ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6,7ನೇ ತರಗತಿ ವಿದ್ಯಾರ್ಥಿನಿಯರಿಗೂ ಪ್ಯಾಂಟ್‌, ಚೂಡಿದಾರ ವಿತರಣೆ

29ರಿಂದ ಶಾಲೆ ಆರಂಭ, ಎರಡು ಜೊತೆ ಸಮವಸ್ತ್ರ ಸಿದ್ಧ, ಪೂರ್ಣ ಪ್ರಮಾಣದಲ್ಲಿ ಬಾರದ ಪಠ್ಯ ಪುಸ್ತಕ
Published 26 ಮೇ 2024, 5:17 IST
Last Updated 26 ಮೇ 2024, 5:17 IST
ಅಕ್ಷರ ಗಾತ್ರ

ಚಾಮರಾಜನಗರ: ಇದೇ 29ರಂದು 2024–25ನೇ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಶಾಲೆಗಳ ಆರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಈ ವರ್ಷ ಶಾಲೆ ಶುರುವಾಗುವ ಹೊತ್ತಿಗೆ ಎರಡು ಜೊತೆ ಸಮವಸ್ತ್ರವನ್ನು ಇಲಾಖೆ ಮಕ್ಕಳಿಗೆ ವಿತರಿಸಲಿದೆ. 

ಈ ವರ್ಷದಿಂದ 6 ಮತ್ತು 7ನೇ ತರಗತಿ ವಿದ್ಯಾರ್ಥಿನಿಯರಿಗೂ ಸಮವಸ್ತ್ರವಾಗಿ ಪ್ಯಾಂಟ್‌ ಹಾಗೂ ಚೂಡಿದಾರ (ಸಲ್ವಾರ್‌) ಸಿಗಲಿದೆ.  ಹೆಣ್ಣುಮಕ್ಕಳ ಭದ್ರತೆ ಮತ್ತು ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಚೂಡಿದಾರ ವಿತರಿಸುವ ತೀರ್ಮಾನಕ್ಕೆ ಬಂದಿದೆ. ಈವರೆಗೂ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ಯಾಂಟ್‌ ಮತ್ತು ಚೂಡಿದಾರ ಸಮವಸ್ತ್ರ ಇತ್ತು. ಉಳಿದ ತರಗತಿಗಳ ವಿದ್ಯಾರ್ಥಿನಿಯರಿಗೆ ಸ್ಕರ್ಟ್‌ ವಿತರಿಸಲಾಗುತ್ತಿತ್ತು. 

1ರಿಂದ 10ನೇ ತರಗತಿವರೆಗಿನ ಎಲ್ಲ ಹೆಣ್ಣುಗಳಿಗೂ ಸ್ಕರ್ಟ್‌ ಬದಲು ಪ್ಯಾಂಟ್‌ ಮತ್ತು ಚೂಡಿದಾರ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಿತ್ತು. 

‘ಈಗ 6, 7ನೇ ತರಗತಿಯ ವಿದ್ಯಾರ್ಥಿನಿಯರೂ ದೊಡ್ಡವರಾಗಿರುತ್ತಾರೆ. ಶಾಲೆಗಳಲ್ಲಿ ಅವರು ಮುಜುಗರದ ಸನ್ನಿವೇಶ ಎದುರಿಸಬಾರದು ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ’ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಎರಡು ಜೊತೆ ಸಮವಸ್ತ್ರ: ಸಾಮಾನ್ಯವಾಗಿ ಶಾಲೆ ಆರಂಭವಾಗುವ ಸಂದರ್ಭದಲ್ಲಿ ಒಂದು ಜೊತೆ ಸಮವಸ್ತ್ರ ಮಾತ್ರ ಬಂದಿರುತ್ತದೆ. ಈ ಬಾರಿ ಎರಡು ಜೊತೆ ಬಂದಿದೆ. 29ರಂದೇ ಮಕ್ಕಳಿಗೆ ಸಮವಸ್ತ್ರ ವಿತರಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಚಾಮರಾಜನಗರ ತಾಲ್ಲೂಕಿನ 43,110 ವಿದ್ಯಾರ್ಥಿಗಳು, ಗುಂಡ್ಲುಪೇಟೆ ತಾಲ್ಲೂಕಿನ 13,831, ಹನೂರಿನ 11,200, ಕೊಳ್ಳೇಗಾಲದ 7,650 ಮತ್ತು ಯಳಂದೂರಿನ 5,296 ಮಕ್ಕಳು ಸೇರಿದಂತೆ 81,087 ಮಕ್ಕಳು ಸಮವಸ್ತ್ರ ಪಡೆಯಲಿದ್ದಾರೆ. 

ಶೇ 60ರಷ್ಟು ಪಠ್ಯಪುಸ್ತಕ ಪೂರೈಕೆ: ಶಾಲೆ ಆರಂಭಕ್ಕೆ ಇನ್ನು ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕಗಳು ಪೂರೈಕೆಯಾಗಿಲ್ಲ. ಆದರೆ, 29ರ ಹೊತ್ತಿಗೆ ಬಹುತೇಕ ಪುಸ್ತಕಗಳು ಬರಲಿವೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಗುರುವಾರದವರೆಗೆ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಉಚಿತವಾಗಿ ವಿತರಣೆ ಮಾಡುವ ಪುಸ್ತಕಗಳು ಶೇ 59.64ರಷ್ಟು ಪೂರೈಕೆಯಾಗಿವೆ. ಅನುದಾನ ರಹಿತ ಶಾಲೆಗಳ ಮಕ್ಕಳಿಗೆ ಮಾರಾಟ ಮಾಡಲು ಶೇ 65.08ರಷ್ಟು ಪಠ್ಯಪುಸ್ತಕಗಳು ಬಂದಿವೆ.

‘ಶುಕ್ರವಾರದ ಹೊತ್ತಿಗೆ ಮತ್ತೆ 35 ಸಾವಿರ ಪುಸ್ತಕಗಳು ಬಂದಿವೆ. ಶಾಲೆ ಶುರುವಾಗುವ ಸಮಯಕ್ಕೆ ಇನ್ನಷ್ಟು ಪಠ್ಯಪುಸ್ತಕಗಳು ಬರಲಿವೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. 

ಜಿಲ್ಲಾ ಶಿಕ್ಷಣ ಇಲಾಖೆಯು ಉಚಿತವಾಗಿ ವಿತರಿಸಲು 11,60,455 ಪಠ್ಯಪುಸ್ತಕಗಳಿಗೆ ಮತ್ತು ಖಾಸಗಿ ಶಾಲೆಗಳ ಮಕ್ಕಳಿಗೆ ಮಾರಾಟ ಮಾಡಲು 4,20,266 ಪುಸ್ತಕಗಳಿಗೆ ಬೇಡಿಕೆ ಇಟ್ಟಿತ್ತು. ಈ ಪೈಕಿ ಕ್ರಮವಾಗಿ 6,92,069 ಮತ್ತು 2,73,501 ಪಠ್ಯಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ರವಾನೆಯಾಗಿವೆ. ಅಲ್ಲಿಂದ ಶಾಲೆಗಳಿಗೆ ಕಳುಹಿಸಲಾಗುತ್ತಿದೆ.  

ರಾಮಚಂದ್ರ ರಾಜೇ ಅರಸ್‌
ರಾಮಚಂದ್ರ ರಾಜೇ ಅರಸ್‌
ಶಾಲಾರಂಭಕ್ಕೆ ಎಲ್ಲ ಸಿದ್ಧತೆ ಮಾಡಿದ್ದೇವೆ. ಸಮವಸ್ತ್ರ ಪೂರ್ಣ ಬಂದಿದೆ. ಪಠ್ಯಪುಸ್ತಕಗಳು ಶೇ 60ರಷ್ಟು ಬಂದಿದ್ದು ಮೊದಲ ದಿನವೇ ಮಕ್ಕಳಿಗೆ ಎರಡನ್ನೂ ವಿತರಣೆ ಮಾಡಲಿದ್ದೇವೆ
ರಾಮಚಂದ್ರರಾಜೇ ಅರಸ್‌ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ

ಎಸ್‌ಎಸ್‌ಎಲ್‌ಸಿ: 3219 ಮಂದಿ ನೋಂದಣಿ

ಈ ಮಧ್ಯೆ ಜೂನ್‌ 14ರಿಂದ ನಡೆಯಲಿರುವ ಎಸ್‌ಎಸ್‌ಎಲ್‌ಸಿ 2ನೇ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯಲ್ಲಿ 3219 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.  ಈ ಪೈಕಿ ಮೊದಲ ಪರೀಕ್ಷೆಯಲ್ಲಿ ಬಂದ ಫಲಿತಾಂಶವನ್ನು ಸುಧಾರಣೆ ಮಾಡುವ ಉದ್ದೇಶದಿಂದ 223 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 2960 ಮಂದಿ ಪುನರಾವರ್ತಿತರು. 36 ಮಂದಿ ಖಾಸಗಿ ಅಭ್ಯರ್ಥಿಗಳು.  ‘ಮೊದಲ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರ ಪೈಕಿ ಶೇ 95ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಎರಡನೇ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT