ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಪ್ಪು ಶಿಲೀಂಧ್ರ: 7 ಮಂದಿಗೆ ಸೋಂಕು, ಒಬ್ಬರ ಸ್ಥಿತಿ ಗಂಭೀರ

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ
Last Updated 7 ಜುಲೈ 2021, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಈಚಿನ ದಿನಗಳಲ್ಲಿ ದೇಶದಾದ್ಯಂತ ಕೋವಿಡ್‌ ರೋಗಿಗಳನ್ನು ಕಾಡುತ್ತಿರುವ ಮ್ಯೂಕರ್‌ ಮೈಕೊಸಿಸ್ (ಕಪ್ಪು ಶಿಲೀಂಧ್ರ) ಸೋಂಕು ಜಿಲ್ಲೆಯಲ್ಲೂ ಕಾಣಿಸಿಕೊಂಡಿದ್ದು, ಇದುವರೆಗೆ ಏಳು ಪ್ರಕರಣ ದಾಖಲಾಗಿವೆ.

ಆರಂಭದಲ್ಲಿ ಜಿಲ್ಲಾಸ್ಪತ್ರೆ ಯಲ್ಲಿ ಈ ಸೋಂಕಿಗೆ ಚಿಕಿತ್ಸೆ ಲಭ್ಯವಿರಲಿಲ್ಲ. ಹಾಗಾಗಿ, ನಾಲ್ವರು ರೋಗಿಗಳನ್ನು ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು.

ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದ ನಂತರ ಜಿಲ್ಲೆಯಲ್ಲೂ ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರೂ ಕೋವಿಡ್‌ ರೋಗಿಗಳು. ಇವರ ಪೈಕಿ ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನೊಬ್ಬರು ಸೋಂಕಿತರಿಗೆ ವೈದ್ಯರು ಶಸ್ತ್ರಕ್ರಿಯೆ ನಡೆಸಿದ್ದಾರೆ. ಮತ್ತೊಬ್ಬರಿಗೆ ಶಸ್ತ್ರಕ್ರಿಯೆ ನಡೆಸಲು ಸಿದ್ಧತೆ ಮಾಡಿದ್ದಾರೆ.

‘ನಮ್ಮಲ್ಲಿ ಇದುವರೆಗೆ ಏಳು ಪ್ರಕರಣ ವರದಿಯಾಗಿವೆ. ಆರಂಭದಲ್ಲಿ ಔಷಧಿ ಇರಲಿಲ್ಲ ಎಂಬ ಕಾರಣಕ್ಕೆ ನಾಲ್ವರನ್ನು ಮೈಸೂರಿಗೆ ಕಳುಹಿಸಿದ್ದೆವು.‌ಈಗ ಜಿಲ್ಲಾಸ್ಪತ್ರೆಯಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಕೋವಿಡ್‌ ಜೊತೆಗೆ ಕಪ್ಪು ಶಿಲೀಂಧ್ರ ಸೋಂಕಿಗೂ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಬ್ಬರು 32 ವರ್ಷದ ಮಹಿಳೆ. ಅವರ ಆರೋಗ್ಯ ಸ್ಥಿತಿ ಸ್ವಲ್ಪ ಗಂಭೀರವಾಗಿದೆ. ಮೂರು ವಾರಗಳಿ ಗಿಂತಲೂ ಹೆಚ್ಚು ಸಮಯದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಣ್ಣಿನ ಭಾಗ ಹಾಗೂ ಇತರ ಕಡೆಗಳಿಗೆ ಸೋಂಕು ಹರಡಿದೆ. ನಾವು ಶಸ್ತ್ರ ಚಿಕಿತ್ಸೆ ನಡೆಸಲು ಸಿದ್ಧವಾಗಿದ್ದರೂ, ಆರೋಗ್ಯ ಸ್ಥಿತಿ ಅದಕ್ಕೆ ಅವಕಾಶ ನೀಡುತ್ತಿಲ್ಲ. ಇನ್ನೊಬ್ಬರಿಗೆ ಶಸ್ತ್ರಕ್ರಿಯೆ ನಡೆಸಿದ್ದೇವೆ. ಸ್ವಲ್ಪ ಚೇತರಿಕೆ ಕಂಡು ಬಂದಿದೆ. ಮತ್ತೊಬ್ಬರಿಗೆ ಶಸ್ತ್ರಕ್ರಿಯೆ ನಡೆಸಲು ಸಿದ್ಧತೆ ನಡೆಸಿದ್ದೇವೆ. ಆದರೆ, ಸೋಂಕಿನ ಔಷಧಕ್ಕೆ ಅವರ ದೇಹ ಸ್ಪಂದಿಸುತ್ತಿಲ್ಲ’ ಎಂದು ಜಿಲ್ಲಾ ಸರ್ಜನ್‌ ಮಾಹಿತಿ ನೀಡಿದರು.

‘ಕಪ್ಪು ಶಿಲೀಂಧ್ರಕ್ಕೆ ಚಿಕಿತ್ಸೆ ನೀಡಲು ಲಿಪೊಸೊಮಲ್ಆಂಫೋಟೆರಿಸಿನ್ ಎಂಬ ಚುಚ್ಚುಮದ್ದಿನ ಅಗತ್ಯವಿದೆ. ನಮಗೆ ಈಗ ಅಗತ್ಯವಿರುವಷ್ಟು ಪೂರೈಕೆಯಾಗುತ್ತಿದೆ. ದಿನಂಪ್ರತಿ ಸೋಂಕಿತರಿಗೆ ಚುಚ್ಚುಮದ್ದು ನೀಡಲು ಐದು ವಯಲ್‌ ಬೇಕು. ಕೊಂಚ ದುಬಾರಿಯಾಗಿರುವ ಈ ಚುಚ್ಚುಮದ್ದು ಸೋಂಕಿಗೆ ಪರಿಣಾಮಕಾರಿ. ರೋಗಿಗಳ ದೇಹ ಸ್ಪಂದಿಸಿದರೆ ಮಾತ್ರ ಚೇತರಿಕೆ ಕಂಡು ಬರುತ್ತದೆ. ಈ ಸೋಂಕಿಗೆ ನೀಡುವ ಔಷಧಗಳಿಂದ ಕಿಡ್ನಿ ಸೇರಿದಂತೆ ಇನ್ನಿತರ ಅಂಗಗಳ ಮೇಲೆ ಅಡ್ಡ ಪರಿಣಾಮವೂ ಇರುತ್ತದೆ’ ಎಂದು ಡಾ.ಶ್ರೀನಿವಾಸ ತಿಳಿಸಿದರು.

ಮೂರನೇ ಅಲೆ ಎದುರಿಸಲು ಸಿದ್ಧ‌ತೆ

ಈ ಮಧ್ಯೆ, ಜಿಲ್ಲೆಯಲ್ಲಿ ಕೋವಿಡ್‌ನ ಮೂರನೇ ಅಲೆ ಎದುರಿಸಲು ಸಿದ್ಧತೆ ನಡೆಯುತ್ತಿದೆ. ಯಡಬೆಟ್ಟದ ವೈದ್ಯಕೀಯ ಕಾಲೇಜಿನ ಬಳಿ ಹೊಸದಾಗಿ ನಿರ್ಮಿಸಲಾಗಿರುವ ವೈದ್ಯಕೀಯ ಬೋಧನಾ ಆಸ್ಪತ್ರೆಯಲ್ಲಿ ಕೆಲಸಗಳು ಭರದಿಂದ ಸಾಗಿದ್ದು, ಮಕ್ಕಳಿಗಾಗಿ ಪ್ರತ್ಯೇಕಾ ಚಿಕಿತ್ಸಾ ವ್ಯವಸ್ಥೆ ಕಲ್ಪಿಸುವ ಕೆಲಸ ಆರಂಭವಾಗಿದೆ. ಆಸ್ಪತ್ರೆಗೆ ಬೇಕಾದ ಹಾಸಿಗೆ ಸೇರಿದಂತೆ ಇನ್ನಿತರ ಪರಿಕರ ಅಳವಡಿಸುವ ಕೆಲಸ ನಡೆಯುತ್ತಿದೆ.

ಈ ಮಧ್ಯೆ, ನಗರದಲ್ಲಿರುವ ಜಿಲ್ಲಾಸ್ಪತ್ರೆಯ ಕೆಲವು ವಿಭಾಗಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ.

‘ಹೆರಿಗೆ ಮತ್ತು ಕೋವಿಡ್‌ ಚಿಕಿತ್ಸಾ ವಿಭಾಗಗಳನ್ನು ಬಿಟ್ಟು, ಉಳಿದ ವಿಭಾಗಗಳನ್ನು ಹೊಸ ಆಸ್ಪತ್ರೆ ಕಟ್ಟಡಕ್ಕೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಹೊಸ ಕಟ್ಟಡದಲ್ಲಿ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಶ್ರೀನಿವಾಸ ಹೇಳಿದರು.

20 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕ

ಯಡಬೆಟ್ಟದಲ್ಲಿರುವ ಹೊಸ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 20 ಸಾವಿರ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಘಟಕ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ.

‘ಆಸ್ಪತ್ರೆ ಬಳಕೆ ಹಾಗೂ ಕೋವಿಡ್‌ ಮೂರನೇ ಅಲೆ ಎದುರಿಸುವುದು... ಈ ಎರಡೂ ಉದ್ದೇಶಗಳಿಗಾಗಿ ಘಟಕ ಸ್ಥಾಪಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿರುವ ಆಮ್ಲಜನಕ ಘಟಕದ ಸಾಮರ್ಥ್ಯ 6 ಸಾವಿರ ಲೀಟರ್‌ ಆಗಿದ್ದರೆ, ಇದು 20 ಸಾವಿರ ಲೀಟರ್‌ ಸಾಮರ್ಥ್ಯ ಹೊಂದಿದೆ. ಈಗಾಗಲೇ ಘಟಕವನ್ನು ಸ್ಥಾಪಿಸಲಾಗಿದೆ. ಸಣ್ಣ–ಪುಟ್ಟ ಕೆಲಸ ನಡೆಯುತ್ತಿವೆ’ ಎಂದು ಆಮ್ಲಜನಕ ಪೂರೈಕೆ ವ್ಯವಸ್ಥೆಯ ನೋಡೆಲ್‌ ಅಧಿಕಾರಿ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT