ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಎಂಜಿನಿಯರಿಂಗ್ ಕಾಲೇಜು: ಚಿಗುರಿದ ಕನಸು

15 ಎಕರೆ ಜಾಗ ಒದಗಿಸಲು ಮುಂದಾದ ಜಿಲ್ಲಾಡಳಿತ: ಸರ್ಕಾರಕ್ಕೆ ಪ್ರಸ್ತಾವನೆ
ವಿಜಯಕುಮಾರ್ ಎಸ್.ಕೆ.
Published 29 ಡಿಸೆಂಬರ್ 2023, 6:49 IST
Last Updated 29 ಡಿಸೆಂಬರ್ 2023, 6:49 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣವಾಗುವ ಕನಸು ಜಿಲ್ಲೆಯಲ್ಲಿ ಮತ್ತೆ ಚಿಗುರೊಡೆದಿದೆ. ಕಾಲೇಜಿಗೆ ಮೊದಲ ಹಂತದಲ್ಲಿ 15 ಎಕರೆ ಜಾಗ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ ಪ್ರಸ್ತಾವನೆಯನ್ನೂ ಸರ್ಕಾರಕ್ಕೆ ಸಲ್ಲಿಸಿದೆ.

ಕಡೂರು ರಸ್ತೆಯ ಪವಿತ್ರ ವನದ ಎದುರಿನ ರಸ್ತೆಯಲ್ಲಿರುವ ಗೇಟ್ ವೇ ಹೋಟೆಲ್‌ನಿಂದ ಮುಂದೆ ಸಾಗಿದರೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ಪಾಳು ಬಿದ್ದಿರುವ ಸ್ಥಿತಿಯಲ್ಲಿ ಕಟ್ಟಡವೊಂದು ಎದುರಾಗುತ್ತದೆ. 2017ರಲ್ಲಿ ಜಿಲ್ಲಾಧಿಕಾರಿ ಕಚೇರಿ ಸಂಕಿರಣ ನಿರ್ಮಾಣಕ್ಕೆ ಆರಂಭಿಸಿದ್ದ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದು ಈಗ ಪಾಳುಬಿದ್ದ ಸ್ಥಿತಿಯಲ್ಲಿದೆ.

ಕುರುವಂಗಿ ಗ್ರಾಮದ ಸರ್ವೆ ನಂಬರ್ 42ರಲ್ಲಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಜಾಗ ಖಾಸಗಿ ವ್ಯಕ್ತಿಯೊಬ್ಬರಿಗೆ ಮಂಜೂರಾಗಿದ್ದ ಜಾಗ ಎಂಬ ಕಾರಣಕ್ಕೆ ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ದಂಟರಮಕ್ಕಿ ಕೆರೆ ಬಳಿ ನಿರ್ಮಾಣ ಮಾಡಲಾಗುತ್ತಿದೆ. ಆದ್ದರಿಂದ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಹಾಗೇ ಉಳಿದಿದೆ. ಕಟ್ಟಡದ ಸುತ್ತ ಗಿಡಗಳು ಬೆಳೆದಿದ್ದು, ಕಟ್ಟಡದ ಒಳಕ್ಕೆ ಹೋಗಲು ಸಾಧ್ಯವಾಗದ ಸ್ಥಿತಿಯಲ್ಲಿದೆ.

ಈಗ ಆ ಜಾಗ ಮರಳಿ ಪಡೆಯಲು ಜಿಲ್ಲಾಡಳಿತ ಪ್ರಯತ್ನಿಸಿತ್ತು. ಜಮೀನು ಮಂಜೂರಾಗಿದ್ದ ಖಾಸಗಿ ವ್ಯಕ್ತಿ ಜತೆ ಮಾತುಕತೆ ನಡೆಸಿ ವಿವಾದ ಇತ್ಯರ್ಥಗೊಳಿಸಿದೆ. ಪರ್ಯಾಯ ಜಾಗ ಮಂಜೂರು ಮಾಡಿ ಆ ಜಾಗ ವಾಪಸ್ ಪಡೆದುಕೊಂಡಿದೆ. ನ್ಯಾಯಾಲಯಕ್ಕೆ ರಾಜಿ ಅರ್ಜಿ ಹಾಕಿಸುವ ಮೂಲಕ ವಿವಾದ ಬಗೆಹರಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ಮಾಹಿತಿ ನೀಡಿದರು.

ಅರ್ಧಕ್ಕೆ ನಿಂತಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನೂ ಸೇರಿಸಿಕೊಂಡು ಕಾಲೇಜು ಕಟ್ಟಡ ನಿರ್ಮಾಣ ಮಾಡಬಹುದಾಗಿದೆ. ಜಾಗ ನೀಡಿದರೆ ಉಳಿದೆಲ್ಲಾ ಯೋಜನೆಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆ ನೋಡಿಕೊಳ್ಳಲಿದೆ ಎಂದರು.

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗೆ ದೊರೆತರೆ ಜಿಲ್ಲೆಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬರಲಿದೆ. ಬಡ ಪೋಷಕರ ಕನಸುಗಳು ನನಸಾಗಲಿವೆ ಎಂದು ಅವರು ವಿವರಿಸಿದರು.

Cut-off box - 90 ಎಕರೆ ಜಾಗ ಲಭ್ಯ 15 ಎಕರೆ ಮಾತ್ರವಲ್ಲದೆ ಈ ಜಾಗಕ್ಕೆ ಹೊಂದಿಕೊಂಡಂತೆ 90 ಎಕರೆ ಜಾಗ ಇದೆ. ಎಂಜಿನಿಯರಿಂಗ್ ಕಾಲೇಜಿಗೆ ಎಷ್ಟು ಅಗತ್ಯ ಬೇಕಿದೆಯೋ ಅಷ್ಟೂ ಜಾಗ ನೀಡಲು ಜಿಲ್ಲಾಡಳಿತ ಸಿದ್ಧವಿದೆ. ವಿದ್ಯಾರ್ಥಿ ನಿಲಯಗಳು ಆಟದ ಮೈದಾನ ಸೇರಿ ಹಲವು ಸೌಕರ್ಯಗಳಿಗೆ ಹೆಚ್ಚಿನ ಜಾಗ ಬೇಕಾಗಲಿದೆ. ಜಿಲ್ಲೆಯ ಜನರಿಗೆ ಒಳ್ಳೆಯದಾಗುತ್ತದೆ ಎಂದರೆ ಸರ್ಕಾರದ ಜಾಗ ಬಳಕೆ ಮಾಡಲು ತೊಂದರೆ ಏನೂ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT