ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಪು ಸಮಾಧಿಯಿಂದ ಹೂ ತಂದವರು

ಹತ್ತನೇ ವರ್ಷಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಗಾಂಧಿವಾದಿ
ನಾ.ಮಂಜುನಾಥಸ್ವಾಮಿ
Published 30 ಜನವರಿ 2024, 6:04 IST
Last Updated 30 ಜನವರಿ 2024, 6:04 IST
ಅಕ್ಷರ ಗಾತ್ರ

ಯಳಂದೂರು: ಆ ಬಾಲಕನಿಗೆ ಮೈಸೂರು ಸುಬ್ಬರಾಯನ ಕೆರೆಯಲ್ಲಿ ಪ್ರತಿದಿನ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರ ಸಭೆ, ನಡೆಯುತ್ತಿದ್ದ ಚರ್ಚೆಗಳನ್ನು ಹತ್ತಿರದಿಂದ ಕಾಣುವಾಸೆ. ಶಾಲೆಗೆ ತೆರಳುವಾಗ ಮರೆಯಲ್ಲಿ ನಿಂತು ಗಮನಿಸುತ್ತಿದ್ದ. ಅಂದಿನ ವಿದ್ಯಾರ್ಥಿಗಳು ಕಾಲೇಜು, ವಕೀಲಿ ಬಿಟ್ಟು ಸ್ವದೇಶಿ ಚಳವಳಿಯಲ್ಲಿ ಧುಮುಕುವುದನ್ನು ನೋಡಿದ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮಹಾತ್ಮರ ಹಾದಿಯಲ್ಲಿ ಸಾಗುವ ಕನಸು ಕಂಡ.

ಈ ಪ್ರೇರಣೆಯಿಂದಲೇ ಮನೆಯಿಂದ ಹೊರ ಬಂದು ಗಾಂಧಿ ಮಾರ್ಗವನ್ನು ಅಪ್ಪಿದ, ಒಪ್ಪಿದವರು ‘ಅಗರಂ ರಂಗಯ್ಯ’  

ತಾಲ್ಲೂಕಿನ ಅಗರ ಗ್ರಾಮದ ರಂಗಯ್ಯ (ಜನನ 1901) 20ನೇ ಶತಮಾನದ ಆರಂಭದಲ್ಲಿ ತಂದೆಯ ಜೊತೆ ಮೈಸೂರಿಗೆ ತೆರಳಿದರು. ದಳವಾಯಿ ಮರಿಮಲ್ಲಪ್ಪ ಹಾಗೂ ಮಹಾರಾಜ ಕಾಲೇಜುಗಳಲ್ಲಿ ಕಲಿತರು. ನಂತರ ಗಾಂಧಿಯುಗದ ಕಾಲಘಟ್ಟದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕರ್ತನಾಗಿ ಅಸಹಕಾರ ಚಳವಳಿಗಳಲ್ಲಿ ಗುರುತಿಸಿಕೊಂಡರು. ಗಾಂಧಿ ಮಾರ್ಗವನ್ನು ಅಪ್ಪಿಕೊಂಡು ಜೀವನದ ಉದ್ದಕ್ಕೂ ದೇಶ ಸೇವೆಯ ಕೈಂಕರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡರು.

ರಾಜ್ಯದ ಬೆಳಗಾವಿಯಲ್ಲಿ 1924ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆಯಿತು. ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದರು. ಬಾಲಕಿ ಗಂಗೂಬಾಯಿ ಹಾನಗಲ್ ಸಭೆಯಲ್ಲಿ ಪ್ರಾರ್ಥನೆ ಮಾಡಿದ್ದರು. ಈ ಸಮಯದಲ್ಲಿ ಈ ಸಮಾರಂಭಕ್ಕೆ ಹಣ ಮತ್ತು ಕಾರ್ಯಕರ್ತರನ್ನು ಹೊಂದಿಸುವ ಜವಾಬ್ಧಾರಿಯನ್ನು ಹೊತ್ತರು. ನಂತರ ಹಂತ ಹಂತವಾಗಿ ಮೋತಿಲಾಲ್ ನೆಹರು, ಗಾಂಧೀಜಿ ಅವರನ್ನು ಹತ್ತಿರದಿಂದ ಕಾಣುವ ಅವಕಾಶ ಇವರಿಗೆ ಸಿದ್ಧಿಸಿತು, ಅವರೊಟ್ಟಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಮುಖಾಮುಖಿಯಾದರು. ನಾಯಕರ ಭಾಷಣಕ್ಕೆ ಸಭೆಗಳ ವ್ಯವಸ್ಥೆ ಮಾಡುವ ಮೂಲಕ, ಗಾಂಧೀಜಿಯವರ ಆಪ್ತ ಬಳಗದಲ್ಲೂ ಗುರುತಿಸಿಕೊಂಡರು ಎನ್ನುತ್ತಾರೆ ಅವರ ಬಗ್ಗೆ ತಿಳಿದವರು.

ಸಾಧ್ವಿ ಪತ್ರಿಕೆಗೆ ಜೀವ: ಅಗರಂ ರಂಗಯ್ಯ ಮದನಪಲ್ಲಿಯಲ್ಲಿ ಪತ್ರಿಕೋದ್ಯಮದಲ್ಲಿ ಪದವಿ ಪಡೆದರು. ಯುವ ಬರಹಗಾರರನ್ನು ಹುಟ್ಟು ಹಾಕಿದರು. ಸಣ್ಣಪುಟ್ಟ ಕೆಲಸ ಮಾಡುತ್ತಲೇ ಪತ್ರಿಕಾ ರಂಗದಲ್ಲಿ ದುಡಿದರು. ಬ್ರಿಟಿಷರ ನಡೆಯನ್ನು ವಿರೋಧಿಸಿ ಧ್ವಜಾರೋಹಣ ನೆರವೇರಿಸಿ ಬಂಧನಕ್ಕೂ ಒಳಗಾದರು. ಹೀಗಾಗಿ, ಒಂದೆರಡು ವರ್ಷ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು. ಮನೆ ಮನೆಗೆ ತೆರಳಿ ಗಾಂಧಿ ಟೋಪಿ ಮಾರಿದರು.

ಕನ್ನಡ ಪತ್ರಿಕಾರಂಗದ ಪಿತಾಮಹ ಎಂದು ಗುರುತಿಸುವ ಎಂ.ವೆಂಕಟಕೃಷ್ಣಯ್ಯ (ತಾತಯ್ಯ) ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಸಾಧ್ವಿ’ ಪತ್ರಿಕೆಯನ್ನು ವಹಿಸಿಕೊಂಡು ಮುನ್ನಡೆಸಿದರು. ವಿದೇಶಿ ವಸ್ತುಗಳ ಬಹಿಷ್ಕಾರ ಮತ್ತು ಸ್ವದೇಶಿ ವಸ್ತ್ರಗಳ ಮಹತ್ವವನ್ನು ಬರಹಗಳಲ್ಲಿ ತಿಳಿಸಿಕೊಟ್ಟರು. ಸರ್ಕಾರದ ನೆರವನ್ನು ಬಯಸದೆ, ಹಂಗಿಗೂ ಒಳಗಾಗದೆ ಪತ್ರಿಕೆಯನ್ನು ನಡೆಸುವ ಸಂಕಲ್ಪ ಇವರದಾಗಿತ್ತು. ಮಾಡು ಇಲ್ಲವೇ ಮಡಿ ಹೋರಾಟ  ಹಾಗೂ ಮೈಸೂರು ಚಲೋ ಚಳವಳಿಯಲ್ಲೂ ತಮ್ಮ ಛಾಪು ಮೂಡಿಸಿದ ರಂಗಯ್ಯ ಮೈಸೂರು ಆಕಾಶವಾಣಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ (ಯುಟ್ಯೂಬ್‌ನಲ್ಲಿ ಸಂದರ್ಶನ ಲಭ್ಯವಿದೆ).

ದೆಹಲಿಯಲ್ಲಿ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧೀಜಿಯವರ ಸಮಾಧಿ
ದೆಹಲಿಯಲ್ಲಿ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧೀಜಿಯವರ ಸಮಾಧಿ

ಅಗರದಲ್ಲಿ ಜನಿಸಿದ ಗಾಂಧಿವಾದಿ ಪತ್ರಿಕೋದ್ಯಮದಲ್ಲೂ ಛಾಪು ಮೈಸೂರು ಚಲೋ ಚಳವಳಿಯಲ್ಲೂ ಭಾಗಿ 

ಗಾಂಧಿ ಸಮಾಧಿಯ ಹೂ ಮಳೆ!   1948 ಜ.30 ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ನಾಥೂರಾಮ್‌ ಗೋಡ್ಸೆ ಹೊಡೆದ ಗುಂಡೇಟಿಗೆ ಬಲಿಯಾದರು. ವಿಶ್ವಸಂಸ್ಥೆಯು ತನ್ನ ಕಚೇರಿಯಲ್ಲಿರುವ ಎಲ್ಲ ರಾಷ್ಟ್ರಗಳ ಧ್ವಜವನ್ನು ಅರ್ಧಕ್ಕೆ ಇಳಿಸಿ ಮಾನವೀಯತೆ ಮತ್ತು ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಬಾಪು ಅವರನ್ನು ಸ್ಮರಿಸಿತು. ಕೋಟ್ಯಂತರ ದೇಶಭಕ್ತರು ದೆಹಲಿಯ ರಾಜ್ ಘಾಟ್‌ನಲ್ಲಿ ಬಾಪೂಜಿ ಸಮಾಧಿಯಲ್ಲಿ ನಮನ ಸಲ್ಲಿಸಿದರು.   ‘ಗಾಂಧಿವಾದಿಯಾಗಿದ್ದ ಅಗರಂ ರಂಗಯ್ಯ ಅವರೂ ದೆಹಲಿಗೆ ತೆರಳಿ ಕಂಬನಿ ಮಿಡಿದರು. ಗಾಂಧಿ ಸಮಾಧಿಯಿಂದ ರಾಜ್ಯಕ್ಕೆ ಹೂ ತುಂಬಿಕೊಂಡು ಬಂದರು. ಹೆಲಿಕಾಪ್ಟರ್ ಮೂಲಕ ಮೈಸೂರು ನಗರದ ಮೇಲೆ ಹೂ ಮಳೆ ಸುರಿಸಿದರು. ದೇಶಭಕ್ತರು ಹೂಗಳನ್ನು ಪ್ರಸಾದ ಎಂದು ಸ್ವೀಕರಿಸಿದ ಕ್ಷಣಗಳು ಹಿರಿಯ ನಾಗರಿಕರ ಮನದಲ್ಲಿ ಇನ್ನೂ ಅಚ್ಚೊತ್ತಿದೆ’ ಎಂದು ಇತಿಹಾಸಕಾರ ಈಚನೂರ್ ಕುಮಾರ್ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT