ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲೇ ನಿಲ್ಲುವ ಬಸ್‌; ತಪ್ಪಿಲ್ಲ ಸಂಚಾರ ದಟ್ಟಣೆ

ಕೊಳ್ಳೇಗಾಲ: ಬಸ್‌ ನಿಲ್ದಾಣ, ತಂಗುದಾಣ ಇದ್ದರೂ, ಅಲ್ಲಲ್ಲಿ ನಿಲ್ಲುವ ಜನರು, ಬಸ್‌ಗಳು
ಅವಿನ್ ಪ್ರಕಾಶ್ ವಿ.
Published 13 ಮೇ 2024, 5:09 IST
Last Updated 13 ಮೇ 2024, 5:09 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದಲ್ಲಿ ಹೈಟೆಕ್‌ ಬಸ್‌ನಿಲ್ದಾಣ ನಿರ್ಮಾಣವಾಗಿದ್ದರೂ, ಬಸ್‌ಗಳು ರಸ್ತೆ ಬದಿಯಲ್ಲಿ ನಿಲುಗಡೆ ಮಾಡುವುದನ್ನು ನಿಲ್ಲಿಸಿಲ್ಲ. ಹಾಗಾಗಿ ನಗರದ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ತಪ್ಪಿಲ್ಲ.

ಬಸ್ ಚಾಲಕರು ಪ್ರಯಾಣಿಕರನ್ನು ಹತ್ತಿಸಲು ಮತ್ತು ಇಳಿಸಲು ನಿಗದಿತ ಸ್ಥಳದಲ್ಲಿ ಮಾತ್ರ ನಿಲ್ಲಿಸದಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ.

ಬೆಂಗಳೂರಿನಿಂದ ಕೊಯಮತ್ತೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಗರದ ಹೃದಯ ಭಾಗದಲ್ಲಿ ಹಾದು ಹೋಗುತ್ತದೆ. ಬೈಪಾಸ್‌ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದರಿಂದ ಈ ಮಾರ್ಗದಲ್ಲೇ ಎಲ್ಲ ವಾಹನಗಳು ಸಂಚರಿಸಬೇಕು. ಪ್ರತಿ ನಿತ್ಯ ಸಾವಿರಾರು ವಾಹನಗಳು ಇದರಲ್ಲಿ ಓಡಾಡುತ್ತವೆ.

ಹೈಟೆಕ್‌ ಬಸ್‌ನಿಲ್ದಾಣ ಕಾಮಗಾರಿ ಸಂದರ್ಭದಲ್ಲಿ ತಾತ್ಕಾಲಿಕ ಬಸ್‌ ನಿಲ್ದಾಣ ದೂರ ಇತ್ತು. ಹಾಗಾಗಿ, ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಜನರು ಬಸ್‌ಗಳಿಗೆ ಕಾಯುತ್ತಿದ್ದರು. ಈಗ ಬಸ್‌ ನಿಲ್ದಾಣ ಹೃದಯ ಭಾಗದಲ್ಲಿದೆ. ಹಾಗಿದ್ದರೂ ಜನರು ಹೆದ್ದಾರಿ ಬದಿ ಬಸ್‌ಗಳಿಗೆ ಕಾಯುವುದನ್ನು ಬಿಟ್ಟಿಲ್ಲ. ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಇಳಿಸುವುದನ್ನು ನಿಲ್ಲಿಸಿಲ್ಲ. 

ಇದರ ಅರಿವು ಇದ್ದರೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳಾಗಲಿ, ಖಾಸಗಿ ಬಸ್‌ಗಳ ಏಜೆಂಟರಾಗಲಿ, ಪೊಲೀಸರಾಗಲಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಸಂಚಾರ ಸಮಸ್ಯೆ: ಎಡಿಬಿ ವೃತ್ತ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಗಳು ನಗರದ ಪ್ರಮುಖ ಜನನಿಬಿಡ ಸ್ಥಳಗಳು. ಇಲ್ಲಿ ಜನರ, ವಾಹನಗಳ ಓಡಾಟ ಹೆಚ್ಚು.

ಪ್ರಸಿದ್ಧ ಯಾತ್ರಾಸ್ಥಳ ಮಹದೇಶ್ವರ ಬೆಟ್ಟಕ್ಕೆ ಎಡಿಬಿ ವೃತ್ತದ ಮೂಲಕ ಸಾಗಬೇಕು. ಈ ಜಾಗದಲ್ಲಿ ಬಸ್‌ ತಂಗುದಾಣ ಇದ್ದರೂ ಖಾಸಗಿ ಹಾಗೂ ಸಾರಿಗೆ ಬಸ್‌ಗಳು ರಸ್ತೆಯ ಮಧ್ಯದಲ್ಲಿ ಹಾಗೂ ವೃತ್ತದಲ್ಲಿಯೇ ನಿಲ್ಲುತ್ತಿವೆ. ಇದರಿಂದ ಈ ಜಾಗದಲ್ಲಿ ನಿತ್ಯವೂ ಸಂಚಾರ ಸಮಸ್ಯೆ ಉಂಟಾಗುತ್ತಿದೆ.

‘ಈ ವೃತ್ತದ ಆಸುಪಾಸಿನಲ್ಲಿಯೇ ಸರ್ಕಾರಿ ಉಪವಿಭಾಗ ಆಸ್ಪತ್ರೆ, ಗ್ರಾಮಾಂತರ ಪೊಲೀಸ್ ಠಾಣೆ, ತಾಲ್ಲೂಕು ಕಚೇರಿ, ನ್ಯಾಯಾಲಯ ಹಾಗೂ ಶಾಲಾ ಕಾಲೇಜುಗಳು ಇವೆ. ಬಸ್‌ಗಳು ರಸ್ತೆಯಲ್ಲೇ ನಿಲ್ಲುವುದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹೋಗಲು ಕಿರಿ ಕಿರಿಯಾಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರು ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದರೂ ಪೊಲೀಸರು ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ’ ಎಂದು ನಗರದ ನಿವಾಸಿ, ಮುಖಂಡ ಪರಶಿವ ದೂರಿದರು.

ಕಾಣದ ಪೊಲೀಸರು: ಪ್ರಮುಖ ವೃತ್ತಗಳು, ಜನನಿಬಿಡ ಪ್ರದೇಶಗಳಲ್ಲಿ ವಾಹನಗಳ ಸಂಚಾರ ಸುಗಮಗೊಳಿಸಲು ಸಾಮಾನ್ಯವಾಗಿ ಪೊಲೀಸರನ್ನು ನಿಯೋಜಿಸಲಾಗುತ್ತದೆ.  ಆದರೆ, ಕೊಳ್ಳೇಗಾಲದಲ್ಲಿ ಸಿಬ್ಬಂದಿ ಕಾಣಸಿಗುವುದಿಲ್ಲ. ಪ್ರತ್ಯೇಕ ಸಂಚಾರ ಠಾಣೆ ಇಲ್ಲದಿರುವುದು ಇದಕ್ಕೆ ಕಾರಣವಿರಬಹುದು.

ವೃತ್ತಗಳಲ್ಲಿ ಪೊಲೀಸ್‌ ಇಲ್ಲದಿರುವುದರಿಂದ ಬಸ್‌ಗಳು ಜನನಿಬಿಡ ಸ್ಥಳಗಳಲ್ಲಿ ಐದು–ಹತ್ತು ನಿಮಿಷ ನಿಲ್ಲಿಸಿಕೊಳ್ಳುವುದರಿಂದ ಸಮಸ್ಯೆ ಉಂಟಾಗುತ್ತಿದೆ. ಸಾರ್ವಜನಿಕರು ಮುಂದೆ ಹೋಗಿ ಎಂದು ಹೇಳಿದರೆ ಬಸ್ ಚಾಲಕರು ಮನಬಂದಂತೆ ವರ್ತಿಸುತ್ತಾರೆ ಎಂಬುದು ಜನರ ಅಳಲು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೊಳ್ಳೇಗಾಲ ಉಪವಿಭಾಗ ಡಿವೈಎಸ್‌ಪಿ ಧರ್ಮೇಂದ್ರ, ‘ವೃತ್ತಗಳಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿರುವ ವಿಷಯ ನನ್ನ ಗಮನಕ್ಕೆ ಬಂದಿದೆ. ಪ್ರತಿನಿತ್ಯ ವೃತ್ತಗಳಲ್ಲಿ ಪೊಲೀಸ್ ಸಿಬ್ಬಂದಿನ್ನು ನಿಯೋಜನೆ ಮಾಡಲಾಗುವುದು. ಚುನಾವಣೆ ಪ್ರಕ್ರಿಯೆ ಇನ್ನೂ ಮುಗಿಯದಿರುವುದರಿಂದ, ಹಲವು ಸಿಬ್ಬಂದಿ ಆ ಕರ್ತವ್ಯದಲ್ಲಿದ್ದಾರೆ. ಹೀಗಾಗಿ ಸ್ವಲ್ಪ ಕೊರತೆ ಇದೆ. ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದರು. 

ವೃತ್ತಗಳಲ್ಲಿ ಬಸ್ ಗಳನ್ನು ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಅಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಬೇಕು

– ಬಿ.ಮೂರ್ತಿ ಕೊಳ್ಳೇಗಾಲ ನಿವಾಸಿ

ಬೇಕಿದೆ ಸಂಚಾರ ಠಾಣೆ 

ಚಾಮರಾಜನಗರ ಜಿಲ್ಲೆಗೇ ಕೊಳ್ಳೇಗಾಲ ಪ್ರಮುಖ ವಾಣಿಜ್ಯ ವಹಿವಾಟಿನ ಕೇಂದ್ರ ಜಿಲ್ಲಾ ಕೇಂದ್ರಕ್ಕಿಂತಲೂ ಇಲ್ಲಿ ವ್ಯಾಪಾರ ಹೆಚ್ಚು. ಜನರ ಓಡಾಟವೂ ಜಾಸ್ತಿ. ಹಾಗಿದ್ದರೂ ಇಲ್ಲಿಗೆ ಪ್ರತ್ಯೇಕವಾದ ಸಂಚಾರ ಠಾಣೆ ಇಲ್ಲ. ಚಾಮರಾಜನಗರದಲ್ಲಿ ಇರುವಂತೆ ನಗರದಲ್ಲೂ ಸಂಚಾರ ಠಾಣೆ ಇದ್ದರೆ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ಸಾರ್ವಜನಿಕರು ಪೊಲೀಸ್‌ ಸಿಬ್ಬಂದಿ ಅಭಿಪ್ರಾಯ. ಪೊಲೀಸ್‌ ಇಲಾಖೆಯಲ್ಲಿ ಈ ವಿಚಾರ ಪ್ರಸ್ತಾವದ ಹಂತದಲ್ಲಿದೆ.  ‘ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇಲ್ಲಿಗೆ ಸಂಚಾರ ಠಾಣೆ ಬೇಕು. ಅನೇಕ ಬಾರಿ ಸಚಿವರಿಗೆ ಸಂಸದರಿಗೆ ಶಾಸಕರಿಗೆ ಹಾಗೂ ಸಂಬಂಧಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ. ಹಾಗಿದ್ದರೂ ಪ್ರಯೋಜನವಾಗಿಲ್ಲ. ಪ್ರತ್ಯೇಕ ಠಾಣೆ ಇದ್ದರೆ ಸಂಚಾರ ಸಮಸ್ಯೆಗಳ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಲು ಸಾಧ್ಯವಾಗುತ್ತದೆ. ಹೀಗಾಗಿ ಸಂಚಾರ ಠಾಣೆ ಆರಂಭಿಸಲು ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಸತ್ತೇಗಾಲದ ಕುಮಾರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT