ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಇಲ್ಲಿ ರಾಮ, ಸೀತಾ ಫಲ ಗಿಡಗಳಿಗೂ ಪೂಜೆ!

ರಾಮ, ಸೀತೆಗೆ ಇಷ್ಟವಾದ ಹಣ್ಣು ಎಂಬುದು ಭಕ್ತರ ನಂಬಿಕೆ
ನಾ.ಮಂಜುನಾಥಸ್ವಾಮಿ
Published 22 ಜನವರಿ 2024, 6:31 IST
Last Updated 22 ಜನವರಿ 2024, 6:31 IST
ಅಕ್ಷರ ಗಾತ್ರ

ಯಳಂದೂರು: ಆಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಮಯದಲ್ಲಿ ತಾಲ್ಲೂಕಿನ ಕಾರಪುರ ಮಠದ ತೋಟದಲ್ಲಿ ರಾಮಫಲ ಮತ್ತು ಸೀತಾಫಲ ಗಿಡಗಳಿಗೆ ಫಲ ಪೂಜೆ ಮಾಡಲು ಭಕ್ತರು ಸಿದ್ಧತೆ ನಡೆಸಿದ್ದಾರೆ.    

ರಾಮಫಲ ಮತ್ತು ಸೀತಾಫಲ ಸಸ್ಯಗಳು ದೇವಾಲಯದ ಸಮೀಪ ಇವೆ. ಜನವರಿ ಸಮಯದಲ್ಲಿ ಹಣ್ಣು ಬಿಟ್ಟು ತೂಗುತ್ತದೆ. ಫಲ ಪೂಜೆಯಲ್ಲಿ ಈ ಹಣ್ಣುಗಳಿಗೆ ವಿಶೇಷ ಮನ್ನಣೆ ಇರುವುದರಿಂದ, ಗಿಡದಲ್ಲಿ ಬೆಳೆದು ಮಾಗಿರುವ ಫಲ ಪುಷ್ಪಗಳಿಗೂ ಈಗ ದೈವಿಕತೆ ಪ್ರಾಪ್ತವಾಗಿದೆ.

‘ರಾಮ ಸೀತೆ ಮತ್ತು ಲಕ್ಷ್ಮಣರ ಜೊತೆ ಕಾಡು ಮೇಡು ಅಲೆಯುವಾಗ ಬಹುತೇಕ ಕಾನನದಲ್ಲಿ ನೈಸರ್ಗಿಕವಾಗಿ ಸಿಗುವ ಹಣ್ಣುಗಳನ್ನು ಸೇವಿಸುತ್ತಿದ್ದು. ಸರಯೂ ನದಿಗುಂಟ ನೂರಾರು ಜಾತಿಯ ಗಿಡ ಮರಗಳು ಫಲ ಬಿಟ್ಟು ನಳನಳಿಸುತ್ತಿದ್ದವು. ಅವುಗಳಲ್ಲಿ ತನಗೆ ಮೆಚ್ಚುಗೆಯಾದ ಹತ್ತಾರು ಕಾಯಿಗಳನ್ನು ಕೊಯ್ಯುತ್ತಿದ್ದ. ಅವುಗಳಲ್ಲಿ ಅತಿ ರುಚಿ ಮತ್ತು ಸುವಾಸಿತ ಹಣ್ಣನ್ನು ಇತರರಿಗೂ ಹಂಚುತ್ತಿದ್ದ. ಆ ಕಾರಣಕ್ಕೆ ಈ ಫಲಗಳಿಗೆ ರಾಮನ ಹೆಸರು, ಸೀತೆ ಬಯಸಿದ ಹಣ್ಣಿಗೆ ಸೀತೆಯ ಹೆಸರು ಸೇರಿತು’ ಎಂದು ಕಾರಪುರ ಮಠದ ಬಸವರಾಜ ಸ್ವಾಮೀಜಿ ಹೇಳಿದರು. 

ರಾಮ, ಸೀತಾ ಮತ್ತು ಲಕ್ಷ್ಮಣ ಫಲಗಳಲ್ಲೂ ಹತ್ತಾರು ವೈವಿಧ್ಯದ ತಳಿಗಳಿವೆ. ಕೆಲವು ಬೀಜದಿಂದ ಸಮೃದ್ಧವಾಗಿದ್ದರೆ, ಇನ್ನೂ ಕೆಲವು ಹಣ್ಣಿನ ತಿರುಳಿನಿಂದ ರುಚಿ ಮೊಗ್ಗು ಅರಳಿಸುತ್ತವೆ.

‘ಬೇಸಿಗೆ ಸಮಯದಲ್ಲಿ ಗಿಡಗಳಲ್ಲಿ ಹೂ ಮತ್ತು ಕಾಯಿ ಗೋಚರಿಸುತ್ತದೆ. ಮಾರ್ಚ್ ತನಕ ಹಣ್ಣನ್ನು ಸವಿಯಬಹುದು. ಈ ಹಣ್ಣುಗಳು ಕಪಿಗಳಿಗೂ ಬಹುಪ್ರಿಯ. ಆಂಜನೇಯನ ಅವತಾರ ಎಂದು ಬಿಂಬಿಸುವ ಮಂಗಗಳು ಲಂಕಾ ದಹನದ ಸಮಯದಲ್ಲಿ ರಾಮನಿಗೆ ಸಹಾಯ ಮಾಡಿದ ಸ್ಮರಣೆಗೆ ಮೊದಲ ಫಲವನ್ನು ಕೋತಿಗಳಿಗೂ ಅರ್ಪಿಸಲಾಗುತ್ತದೆ’ ಎಂದು ಹೇಳುತ್ತಾರೆ ಭಕ್ತರು.

‘ಈ ಹಣ್ಣುಗಳು ಅರ್ಧ ಕೆಜಿವರೆಗೆ ತೂಗುತ್ತವೆ. ಸಿಹಿ ಮತ್ತು ಹುಳಿ ಸವಿಯನ್ನು ಹೊಂದಿರುತ್ತವೆ. ಸಿ ವಿಟಮಿನ್‌ನಿಂದ ಸಮೃದ್ಧವಾದ ಈ ಫಲ ಎಲೆ ಉದುರುವ ಸಸ್ಯ ವರ್ಗಕ್ಕೆ ಸೇರಿದೆ. ಗೃಹ ಪ್ರವೇಶ ಮತ್ತು ವಿವಾಹದ ಸಮಯ ಫಲ ತಾಂಬೂಲ ನೀಡುವಾಗ ಶಾಸ್ತ್ರೋಕ್ತವಾಗಿ ಸುಮಂಗಲಿಯರಿಗೆ ಈ ಹಣ್ಣು ನೀಡುವ ಪದ್ಧತಿ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಇದೆ’ ಎಂದು ಪಟ್ಟಣದ ಗೌರಮ್ಮ ಹೇಳಿದರು. 

‘ಅಳಿವಿನಂಚಿನಲ್ಲಿದೆ ಈ ಫಲ’
‘ಸೋಮವಾರ ರಾಮ ಮಂದಿರ ವಿಶ್ವಕ್ಕೆ ತೆರೆದುಕೊಳ್ಳುವಾಗ ರಾಮ ಮತ್ತು ಸೀತಾ ಮಾತೆ ನೆಟ್ಟು ಪೋಷಿಸಿದ ತಳಿಗಳನ್ನು ಅರ್ಚಿಸಿ ವಿಶೇಷ ಸೇವಾ ಕೈಂಕರ್ಯ ನೆರವೇರಿಸಲಾಗುವುದು. ಸುವರ್ಣಾವತಿ ನದಿ ತಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಈ ಫಲಗಳಿದ್ದವು. ಇಂತಹ ಗಿಡಗಳು ಇಂದು ಅಳಿವಿನಂಚು ಮುಟ್ಟಿದೆ. ಆದರೆ ತೋಟದ ಮಹದೇಶ್ವರ ದೇವಾಲಯದ ಸಮೀಪದಲ್ಲಿ ಹಲವು ಗಿಡಗಳು ಹಣ್ಣು ನೀಡುತ್ತಿದ್ದು ಮತ್ತೆ ರಾಮ ಸ್ಮರಣೆಗೆ ವೇದಿಕೆ ಕಟ್ಟಿಕೊಟ್ಟಿದೆ’ ಎಂದು ಹೇಳುತ್ತಾರೆ ಬಸವರಾಜಸ್ವಾಮೀಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT