ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದೂರು: 8 ತಿಂಗಳು ತಡವಾಗಿ ಬಂದ ಕಲಿಕಾ ಪುಸ್ತಕ

ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಗೆ ತಲೆನೋವು
ಜೋಸೆಫ್.ಎಂ.ಆಲ್ದೂರು
Published 11 ಜನವರಿ 2024, 7:35 IST
Last Updated 11 ಜನವರಿ 2024, 7:35 IST
ಅಕ್ಷರ ಗಾತ್ರ

ಆಲ್ದೂರು: ಸರ್ಕಾರಿ ಶಾಲೆ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ನೀಡುವ ಕಲಿಕಾ ಬಲವರ್ಧನೆ ಪುಸ್ತಕಗಳನ್ನು ಎಂಟು ತಿಂಗಳ ವಿಳಂಬವಾಗಿ ಶಿಕ್ಷಣ ಇಲಾಖೆ ಒದಗಿಸಿದ್ದು, ಪರೀಕ್ಷೆಗೆ ಎರಡು ತಿಂಗಳು ಬಾಕಿ ಇರುವಾಗ ಪಡೆದಿರುವ ವಿದ್ಯಾರ್ಥಿಗಳು ಕಲಿಯುವುದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ, ಶಿಕ್ಷಕರು ಮತ್ತು ಪೋಷಕರಿಗೂ ತಲೆನೋವಾಗಿ ಪರಿಣಮಿಸಿದೆ.

ಸರ್ಕಾರಿ ಶಾಲೆಯ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಗಣಿತ ಮತ್ತು ಪರಿಸರ ವಿಜ್ಞಾನ ವಿಷಯದ ವರ್ಕ್‌ಬುಕ್ (ಕಲಿಕಾ ಬಲವರ್ಧನೆ ಪುಸ್ತಕ) ವಿತರಣೆ ಮಾಡಲಾಗುತ್ತಿದೆ. 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಎಲ್ಲಾ ಆರು ವಿಷಯಗಳಿಗೆ ವರ್ಕ್‌ಬುಕ್ ನೀಡಲಾಗುತ್ತದೆ. ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೂ ಈ ಪುಸ್ತಕಗಳನ್ನು ವಿತರಿಸಲು ಅವುಗಳ ಮೂಲಕ ಅವರ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ.

ಈ ವರ್ಷ ಜೂನ್‌ನಲ್ಲಿ ಪಠ್ಯ ಪುಸ್ತಕದ ಜತೆಗೆ ಬರಬೇಕಿದ್ದ ಈ ಕಲಿಕಾ ಪುಸ್ತಕಗಳು ಜನವರಿಯಲ್ಲಿ ಬಂದಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಈಗ ಶಾಲೆಗಳಿಗೆ ವಿತರಣೆ ಮಾಡಿದ್ದಾರೆ. ಪರೀಕ್ಷೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಈಗ ಈ ಚಟುವಟಿಕೆಯಲ್ಲಿ ತೊಡಗಲು ಹೇಗೆ ಸಾಧ್ಯ ಎಂಬುದು ಪೋಷಕರ ಪ್ರಶ್ನೆ.

5ನೇ ತರಗತಿ, 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಯಲಿದ್ದು, ಮಾರ್ಚ್ 11ರಿಂದ ಆರಂಭವಾಗಲಿವೆ. ವರ್ಕ್‌ಬುಕ್‌ನಲ್ಲಿ ಇರುವ ಮಾಹಿತಿ ಆಧರಿಸಿಯೇ ಹೆಚ್ಚಿನ ಪ್ರಶ್ನೆಗಳು ಪರೀಕ್ಷೆಯಲ್ಲಿ ಬರುವ ಸಾಧ್ಯತೆ ಇವೆ. ಈಗ ಕಲಿಕಾ ಪುಸ್ತಕಗಳನ್ನು ನೀಡಿದರೆ ಹೇಗೆ ಕಲಿಸುವುದು ಎಂಬುದು ಕೆಲ ಶಿಕ್ಷಕರ ಪ್ರಶ್ನೆ.

8 ತಿಂಗಳು ನಡೆದಿರುವ ಪಾಠ ಪ್ರವಚನಗಳ ಕುರಿತು ಈಗ ಏಕಕಾಲಕ್ಕೆ ಕಲಿಕಾ ಬಲವರ್ಧನೆ ಮೂಲಕ ನಿರ್ವಹಿಸಿದರೆ ವಿದ್ಯಾರ್ಥಿಗಳು ಅದನ್ನು ಗ್ರಹಿಸಲು ಸಾಧ್ಯವಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ. ಇದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚಾಗಿ ಏಕಾಗ್ರತೆಯ ಕಲಿಕೆಗೆ ತೊಡಕಾಗಲಿದೆ.

‘ಪಠ್ಯದ ಅಧ್ಯಾಯಗಳನ್ನು ಕಲಿಯುವಾಗ ಸಮಾನಾಂತರವಾಗಿ ಕಲಿಕಾ ಬಲವರ್ಧನೆ ಪುಸ್ತಕಗಳ ಮೂಲಕ ಕಲಿಸಿದರೆ ವಿದ್ಯಾರ್ಥಿಗಳ ಸಾಮರ್ಥ್ಯ ಹೆಚ್ಚಾಗುತ್ತಿತ್ತು. ಈಗ ಎಲ್ಲವನ್ನೂ ಒಟ್ಟಿಗೆ ಕಲಿಯಲು ಕಲಿಕಾ ಪುಸ್ತಕ ನೀಡಿದರೆ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಕಿರಿಕಿರಿ ಉಂಟಾಗಲಿದೆ’ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ  ಅಧ್ಯಕ್ಷ ಎಚ್.ಎಲ್.ರವಿಕುಮಾರ್ ಹೇಳುತ್ತಾರೆ.

‘‌ವಿದ್ಯಾರ್ಥಿಗಳು ವಿಷಯವನ್ನು ಸರಿಯಾಗಿ ಅರ್ಥೈಸಿಕೊಂಡು ನೆನಪಿಟ್ಟುಕೊಳ್ಳಲು ಕಲಿಕಾ ಬಲವರ್ಧನೆ ಪುಸ್ತಕಗಳು ಹೆಚ್ಚು ಅನುಕೂಲ. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯವಿದ್ದು, ಅದನ್ನು ಸರಿಯಾದ ಸಮಯಕ್ಕೆ ಮಕ್ಕಳಿಗೆ ಸರ್ಕಾರ ತಲುಪಿಸಬೇಕಿತ್ತು. ಮುಂದಿನ ದಿನಗಳಲ್ಲಿ ಅನುದಾನಿತ ಶಾಲೆಗಳಿಗೂ ಈ ಯೋಜನೆ ವಿಸ್ತರಿಸಿದರೆ ಒಳ್ಳೆಯದು’ ಎಂದು ನಿವೃತ್ತ ಶಿಕ್ಷಕ  ಬಿ.ಪಿ.ಅರವಿಂದ್ ತಿಳಿಸಿದರು.

‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಧಿಕಾರಿಗಳು ಗಮನ ಹರಿಸಬೇಕು. ಸರಿಯಾದ ಸಮಯಕ್ಕೆ ಕಲಿಕಾ ಪುಸ್ತಕ ವಿತರಿಸುವ ಕೆಲಸ ಮಾಡಬೇಕು’ ಎಂಬುದು ಆಲ್ದೂರು ಸರ್ಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎ.ಯು. ಇಬ್ರಾಹಿಂ ಮನವಿ.

ಮುದ್ರಣ ವಿಳಂಬವಾಗಿದ್ದರಿಂದ ಕಲಿಕಾ ಬಲವರ್ಧನೆ ಪುಸ್ತಕಗಳು ತಡವಾಗಿ ಬಂದಿವೆ. ಕೂಡಲೇ ಅವುಗಳನ್ನು ಶಾಲೆಗಳಿಗೆ ವಿತರಣೆ ಮಾಡಲಾಗಿದೆ.
–ಕೆ.ಎಸ್.ಪ್ರಕಾಶ್ ಶಿಕ್ಷಣ ಇಲಾಖೆ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT