ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದ್ಹಿಡಿ ಹುಲ್ಲಿಗಾಗಿ ಅಂಬಾ.. ಅಂಬಾ..!

ನೆಲಗೇತಲಹಟ್ಟಿಯ ಬುಡಕಟ್ಟಿನವರ ಪಾರಂಪರಿಕ ಗೋಶಾಲೆ ದೇವರೆತ್ತುಗಳಿಗೆ ಎದುರಾದ ಮೇವಿನ ಕೊರತೆ
Last Updated 14 ಅಕ್ಟೋಬರ್ 2016, 7:57 IST
ಅಕ್ಷರ ಗಾತ್ರ

ನಾಯಕನಹಟ್ಟಿ:  ‘ಆ ಕರು ಹುಟ್ಟಿ ನಾಲ್ಕೈದು ದಿನಗಳಾಗಿವೆ. ಚಂಗನೆ ಜಿಗಿಯಬೇಕಾದ ಅದು ಸಪ್ಪೆಮೋರೆ ಹಾಕಿಕೊಂಡು ಅಮ್ಮನ ಮಡಿಲಲ್ಲಿ ಮಲಗಿದೆ.  ಆಗಾಗ ಕೆಚ್ಚಲಿಗೆ
ಬಾಯಿ ಹಾಕಿ ಹಾಲು ಹೀರಲು ಹವಣಿಸುತ್ತದೆ... ಆದರೆ, ಅಮ್ಮನ ಕೆಚ್ಚಲಿನಲ್ಲಿ ಹಾಲು ಬರುತ್ತಿಲ್ಲ...

ಹಸುವಿನಿಂದ ಕರು ಅಂಬಾ...  ಅಂಬಾ... ಎಂದು ರೋದಿಸುತ್ತದೆ... ಅಂಬಾ ಎನ್ನುವ ದನಿಯ ಶಕ್ತಿಯೂ ಕ್ಷೀಣಿಸಿದೆ... ಹಸುಕಂದನಿಗೆ ಎದೆಹಾಲು ನೀಡುವಷ್ಟು ದೇಹದಲ್ಲಿ ಶಕ್ತಿಯಿಲ್ಲ ಎಂಬ ಅಸಹಾಯಕತೆಯಲ್ಲಿ ತಾಯಿಹಸು ಅದರ ಮೈನೆಕ್ಕುತ್ತದೆ. ಆ ತಾಯಿಹಸುವಿನ ಕಣ್ಣುಗಳಲ್ಲಿ ಹನಿಗಳು ಕಾಣುತ್ತವೆ...’

ಇದು ಕತೆಯಲ್ಲ. ಸಮೀಪದ ನೆಲಗೇತಲಹಟ್ಟಿ ಹೊರವಲಯದಲ್ಲಿ ಬುಡಕಟ್ಟು ಜನಾಂಗ ನಿರ್ಮಿಸಿರುವ ಪಾರಂಪರಿಕ ಗೋಶಾಲೆಯಲ್ಲಿ  150ಕ್ಕೂ ಹೆಚ್ಚು ದೇವರೆತ್ತುಗಳ (ಜಾನುವಾರು) ಕರುಣಾಜನಕ ಸ್ಥಿತಿ ಇದು.

ನಾಯಕ ಜನಾಂಗ ಬುಡಕಟ್ಟು ಎನ್ನುವ ಉಪಪಂಗಡ ನಿರ್ಮಿಸಿರುವ ಈ ಗೋಶಾಲೆ ಅವರ ಪಾಲಿಗೆ ದೇಗುಲ ಇದ್ದಂತೆ. ಅಲ್ಲಿರುವ ಎಲ್ಲಾ ಜಾನುವಾರು ಅಪ್ಪಟ ದೇಸಿ ತಳಿಯ ಅಮೃತ್‌ ಮಹಲ್‌. ಅವೆಲ್ಲವೂ ಶ್ರೀಕೃಷ್ಣನ ಅವತಾರ ಎಂದೇ ಇಲ್ಲಿನ ಜನರು  ನಂಬಿ ಪೂಜಿಸುತ್ತಾರೆ. ಅಷ್ಟೇ ಅಲ್ಲ ಊರಿನಲ್ಲಿ ಯಾರಿಗೇ  ರೋಗ, ಜ್ವರಬಾಧೆ ಬಂದರೂ ಅವರು ಈ ಗೋಶಾಲೆಯಲ್ಲಿ ತಂಗುತ್ತಾರೆ.

ಶ್ರೀಕೃಷ್ಣನ ಧ್ಯಾನ ಮಾಡುತ್ತಾರೆ. ಗೋಶಾಲೆಯಲ್ಲಿ ಪ್ರತಿಷ್ಠಾಪಿಸಿರುವ ಬಸವ ವಿಗ್ರಹ ಮೂರ್ತಿಗೆ ಪೂಜೆ, ನೈವೇದ್ಯ ಸಲ್ಲಿಸುತ್ತಾರೆ. ರೋಗ, ಜ್ವರಬಾಧೆ ನಿವಾರಣೆ ಆಗಿದೆ ಎಂದು ಇಲ್ಲಿನ ಗೋಶಾಲೆ ನಿರ್ವಹಣೆ ಮಾಡುತ್ತಿರುವ ಕಿಲಾರಿ ಬೋರಯ್ಯ ಹೇಳುತ್ತಾರೆ.

‘ಪಶುಪಾಲಕ ಸಂಸ್ಕೃತಿ ಉದಯಿಸಿದ ಕಾಲದಿಂದಲೂ ಈ ಗೋಶಾಲೆ ಜನಾಂಗದ ಜತೆಜತೆಗೆ ಬಂದಿದೆ. ಊರಿನಲ್ಲಿ ಇರುವ  ಚೆನ್ನಕೇಶವ ಸ್ವಾಮಿ ದೇವರ ಹೆಸರಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗಿದೆ. ದೇವರ ರಥೋತ್ಸವ ದಂದು ಗೋಶಾಲೆಯಲ್ಲಿನ ದೇವರ ಎತ್ತುಗಳು ಚನ್ನಕೇಶವ ಸ್ವಾಮಿ ದೇಗುಲ ಪ್ರದಕ್ಷಿಣೆ ಹಾಕುತ್ತವೆ. ಅವನ್ನು ದೈವದ ಸ್ವರೂಪದಲ್ಲಿ  ಜನರು ಕಾಣುತ್ತಾರೆ.

ಇಂತಹ ದೇವರೆತ್ತುಗಳಿಗೆ ಈಗ ಮೇವಿನ ಕೊರತೆ ಎದುರಾಗಿದೆ. ಮಳೆ ಕೊರತೆ ಕಾರಣ ಗೋಮಾಳದ ಜಮೀನಿನಲ್ಲಿ ಹಿಡಿಹುಲ್ಲು ಚಿಗುರಿಲ್ಲ. ಕುರುಚಲು ಗಿಡಗಳ
ಸೊಪ್ಪು ಸಿಗುತ್ತಿದ್ದ ಕುದಾಪುರ ಹುಲ್ಲುಗಾವಲು ಪ್ರದೇಶ ಈಗ ಡಿಆರ್‌ಡಿಒ ಸಂಸ್ಥೆಯ ವಶದಲ್ಲಿದೆ. ಪ್ರವೇಶ ನಿರ್ಬಂಧಿಸಿರುವ ಕಾರಣ ಈಗ ಅಲ್ಲೂ ಜಾನುವಾರಿಗೆ ಮೇವು ಸಿಗುತ್ತಿಲ್ಲ. ಭಕ್ತರು ಅಷ್ಟಿಷ್ಟು ಮೇವು ಖರೀದಿಸಿ ಹಾಕುತ್ತಿದ್ದರೂ  ಸಾಕಾಗುತ್ತಿಲ್ಲ. ತೀವ್ರ ಮೇವಿನ ಕೊರತೆಯಿಂದಾಗಿ ಎಲ್ಲಾ ಜಾನುವಾರು ಬಡಕಲು ದೇಹ ಹೊತ್ತಿವೆ. ಹಸಿವು ನೀಗಿಸಿಕೊಳ್ಳಲು ಅವು ಸಗಣಿತಿಪ್ಪೆಯಲ್ಲೇ ಮೂತಿಇಟ್ಟು ಮೇವು ಹುಡುಕುವುದನ್ನು ನೋಡಿದರೆ ಎಂಥವರಿಗೂ ಕರಳು ಹಿಂಡಿದಂತಾಗುತ್ತದೆ.

ಮೂರು ವರ್ಷಗಳಿಂದ ಗೋಶಾಲೆ ಸಮೀಪ ಸಂಗ್ರಹಿಸಿರುವ ಗೊಬ್ಬರವನ್ನು ಮಾರಿದರೆ ಕನಿಷ್ಠ ₹ 3 ಲಕ್ಷ ಸಿಗುತ್ತದೆ. ಅದರಿಂದ ಮೇವು ಖರೀದಿಸಿ ತಕ್ಷಣ ಪರಿಸ್ಥಿತಿ ಸುಧಾರಿಸಬಹುದು. ಆದರೆ, ಸ್ಥಳೀಯ ಮುಖಂಡ ನಡುವೆ ಇರುವ ಗೊಂದಲದಿಂದಾಗಿ ಗೊಬ್ಬರ ಮಾರಾಟ ನಡೆದಿಲ್ಲ. ಇದರಿಂದಾಗಿ ಮೂಕ ಪ್ರಾಣಿಗಳ ವೇದನೆ ಅರಣ್ಯರೋದನವಾಗಿದೆ. ಇದು ಕೇವಲ ದೇವರೆತ್ತುಗಳಿಗಷ್ಟೇ ಅಲ್ಲ, ರೈತರ ಜಾನುವಾರು ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ ಎನ್ನುತ್ತಾರೆ ರೈತರು.

ಅಮೃತ್‌ ಮಹಲ್‌ ಅಪರೂಪದ ದೇಸಿ ತಳಿ. ಅವನ್ನು ಉಳಿಸಿಕೊಳ್ಳುವಲ್ಲಿ ಸ್ಥಳೀಯ ಆಡಳಿತ  ನಿರ್ಲಕ್ಷಿಸಿದೆ. ಜನಪ್ರತಿನಿಧಿಗಳು, ಮತ್ತು ಜಿಲ್ಲಾಡಳಿತ ಇತ್ತ ಕಣ್ಣು ಹಾಯಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT