ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬಡಾವಣೆಯಲ್ಲಿ ಹಳೆ ಸಮಸ್ಯೆ

Last Updated 15 ಜೂನ್ 2016, 9:50 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಇಲ್ಲಿನ ಕುದೇರು ಮುಖ್ಯರಸ್ತೆಯಲ್ಲಿರುವ ಹೊಸ ಬಡಾವಣೆ ಕುಡಿಯುವ ನೀರು, ಚರಂಡಿ, ಬೀದಿದೀಪ ಹಾಗೂ ರಸ್ತೆ ಸೇರಿದಂತೆ ಇತರೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ಬಡಾವಣೆ ನಿರ್ಮಾಣಗೊಂಡು ಹದಿನೈದು ವರ್ಷಗಳು ಕಳೆದಿವೆ. ಆದರೆ, ಮೂಲಸೌಕರ್ಯ ಮಾತ್ರ ಮರೀಚಿಕೆ ಯಾಗಿದೆ. ಗ್ರಾಮ ಪಂಚಾಯಿತಿ ಆಡಳಿತ  ಬಡಾವಣೆ ನಿವಾಸಿಗಳ ಅಗತ್ಯಕ್ಕೆ ತಕ್ಕಂತೆ ಮೂಲಸೌಲಭ್ಯ ಒದಗಿಸಿಲ್ಲ.

ಗ್ರಾಮ ಪಂಚಾಯಿತಿ ವತಿಯಿಂದ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಸಾಧಾರಣ ವಾಗಿ ನೀರು ಕೂಡ ಬರುತ್ತಿದೆ. ಆದರೆ, ಮನೆಗೆ ಅಗತ್ಯವಿರುವಷ್ಟು ನೀರು ಪೂರೈಕೆಯಾಗುತ್ತಿಲ್ಲ.

ಬಡಾವಣೆಯಲ್ಲಿ 6 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ವತಿಯಿಂದ ಕಿರುನೀರು ಸರಬರಾಜು ಘಟಕ ಯೋಜನೆಯಡಿ ಎರಡು ತೊಂಬೆ ನಿಲ್ಲಿಸಲಾಗಿದೆ. ಆದರೆ, ಇವುಗಳಿಗೆ ನೀರು ಸರಬರಾಜು ಮಾಡಲು ಹೊಸ ದಾಗಿ ಕೊಳವೆಬಾವಿ ಕೊರೆಯಿಸಿಲ್ಲ. ನೀರು ದೊರೆಯುವ ಕಡೆ ಯಿಂದಲೂ ಪೈಪ್‌ಲೈನ್ ಅಳವಡಿಸಿಲ್ಲ. ಹೀಗಾಗಿ, ನೀರು ಕಾಣದೇ ತೊಂಬೆಗಳು ಅನಾಥ ವಾಗಿ ನಿಂತಿವೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ತೊಂದರೆ ಯಾಗಿದೆ. ನೀರು ಸಿಗುವ ಬೇರೆ ಬಡಾವಣೆಯಿಂದ ನೀರು ತರಬೇಕಾದ ಪರಿಸ್ಥಿತಿ ಇದೆ. ಈ ಬಗ್ಗೆ ಸಂಬಂಧಪಟ್ಟ ವರಿಗೆ ಮನವಿ ಮಾಡಿದ್ದರೂ ಗಮನ ಹರಿಸಿಲ್ಲ ಎಂಬುದು ಇಲ್ಲಿನ ನಿವಾಸಿಗಳ ದೂರು.

ಬಡಾವಣೆಯಲ್ಲಿ ಚರಂಡಿ ಸಮಸ್ಯೆ ಕೂಡ ಇದೆ. ಚರಂಡಿ ನಿರ್ಮಿಸದ ಕಾರಣ ಮನೆಗಳಿಂದ ಹೊರಬರುವ ತ್ಯಾಜ್ಯ ನೀರು ಮನೆಗಳ ಮುಂಭಾಗವೇ ಹರಿ ಯುತ್ತಿದೆ. ಈ ನಿಂತ ನೀರು ಕ್ರಿಮಿಕೀಟ ಗಳು ಹಾಗೂ ಸೊಳ್ಳೆಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿಯೂ ಇಲ್ಲಿನ ಜನರಲ್ಲಿದೆ.

ರಸ್ತೆಯಲ್ಲಿ ಹರಿಯುತ್ತಿರುವ ಕೊಳಚೆ ನೀರಿನ ಸುತ್ತಲೂ ಕಳೆಗಿಡಗಳು ಬೆಳೆದಿವೆ. ಇದರಿಂದ ಬಡಾವಣೆಯಲ್ಲಿ ಅನೈರ್ಮಲ್ಯ ಉಂಟಾಗಿದೆ. ಸಮರ್ಪಕವಾಗಿ ಚರಂಡಿ ನಿರ್ಮಿಸಿ ಬಡಾವಣೆಯಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇಷ್ಟೆಅಲ್ಲದೆ, ಈ ಬಡಾವಣೆಯಲ್ಲಿ ರಸ್ತೆ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಮಳೆಗಾಲದಲ್ಲಿ ರಸ್ತೆಯ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗುತ್ತವೆ. ಇದರಿಂದ ಜನ ಓಡಾಟ ಮತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.

ಬಡಾವಣೆಯಲ್ಲಿ ಸಮರ್ಪಕ ಬೀದಿದೀಪದ ವ್ಯವಸ್ಥೆ ಇಲ್ಲ. ಕೆಲವೆಡೆ ಬೀದಿದೀಪ ಅಳವಡಿಸಿಲ್ಲ. ಇದರಿಂದ ಮಹಿಳೆಯರು ಮತ್ತು ಮಕ್ಕಳು ರಾತ್ರಿ ಸಮಯದಲ್ಲಿ ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. ಕೆಲವೆಡೆ ಅಳವಡಿಸಿರುವ ಬೀದಿದೀಪಗಳು ಬೆಳಗುತ್ತಿಲ್ಲ.

‘ಬಡಾವಣೆಗೆ ಮೂಲಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ. ಆದರೆ, ಇಲ್ಲಿಯವರೆಗೆ ಯಾರೂ ಗಮನಹರಿಸಿಲ್ಲ. ಇನ್ನಾದರೂ ಕುಡಿಯುವ ನೀರು, ಚರಂಡಿ, ಬೀದಿ ದೀಪ ವ್ಯಸ್ಥೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕು’ ಎಂದು ಬಡಾವಣೆ ನಿವಾಸಿಗಳಾದ ಆನಂದ್, ಸಿದ್ದರಾಜು ಇತರರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT