ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ನೆತ್ತಿ ಸುಡುವ ಬಿಸಿಲು; ಬಸವಳಿದ ಜನ

ಫೆಬ್ರುವರಿಯಲ್ಲೇ 35.7 ಡಿಗ್ರಿ ಸೆಲ್ಸಿಯಸ್‌ ಉಷ್ಭಾಂಶ ದಾಖಲು, ಇನ್ನಷ್ಟು ಹೆಚ್ಚುವ ಭೀತಿ
ಸೂರ್ಯನಾರಾಯಣ ವಿ.
Published 23 ಫೆಬ್ರುವರಿ 2024, 4:53 IST
Last Updated 23 ಫೆಬ್ರುವರಿ 2024, 4:53 IST
ಅಕ್ಷರ ಗಾತ್ರ

ಚಾಮರಾಜನಗರ: ಬೇಸಿಗೆ ಕಾಲದ ಆರಂಭದ ಹೊತ್ತಿನಲ್ಲೇ ನೆತ್ತಿ ಸುಡುವ ಬಿಸಿಲು ಜನರನ್ನು ಬಸವಳಿವಂತೆ ಮಾಡುತ್ತಿದೆ. 

ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಎರಡು ದಿನಗಳಿಂದ 35.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಫೆಬ್ರುವರಿ ತಿಂಗಳಲ್ಲಿ ಎರಡು ವರ್ಷಗಳಿಂದ ಈ ಪ್ರಮಾಣದ ತಾಪಮಾನ ದಾಖಲಾಗಿಲ್ಲ. 

ಈ ತಿಂಗಳ 7ರಂದು ಜಿಲ್ಲೆಯಲ್ಲಿ 35.7 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಆ ಬಳಿಕ ಬಿಸಿಲಿನ ತೀವ್ರತೆ ಕೊಂಚ ಕಡಿಮೆಯಾಗಿತ್ತು. ಮೂರು ದಿನಗಳಿಂದ ಮತ್ತೆ ಏರಿಕೆ ಕಂಡು ಬಂದಿದ್ದು, ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ ಸನಿಹದಲ್ಲಿದೆ. ಒಂದೆರಡು ದಿನಗಳಲ್ಲಿ 36ರ ಗಡಿ ದಾಟಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

‘2022, 2023ರಲ್ಲಿ ಫೆಬ್ರುವರಿ ತಿಂಗಳಲ್ಲಿ ಈ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗಿರಲಿಲ್ಲ. ಕಳೆದ ವರ್ಷಕ್ಕಿಂತಲೂ ಹೆಚ್ಚು ಬಿಸಿಲು ಈ ಬಾರಿ ಕಂಡು ಬರುತ್ತಿದೆ. ಮಾರ್ಚ್‌, ಏಪ್ರಿಲ್‌ನಲ್ಲೂ ಬಿಸಿಲಿನ ಝಳ ಜಾಸ್ತಿ ಇರಲಿದೆ’ ಎಂದು ಹರದನಹಳ್ಳಿಯ ಕೃಷಿ ಹವಾಮಾನ ತಜ್ಞ ರಜತ್‌ ಎಚ್‌.ಪಿ  ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಜನರ ಪ್ರಯಾಸ: ಮುಂಜಾನೆ ಅವಧಿಯಲ್ಲಿ ಸ್ವಲ್ಪ ಚಳಿ ವಾತಾವರಣ ಇದೆ. ಬೆಳಿಗ್ಗೆ 9 ಗಂಟೆಗೆ ಭೂಮಿ ಕಾಯಲು ಆರಂಭಿಸುತ್ತಿದೆ. ಮಧ್ಯಾಹ್ನ 12ರ ನಂತರ ಮಧ್ಯಾಹ್ನ 3 ಗಂಟೆಗೆ ಹೊರಗಡೆ ಓಡಾಡಲು ಸಾಧ್ಯವಾಗದಂತಹ ಸನ್ನಿವೇಶ ಸೃಷ್ಟಿಯಾಗಿದೆ. 

ಅನಿವಾರ್ಯವಾಗಿ ಮನೆಯಿಂದ ಹೊರ ಬರಬೇಕಾದವರು ಛತ್ರಿ ಹಿಡಿದು ಅಥವಾ  ಟೊಪ್ಪಿ, ಬಟ್ಟೆ, ಶಾಲನ್ನು ತಲೆಗೆ ಹಾಕಿಕೊಂಡು ಓಡಾಡುತ್ತಿದ್ದಾರೆ. ನಗರ, ಪಟ್ಟಣ ಪ್ರದೇಶಗಳಲ್ಲದೆ, ಗ್ರಾಮೀಣ ಭಾಗಗಳಲ್ಲೂ ಇದೇ ಪರಿಸ್ಥಿತಿ ಇದೆ. 

ಬಿಸಿಲಿನಿಂದಾಗಿ ವಾತಾವರಣ ಬಿಸಿಯಾಗಿದ್ದು, ಬಿಸಿ ಗಾಳಿ ಬೀಸುತ್ತಿದೆ. ಮನೆ, ಕಚೇರಿಗಳಲ್ಲಿ ಫ್ಯಾನ್‌, ಎಸಿ ಇಲ್ಲದೆ ಕುಳಿತುಕೊಳ್ಳಲಾದ ಸ್ಥಿತಿ ಇದೆ. ಬಿಸಿಯಾದ ವಾತಾವರಣ ತಂಪಾಗಲು ರಾತ್ರಿಯಾಗಬೇಕಿದೆ. 

ಜಾನುವಾರುಗಳಿಗೂ ಕಷ್ಟ: ಮೇಯುವುದಕ್ಕಾಗಿ ಜಮೀನು, ಗುಡ್ಡ, ಬಯಲಿನಲ್ಲಿ ಸುತ್ತಾಡುವ ಜಾನುವಾರುಗಳಿಗೂ ಬಿಸಿಲಿನ ಝಳ ತಟ್ಟಿದೆ. ಮೇವು ಮೇಯ್ದ ಬಳಿಕ ವಿಶ್ರಾಂತಿಗಾಗಿ ನೆರಳನ್ನು ಹುಡುಕುತ್ತಿವೆ. 

'ಜಾನುವಾರುಗಳನ್ನು ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಗೆ ಹೊರಗಡೆ ಬಿಡುವುದನ್ನು ಹೈನುಗಾರರು ತಪ್ಪಿಸಬೇಕು. ಬೆಳಿಗ್ಗೆ ಮತ್ತು ಸಂಜೆಯ ಅವಧಿಯಲ್ಲಿ ಹೊರಗಡೆ ಬಿಟ್ಟರೆ ಒಳ್ಳೆಯದು. ಶುದ್ಧ ಕುಡಿಯುವ ನೀರು ಕೊಡಬೇಕು. ಬರೀ ಹಸಿ ಅಥವಾ ಕೇವಲ ಒಣ ಕೊಡದೆ, ಸಮ ಪ್ರಮಾಣದಲ್ಲಿ ಎರಡನ್ನೂ ಕೊಡಬೇಕು’ ಎಂದು ರಜತ್‌ ಸಲಹೆ ನೀಡಿದರು. 

ಎಳನೀರು, ಮಜ್ಜಿಗೆಗೆ ಬೇಡಿಕೆ: ಬಿಸಿಲಿನ ಝಳದಿಂದ ತತ್ತರಿಸುತ್ತಿರುವ ಜನರು ಎಳನೀರು, ಮಜ್ಜಿಗೆ, ಜ್ಯೂಸ್‌ ಮೊರೆ ಹೋಗುತ್ತಿದ್ದಾರೆ. ಎಳನೀರು ಅಂಗಡಿಗಳು, ನಂದಿನಿ ಮಳಿಗೆಗಳು, ಜ್ಯೂಸ್‌ ಅಂಗಡಿಗಳು, ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚು ಕಾಣುತ್ತಿದೆ. 

ರಜತ್‌ ಎಚ್‌.ಪಿ
ರಜತ್‌ ಎಚ್‌.ಪಿ
ಡಾ.ಎಚ್‌.ಎಸ್‌.ಕೃಷ್ಣಪ್ರಸಾದ್‌
ಡಾ.ಎಚ್‌.ಎಸ್‌.ಕೃಷ್ಣಪ್ರಸಾದ್‌

ಹವಾಮಾನ ಬದಲಾವಣೆಯಿಂದಾಗಿ ವರ್ಷದಿಂದ ವರ್ಷಕ್ಕೆ ತಾಪಮಾನ ಜಾಸ್ತಿಯಾಗಿದೆ. ಮಾರ್ಚ್‌ ಏಪ್ರಿಲ್‌ನಲ್ಲೂ ಬಿಸಿಲು ತೀವ್ರವಾಗಲಿರಲಿದೆ

-ರಜತ್‌ ಕೃಷಿ ಹವಾಮಾನ ತಜ್ಞ ಹರದನಹಳ್ಳಿ ಕೆವಿಕೆ

ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ

ಬೇಸಿಗೆಯಲ್ಲಿ ಡಿಹೈಡ್ರೇಷನ್‌ (ನಿರ್ಜಲೀಕರಣ) ದೂಳಿನಿಂದಾಗಿ ಶೀತ ಕೆಮ್ಮು ಹೀಟ್‌ ಸ್ಟ್ರೋಕ್‌ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡುತ್ತಾರೆ ವೈದ್ಯರು.  ‘ಜನರು ಬಿಸಿಲಿಗೆ ಹೋಗುವುದನ್ನು ಆದಷ್ಟೂ ತಪ್ಪಿಸಬೇಕು. ಮಧ್ಯಾಹ್ನ 12ರಿಂದ 3 ಗಂಟೆಯವರೆಗೆ ಹೊರಗಡೆ ಹೋಗದಿರುವುದು ಒಳ್ಳೆಯದು. ಡಿಹೈಡ್ರೇಷನ್‌ ತಪ್ಪಿಸಲು ಹೆಚ್ಚು ನೀರು ಕುಡಿಯಬೇಕು. ಟೀ ಕಾಫಿ ಗಿಂತ ಎಳನೀರು ಪಾನಕ ಮಜ್ಜಿಗೆ ಒಳ್ಳೆಯದು. ನೀರು ಕುಡಿಯದೇ ಇದ್ದರೆ ಬೇರೆ ಬೇರೆ ಕಾಯಿಲೆಗಳು ಬರಬಹುದು. ದೂಳಿನಿಂದಾಗಿ ಕೆಮ್ಮು ನೆಗಡಿ ಶ್ವಾಸಕೋಶ ಸೋಂಕು ಕಾಡಬಹುದು. ಹಾಗಾಗಿ ಜನರು ಬೇಸಿಗೆಯಲ್ಲಿ ಎಚ್ಚರಿಕೆಯಿಂದ ಇರಬೇಕು’ ಎಂದು ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT