ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಣ್ಣ ಈರುಳ್ಳಿಗಿಲ್ಲ ಬೆಲೆ: ನಷ್ಟದ ಸುಳಿಯಲ್ಲಿ ರೈತ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಇನ್ನೂ ಮುಗಿಯದ ಕಟಾವು, ಜಮೀನಿನಲ್ಲಿ ಹಾಗೆ ಇದೆ ಈರುಳ್ಳಿ ಬೆಳೆ
ಮಲ್ಲೇಶ ಎಂ.
Published 17 ಮಾರ್ಚ್ 2024, 5:59 IST
Last Updated 17 ಮಾರ್ಚ್ 2024, 5:59 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಸಾಂಬಾರ್ ಈರುಳ್ಳಿ (ಸಣ್ಣ) ಬೆಲೆ ಕುಸಿದಿದ್ದು, ವ್ಯಾಪಾರಿಗಳು ಕೆಜಿ ಈರುಳ್ಳಿಗೆ ₹10ರಿಂದ ₹14ರವರೆಗೆ ಹೇಳುತ್ತಿದ್ದಾರೆ. ಇದರಿಂದಾಗಿ ರೈತರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. 

ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆಯುವ ಸೀಸನ್ ಮುಗಿದಿದ್ದರೂ ಇನ್ನೂ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಈರುಳ್ಳಿ ಬೆಳೆ ಇದೆ. ಬೆಲೆ ಕಡಿಮೆ ಇರುವುದರಿಂದ ಕೆಲವು ರೈತರು ಕಟಾವು ಮಾಡುವುದಕ್ಕೆ ಮುಂದಾಗಿಲ್ಲ. ಕೆಲವು ರೈತರು ಭೂಮಿಯಲ್ಲಿ ಬೆಳೆ ಬಿಡಬಾರದು ಎಂಬ ಕಾರಣಕ್ಕೆ ಕೊಯ್ಲು ಮಾಡುತ್ತಿದ್ದಾರೆ.

ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರಿಳಿತವಾಗುತ್ತಿದೆ. ಹಾಕಿದ ಬಂಡವಾಳ ಅಥವಾ ಲಾಭ ತರುವಂತಹ ಬೆಲೆಯನ್ನು ರೈತರು ಈ ವರ್ಷ ನೋಡಿದ್ದು ಕಡಿಮೆ.

ತಾಲ್ಲೂಕಿನಲ್ಲಿ ಬೇಸಿಗೆ ಅವಧಿಯಲ್ಲಿ ಈರುಳ್ಳಿ ಬೆಳೆಯಲು ಅನೇಕ ರೈತರು ಮುಂದಾಗುತ್ತಾರೆ. ಬೇಸಿಗೆಯಲ್ಲಿ ಇಳುವರಿಯೂ ಹೆಚ್ಚು. ಈ ವರ್ಷ ತಾಲ್ಲೂಕಿನಾದ್ಯಂತ 1700 ಹೆಕ್ಟೇರ್‌ಗಳಷ್ಟು ಪ್ರದೇಶದಲ್ಲಿ ರೈತರು ಈರುಳ್ಳಿ ಬಿತ್ತನೆ ಮಾಡಿದ್ದರು. ಮಾರ್ಚ್ ತಿಂಗಳ ಅಂತ್ಯಕ್ಕೆ ಈರುಳ್ಳಿ ಕಟಾವು ಮುಗಿದು ಮುಂದಿನ ತಿಂಗಳು ಮತ್ತೆ ಈರುಳ್ಳಿ ನಾಟಿ ಶುರುವಾಗುತ್ತದೆ. ಈ ವರ್ಷ ಇನ್ನೂ ಜಮೀನುಗಳಲ್ಲಿ ಈರುಳ್ಳಿ ಇದೆ. ಆದರೆ ಬೆಲೆ ಇಲ್ಲ. 

ಈ ಬಾರಿ ರೈತರು ಬಿತ್ತನೆ ಈರುಳ್ಳಿಗೆ ಕ್ವಿಂಟಲ್‌ಗೆ ₹5000ದಿಂದ ₹8000ವರೆಗೂ ನೀಡಿದ್ದರು. ನಾಟಿ ಮಾಡಿದ ಬಳಿಕ, ಕೆಲವು ರೈತರ ಜಮೀನುಗಳಲ್ಲಿ ರೋಗದಿಂದ ಬೆಳೆ ಹಾಳಾದರೆ, ಕೆಲವರಿಗೆ ಇಳುವರಿ ಬಿದ್ದಿಲ್ಲ. ಇದೀಗ ಕಟಾವಿನ ಸಂದರ್ಭದಲ್ಲಿ ಕೆಜಿಗೆ ₹8ರಿಂದ ₹14ರವರೆಗೆ ಮಾರಾಟ ಮಾಡುತ್ತಿದ್ದಾರೆ.

ಈ ಬಾರಿಯ ಹಂಗಾಮಿನಲ್ಲಿ ಒಮ್ಮೆಯೂ ಸಣ್ಣ ಈರುಳ್ಳಿ ಧಾರಣೆ ಕೆಜಿಗೆ ₹20 ದಾಟಿಲ್ಲ ಎಂದು ಹೇಳುತ್ತಾರೆ ರೈತರು. 

‘₹8000ಕ್ಕೆ ಬಿತ್ತನೆ ಬೀಜ ಖರೀದಿ ಮಾಡಿ ಬೆಳೆದರೆ, ಇದೀಗ ಕೆಜಿಗೆ ₹10ರಿಂದ ₹12 ಕೇಳುತ್ತಿದ್ದಾರೆ. ಈರುಳ್ಳಿ ಕಟಾವು ಮಾಡಿ ಸ್ವಚ್ಛಗೊಳಿಸುವುದಕ್ಕೆ ಕೆಜಿಗೆ ₹6 ಖರ್ಚಾಗುತ್ತದೆ. ₹10, ₹12ಕ್ಕೆ ಮಾರಿದರೆ ಅಸಲು ಕೂಡ ಸಿಗುವುದಿಲ್ಲ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರೈತರು.

ಬೆಲೆ ಬಿದ್ದಿರುವುದು ಏಕೆ?

‘ಇಲ್ಲಿನ ಈರುಳ್ಳಿಯನ್ನು ತಮಿಳುನಾಡಿನ ಮಧುರೆ ಹಾಗೂ ಕೇರಳಕ್ಕೆ ಕಳಿಸಲಾಗುತ್ತದೆ. ಆದರೆ ತಮಿಳುನಾಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿರುವುದರಿಂದ ಇಲ್ಲಿನ ಈರುಳ್ಳಿ ಕೇಳುವವರಿಲ್ಲ. ಹೀಗಾಗಿ ಬೆಲೆ ಕಡಿಮೆಯಾಗಿದೆ’ ಎಂದು ಹೇಳುತ್ತಾರೆ ವ್ಯಾಪಾರಿಗಳು. ‘ಈರುಳ್ಳಿ ರಫ್ತಿನ ಮೇಲಿನ ನಿಷೇಧದಿಂದಾಗಿ ಮಾತ್ರವಲ್ಲ ಈರುಳ್ಳಿಯ ಗುಣಮಟ್ಟದ ಮೇಲೆ ಮಳೆಯೂ ಪರಿಣಾಮ ಬೀರುತ್ತಿದೆ. ಕಟಾವು ಮಾಡಿದ ನಂತರ ಈರುಳ್ಳಿಯನ್ನು ಹೆಚ್ಚು ದಿನ ಸಂಗ್ರಹಿಸಲು ಸಾಧ್ಯವಾಗದೆ ರೈತರು ಮಾರುಕಟ್ಟೆಗೆ ತರುತ್ತಿದ್ದಾರೆ. ಇದರಿಂದಾಗಿಯೂ ಬೆಲೆ ಕಡಿಮೆಯಾಗಿದೆ’ ಎಂದು ಹೇಳುತ್ತಾರೆ ಅವರು. ‘ಜಿಲ್ಲೆಯ ಚಾಮರಾಜನಗರ ಗುಂಡ್ಲುಪೇಟೆ ಹಾಗೂ ಹನೂರು ಭಾಗಗಳಲ್ಲಿ ಸಣ್ಣ ಈರುಳ್ಳಿಯನ್ನು ಹೆಚ್ಚು ಬೆಳೆಯುತ್ತಾರೆ. ತಮಿಳುನಾಡಿನಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇದ್ದು ಅಲ್ಲಿಂದ ಶ್ರೀಲಂಕಾಕ್ಕೂ ರಫ್ತಾಗುತ್ತದೆ. ಆದರೆ ಈಚೆಗೆ ರಫ್ತು ನಿಷೇಧ ಮಾಡಿರುವುದರಿಂದ ಬೆಲೆ ಕಡಿಮೆಯಾಗಿದೆ’ ಎಂದು ತೋಟಗಾರಿಕೆ ಸಹಾಯಕ ನಿರ್ದೇಶಕ ಭಾಸ್ಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT