ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ | ಬತ್ತಿದ ತೊರೆ, ಹಳ್ಳ; ಜಾನುವಾರುಗಳಿಗೆ ಕುಡಿವ ನೀರಿಗೂ ತೊಂದರೆ

ರವಿ ಕೆಳಂಗಡಿ
Published 18 ಮಾರ್ಚ್ 2024, 7:07 IST
Last Updated 18 ಮಾರ್ಚ್ 2024, 7:07 IST
ಅಕ್ಷರ ಗಾತ್ರ

ಕಳಸ: ತಾಲ್ಲೂಕಿನಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಏರುತ್ತಿದ್ದು,  ಸರಾಸರಿ 38 ಡಿಗ್ರಿ  ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುತ್ತಿದೆ.  ತೋಟಗಾರಿಕಾ ಬೆಳೆಗಳಾದ ಕಾಫಿ, ಅಡಿಕೆ, ಕಾಳುಮೆಣಸು ಪ್ರಖರ ಬಿಸಿಲಿಗೆ ತತ್ತರಿಸಿವೆ.

ತಾಲ್ಲೂಕಿನಲ್ಲಿ ತಾಪಮಾನ 33 ಡಿಗ್ರಿ ಸೆಲ್ಸಿಯಸ್‌ ದಾಟಿದ ಸಂದರ್ಭದಲ್ಲಿ ದಟ್ಟ ಮೋಡಗಳು ಕಂಡು ಬರುತ್ತಿದ್ದವು. ಮಾರ್ಚ್ 2 ಅಥವಾ 3ನೇ ವಾರದದಲ್ಲಿ ಮೊದಲ ಬೇಸಿಗೆ ಮಳೆಯ ಸಿಂಚನ ಕಂಡು ಬರುತ್ತಿತ್ತು. ಆದರೆ, ಈ ವರ್ಷ, ಒಂದೆರಡು ದಿನ ಮೋಡ ಕಾಣಿಸಿಕೊಂಡಿದ್ದು ಬಿಟ್ಟರೆ ಮಳೆಯಾಗುವ ವಾತಾವರಣವೇ ಕಂಡು ಬರುತ್ತಿಲ್ಲ.

ಬಿಸಿಲಿನ ಬೇಗೆಗೆ ಜನರ ಜೊತೆಗೆ ಜಾನುವಾರುಗಳು ಕೂಡ ಬಳಲಿವೆ. ಈಗಗಾಗಲೇ ಸಣ್ಣ ಹಳ್ಳಗಳೆಲ್ಲ ಬತ್ತಿವೆ. ಜನರಿಗೆ ಕುಡಿಯಲು ನೀರಿನ ಕೊರತೆ ಉಂಟಾಗಿದೆ. ಜಾನುವಾರುಗಳು ಮತ್ತು ವನ್ಯ ಪ್ರಾಣಿಗಳು ಕುಡಿಯುವ ನೀರಿಗಾಗಿ ಅಲೆದಾಡುತ್ತಿವೆ.

ಕೆರೆಗಳು ಮತ್ತು ಸಣ್ಣ ಹಳ್ಳಗಳಲ್ಲಿ ಹರಿಯುತ್ತಿದ್ದ ನೀರಿನ ಆಸರೆಯಲ್ಲಿ ಕಾಫಿ, ಅಡಿಕೆ ತೋಟಗಳು ಇದುವರೆಗೆ ಜೀವ ಉಳಿಸಿಕೊಂಡಿದ್ದವು. ಈಗ ಅವುಗಳಲ್ಲೂ ನೀರಿನ ಕೊರತೆ ಎದುರಾಗಿರುವುದರಿಂದ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ.

'ಈ ವರ್ಷ ನಮ್ಮ ಹಳ್ಳದಲ್ಲಿ ಒಂದು ಹನಿ ನೀರೂ ಇಲ್ಲ. ಇನ್ನೊಂದು ವಾರದಲ್ಲಿ ಮಳೆ ಬರದಿದ್ದರೆ ತೋಟದ ಕಥೆ ಗೋವಿಂದ' ಎಂದು ಕೆ.ಕೆಳಗೂರಿನ ಬೆಳೆಗಾರರೊಬ್ಬರು ಹೇಳಿದರು.

'ಬಿಸಿಲಿಗೆ ಅಡಿಕೆ ಹಿಂಗಾರದಿಂದ ಮಿಡಿ ಉದುರುತ್ತಾ ಇದೆ. ಏನು ಮಾಡಿದ್ರೂ ಅಡಿಕೆ ತೋಟಕ್ಕೆ ನೀರೇ ಸಾಕಾಗ್ತಿಲ್ಲ' ಎಂದು ಹೊರನಾಡು ಸಮೀಪದ ಝರಿ ನೀರನ್ನು ನಂಬಿದ್ದ ಬೆಳೆಗಾರ ಬೇಸರದಿಂದ ಹೇಳಿದರು.

ತಮ್ಮ ತೋಟ, ಗದ್ದೆಯಲ್ಲಿ ನೀರಿನ ಒರತೆ ಇರುವ ಎಲ್ಲ ಜಾಗದಲ್ಲೂ ಈ ಬಾರಿ ಕೃಷಿಕರು ಕೆರೆ ತೋಡಿಸುವ ಸಾಹಸ ಮಾಡುತ್ತಿದ್ದಾರೆ. ಕೊಳವೆಬಾವಿ ಕೊರೆಯುವ ಪ್ರಯತ್ನ ಹಲವು ಕಡೆ ವಿಫಲ ಆಗಿದೆ. ಬೇಸಿಗೆ ಮಳೆ ಬಾರದ ಹೊರತು ಮಲೆನಾಡಿನಲ್ಲಿ ನೀರಿನ ಅಭಾವ ತೀರದು ಎಂಬುದು ಸತ್ಯ ಆಗಿದೆ. ಮಳೆಗಾಗಿ ದೇವರಲ್ಲಿ ಪ್ರಾರ್ಥನೆ, ಹೋಮ ಕೂಡ ಹಲವೆಡೆ ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT