ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಸಿದ ಕಾಳು ಮೆಣಸು ಇಳುವರಿ

ಬಿಳಿಗಿರಿಬೆಟ್ಟ: ಮಳೆ ಕೊರತೆ, ಹೆಚ್ಚಾದ ಉಷ್ಣತೆ, ಕೈಹಿಡಿಯದ ವಾಣಿಜ್ಯ ಬೆಳೆ
ನಾ.ಮಂಜುನಾಥಸ್ವಾಮಿ
Published 8 ಜನವರಿ 2024, 6:27 IST
Last Updated 8 ಜನವರಿ 2024, 6:27 IST
ಅಕ್ಷರ ಗಾತ್ರ

ಯಳಂದೂರು: ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾದ ಕಾರಣ ಮತ್ತು ಹೆಚ್ಚಿನ ತಾಪಮಾನ ಕಂಡು ಬಂದಿದ್ದರಿಂದ ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ವಾಣಿಜ್ಯ ಬೆಳೆಗಳಾದ ಮೆಣಸು, ಕಾಫಿ ಮತ್ತು ಏಲಕ್ಕಿ ಫಸಲು ಇಳಿಮುಖವಾಗಿದ್ದು, ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ.

ಕಾಳು ಮೆಣಸು ಮತ್ತು ಏಲಕ್ಕಿ ವೃದ್ಧಿಸಲು ಸಮೃದ್ಧ ಮಳೆ ಅತ್ಯಗತ್ಯ. ಈ ಸಮಯದಲ್ಲಿ ಕೃಷಿಕರು ಹಟ್ಟಿ ಗೊಬ್ಬರ ಮತ್ತು ಪೋಷಕಾಂಶ ನೀಡಿ ಕಾಳು ಕಟ್ಟಲು ಬೇಕಾದ ಪೋಷಕಾಂಶ ಒದಗಿಸುತ್ತಾರೆ. ಉತ್ತಮ ಬೆಳೆಗೆ ಹಿತಕರ ವಾತಾವರಣ ಇದ್ದರೆ ಸಾಕು. ಆದರೆ, ಈ ಬಾರಿ ಬೆಟ್ಟದಲ್ಲೂ ಮುಂಗಾರು ಕಾಣಿಸಿಲ್ಲ. ಸಸಿಗಳಿಗೆ ತೇವಾಂಶ ಕೊರತೆ ಬಾಧಿಸಿದ್ದು, ಮಳೆಋತು ಏರುಪೇರು ವರ್ಷಪೂರ್ತಿ ಕಾಡಿದೆ. ಕೊಯ್ಲಿನ ಸಮಯದಲ್ಲಿ ಬಳ್ಳಿಯಲ್ಲಿ ನಿರೀಕ್ಷಿಸಿದ ಎರೆಗಳು ಕಾಣಿಸದೆ, ಕಾಳಿನ ಸಮೃದ್ಧತೆ ಕಾಣದಾಗಿದೆ.

ಕರಿ ಮೆಣಸು ಬಹು ವಾರ್ಷಿಕ ಬೆಳೆ. ಪ್ರತಿವರ್ಷ ನಿರ್ವಹಣೆ ಮಾಡಬೇಕು. ಈ ಬಾರಿ ಬಳ್ಳಿಗಳು ಒಣಗಿ ಜೋತು ಬಿದ್ದಿವೆ. ಕಾಳು ಚಿಕ್ಕದಾಗಿದೆ. ಇದರಿಂದ ಮಾರುಕಟ್ಟೆಗೆ ಗುಣಮಟ್ಟದ ಮೆಣಸು ಪೂರೈಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು.

ಬೆಟ್ಟದಲ್ಲಿ ಬಹುತೇಕ ಕಾಫಿ ಕೃಷಿಕರು ಮೆಣಸು ಬೆಳೆಯುತ್ತಾರೆ. ಕಳೆದ ವರ್ಷ ಕಾಳು ಮೆಣಸು ಉತ್ತಮ ಫಸಲು ತಂದಿತ್ತು. ಬೆಟ್ಟದ ವಿವಿಧ ಪೋಡುಗಳ ನೂರಕ್ಕೂ ಹೆಚ್ಚಿನ ರೈತರು 25 ಟನ್ ಮೆಣಸು ಮಾರಾಟ ಮಾಡಿದ್ದರು. ಕೆಜಿಗೆ ₹500 ಧಾರಣೆ ತಂದಿತ್ತು.

‘ಈ ಬಾರಿಯೂ ಬೆಲೆ ಹೆಚ್ಚಿದೆ. ಆದರೆ, ಕಾಳು ಮೆಣಸು ಪೂರೈಕೆ ಇಲ್ಲ. ಕೊಯ್ಲಿಗೆ ಬಂದಿರುವ ಬಳ್ಳಿಗಳಲ್ಲಿ ಕಳೆದ ವರ್ಷಕ್ಕಿಂತ ಅರ್ಧ ಭಾಗದ ಇಳುವರಿಯೂ ಸಂಗ್ರಹವಾಗುವ ನಿರೀಕ್ಷೆ ಇಲ್ಲ. ಮಳೆ ಮತ್ತೆ ಕಾಣಿಸಿಕೊಂಡಿದ್ದು, ಬಳ್ಳಿಗಳು ಸೊರಗು ರೋಗಕ್ಕೆ ಸಿಲುಕುವ ಅಪಾಯವೂ ಎದುರಾಗಿದೆ’ ಎಂದು ಬಂಗ್ಲೇಪೋಡಿನ ರಂಗಮ್ಮ.

‘ಮೆಣಸು ಬಳ್ಳಿ ಚಿಗುರು ಕಟ್ಟುವ ವೇಳೆ ಮಂಜು ಮತ್ತು ಇಬ್ಬನಿ ಆವರಿಸಿತ್ತು. ನಂತರದ ದಿನಗಳಲ್ಲಿ ತುಂತುರು ಮಳೆಯೂ ಸುರಿಯಿತು. ಇದರಿಂದ ಬೆಳೆ ರೋಗಕ್ಕೆ ತುತ್ತಾಯಿತು. ಕೊಯ್ಲಿಗೆ ಬಂದಿರುವ ಎರೆಗಳಲ್ಲಿ ಅರಳಿದ ಕಾಳಿನ ಗಾತ್ರವೂ ಇಳಿದಿದ್ದು, ಕೃಷಿಕರನ್ನು ಕಂಗಾಲಾಗಿಸಿದೆ’ ಎಂದು ಜಿಲ್ಲಾ ಗಿರಿಜನ ಬುಡಕಟ್ಟು ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

ಮಳೆ ಕಡಿಮೆ, ಏರಿದ ಬಿಸಿಲು ಚಿಕ್ಕದಾದ ಕಾಳಿನ ಗಾತ್ರ ಬೆಲೆ ಇದ್ದರೂ, ಇಳುವರಿ ಇಲ್ಲ

ಏಲಕ್ಕಿ ಬೆಳೆ ನಿರ್ಲಕ್ಷ ಬೆಟ್ಟದ ನೈಸರ್ಗಿಕ ತಾಣಗಳಲ್ಲಿ ಎತ್ತರದ ಪ್ರದೇಶದಲ್ಲಿ ಏಲಕ್ಕಿ ಕೃಷಿಗೂ ರೈತರು ಆದ್ಯತೆ ನೀಡಿದ್ದರು. ಈ ವರ್ಷ ಏಲಕ್ಕಿ ಕೃಷಿ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದೆ. ಮಳೆಯ ಒಟ್ಟು ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸ ಹಾಗೂ 15 ಡಿಗ್ರಿಗಿಂತಲೂ ಹೆಚ್ಚಾದ ಉಷ್ಣಾಂಶ ಏಲಕ್ಕಿ ಬೆಳೆಗೆ ಮಾರಕವಾಗಿದೆ. ಹವಾಮಾನದಲ್ಲಿ ಉಂಟಾದ ವ್ಯತ್ಯಾಸದಿಂದ ಏಲಕ್ಕಿ ಬೇಸಾಯಗಾರರು ಗಿಡಗಳನ್ನು ನಿರ್ಲಕ್ಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT