ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಡಿ ಜಿಲ್ಲೆಯ ಸಾಕ್ಷಿ ಪ್ರಜ್ಞೆಯಾಗಿದ್ದ ಹುಚ್ಚೇಗೌಡ

Published 26 ಜನವರಿ 2024, 6:32 IST
Last Updated 26 ಜನವರಿ 2024, 6:32 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು –ಚಾಮರಾಜನಗರ ಜಿಲ್ಲೆಯ ಇತಿಹಾಸ, ವರ್ತಮಾನಗಳ ಮಾಹಿತಿ ಕೋಶವಾಗಿದ್ದ ಸಿ.ಪಿ.ಹುಚ್ಚೇಗೌಡ ಅವರು ಸರಳ ಜೀವಿಯಾಗಿದ್ದರು. 

60–70ರ ದಶಕದಲ್ಲೇ ಉದ್ಯಮಿಯಾಗಿದ್ದ ಅವರು ಮಹಾತ್ಮ ಗಾಂಧೀಜಿ, ಸ್ವಾಮಿ ಅಭೇದಾನಂದ ಅವರಿಂದ ಪ್ರಭಾವಿತರಾಗಿದ್ದರು. ಮಹಾತ್ಮನಂತಯೇ ಸರಳವಾಗಿ ಬದುಕಿದರು. 

90ರ ಇಳಿವಯಸ್ಸಿನಲ್ಲಿ ಯುವ ಜನರೂ ನಾಚುವಂತೆ ಉತ್ಸಾಹದಿಂದ ಪುಟಿಯುತ್ತಿದ್ದರು. ಪ್ರತಿ ದಿನ ನಾಲ್ಕೈದು ಕಿ.ಮೀ ನಡೆಯುತ್ತಿದ್ದರು. ಸದಾ ಬಿಳಿ ಪಂಚೆ, ಬಿಳಿ ಅಂಗಿ, ಅದರ ಮೇಲೊಂದು ಸ್ವೆಟರ್‌, ತಲೆಗೊಂದು ಟೊಪ್ಪಿ ಇಷ್ಟೇ ಅವರ ಧಿರಿಸು. 

ಸಮಾಜ ಸೇವಕ: ಅವಿವಾಹಿತರಾಗಿದ್ದ ಅವರು, ಜಿಲ್ಲೆಯಲ್ಲಿ ನಡೆಯುವ ಸಾಮಾಜಿಕ, ಸಾಹಿತ್ಯ, ಧಾರ್ಮಿಕ, ರಂಗಭೂಮಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದರು. ಬಿಳಿಗಿರಿರಂಗನಬೆಟ್ಟದಲ್ಲಿದ್ದ ಗಾಂಧಿಭವನದ ಆದಿವಾಸಿ ಕೇಂದ್ರದ ಸಲಹಾ ಸಮಿತಿಯ ಸದಸ್ಯರಾಗಿದ್ದರು. 

ಸಮಾಜ ಸೇವಕರಾಗಿ ಅವರು ಗುರುತಿಸಿಕೊಂಡಿದ್ದ ಅವರು, ಕಷ್ಟದಲ್ಲಿದ್ದವರಿಗೆ ತಮ್ಮ ಕೈಲಾದಷ್ಟು ನೆರವಾಗುತ್ತಿದ್ದರು. 

ಪ್ರೊ.ಜಿ.ಎಸ್‌.ಜಯದೇವ ಅವರು ಅನಾಥ ಮತ್ತು ಬಡ ಮಕ್ಕಳಿಗಾಗಿ ಆಶ್ರಮ ತೆರೆಯಲು ಮುಂದಾದಾಗ, ಈ ಯತ್ನಕ್ಕೆ ಬೆಂಬಲವಾಗಿ ನಿಂತವರು ಹುಚ್ಚೇಗೌಡರು. ತಮ್ಮ ಕಟ್ಟಡವನ್ನೇ ಅವರಿಗೆ ನೀಡಿ, ಸಂಸ್ಥೆಗೆ ‘ದೀನಬಂಧು’ ಎಂದು ಹೆಸರನ್ನೂ ಇಟ್ಟಿದ್ದರು.  ಡಾ.ಸುದರ್ಶನ್‌ ಅವರು ಬಿಳಿಗಿರಿರಂಗನಬೆಟ್ಟದ ಸೋಲಿಗರಿಗೆ ಹಾಗೂ ಜನಸಾಮಾನ್ಯರಿಗೆ ನೆರವಾಗಲು ಉದ್ದೇಶಿಸಿದಾಗ, ಅವರಿಗೂ ಬೆಂಬಲವಾಗಿ ನಿಂತಿದ್ದರು. 

ಬಿಳಿಗಿರಿರಂಗನಬೆಟ್ಟಕ್ಕೆ ಸ್ವಾಮಿ ನಿರ್ಮಲಾನಂದ ಅವರನ್ನು ಕರೆದುಕೊಂಡು ಬಂದು ಶಾಂತಿ ನಿಕೇತನ ಆಶ್ರಮ ಸ್ಥಾಪನೆಗೆ ಕಾರಣರಾಗಿದ್ದರು.  

ಒಂದು ಕೋಣೆಯ ಕಟ್ಟಡದಲ್ಲಿ ವಾಸವಿದ್ದ ಅವರು, ದೊಡ್ಡ ಸಭಾಂಗಣ ನಿರ್ಮಿಸಿ ಅದಕ್ಕೆ ಆಭೇದಾನಂದ ಹಾಲ್‌ ಎಂದು ಹೆಸರಿಟ್ಟಿದ್ದರು. ವಿವಿಧ ಸಾಮಾಜಿಕ ಕಾರ್ಯಕ್ರಮಗಳಿಗೆ ಉಚಿತವಾಗಿ ಸಭಾಂಗಣವನ್ನು ನೀಡುತ್ತಿದ್ದರು.  

ಯುವ ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಅಭಿಮಾನಿಗಳೆಲ್ಲ‌ ಸೇರಿ ‘ನಿಮಗೆ ನಮಸ್ಕಾರ’ ಎಂಬ ಅಭಿನಂದನಾ ಗ್ರಂಥವನ್ನು 2009ರಲ್ಲಿ ಪ್ರಕಟಿಸಿದ್ದರು.  

ಗುತ್ತಿಗೆದಾರರಾಗಿದ್ದಾಗ ನಗರದ ಕರಿವರದರಾಜನಗನ ಬೆಟ್ಟಕ್ಕೆ ರಸ್ತೆ ನಿರ್ಮಿಸಿದ್ದರು. ಚಾಮರಾಜನಗರದಿಂದ ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವ ಟಾರು ರಸ್ತೆ ನಿರ್ಮಿಸಿದವರೂ ಹುಚ್ಚೇಗೌಡರೇ.  ನಗರದಲ್ಲಿ ಹಲವು ವರ್ಷಗಳ ಕಾಲ ಸೌದೆ ಡಿಪೊ ನಡೆಸಿದ್ದರು. ಹಲವು ಉದ್ಯಮಿಗಳಿಗೆ ಮಾರ್ಗದರ್ಶಕರೂ ಆಗಿದ್ದರು. 

ಅಂತಿಮ ದರ್ಶನ: ಬುಧವಾರ ಸಂಜೆ ಅಸ್ವಸ್ಥರಾಗಿದ್ದ ಅವರನ್ನು ನಗರದ ಹೊರವಲಯದ ಮರಿಯಾಲದಲ್ಲಿರುವ ಬಸವರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಬೆಳಿಗ್ಗೆ 9.30ರವರೆಗೆ ಚೆನ್ನಾಗಿಯೇ ಇದ್ದ ಅವರು 10 ಗಂಟೆಗೆ ಅಸ್ವಸ್ಥಗೊಂಡು ಕೊನೆಯುಸಿರು ಎಳೆದರು. 

ಶಾಸಕ ಸಿ.ಪುಟ್ಟರಂಗಶೆಟ್ಟಿ, ಬಿಳಿಗಿರಿರಂಗನಬೆಟ್ಟದ ಶಾಂತಿ ನಿಕೇತನ ಆಶ್ರಮದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರೊ.ಜಿ.ಎಸ್‌.ಜಯದೇವ ಸೇರಿದಂತೆ ಹಲವು ಗಣ್ಯರು ಹುಚ್ಚೇಗೌಡರ ಅಂತಿಮ ದರ್ಶನ ಪಡೆದರು. 

ರೈಲು ಮಾರ್ಗ ಬೆಂಬಲಿಸಿದ್ದರು

ಚಾಮರಾಜನಗರ–ಮೆಟ್ಟುಪಾಳ್ಯಂ ರೈಲು ಯೋಜನೆ ಕಾರ್ಯಗತವಾಗಬೇಕು ಎಂದು ಬಯಸಿದ್ದರು. 1974ರಲ್ಲಿ ಪ್ರೊ.ಚಿಂತಾಮಣಿ ಅವರೊಂದಿಗೆ ಮೆಟ್ಟುಪಾಳ್ಯಂವರೆಗೂ ಹೋಗಿ ರೈಲು ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದ್ದರು.  ‘ಪ್ರಜಾವಾಣಿ’ಯ ಕಟ್ಟಾ ಅಭಿಮಾನಿಯಾಗಿದ್ದ ಹುಚ್ಚೇಗೌಡರಿಗೆ ಪತ್ರಿಕೆ ಮೇಲೆ ವಿಶೇಷ ಅಭಿಮಾನವಿತ್ತು.  ಅವರು ನಡೆಸಿದ್ದ ರೈಲ್ವೆ ಮಾರ್ಗ ಸಮೀಕ್ಷೆ ವರದಿ ‘ಪ್ರಜಾವಾಣಿ’ಯ ಮುಖಪುಟದಲ್ಲೇ ಪ್ರಕಟವಾಗಿತ್ತು. ಯಾವಾಗಲೂ ಇದನ್ನು ಸ್ಮರಿಸಿಕೊಳ್ಳುತ್ತಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT