ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಆಮ್ಲಜನಕ ದುರಂತ: ಸಿಗದ ನ್ಯಾಯ, ತಪ್ಪಿತಸ್ಥರಿಗೆ ಆಗದ ಶಿಕ್ಷೆ

ಆಮ್ಲಜನಕ ದುರಂತದ ಕಹಿಗೆ ಮೂರು ವರ್ಷ, ಸುಧಾರಣೆಯಾಗದ ಸಂತ್ರಸ್ತರಿಗೆ ಬದುಕು
Published 1 ಮೇ 2024, 22:58 IST
Last Updated 1 ಮೇ 2024, 22:58 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೆ 32ಕ್ಕೂ ಹೆಚ್ಚು ಮಂದಿ ಮೃತಪಟ್ಟ ದುರಂತಕ್ಕೆ ಇಂದಿಗೆ ಮೂರು ವರ್ಷ. ಮೂರು ವರ್ಷಗಳ ಕಳೆದರೂ ಸಂತ್ರಸ್ತರ ಕುಟುಂಬದವರಿಗೆ ನ್ಯಾಯ ಸಿಕ್ಕಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. 

2021ರ ಮೇ 2ರ ರಾತ್ರಿ ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಲಭ್ಯವಿರದೆ ವೆಂಟಿಲೇಟರ್‌, ಐಸಿಯುನಲ್ಲಿದ್ದ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದರು. ರಾತ್ರಿ 8.30ಕ್ಕೆ ಆಮ್ಲಜನಕ ಖಾಲಿಯಾಗಿತ್ತು. ಮತ್ತೆ ಪೂರೈಕೆಯಾದಾಗ ಮುಂಜಾವು 2.30 ಆಗಿತ್ತು. ಆ ದಿನದ ಅವಧಿಯಲ್ಲಿ 24ಕ್ಕೂ ಹೆಚ್ಚು ಮೃತಪಟ್ಟಿದ್ದರು. ಆದರೆ, ಅಂದಿನ ಬಿಜೆಪಿ ಸರ್ಕಾರ ಕೇವಲ ಮೂವರು ಮೃತಪಟ್ಟಿದ್ದರು ಎಂದು ಹೇಳಿತ್ತು. 

ಆಮ್ಲಜನಕ ಕೊರತೆಯ ಕಾರಣಕ್ಕೆ ಉಂಟಾದ ಆರೋಗ್ಯ ಸಮಸ್ಯೆಗಳಿಂದ ನಂತರವೂ ಹಲವು ರೋಗಿಗಳು ಕೊನೆಯುಸಿರೆಳೆದಿದ್ದರು. ಒಟ್ಟಾರೆಯಾಗಿ 36 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.

ಹೈಕೋರ್ಟ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಜಿಲ್ಲಾಡಳಿತ, ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯದಿಂದಾಗಿ ಈ ದುರಂತ ಸಂಭವಿಸಿದೆ ಎಂದು ತನಿಖಾ ವರದಿ ಹೇಳಿತ್ತು. ಸರ್ಕಾರವೂ ನಂತರ ಪ್ರತ್ಯೇಕವಾಗಿ ತನಿಖೆ ನಡೆಸಿತ್ತು.  

ಆರಂಭದಲ್ಲಿ, ಮೃತಪಟ್ಟವರ ಕುಟುಂಬದವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿರಲಿಲ್ಲ. ಹೈಕೋರ್ಟ್‌ನ ಸೂಚನೆಯ ನಂತರ ಮೃತಪಟ್ಟವರಲ್ಲಿ 13 ಜನರ ಕುಟುಂಬಗಳಿಗೆ ₹5 ಲಕ್ಷ, ಉಳಿದ 11 ಮಂದಿಯ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ನೀಡಲಾಗಿತ್ತು.

ಅಂದು ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್‌, 36 ಮಂದಿಯ ಮನೆಗೂ ಭೇಟಿ ನೀಡಿ ₹1 ಲಕ್ಷ ಪರಿಹಾರ ನೀಡಿತ್ತಲ್ಲದೇ, ರಾಜ್ಯದಲ್ಲಿ ಸರ್ಕಾರ ಬಂದರೆ, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ, ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಭರವಸೆ ನೀಡಿತ್ತು. 

ಆದರೆ, ಸರ್ಕಾರ ರಚನೆಯಾಗಿ ಒಂದು ವರ್ಷವಾದರೂ, ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿಲ್ಲ.

ಆದರೆ,  ಈ ವರ್ಷದ ಫೆ.1ರಿಂದ 32 ಮಂದಿಯ ಕುಟುಂಬಗಳ ತಲಾ ಒಬ್ಬ ಸದಸ್ಯರಿಗೆ ಗುತ್ತಿಗೆ ಆಧಾರದಲ್ಲಿ ಜಿಲ್ಲೆಯಲ್ಲಿ ಗ್ರೂಪ್‌ ಡಿ ಹುದ್ದೆಯನ್ನು ನೀಡುವುದಾಗಿ ಹೇಳಿತ್ತು. ಬಹುತೇಕ ಮಂದಿ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಕೆಲಸ ನೀಡಬೇಕು ಎಂದು ಹೇಳಿ, ಗ್ರೂಪ್‌ ಡಿ ಹುದ್ದೆಯನ್ನು ಒಪ್ಪಿಲ್ಲ. 14 ಮಂದಿ ವಿವಿಧ ಇಲಾಖೆಗಳ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅನಿವಾರ್ಯವಾಗಿ ಕೆಲಸ ಮಾಡುತ್ತಿದ್ದಾರೆ. 

ಸರ್ಕಾರಿ ಕೆಲಸ ಕೊಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಕಾಂಗ್ರೆಸ್‌ ಪಕ್ಷವು ನೀಡಿದ ಭರವಸೆಯಂತೆ ಕಾಯಂ ಸರ್ಕಾರಿ ಕೆಲಸ ನೀಡಬೇಕು ಎಂದು ಸಂತ್ರಸ್ತರ ಕುಟುಂಬದ ಸದಸ್ಯರ ಆಗ್ರಹ. 36 ಜನರ ಸಾವಿಗೆ ಕಾರಣರಾದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು ಎಂಬುದು ಅವರ ಮತ್ತೊಂದು ಬೇಡಿಕೆ. 

‘ನನ್ನ ಮಗನನ್ನು ಓದಿಸಬೇಕು. ಜೀವನ ನಿರ್ವಹಣೆ ಕಷ್ಟವಾಗಿರುವ ಕಾರಣಕ್ಕೆ ಅನಿವಾರ್ಯವಾಗಿ ಹೊರಗುತ್ತಿಗೆ ಆಧಾರದ ಕೆಲಸವನ್ನು ಒಪ್ಪಿಕೊಂಡಿದ್ದೇನೆ. ₹12,500 ವೇತನ ಬರುತ್ತದೆ. ಇದು ಸಾಲುತ್ತಿಲ್ಲ. ಸರ್ಕಾರ ನೀಡಿದ ಭರವಸೆಯಂತೆ ಕಾಯಂ ನೌಕರಿ ನೀಡಬೇಕು’ ಎಂದು ದುರ್ಘಟನೆಯಲ್ಲಿ ಗಂಡನನ್ನು ಕಳೆದುಕೊಂಡು ಬಿಸಿಲವಾಡಿಯ ಜ್ಯೋತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆಮ್ಲಜನಕ ಪೂರೈಸುವ ಜವಾಬ್ದಾರಿಯನ್ನು ಹೊತ್ತುಕೊಂಡವರು ಕರ್ತವ್ಯ ನಿರ್ಲಕ್ಷ್ಯ ಮಾಡಿದ್ದರಿಂದ ನಾವು ಮನೆಯ ಆಧಾರ ಸ್ತಂಭಗಳನ್ನು ಕಳೆದುಕೊಳ್ಳಬೇಕಾಯಿತು. ಇಂತಹ ದೊಡ್ಡ ತಪ್ಪು ಮಾಡಿದವರು ಯಾರು ಎಂದು ಗೊತ್ತಾಗಿಲ್ಲ. ಅವರಿಗೆ ಶಿಕ್ಷೆಯೂ ಆಗಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

ತಮ್ಮ ಪತಿಯನ್ನು ಕಳೆದುಕೊಂಡ ಮತ್ತೊಬ್ಬ ಮಹಿಳೆ ನಾಗರತ್ನ ಅವರು ಜ್ಯೋತಿಯವರ ಮಾತನ್ನು ಪುನರಾವರ್ತಿಸಿದರು. ಅವರು ಕೂಡ ಹೊರ ಗುತ್ತಿಗೆ ಆಧಾರದಲ್ಲಿ ಮೂರು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದಾರೆ. 

ಮಹೇಶ್‌ ಎಂ.
ಮಹೇಶ್‌ ಎಂ.
ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ತನಕ ನಮ್ಮ ಪಕ್ಷವು ಹೋರಾಟ ನಡೆಸಲಿದೆ
ಎಂ.ಮಹೇಶ್‌ ಎಸ್‌ಡಿಪಿಐ ಜಲ್ಲಾ ಪ್ರಧಾನ ಕಾರ್ಯ‌ದರ್ಶಿ

‘ಮೂರು ವರ್ಷ ಕಳೆದರೂ ಏನೂ ಆಗಿಲ್ಲ’

ದುರಂತದಲ್ಲಿ ತಾಯಿಯನ್ನು ಕಳೆದುಕೊಂಡ ಚಾಮರಾಜನಗರ ರಮೇಶ್‌ ಬಾಬು ಪ್ರತಿಕ್ರಿಯಿಸಿ ‘ಆ ಕಹಿ ಘಟನೆಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಯಾರೋ ಮಾಡಿದ ತಪ್ಪಿಗೆ ನಾವೆಲ್ಲ ಕುಟುಂಬದವರನ್ನು ಕಳೆದುಕೊಳ್ಳಬೇಕಾಯಿತು. ತಪ್ಪು ಮಾಡಿದವರಿಗೆ ಶಿಕ್ಷೆಯೂ ಆಗಿಲ್ಲ. ನಮ್ಮ ಕುಟುಂಬಕ್ಕೆ ಸರ್ಕಾರದಿಂದ ನೆರವೂ ಸಿಕ್ಕಿಲ್ಲ’ ಎಂದು ಹೇಳಿದರು.  ‘ಕಾಯಂ ಸರ್ಕಾರಿ ನೌಕರಿ ಭರವಸೆಯಾಗಿ ಉಳಿದಿದೆ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಕೊಡುತ್ತೇವೆ ಎಂದು ಹೇಳಿದ್ದರೂ ಡಿ ಗ್ರೂಪ್‌ ಹುದ್ದೆಗಳನ್ನು ನೀಡುತ್ತೇವೆ ಎಂದು ಹೇಳಿದ್ದರು. ‘ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತೀರಾ’ ಎಂದು ಕೇಳಿದ್ದರು. ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಕೆಲಸ ಕೊಡಿ ಎಂದು ಕೇಳಿದ್ದೆವು. ಅದನ್ನ ಅವರು ಕೊಟ್ಟಿಲ್ಲ’ ಎಂದರು. 

ಸಂತ್ರಸ್ತರ ಪರವಾಗಿ ಎಸ್‌ಡಿಪಿಐ ಹೋರಾಟ

ಘಟನೆ ನಡೆದಂದಿನಿಂದ ಇಲ್ಲಿಯವರೆಗೂ ಸಂತ್ರಸ್ತರ ಕುಟುಂಬಗಳ ಪರವಾಗಿ ಹೋರಾಟ ನಡೆಸುತ್ತಿರುವುದು ಎಸ್‌ಡಿಪಿಐ ಪಕ್ಷವೊಂದೇ.  ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್‌ ಕೂಡ ಘಟನೆ ಖಂಡಿಸಿ ದೊಡ್ಡ ಮಟ್ಟದ ಹೋರಾಟ ಮಾಡಿರಲಿಲ್ಲ.  ಎಸ್‌ಡಿಪಿಐ ಮುಖಂಡರು ಆರಂಭದಿಂದಲೂ ಹೋರಾಟ ಸಂಘಟಿಸಿ ಸಂತ್ರಸ್ತರ ಕುಟುಂಬಸ್ಥರನ್ನು ತನಿಖಾ ಆಯೋಗದ ಮುಂದೆ ಹಾಜರು ಪಡಿಸುವುದು ರಾಜ್ಯಪಾಲರನ್ನು ಭೇಟಿ ಮಾಡಿಸುವುದು ಸಚಿವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಒತ್ತಾಯಿಸುತ್ತಾ ಬಂದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT