ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ತರಕಾರಿ ಆವಕ ಕುಸಿತ- ದರ ಏರಿಕೆ

ಮಳೆ ಕೊರತೆ: ಇಳುವರಿ ಕಡಿಮೆ: ಯುಗಾದಿ, ರಂಜಾನ್‌ಗೆ ಬೆಲೆ ಏರಿಕೆ ಸಾಧ್ಯತೆ
ರಘು ಕೆ.ಜಿ.
Published 5 ಏಪ್ರಿಲ್ 2024, 6:52 IST
Last Updated 5 ಏಪ್ರಿಲ್ 2024, 6:52 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಳೆ ಅಭಾವದಿಂದ ಇಳುವರಿ ಕುಂಠಿತವಾಗಿದ್ದು, ಮಾರುಕಟ್ಟೆಗೆ ತರಕಾರಿ ಆವಕ ಕಡಿಮೆಯಾಗಿದೆ. ಯುಗಾದಿ, ರಂಜಾನ್ ಸೇರಿ ಮುಂದೆ ಸಾಲು- ಸಾಲು ಹಬ್ಬಗಳಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುವ ಸಾಧ್ಯತೆ ದಟ್ಟವಾಗಿದೆ.

ಬಿಸಿಲ ಝಳದಿಂದ ಜಿಲ್ಲೆಯ ಕೆಲವೆಡೆ ಕೆರೆಗಳು ಒಣಗಿವೆ. ನೀರಿನ  ಕೊರತೆಯಿಂದ  ತರಕಾರಿ ಬೆಳೆಯುವುದು ಕ್ಷೀಣಿಸಿದೆ. ಸ್ಥಳೀಯವಾಗಿ ಮಾರುಕಟ್ಟೆಗೆ ಬರುವ ತರಕಾರಿ ಗಣನೀಯವಾಗಿ ಕುಸಿದಿದೆ. ಹೊರಗಿನಿಂದ ತರಕಾರಿ ಆವಕವಾಗುತ್ತಿದ್ದು ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಬೀನ್ಸ್ ದರ ಕೆ.ಜಿಗೆ ₹80, ದಪ್ಪ ಈರುಳ್ಳಿ ₹25, ಟೊಮೊಟೊ ₹20 ರಿಂದ ₹30, ಕ್ಯಾರೆಟ್ ₹45, ಹಸಿರು ಮೆಣಸಿನಕಾಯಿ ₹45, ಆಲೂಗಡ್ಡೆ ₹30, ಮೂಲಂಗಿ ಮತ್ತು ಹೂಕೋಸು ₹30, ನುಗ್ಗೇಕಾಯಿ ₹50 ದರ ಇದೆ.

ಬೇಸಿಗೆಯಲ್ಲಿ ಪಂಪ್‌ಸೆಟ್‌ ನೀರಾವರಿ ಆಶ್ರಿತ ರೈತರು ಮಾತ್ರ ಮಾರುಕಟ್ಟೆಗೆ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಾರೆ. ಸದ್ಯ ಈರುಳ್ಳಿಯನ್ನು ವಿಜಯಪುರ, ಮಹಾರಾಷ್ಟ್ರದಿಂದ ಆವಕ ಮಾಡಿಕೊಳ್ಳಲಾಗುತ್ತಿದೆ. 50 ಕೆ.ಜಿ ತೂಕದ ಈರುಳ್ಳಿ(ದಪ್ಪ) ಚೀಲಕ್ಕೆ ₹900 ದರ ಇದೆ. ಬೆಳ್ಳುಳ್ಳಿ ಗುಣಮಟ್ಟದ ಆಧಾರದಲ್ಲಿ ಕೆ.ಜಿ.ಗೆ ₹160ರವರೆಗೆ ದರ ಇದೆ. ರಂಜಾನ್, ಯುಗಾದಿ ಹಬ್ಬದ ಅಂಗವಾಗಿ ತರಕಾರಿ ತುಟ್ಟಿಯಗುವ ಸಾಧ್ಯತೆ ಇದೆ ಎಂದು ಈರುಳ್ಳಿ ಸಗಟು ವ್ಯಾಪಾರಿ ಮೋಹನ್‌ ಹೇಳಿದರು.

ಲಕ್ಯಾ, ಅಂಬಳೆ, ಹಿರೇಗೌಜ, ಮೂಡಿಗೆರೆ ಭಾಗದಲ್ಲಿ ನೀರಾವರಿ ಆಶ್ರಿತ ರೈತರು ಹೆಚ್ಚು ತರಕಾರಿ ಬೆಳೆ ಬೆಳೆಯುತ್ತಾರೆ. ಮಳೆ ಕೊರತೆಯಿಂದ ಇಲ್ಲೂ ಬೆಳೆ ಕಡಿಮೆಯಾಗಿದೆ. ಮಳೆ ಆರಂಭಗೊಂಡರೆ ತರಕಾರಿ ಅವಕ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅಭಿನಂದನ್ ಹೇಳಿದರು.

ಹಣ್ಣು ದುಬಾರಿ: ಬೇಸಿಗೆಯಲ್ಲಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ದರವೂ ತುಸು ಹೆಚ್ಚಾಗಿದೆ. ದ್ರಾಕ್ಷಿ ಪ್ರತಿ ಕೆ.ಜಿಗೆ ₹100, ದಾಳಿಂಬೆ ₹200, ಬಾಳೆಹಣ್ಣು ₹70, ಕಿತ್ತಳೆ ₹100, ಕಲ್ಲಂಗಡಿ ಕೆ.ಜಿಗೆ 30, ಸಪೋಟ ₹80 ದರ ಇದೆ ಎಂದು ಹಣ್ಣಿನ ವ್ಯಾಪಾರಿ ಅರ್ಬಾಸ್ ಹೇಳಿದರು. ಬಿಸಿಲಿನ ತಾಪದಿಂದ ಬೇಸತ್ತ ಜನರು ಬೆಲೆ ಏರಿಕೆಯನ್ನು ಲೆಕ್ಕಿಸದೆ ಖರೀದಿ ಮಾಡುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಹಣ್ಣುಗಳಿಗೆ ಬೇಡಿಕೆ ಕುಸಿದಿಲ್ಲ ಎಂದು ಅವರು ಹೇಳಿದರು.

ಹೊರ ಜಿಲ್ಲೆಗಳಿಂದ ಮಾರುಕಟ್ಟೆಗೆ ಬಂದಿರುವ ತರಕಾರಿ
ಹೊರ ಜಿಲ್ಲೆಗಳಿಂದ ಮಾರುಕಟ್ಟೆಗೆ ಬಂದಿರುವ ತರಕಾರಿ

ಕಳೆದ ಬಾರಿ ಶುಂಠಿ ಹಸಿರು ಮೆಣಸಿನಕಾಯಿ ಬೀನ್ಸ್ ಸೇರಿ ತರಕಾರಿ ಬೆಳೆ ಬೆಳೆದಿದ್ದೆ ಉತ್ತಮ ಬೆಲೆ ಸಿಕ್ಕಿತ್ತು. ಈ ಬಾರಿ ಮಳೆ ಇಲ್ಲವಾಗಿದೆ ತರಕಾರಿ ಬೆಳೆಯಲು ನೀರಿಗಾಗಿ ಬೇರೆಯವರನ್ನು ಆಶ್ರಿಯಿಸಿದ್ದೇನೆ. –ಭೀಮರಾಜ್‌ ರೈತ ಅಂಬಳೆ ಗ್ರಾಮ

‘ಗ್ರಾಹಕರಿಗೆ ಹೊರೆಯಾಗದಂತೆ ಕ್ರಮ’ ಬೇಸಿಗೆ ಕಾರಣ ಜಿಲ್ಲೆಯಲ್ಲಿ ತರಕಾರಿ ಇಳುವರಿ ಕುಂಠಿತವಾಗಿದ್ದು ಹೊರ ರಾಜ್ಯಗಳಿಗೆ ಪೂರೈಕೆ ಪ್ರಮಾಣ ಕಡಿಮೆಯಾಗಿದೆ. ‘ಜಿಲ್ಲೆಯ ಕೆಲವೆಡೆ ಹೆಚ್ಚು ಪ್ರಮಾಣದಲ್ಲಿ ತರಕಾರಿ ಬೆಳೆಯುವುದರಿಂದ ಸದ್ಯಕ್ಕೆ ತರಕಾರಿ ಅಭಾವವಿಲ್ಲ. ಆದರೆ ಬೆಲೆ ಏರಿಳಿತ ಸಾಮಾನ್ಯ. ಅಭಾವ ಉಂಟಾದಲ್ಲಿ ಗ್ರಾಹಕರಿಗೆ ಹೊರೆಯಾಗದಂತೆ ಹೊರ ರಾಜ್ಯಗಳಿಂದ ತರಕಾರಿ ಆಮದು ಮಾಡಿಕೊಳ್ಳಲಾಗುವುದು’ ಎಂದು ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್‌.ಹರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT