕೆರೆ, ಮೆದಗನಾಣೆ ಸೇರಿದಂತೆ ಇನ್ನಿತರ ಕುಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆಯೇ ಹೆಚ್ಚು ಚರ್ಚೆಯಾಗುತ್ತದೆ. ಆದರೆ, ಗಾಂಜಾ, ಮದ್ಯ ಮಾರಾಟ ಮತ್ತು ಸೇವನೆಯೂ ಈ ಗ್ರಾಮಗಳಿಗೆ ಶಾಪವಾಗಿದೆ. 

ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿ ಹಸಿ ಗಾಂಜಾ ಬೆಳೆದ ಪ್ರಕರಣ, ಒಣ ಗಾಂಜಾ ಮಾರಾಟ ಯತ್ನ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಪೊಲೀಸರು ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಗಾಂಜಾ ಬೆಳೆದವರು, ಮಾರಾಟ ಮಾಡಿದವರನ್ನು ಬಂಧಿಸುತ್ತಿರುತ್ತಾರೆ. ಹಸಿ ಗಾಂಜಾ ಬೆಳೆದ ಪ್ರಕರಣಗಳಲ್ಲಿ ಸುತ್ತಮುತ್ತಲಿನ ಗ್ರಾಮದವರೇ ಸಿಕ್ಕಿ ಬೀಳುತ್ತಾರೆ. 

‘ಈ ಭಾಗದಲ್ಲಿರುವ ಕಡಿದಾದ ದಾರಿ, ದಟ್ಟವಾದ ಕಾಡು ಗಾಂಜಾ ಬೆಳೆಯುವವರಿಗೆ ಹೇಳಿ ಮಾಡಿಸಿದಂತಿದೆ. ಸ್ಥಳೀಯರು ಮಾತ್ರವಲ್ಲದೇ, ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ಗಾಂಜಾ ಬೆಳೆಯುವವರು ಬೆಟ್ಟ ವ್ಯಾಪ್ತಿಯ ಕುಗ್ರಾಮಗಳ ವ್ಯಾಪ್ತಿಯಲ್ಲಿ ಕಾಡಿನೊಳಗಡೆ ಗಾಂಜಾ ಬೀಜ ಎಸೆದು ಹೋಗುತ್ತಾರೆ. ಬೆಳೆದ ನಂತರ ಸ್ಥಳೀಯರೇ ಅದನ್ನು ಪೆಡ್ಲರ್‌ಗಳಿಗೆ, ಮಾರಾಟಗಾರರಿಗೆ ಪೂರೈಸುತ್ತಾರೆ’ ಎಂದು ಹೇಳುತ್ತಾರೆ ಪೊಲೀಸ್‌ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು. 

ಕಳೆದ ವರ್ಷ (2023) ಮಹದೇಶ್ವರ ಬೆಟ್ಟದ ಠಾಣೆಯಲ್ಲಿ ಗಾಂಜಾಗೆ ಸಂಬಂಧಿಸಿದ ಏಳು ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಐದು ಪ್ರಕರಣಗಳು ಸ್ಥಳೀಯರಿಗೆ ಸಂಬಂಧಿಸಿದ್ದಾಗಿತ್ತು. ಇವು ಗಾಂಜಾ ಬೆಳೆದಿರುವ ಪ್ರಕರಣಗಳು. ಇನ್ನೆರಡು ಪ್ರಕರಣಗಳು ಬೆಟ್ಟದಲ್ಲಿ ಒಣಗಾಂಜಾ ಮಾರಾಟ ಮಾಡಿರುವುದಕ್ಕೆ ಸಂಬಂಧಿಸಿದ್ದು. ಹೊರಗಿನಿಂದ ಬಂದವರು 295 ಗ್ರಾಂ ಒಣಗಾಂಜಾವನ್ನು ಮಾರಾಟ ಮಾಡಲು ಯತ್ನಿಸಿದ್ದರು. 

ಈ ವರ್ಷದ ಜನವರಿಯಿಂದ ಈವರೆಗೆ ಬೆಟ್ಟದಲ್ಲಿ ಪೊಲೀಸರು ಒಂದು ಪ್ರಕರಣವನ್ನು ಪತ್ತೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್‌ನ ಯುವಕನೊಬ್ಬ ಏಪ್ರಿಲ್‌ 20ರಂದು ಬೆಟ್ಟದಲ್ಲಿ 450 ಗ್ರಾಂ ಒಣ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ. 

ಅಬಕಾರಿ ಇಲಾಖೆಯ ಅಧಿಕಾರಿಗಳು ಕೊಳ್ಳೇಗಾಲ ಉಪವಿಭಾಗದ ವ್ಯಾಪ್ತಿಯಲ್ಲಿ ಈ ವರ್ಷದ ನಾಲ್ಕೂವರೆ ತಿಂಗಳಲ್ಲಿ ಆರು ಗಾಂಕಾ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಪೈಕಿ ಮಹದೇಶ್ವರ ಬೆಟ್ಟದಲ್ಲಿ ಒಂದು ಪ್ರಕರಣ ವರದಿಯಾಗಿದೆ. ಉಳಿದವು, ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕಿಗೆ ಸೇರಿದ್ದಾಗಿವೆ.

ಭಕ್ತರು, ಸ್ಥಳೀಯರಿಗೆ ಮಾರಾಟ: ಧಾರ್ಮಿಕ ಕೇಂದ್ರವಾದ ಮಹದೇಶ್ವರಬೆಟ್ಟಕ್ಕೆ ಗಾಂಜಾ ಸೇವನೆಗಾಗಿ ಬರುವವರೂ ಇದ್ದಾರೆ. ಬೆಂಗಳೂರು, ಆನೆಕಲ್, ಇತರ ಕಡೆಗಳಿಂದ ಬರುವ ಕೆಲವರು ದೇವರ ದರ್ಶನದ ಬದಲು ಈ ಭಾಗದಲ್ಲಿ ಗಾಂಜಾ ಸಿಗುತ್ತದೆ ಎಂಬ ಕಾರಣಕ್ಕೆ ಬರುತ್ತಾರೆ. ಮಾದಕ ವಸ್ತು ಎಲ್ಲಿ ಸಿಗುತ್ತದೆ, ಮಾರಾಟಗಾರರು ಯಾರು ಎಂಬುದು ಅವರಿಗೆ ಗೊತ್ತಿರುತ್ತದೆ. 2 ಗ್ರಾಂ ಒಣ ಗಾಂಜಾಕ್ಕೆ ₹250ವರೆಗೂ ನೀಡುತ್ತಾರೆ ಎಂದು ಹೇಳುತ್ತವೆ ಮೂಲಗಳು. 

‘ಪೊಲೀಸರ ಕಣ್ತಪ್ಪಿಸಲು ಸ್ಥಳೀಯರೇ ಕೆಲವರು ಪೆಡ್ಲರ್‌ಗಳಿಗೆ, ಮಾರಾಟಗಾರರಿಗೆ ಸಹಾಯ ಮಾಡುತ್ತಾರೆ. ಸ್ಥಳೀಯರು ದುಡ್ಡಿನ ಆಸೆಗೆ ಇದನ್ನೆಲ್ಲ ಮಾಡುತ್ತಾರೆ. ದೇವಾಲಯದ ಆಸು ಪಾಸು, ನಾಗಮಲೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಮಾರಾಟ ಮಾಡಲಾಗುತ್ತದೆ’ ಎಂಬುದು ಬೆಟ್ಟದ ವಾಸಿಗಳು ನೀಡುವ ಮಾಹಿತಿ. 

ಗಾಂಜಾಕ್ಕಿಲ್ಲ ಗ್ರಾಹಕರು: ಯುವಜನರಲ್ಲಿ ಹಲವರು ಗಾಂಜಾದ ನಶೆ ಏರಿಸಿಕೊಂಡು ನಾಗಮಲೆ ಬೆಟ್ಟಕ್ಕೆ ಹೋಗುತ್ತಿದ್ದರು. ಚಾರಣ ತಾತ್ಕಾಲಿಕವಾಗಿ ನಿರ್ಬಂಧಿಸಿದ ನಂತರ, ಇಂಡಿನಗತ್ತದವರೆಗೆ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಫೆ.17ರ ನಂತರ ನಾಗಮಲೆಗೆ ಪ‍್ರವಾಸಿಗರು ಭೇಟಿ ನೀಡುತ್ತಿಲ್ಲ. ಹೀಗಾಗಿ, ಗಾಂಜಾಗೆ ಗ್ರಾಹಕರು ಇಲ್ಲದಂತೆ ಆಗಿದೆ. ಹಾಗಾಗಿ, ಪ್ರಕರಣಗಳು ವರದಿಯಾಗುತ್ತಿಲ್ಲ ಎಂದು ಹೇಳುತ್ತಾರೆ ಪೊಲೀಸ್‌ ಅಧಿಕಾರಿಗಳು.  

ಬೆಟ್ಟದಲ್ಲೀಗ ಗಾಂಜಾ ಮಾರಾಟ ಕಡಿಮೆಯಾಗಿದೆ. ಗ್ರಾಮಗಳ ಆಸುಪಾಸಿನ ಕಾಡಿನಲ್ಲಿ ಗಾಂಜಾ ಬೆಳೆಯುವವರು ಇದ್ದಾರೆ. ಮಾದಕ ವಸ್ತು ಸಾಗಣೆ ಮಾರಾಟದ ಮೇಲೆ ನಿಗಾ ಇಟ್ಟಿದ್ದೇವೆ

-ಪದ್ಮಿನಿ ಸಾಹು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಮಹದೇಶ್ವರಬೆಟ್ಟದಲ್ಲಿ ನಾವು ಈ ವರ್ಷ ಒಂದು ಪ್ರಕರಣ ದಾಖಲಿಸಿದ್ದೇವೆ. ದಟ್ಟಕಾಡಿನಲ್ಲಿ ಗಾಂಜಾ ಬೆಳೆಯುವುದು ಪೆಡ್ಲರ್‌ಗಳಿಗೆ ಮಾರಾಟ ಮಾಡುವ ಬಗ್ಗೆ ನಮಗೆ ಮಾಹಿತಿ ಇದೆ

-ಆರ್‌.ನಾಗಶಯನ ಅಬಕಾರಿ ಉಪ ಆಯುಕ್ತ

ಮಹದೇಶ್ವರ ಬೆಟ್ಟ ಬಿಳಿಗಿರಿರಂಗನಬೆಟ್ಟ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾರಾಟ ಅವ್ಯಾಹತವಾಗಿ ನಡೆಯುತ್ತಿರುವ ಮಾಹಿತಿ ಇದ್ದು ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು

-ಕೆ.ವೆಂಕಟರಾಜು ಪಿಯುಸಿಎಲ್‌ ಕಾರ್ಯದರ್ಶಿ

ಸ್ಥಳೀಯರೂ ದುಶ್ಚಟಕ್ಕೆ ಬಲಿ

ಬೆಟ್ಟ ವ್ಯಾಪ್ತಿಯ ಯುವಜನರು ಕೂಡ ಗಾಂಜಾ ಸೇವನೆ ಮದ್ಯ ಸೇವನೆಯ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.   ಸೌಲಭ್ಯಗಳಿಲ್ಲ ಎಂಬ ಕೊರಗು ಒಂದೆಡೆಯಾದರೆ ಯುವಕರು ಬೇಡದ ಚಟಗಳಿಗೆ ದಾಸರಾಗುತ್ತಿದ್ದಾರೆ ಎಂಬುದು ಈ ಭಾಗದ ಗ್ರಾಮಗಳ ಹಿರಿಯರ ಮತ್ತೊಂದು ಕೊರಗು.  ‘ದುಡ್ಡಿನ ಆಸೆಗೆ ತಪ್ಪು ದಾರಿಯಲ್ಲಿ ಹೋಗುತ್ತಿದ್ದಾರೆ. ಕೆಟ್ಟ ಚಟಗಳನ್ನು ಅಂಟಿಸಿಕೊಳ್ಳುತ್ತಿದ್ದಾರೆ. ಶಿಕ್ಷಣವೂ ಇಲ್ಲ ಮುಂದಾಗುವ ಅನಾಹುತಗಳ ಅಂದಾಜು ಇಲ್ಲ. ಕಡಿವಾಣ ಹಾಕೋಣ ಎಂದರೆ ಹೇಳಿದ್ದನ್ನು ಕೇಳುವವರು ಯಾರೂ ಇಲ್ಲ’ ಎಂದು ನೊಂದುಕೊಳ್ಳುತ್ತಾರೆ ಮುಖಂಡರು.  ‘ಗ್ರಾಮಗಳಲ್ಲಿ ಸೌಲಭ್ಯ ಇಲ್ಲ ಎಂಬುದನ್ನು ಒಪ್ಪೋಣ. ಜಿಲ್ಲಾಡಳಿತ ಅದನ್ನು ನೀಡಲು ಪ್ರಯತ್ನ ಪಡುತ್ತಿದೆ. ಆದರೆ ದುಡ್ಡು ಸಿಗುತ್ತದೆ ಎಂದು ಅಕ್ರಮಗಳಲ್ಲಿ ತೊಡಗುವುದು ಎಷ್ಟು ಸರಿ. ಗಾಂಜಾ ಮಾರಾಟ ಮಾಡುವುದನ್ನು ಬೆಳೆಯುವುದನ್ನು ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ’ ಎಂದು ಪ್ರಶ್ನಿಸುತ್ತಾರೆ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು.  ‘ಇತ್ತೀಚೆಗೆ ಇಂಡಿಗನತ್ತ ಮೆಂದರೆ ಗ್ರಾಮಗಳಿಗೆ ಭೇಟಿ ನೀಡಿದ್ದೆವು. ಗಾಂಜಾ ಮತ್ತು ಕುಡಿತದ ಚಟ ಹಲವು ಕುಟುಂಬಗಳ ಬದುಕನ್ನು ನಾಶ ಮಾಡಿದೆ ಎಂಬುದನ್ನು ಕಂಡು ಕೊಂಡಿದ್ದೇವೆ’ ಎಂದು ಇಂಡಿಗನತ್ತ ಘರ್ಷಣೆಯ ಬಗ್ಗೆ ಸತ್ಯ ಶೋಧನಾ ವರದಿ ಸಿದ್ಧಪಡಿಸಿದ ತಂಡದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT