ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | 1265 ಎಕರೆಯಲ್ಲಿ ಜಂಟಿ ಸರ್ವೆ ಪೂರ್ಣ

15 ಸರ್ವೆಯರ್ ನಿಯೋಜನೆ: 6 ತಂಡದಿಂದ ಕಾರ್ಯಾಚರಣೆ
ವಿಜಯಕುಮಾರ್ ಎಸ್.ಕೆ.
Published 13 ಜನವರಿ 2024, 7:01 IST
Last Updated 13 ಜನವರಿ 2024, 7:01 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕಂದಾಯ ಮತ್ತು ಅರಣ್ಯ ಜಾಗ ಗೊಂದಲ ನಿವಾರಣೆಗೆ ಜಂಟಿ ಸರ್ವೆ ಕಾರ್ಯ ಆರಂಭಗೊಂಡಿದ್ದು, ಚಿಕ್ಕಮಗಳೂರು, ಕಡೂರು ತಾಲ್ಲೂಕಿನಲ್ಲಿ ಈವರೆಗೆ 1,265 ಎಕರೆ ಜಾಗದ ಗೊಂದಲವನ್ನು ಸರ್ವೆ ತಂಡ ಇತ್ಯರ್ಥಗೊಳಿಸಿದೆ.

ಕಾಡಂಚಿನ ಜನವಸತಿ ಪ್ರದೇಶದಲ್ಲಿ ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಕಂದಾಯ ಇಲಾಖೆ ಹಕ್ಕು ಪತ್ರ ‌ನೀಡಿದೆ. ಆದರೆ, ಅದು ಅರಣ್ಯ ಇಲಾಖೆ ಜಾಗ ಎಂದು ಆಗಾಗ ಅಧಿಕಾರಿಗಳು ಹೇಳುತ್ತಿದ್ದರಿಂದ ಗೊಂದಲ ಉಂಟಾಗಿತ್ತು. ಜಂಟಿ ಸರ್ವೆ ನಡೆಯಬೇಕು ಎಂಬುದು ಜಿಲ್ಲೆಯ ರೈತರ 30 ವರ್ಷಗಳ ಬೇಡಿಕೆಯಾಗಿತ್ತು.

ಮೊದಲ ಹಂತದಲ್ಲಿ ಅತ್ಯಂತ ತುರ್ತಾಗಿ ಸಾರ್ವಜನಿಕ ಉದ್ದೇಶಕ್ಕೆ ಜಾಗ ಬೇಕಿರುವ ಕಡೆಗಳಲ್ಲಿ ಜಂಟಿ ಸರ್ವೆ ನಡೆಯುತ್ತಿದೆ. ಡಿಸೆಂಬರ್‌ ಕೊನೆಯಲ್ಲಿ  ಸರ್ವೆ ಕಾರ್ಯ ಆರಂಭವಾಗಿದೆ. ರಾಜ್ಯದ ವಿವಿಧೆಡೆಯಿಂದ 15 ಭೂ ಮಾಪಕರನ್ನು ಕಂದಾಯ ಇಲಾಖೆ ನಿಯೋಜಿಸಿದೆ. ಅರಣ್ಯ ಇಲಾಖೆ ತಂಡ ಕೂಡ ಜತೆಯಲ್ಲಿದ್ದು, ಒಟ್ಟಾಗಿಯೇ ಸರ್ವೆ ನಡೆಯುತ್ತಿದೆ.

ಮೊದಲ ಹಂತದಲ್ಲಿ ಕಡೂರು, ಚಿಕ್ಕಮಗಳೂರು ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಕಡೂರಿನಲ್ಲಿ 64 ಸರ್ವೆ ನಂಬರ್‌ಗಳ ಪೈಕಿ 34 ಸರ್ವೆ ನಂಬರ್‌ಗಳಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡಿದೆ.

ಒಟ್ಟು ಆರು ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಸರ್ವೆ ಕಾರ್ಯ ಪೂರ್ಣಕ್ಕೆ ಇನ್ನೂ ಒಂದು ತಿಂಗಳು ಕಾಲಾವಕಾಶ ಬೇಕಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. 

‌ಜಂಟಿ ಸರ್ವೆ ವೇಳೆ ಅರಣ್ಯ ಜಾಗ ಎಂಬುದು ಖಾತ್ರಿಯಾದರೆ ಅಲ್ಲಿರುವ ಒತ್ತುವರಿ ತೆರವುಗೊಳಿಸಬೇಕಾಗುತ್ತದೆ. ಅದಕ್ಕೂ ಮುಂದೆ ಅರಣ್ಯ ವ್ಯವಸ್ಥಾಪನ ಅಧಿಕಾರಿ(ಎಫ್‌ಎಸ್‌ಒ) ವಿಚಾರಣೆ ನಡೆಸಲಿದ್ದಾರೆ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಅರಣ್ಯ ಇಲಾಖೆಗೆ ವರ್ಗಾವಣೆ ಆಗುವ ಮುನ್ನವೇ ಮಂಜೂರಾಗಿರುವ ದಾಖಲೆ ಒದಗಿಸಿದರೆ ಹಿಡುವಳಿದಾರರಿಗೇ ಉಳಿಯಲಿದೆ ಎಂದು ಅವರು ವಿವರಿಸಿದರು.

ಕಡೂರು ತಾಲ್ಲೂಕಿನಲ್ಲಿ ಒಂದೇ ಸರ್ವೆ ನಂಬರ್‌ನಲ್ಲಿ ಇರುವ 25 ಸಾವಿರ ಎಕರೆ ಜಾಗದ ಸರ್ವೆ ಇನ್ನೂ ಆರಂಭವಾಗಬೇಕಿದೆ. ಸರ್ವೆ ಪೂರ್ಣಗೊಂಡರೆ ಈ ವಿಷಯದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ನಡುವೆ ಇರುವ ಬಹುದೊಡ್ಡ ಗೊಂದಲ ನಿವಾರಣೆ ಆದಂತೆ ಆಗಲಿದೆ ಎಂದು ಅವರು ಹೇಳಿದರು.

ಅರಣ್ಯ ವ್ಯಾಪ್ತಿಯಲ್ಲೆ ಹಲವು ಜನವಸತಿ ಹಲವು ಜನವಸತಿ ಪ್ರದೇಶಗಳು ದೊಡ್ಡ ದೊಡ್ಡ ಊರುಗಳೇ ‍ಪರಿಭಾವಿತ ಅರಣ್ಯ ಭೂಮಿಯ ವ್ಯಾಪ್ತಿಯಲ್ಲಿರುವುದು ಜಂಟಿ ಸರ್ವೆ ವೇಳೆ ಪತ್ತೆಯಾಗಿದೆ. ಈ ರೀತಿಯ ಊರುಗಳ ಬಗ್ಗೆಯೂ ಅರಣ್ಯ ವ್ಯವಸ್ಥಾಪನ ಅಧಿಕಾರಿ ವಿಚಾರಣೆ ನಡೆಸಲಿದ್ದಾರೆ. ಅರಣ್ಯ ಜಾಗ ಎಂಬ ಕಾರಣಕ್ಕೆ ಜನವಸತಿಗಳನ್ನು ಒಕ್ಕಲೆಬ್ಬಿಸುವ ಸಾಧ್ಯತೆ ಕಡಿಮೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಅರಣ್ಯ ಇಲಾಖೆಗೆ ಪರ್ಯಾಯ ಜಾಗ ಕೊಟ್ಟು ಗ್ರಾಮ ಠಾಣ ಉಳಿಸಿಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT