ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೈನ ಕಾಶಿಯಾಗಿದ್ದ ಯಳಂದೂರು ಪ್ರಾಂತ್ಯ

ಹತ್ತಾರು ಕಡೆ ಜೈನ ಶಿಲ್ಪ ಕಲ್ಪಗಳ ದರ್ಶನ: ಅಹಿಂಸಾ ತತ್ವ ಪಸರಿಸಿದ್ದ ಧರ್ಮ
ನಾ.ಮಂಜುನಾಥಸ್ವಾಮಿ
Published 21 ಏಪ್ರಿಲ್ 2024, 7:01 IST
Last Updated 21 ಏಪ್ರಿಲ್ 2024, 7:01 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಸಹಸ್ರಮಾನಗಳ ಹಿಂದೆ ಜೈನಧರ್ಮ ಉಚ್ಚ್ರಾಯ ಸ್ಥಿತಿ ತಲುಪಿತ್ತು. ಯಳಂದೂರು ಪಟ್ಟಣ ಕೇಂದ್ರವಾಗಿಸಿ ಜೈನ ಕಾಶಿ ರೂಪಿತವಾಗಿತ್ತು. ಈ ಸಮಯದಲ್ಲಿ ಹಿಂದೂ ಮತ್ತು ಜಿನ ಮತ, ಬಸದಿ, ದೇಗುಲ, ದೇವರ ಶಿಲ್ಪಗಳು ಅಂದಿನ ಕಾಲದ ಕಲಾ ಶೈಲಿಯನ್ನು ಸಾರುವ ಜೊತೆ ಧರ್ಮಗಳ ಸಮನ್ವಯತೆಗೆ ಸಾಕ್ಷಿಯಾಗಿತ್ತು. ಈಗಲೂ ಅಲ್ಲಲ್ಲಿ ನಿಂತಿರುವ ಜಿನ ಮೂರ್ತಿಗಳು ಮತ್ತು ಮಹಾವೀರನ ಶಿಲ್ಪಗಳು ವೈಭವದ ದಿನಗಳನ್ನು ಸ್ಮರಣೆಗೆ ತರುತ್ತಿವೆ.

ತಾಲ್ಲೂಕಿನಲ್ಲಿ ನೆಲೆಸಿದ್ದ ಕವಿಗಳು ಮತ್ತು ಚಿಂತಕರು ತಮ್ಮ ಬರಹಗಳಲ್ಲಿ ಜೈನ ಧರ್ಮದ ಅಹಿಂಸಾ ತತ್ವವನ್ನು ಕೇಂದ್ರವಾಗಿಸಿ ಗದ್ಯ-ಪದ್ಯಗಳನ್ನು ರಚಿಸಿದ್ದಾರೆ. ಕಲಾವಿದರೂ ಮಹಾವೀರನ ಸುಂದರ ಚಿತ್ರಗಳನ್ನು ಕಪ್ಪು ಶಿಲೆಯಲ್ಲಿ ಅರಳಿಸಿದ್ದಾರೆ. ಷಡಕ್ಷರ ದೇವರ ಶಬರ ಶಂಕರ ವಿಲಾಸ ಮತ್ತಿತರ ರಚನೆಗಳಲ್ಲಿ ಜೈನ ಮೌಲ್ಯಗಳ ಮಹತ್ವವನ್ನು ಅನಾವರಣಗೊಳಿಸಿದ್ದಾರೆ. ಮದ್ದೂರು ಮತ್ತು ಅಗರ ಮೊದಲಾದ ಗ್ರಾಮಗಳಲ್ಲಿ ಈಗಲೂ ಹಲವು ಆಲಯಗಳ ಸುತ್ತ ಜಿನ ದೇವ ಬಿಸಿಲು ಮಳೆಗೆ ಜಗ್ಗದೆ ನಿಂತ್ತಿದ್ದರೆ, ಮತ್ತೆ ಕೆಲವೆಡೆ ಧರಾಶಾಹಿಯಾಗಿ ಮಲಗಿದ್ದಾನೆ!

ಪಟ್ಟಣದ ಭೂ ವರಹಾಲಕ್ಷ್ಮಿ ದೇವಾಲಯದಲ್ಲಿ ಹಲವಾರು ಜಿನ ಶಿಲ್ಪಗಳು ಭಗ್ನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಹಲವು ವಿರೂಪಗೊಂಡಿದೆ. ಉತ್ಖನನ ಸಂದರ್ಭ ಸಿಕ್ಕಿದ ಮೂರ್ತಿಯನ್ನು ಪ್ರಾಚ್ಯವಸ್ತು ಇಲಾಖೆ ಜಹಗೀರ್ದಾರ್ ಬಂಗಲೆಯಲ್ಲಿ ಸಂಗ್ರಹಿಸಿಟ್ಟಿದೆ. ಕೆಲವು ಸುಸ್ಥಿತಿಯಲ್ಲಿ ಇದ್ದರೆ, ಇನ್ನೂ ಕೆಲವು ಶಿಲ್ಪಗಳ ಮುಖ ಮತ್ತು ದೇಹ ಊನಗೊಂಡಿದೆ. ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ ಸಂದೇಶಗಳನ್ನು ಬಿತ್ತಿದ ಮಹಾವೀರನ ಅನುಯಾಯಿಗಳು ಯಳಂದೂರು ಪ್ರಾಂತ್ಯವನ್ನು ಜೈನ ಧರ್ಮದ ನೆಲೆಯಾಗಿಸಿದ್ದರು.

‘ಪಟ್ಟಣದ ಸುವರ್ಣಾವತಿ ನದಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅಳಿದು ಉಳಿದ ಜೈನ ಶಿಲ್ಪಗಳನ್ನು ಸಂಗ್ರಹಿಸಿ, ಪ್ರವಾಸಿ ತಾಣ ಮಾಡಬೇಕು’ ಎಂದು ನಿವೃತ ಶಿಕ್ಷಕ ಮತ್ತು ಚಿಂತಕ ನಾಗೇಂದ್ರ ಒತ್ತಾಯಿಸಿದರು.

‘15ನೇ ಶತಮಾನದಲ್ಲಿ ವೀರಶೈವ ಮತ್ತು ಜೈನಧರ್ಮದ ದಟ್ಟ ಪ್ರಭಾವ ಈ ಭಾಗದಲ್ಲಿ ಇತ್ತು. ಮೈಸೂರು ಒಡೆಯರ ಕಾಲದಲ್ಲಿ ಆಗಾಗ ಧರ್ಮ ಯುದ್ಧಗಳು ನಡೆದವು. ಕೆಲವು ದೇವಾಲಯಗಳಲ್ಲಿ ಈಗಲೂ ಜಿನಮೂರ್ತಿ ಮತ್ತು ಹಿಂದೂ ದೇವರು ಒಂದೇ ಶೈಲಿಯಲ್ಲಿ ಇರುವುದನ್ನು ಕಾಣಬಹುದು’ ಎಂದು ಹೇಳುತ್ತಾರೆ ಇತಿಹಾಸಕಾರರು.  

ಇಂದು ಮಹಾವೀರ ಜಯಂತಿ ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರರ ಜಯಂತಿಯನ್ನು ಚೈತ್ರ ಶುದ್ಧ ತ್ರಯೋದಶಿಯಂದು ಎಲ್ಲೆಡೆ ಆಚರಿಸಲಾಗುತ್ತದೆ. ಜಿಲ್ಲೆಯಾದ್ಯಂತ ಜೈನರು ಭಾನುವಾರ (ಏ.21) ಜಯಂತಿ ಆಚರಿಸಲಿದ್ದಾರೆ. ಬಸದಿ ಮನೆಗಳಲ್ಲಿ ಮಹಾವೀರರ ಪ್ರತಿಮೆಗೆ ಅಭಿಷೇಕ ಪೂಜೆ ನೆರವೇರಿಸಲಿದ್ದಾರೆ.  ಈ ದಿನ ಗೃಹಪ್ರವೇಶ ಮತ್ತು ಮಂಗಳ ಕಾರ್ಯಗಳಿಗೆ ಒತ್ತು ನೀಡಲಾಗಿದೆ. ಕ್ರಿ.ಪೂ. 599ರಲ್ಲಿ ಜನಿಸಿದ ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ವೈರಾಗ್ಯ ತಾಳಿ ತಪ್ಪಸ್ಸು ಆಚರಿಸಿದ್ದರು. ಅಹಿಂಸೆಯ ಪರಮ ಧರ್ಮವನ್ನು ಉಪದೇಶಿಸಿದ್ದರು. ಬಿಹಾರದ ಪಾರ್ಶ್ವನಾಥ ಪರ್ವತದಲ್ಲಿ ಮಹಾವೀರ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ರಾಜಸ್ಥಾನದ  ಜೈಪುರದಲ್ಲಿ 5 ದಿನಗಳ ಲೇಖಿಮೇಳ ಜರುಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT