ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆದ್ದಾರಿಯಲ್ಲೂ ಹೊಂಡ; ಸವಾರರ ಪರದಾಟ

ಜೋಸೆಫ್.ಎಂ
Published 12 ಜನವರಿ 2024, 7:15 IST
Last Updated 12 ಜನವರಿ 2024, 7:15 IST
ಅಕ್ಷರ ಗಾತ್ರ

ಆಲ್ದೂರು: ಸಮೀಪದ ಆಲದಗುಡ್ಡೆ ಗ್ರಾಮದ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ದಂಬದಹಳ್ಳಿವರೆಗೂ 2 ಕಿ.ಮೀ. ದೂರದವರೆಗೆ ದೊಡ್ಡ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರ ದುಸ್ತರವಾಗಿದೆ.

ಈ ರಸ್ತೆಯು ಕೊಡಗು ಜಿಲ್ಲೆಯ ವಿರಾಜಪೇಟೆಯಿಂದ ಉಡುಪಿ ಜಿಲ್ಲೆಯ ಬೈಂದೂರಿನವರೆಗೆ ಸಂಪರ್ಕ ಕಲ್ಪಿಸುತ್ತದೆ. ಹೆದ್ದಾರಿಯು ವಸ್ತಾರೆ ಗ್ರಾಮದ ಬಳಿ ಕವಲೊಡೆದು ಆಲ್ದೂರು ಮಾರ್ಗವಾಗಿ ಶೃಂಗೇರಿ, ಹರಿಹರಪುರ ಹೊರನಾಡು ಸಂಪರ್ಕಿಸುತ್ತದೆ. ಮೂಡಿಗೆರೆ, ಚಾರ್ಮಾಡಿ ಘಾಟ್‌ ಮೂಲಕ ಧರ್ಮಸ್ಥಳ, ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುತ್ತದೆ. ದೇವಸ್ಥಾನಗಳಿಗೆ ಭೇಟಿ ನೀಡಲು ಬರುವ ಭಕ್ತರು ಮತ್ತು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಇದೇ ರಸ್ತೆ ಮೂಲಕ ಬರಬೇಕಾಗಿದ್ದು, ಹದಗೆಟ್ಟ ರಸ್ತೆಯಲ್ಲಿ ಅವರ ಪಾಡು ಹೇಳತೀರದಾಗಿದೆ.

ರಾತ್ರಿ  ಸಮಯದಲ್ಲಿ ಚಾಲಕರು ಗುಂಡಿ ತಪ್ಪಿಸಲು ಹೋಗಿ ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ. ಕೆಲವೆಡೆ ಗ್ರಾಮಸ್ಥರು ಗುಂಡಿಗಳಲ್ಲಿ ಮಣ್ಣನ್ನು ತುಂಬಿದ್ದು,  ಲಾರಿ, ಟಿಪ್ಪರ್‌ ಅದರ ಮೇಲೆ ಸಂಚರಿಸುವಾಗ ಇಡೀ ರಸ್ತೆಯ ತುಂಬ ಧೂಳು ಏಳುತ್ತದೆ. 

‘ಆಲದಗುಡ್ಡೆಯಿಂದ ದಂಬದಹಳ್ಳಿವರಗೆ ಗುಂಡಿಗಳನ್ನು ಇನ್ನೂ ಮುಚ್ಚಿಲ್ಲ. ಹೊಸ ರಸ್ತೆ ಕಾಮಗಾರಿ ಆರಂಭ ಆಗುವವರೆಗಾದರೂ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿ ಸುರಕ್ಷಿತ ಚಾಲನೆಗೆ ಅನುವು ಮಾಡಿಕೊಡಬೇಕು’ ಎಂದು ದ್ವಿಚಕ್ರ ವಾಹನ ಸವಾರ ಬನ್ನೂರು ರೋಶನ್ ಆಗ್ರಹಿಸಿದರು.

‘ಪ್ರತಿ ಬಾರಿ ಚಿಕ್ಕಮಗಳೂರಿನಿಂದ ಆಲ್ದೂರಿಗೆ ಸರಕು ಸಾಗಿಸುವಾಗ, ವಾಹವನ್ನು ಗುಂಡಿಗಳಿಗೆ ಇಳಿಸಿ ರಿಪೇರಿಗೆ ಬಂದು, ಈಗ ಸಾಲ ಮಾಡಿ ಹೊಸ ವಾಹನ ಖರೀದಿ ಮಾಡಿದ್ದೇನೆ. ವಾಹನವನ್ನು ದುರಸ್ತಿ ಮಾಡಬಹುದು, ಆದರೆ,  ಸವಾರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಗಳಿಗೆ ಆಧಾರ ಏನು’ ಎಂದು ಸರಕು ವಾಹನ ಚಾಲಕ ರವಿ ಗೌಡ ಆಲ್ದೂರು ಬೇಸರ ವ್ಯಕ್ತಪಡಿಸಿದರು.

ಸಂಬಂಧಿಸಿದ ಇಲಾಖೆ ರಸ್ತೆ ದುರಸ್ತಿಗೆ ತಕ್ಷಣ ಮುಂದಾಗಬೇಕು ಎಂದು ಸ್ಥಳೀಯರಾದ ಮೂರ್ತಿ ಕೆ., ನೀಲೇಶ್ ಪಟೇಲ್, ಮಹೇಶ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT