ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ರಸ್ತೆ, ವಿದ್ಯುತ್ ಕಾಣದ 55ಕ್ಕೂ ಹೆಚ್ಚು ಕುಟುಂಬಗಳು

Published 14 ಜನವರಿ 2024, 8:03 IST
Last Updated 14 ಜನವರಿ 2024, 8:03 IST
ಅಕ್ಷರ ಗಾತ್ರ

ಶೃಂಗೇರಿ: ತಾಲ್ಲೂಕಿನ ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದದೊಳಗೆ ಇರುವ ಮುಂಡೋಡಿ, ಕಚಿಗೆ, ಅವಿಗೆ, ಹಸಿರು ಹಡ್ಲು ಮತ್ತು ಮಿನಗರಡಿ ಮುಂತಾದ ಗ್ರಾಮದಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡಕ್ಕೆ ಸೇರಿರುವ 55ಕ್ಕೂ ಹೆಚ್ಚು ಕುಟುಂಬಗಳು ರಸ್ತೆ ಮತ್ತು ವಿದ್ಯುತ್ ಸೌಲಭ್ಯದಿಂದ ವಂಚಿತರಾಗಿ ಚಿಮಣಿ ದೀಪದಡಿ ದಿನ ದೂಡುತ್ತಿದ್ದಾರೆ.

ಶೃಂಗೇರಿ ಪಟ್ಟಣದಿಂದ ಸುಮಾರು 30ಕಿಲೋ ಮೀಟರ್ ದೂರದಲ್ಲಿರುವ ಮೀನಗರಡಿ, ಕಚಿಗೆ, ಹಸಿರು ಹಡ್ಲುಗೆ ಮಳೆಗಾಲದಲ್ಲಿ ಪ್ರಯಾಣ ಮಾಡುವುದೇ ದೊಡ್ಡ ಸವಾಲು. ಇನ್ನು ವಿದ್ಯುತ್ ಸಂಪರ್ಕವನ್ನಂತು ಈ ಮನೆಗಳು ಕಂಡೇ ಇಲ್ಲ.

ಕೋವಿಡ್ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ, ನೆಟ್‍ವರ್ಕ್ ಕೂಡ ಇಲ್ಲದೆ ಆನ್‌ಲೈನ್ ತರಗತಿಗೆ ಹಾಜರಾಗಲು ಮಕ್ಕಳು ಗುಡ್ಡಗಳನ್ನೇ ಏರಬೇಕಿತ್ತು. ಈಗ ಈ ಜನವಸತಿಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಟಣದ ಹಾಸ್ಟೆಲ್‍ನಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಶಿಕ್ಷಣ ಪಡೆಯಲು ಸಾಧ್ಯವಾಗಿದೆ.

‘ವಿದ್ಯುತ್ ಕಾಣದ ಹಳ್ಳಿಗಳು ಇಂದಿಗೂ ಇವೆ ಎಂಬುದಕ್ಕೆ ನಮ್ಮ ಗ್ರಾಮ ಉದಾಹರಣೆ. ಚಿಮಿಣಿ ದೀಪದಲ್ಲಿ ಹಿರಿಯ ತಲೆಮಾರಿನವರು ಬದುಕು ಸಾಗಿಸಿದ್ದು, ಯುವಪೀಳಿಗೆ ಕೂಡಾ ಅದೇ ಸ್ಥಿತಿ ಎದುರಿಸುತ್ತಿದೆ. ಯುವಕರು ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಬೇಕು. ಕೃಷಿ ಕಾರ್ಯ ಮಾಡಬೇಕು ಎಂದು ವೇದಿಕೆಯಲ್ಲಿ ಗಂಟೆಗಟ್ಟಲೆ ಭಾಷಣ ಮಾಡುವುದು ಸುಲಭ. ಭಾಷಣ ಮಾಡುವರು ಹಳ್ಳಿಯ ಕಡೆ ಬಂದು ಜನರ ಸಮಸ್ಯೆ ಅರಿತರೆ ಮಾತ್ರ ಗೋತ್ತಾಗುತ್ತದೆ. ಕೂಡಲೇ ನಮಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸಬೇಕು’ ಎಂದು ಗ್ರಾಮಸ್ಥರಾದ ಕೃಷ್ಣೇಗೌಡ, ವೆಂಕಟೇಶ, ಸೀತಮ್ಮ, ಸೂರುಗೌಡ್ರು, ವೆಂಕಗೌಡ್ರು, ಬಾಬುಗೌಡ್ರು ಒತ್ತಾಯಿಸಿದ್ದಾರೆ.

ಇನ್ನು ಮನೆಗೆ ಆಹಾರ ಸಾಮಾಗ್ರಿ, ಜಮೀನಿಗೆ ಗೊಬ್ಬರ ತರಲು ಬುಕ್ಕಡಿಬೈಲಿಗೆ 15ಕಿಲೋ ಮೀಟರ್ ನಡೆದು ಸಾಗಬೇಕಾಗಿದೆ. ಸಾಮಾಗ್ರಿ ಖರೀದಿಸಿ ಬಾಡಿಗೆ ವಾಹನಗಳಲ್ಲಿ ಹೋಗಲು ಶಕ್ತ ಇಲ್ಲದ ಕುಟುಂಬಗಳೇ ಹೆಚ್ಚಾಗಿವೆ. ಅನಾರೋಗ್ಯ ಕಾಡಿದಾಗ ರೋಗಿಗಳನ್ನು ಕಂಬಳಿಯಲ್ಲಿ ಸುತ್ತಿಕೊಂಡು ಹೋಗಿ ರಸ್ತೆ ಸಿಕ್ಕ ಬಳಿಕ ಗೂಡ್ಸ್‌ ವಾಹನಗಳಲ್ಲಿ ಆಸ್ಪತ್ರೆಗೆ ತೆರಳಬೇಕಾದ ಸ್ಥಿತಿ ಇದೆ.

ಪಟ್ಟಣದಿಂದ ಬಾಡಿಗೆ ರಿಕ್ಷಾ ಮಾಡಿಕೊಂಡು ಹೋದರೆ ₹1500, ಗೂಡ್ಸ್ ಆಟೋಗಳಲ್ಲಿ ಹೋದರೆ ₹3 ಸಾವಿರ ಬಾಡಿಗೆ ಕೊಡಬೇಕಾಗಲಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ ಮಾಡಲು ಅವಕಾಶವಿದೆ ಎಂದು ಸಂಬಂಧಪಟ್ಟ ಇಲಾಖೆ ಹೇಳುತ್ತಿದೆ. ಕಾಂಕ್ರಿಟ್ ರಸ್ತೆಗೆ ಬೇಕಾಗುವ ಅನುದಾನವನ್ನು ಸರ್ಕಾರ ನೀಡಬೇಕು. ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಿ ಎಂದು ಇತ್ತೀಚೆಗೆ ಇಂಧನ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಶೃಂಗೇರಿಗೆ ಭೇಟಿ ನೀಡಿದಾಗ ಗ್ರಾಮಸ್ಥರು ತೆರಳಿ ಮನವಿ ಮಾಡಿಕೊಂಡಿದ್ದಾರೆ. ಆದರೂ ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಕಚಿಗೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ
ಕಚಿಗೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ
ಮುಂಡೋಡಿ ಗ್ರಾಮದಲ್ಲಿ ಚಿಮಣಿ ದೀಪ ಹಿಡಿದು ಓದುತ್ತಿರುವ ಮಕ್ಕಳು
ಮುಂಡೋಡಿ ಗ್ರಾಮದಲ್ಲಿ ಚಿಮಣಿ ದೀಪ ಹಿಡಿದು ಓದುತ್ತಿರುವ ಮಕ್ಕಳು
ವಿದ್ಯುತ್ ಸಂಪರ್ಕ ಇಲ್ಲದೆ ಚಿಮಣಿ ದೀಪ ಬಳಕೆ ಅಭಿವೃದ್ಧಿಗೆ ವನ್ಯಜೀವಿ ವಿಭಾಗದವರಿಂದ ಅಡ್ಡಿ ರೋಗಿಗಳನ್ನುಕಂಬಳಿಯಲ್ಲಿ ಹೊತ್ತುಕೊಂಡು ಸಾಗುವ ನಿವಾಸಿಗಳು
‘ಮಾನವೀಯತೆ ತೋರಿಸಿ’
‘ರಾಷ್ಟ್ರೀಯ ಉದ್ಯಾನವನ ಯೋಜನೆಯಡಿ ಬರುವ ಗ್ರಾಮಗಳ ಜನ ಸಾಮಾನ್ಯರ ಸ್ಥಿತಿ-ಗತಿ ಹದಗೆಟ್ಟಿದೆ. ಸರ್ಕಾರ ಅವರಿಗೆ ಮೂಲಭೂತ ಸೌಲಭ್ಯ ನೀಡಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟಪ್ಪ ಹೆಗ್ಡೆ ಹೇಳಿದರು. ‘ಜನರಿಗೆ ಸಂಬಂಧಪಟ್ಟ ಇಲಾಖೆ ಮಾನವೀಯತೆ ತೋರಿಸಬೇಕು. ಒಟ್ಟಾರೆ ಗ್ರಾಮಸ್ಥರಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕ ನೀಡಬೇಕು’ ಎಂದರು.
‘ವನ್ಯಜೀವಿ ವಿಭಾಗದಿಂದ ಅಡ್ಡಿ’
ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ಮಾಡುವ ಸಂಧರ್ಭದಲ್ಲಿ ಮೂಲಭೂತ ಸೌಕರ್ಯ ನೀಡಲು ಧಕ್ಕೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ. ಈಗ ವನ್ಯಜೀವಿ ವಿಭಾಗದವರು ಕೃಷಿ ಚಟುವಟಿಕೆಗೆ ರಸ್ತೆ ಅಭಿವೃದ್ಧಿಗೆ ವಿದ್ಯುತ್ ಸಂಪರ್ಕ ನೀಡಲು ಅಡ್ಡಿ ಪಡಿಸುತ್ತೀದ್ದಾರೆ. ಅಲ್ಲಿನ ಜನರಿಗೆ ಕಿರುಕುಳ ನೀಡುತ್ತಿದ್ದಾರೆ. ಅವರಿಗೆ ಪರಿಹಾರ ನೀಡಲು ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸುತ್ತೇನೆ. ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT