ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ವರುಣನ ಸಿಂಚನ; ಕಾಡಲ್ಲಿ ಹಸಿರ ನರ್ತನ

Published 17 ಮೇ 2024, 7:13 IST
Last Updated 17 ಮೇ 2024, 7:13 IST
ಅಕ್ಷರ ಗಾತ್ರ

ಚಾಮರಾಜನಗರ: ವಾರದಿಂದೀಚೆಗೆ ಸುರಿಯುತ್ತಿರುವ ಮಳೆಯು ರೈತರು, ಜನರಿಗಷ್ಟೇ ಅಲ್ಲ, ಜಿಲ್ಲೆಯಲ್ಲಿರುವ ನಾಲ್ಕೂ ಅರಣ್ಯ ಸಂರಕ್ಷಿತ ಪ್ರದೇಶಗಳ ಸಸ್ಯ ಸಂಕುಲ, ಪ್ರಾಣಿ ಸಂಕುಲಕ್ಕೂ ಅನುಕೂಲ ಸೃಷ್ಟಿಸಿದೆ. 

ಬಿರುಬಿಸಿಲಿಗೆ ಎಲೆ ಉದುರಿಸಿ ಬಾಡಿ ಬಸವಳಿದ್ದ ಗಿಡಮರಗಳಿಗೆ ವರುಣನ ಸಿಂಚನ ಮರುಜೀವ ನೀಡಿದ್ದು, ಎಲ್ಲವೂ ಚಿಗೊರೆಡೆಯುತ್ತಿವೆ. ಮತ್ತೆ ಅರಣ್ಯಕ್ಕೆ ಹರಿಸಿನ ಜೀವ ಕಳೆ ಬರಲಾರಂಭಿಸಿದೆ. ಕಾಡಿನ ದಾರಿಯಲ್ಲಿ ಸಾಗುವಾಗ ಚಿಗುರೊಡೆಯುತ್ತಿರುವ ಮರಗಳು ಜನರನ್ನು ಸ್ವಾಗತಿಸುತ್ತಿವೆ. 

ಶೇ 48ರಷ್ಟು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಯಲ್ಲಿ ಪ್ರಮುಖ ಹೆದ್ದಾರಿಗಳು ಅರಣ್ಯದಲ್ಲಿ ಹಾದು ಹೋಗುತ್ತವೆ.

ಊಟಿ, ಕೇರಳದ ಕಡೆಗೆ ಹೋಗುವಾಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ  ಸಾಗಬೇಕು. ಬಿಳಿಗಿರಿರಂಗನಬೆಟ್ಟಕ್ಕೆ, ಕೊಯಮತ್ತೂರಿನ ಕಡೆಗೆ ಹೋಗಬೇಕಾದರೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಾಗಬೇಕು. ಹನೂರು ಮಾರ್ಗವಾಗಿ ತಮಿಳುನಾಡು ಕಡೆಗೆ ತೆರಳಬೇಕಾದರೆ ಮಲೆ ಮಹದೇಶ್ವರ ವನ್ಯಧಾಮ, ಕಾವೇರಿ ವನ್ಯಧಾಮದ ಮೂಲಕವೇ ಸಾಗಬೇಕು. 

ಈ ವರ್ಷ ಬೇಸಿಗೆ ತೀವ್ರತೆ ಜನವರಿಯಿಂದಲೇ ಆರಂಭವಾಗಿದ್ದರಿಂದ, ಗಿಡ ಮರಗಳು ಆಗಲೇ ಒಣಗುವುದಕ್ಕೆ ಆರಂಭಿಸಿದ್ದವು. ಮಾರ್ಚ್‌ ವೇಳೆಗೆ ಬಹುತೇಕ ಮರಗಳು ಒಣಗಿ ಹೋಗಿ ಸತ್ತಂತೆ ಆಗಿದ್ದವು. ಹೆದ್ದಾರಿಗಳಲ್ಲಿ ಸಾಗುವ ಜನರು ಒಣಗಿದ ಹುಲ್ಲು, ಗಿಡ ಮರಗಳನ್ನು ನೋಡಿಕೊಂಡು ಸಾಗಬೇಕಿತ್ತು. 

ವಾರದಿಂದೀಚೆಗೆ ಬರುತ್ತಿರುವ ಮಳೆ ಕಾಡಿನ ಚಿತ್ರಣವನ್ನೇ ಬದಲಾಯಿಸಿದೆ. ಒಣಗಿದ ಗಿಡಗಳಲ್ಲಿ ಮತ್ತೆ ಚಿಗುರು ಕಾಣಿಸಿಕೊಳ್ಳುತ್ತಿದೆ. ಬಾಡಿಹೋದ ಗಿಡಗಳು ಹಸಿರು ಮೈತುಂಬಿಕೊಂಡಿವೆ. ಭೂಮಿಯಲ್ಲಿ ತೇವಾಂಶ ಇರುವುದರಿಂದ ಹುಲ್ಲು ಚಿಗುರಲು ಆರಂಭವಾಗಿದೆ. ಒಟ್ಟಾರೆಯಾಗಿ ಕಾಡಿನ ಸೌಂದರ್ಯ ಹೆಚ್ಚಾಗಿದೆ. ಇನ್ನೂ ಕೆಲವು ದಿನಗಳಲ್ಲೇ ಮರಗಳೆಲ್ಲ ಪೂರ್ತಿ ಹಸಿರಿನಿಂದ ಕಂಗೊಳಿಸಲಿವೆ. 

‘ಬಿಆರ್‌ಟಿ ಅರಣ್ಯದ ಬಹುತೇಕ ಕಡೆಗಳಲ್ಲಿ ಈಗ ಮಳೆಯಾಗಿದೆ. ಹಾಗಾಗಿ, ಗಿಡಮರಗಳು ಚಿಗುರಲು ಆರಂಭಿಸಿವೆ. ಸಸ್ಯಗಳು ಉಳಿಯಲು ಬೇಕಾದಷ್ಟು ಪ್ರಮಾಣದಲ್ಲಿ ನೀರು ಅವುಗಳಿಗೆ ಸಿಕ್ಕಿವೆ. ಗಿಡ ಮರಗಳು ಸಾಯುವ ಆತಂಕ ಇನ್ನಿಲ್ಲ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌, ಹುಲಿ ಯೋಜನೆ ನಿರ್ದೇಶಕಿ ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಜಿಲ್ಲೆಯಲ್ಲೇ ಬಂಡೀಪುರ ಅರಣ್ಯದ ಅಂಚಿನಲ್ಲಿ ಈ ಬಾರಿ ಹೆಚ್ಚು ಮಳೆಯಾಗಿದೆ. ಅಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಿಡ ಮರಗಳು ಬಿಸಿಲಿಗೆ ಬೋಳು ಬೋಳಾಗಿದ್ದವು. ಕುರುಚಲು ಗಿಡಗಳೂ ನೀರಿಲ್ಲದೆ ನಿಸ್ತೇಜಗೊಂಡಿದ್ದವು. ಅವುಗಳಿಗೆ ಈಗ ಜೀವಕಳೆ ಬಂದಿದೆ.  

ಕೆರೆಕಟ್ಟೆಗಳಿಗೆ ಬೇಕಿದೆ ನೀರು: ಬೇಸಿಗೆಯ ಹೊಡೆತಕ್ಕೆ ಅರಣ್ಯದ ಒಳಗಡೆ ಇದ್ದ ಕೆರೆಕಟ್ಟೆ, ಹೊಳೆ, ಝರಿಗಳು ಬರಿದಾಗಿದ್ದವು. ವಾರದಿಂದ ನಿರಂತರವಾಗಿ ಮಳೆಯಾಗುತ್ತಿದ್ದರೂ, ಜಲಮೂಲಗಳಿಗೆ ಇನ್ನೂ ನೀರು ಹರಿದು ಬಂದಿಲ್ಲ. ಕೆಲವು ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. 

‘ನಮ್ಮ ವ್ಯಾಪ್ತಿಯಲ್ಲಿ ಚೆನ್ನಾಗಿ ಮಳೆ ಬಂದಿದೆ. ಆದರೆ, ಈಗ ಬಿದ್ದ ಮಳೆಯ ನೀರನ್ನು ಭೂಮಿ ಹೀರಿಕೊಂಡಿದೆ. ಹಾಗಾಗಿ, ಹಳ್ಳ, ಝರಿಗಳಲ್ಲಿ ಹೆಚ್ಚು ನೀರು ಹರಿದಿಲ್ಲ. ಕೆರೆ ಕಟ್ಟೆಗಳಲ್ಲಿ ಈಗಲೂ ನೀರು ತಳಮಟ್ಟದಲ್ಲಿಯೇ ಇದೆ. ಆದರೆ, ಇನ್ನು ಒಂದೆರಡು ಮಳೆಯಾದರೆ, ಜಲಮೂಲಗಳಿಗೂ ನೀರು ಹರಿದು ಬರಲಿದೆ’ ಎಂದು ಕೆ.ಗುಡಿ ವಲಯ ಅರಣ್ಯಾಧಿಕಾರಿ ವಿನೋದ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

ಬಿಳಿಗಿರಿರಂಗನಬೆಟ್ಟದಿಂದ ಕಂಡ ಬಿಆರ್‌ಟಿ ಅರಣ್ಯದ ನೋಟ. ಮಳೆ ಬರುವುದಕ್ಕೂ ಮೊದಲು ಇಡೀ ಅರಣ್ಯ ‍ಪ್ರದೇಶ ಒಣಗಿ ಹೋಗಿತ್ತು. ಈಗ ಬಹುತೇಕ ಕಡೆಗಳಲ್ಲಿ ಹಸಿರು ಕಾಣಿಸುತ್ತಿದೆ
ಬಿಳಿಗಿರಿರಂಗನಬೆಟ್ಟದಿಂದ ಕಂಡ ಬಿಆರ್‌ಟಿ ಅರಣ್ಯದ ನೋಟ. ಮಳೆ ಬರುವುದಕ್ಕೂ ಮೊದಲು ಇಡೀ ಅರಣ್ಯ ‍ಪ್ರದೇಶ ಒಣಗಿ ಹೋಗಿತ್ತು. ಈಗ ಬಹುತೇಕ ಕಡೆಗಳಲ್ಲಿ ಹಸಿರು ಕಾಣಿಸುತ್ತಿದೆ
ಈ ಬಾರಿ ಬೇಸಿಗೆ ತೀವ್ರವಾಗಿದ್ದುದರಿಂದ ಕಾಡಿನಲ್ಲೂ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆ. ದಾಖಲಾಗಿತ್ತು. ಮಳೆಯಾಗಿರುವುದರಿಂದ ವಾತಾವರಣ ತಂಪಾಗಿದೆ
- ದೀಪ್‌ ಜೆ.ಕಾಂಟ್ರ್ಯಾಕ್ಟರ್‌ ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ

ಕಾಳ್ಗಿಚ್ಚು ಆತಂಕ ದೂರ

ಬಿಆರ್‌ಟಿ ಅರಣ್ಯದಲ್ಲಿ ಈ ಬಾರಿ ಹಲವು ಕಾಳ್ಗಿಚ್ಚು ಪ್ರಕರಣಗಳು ವರದಿಯಾಗಿದ್ದವು. ಬೈಲೂರು ವಲಯದಲ್ಲಿ ಹೆಚ್ಚು ಕಡೆ ಬೆಂಕಿ ಬಿದ್ದಿದ್ದವು.  ಸಂರಕ್ಷಿತ ಪ್ರದೇಶದ ಎಲ್ಲ ಆರೂ ವಲಯಗಳಲ್ಲಿ ಮಳೆಯಾಗಿರುವುದು ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಟ್ಟುಸಿರು ಬಿಡುವಂತೆ ಮಾಡಿದೆ. 

‌‘ಪುಣಜನೂರು ವಲಯ ಬಿಟ್ಟು ಉಳಿದ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕೊಳ್ಳೇಗಾಲ ಮತ್ತು ಹನೂರು ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಹಾಗಾಗಿ ಹೆಚ್ಚು ಬೆಂಕಿ ಬಿದ್ದ ಬೈಲೂರು ವಲಯದಲ್ಲಿ ಅತ್ಯುತ್ತಮವಾಗಿ ಮಳೆ ಸುರಿದಿದೆ. ಹಾಗಾಗಿ ಅಲ್ಲಿ ಇನ್ನು ಬೆಂಕಿ ಬೀಳುವ ಆತಂಕ ಇಲ್ಲ. ಪುಣಜನೂರು ಸುತ್ತಮುತ್ತ ಮಳೆಯಾಗಿದ್ದರೂ ಉಳಿದ ಕಡೆಗಳಲ್ಲಿ ಬಿದ್ದಷ್ಟು ಆಗಿಲ್ಲ. ಹಾಗಾಗಿ ಎಚ್ಚರಿಕೆಯಲ್ಲಿ ಇರಬೇಕಿದೆ’ ಡಿಸಿಎಫ್‌ ದೀಪ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT