ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರು ತಿಪ್ಪೇಶನ ಅಭಿಷೇಕಕ್ಕೆ ಮಳೆನೀರು!

Last Updated 6 ಏಪ್ರಿಲ್ 2017, 4:27 IST
ಅಕ್ಷರ ಗಾತ್ರ

ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಶಾಸ್ತ್ರ, ಸಂಪ್ರದಾಯಗಳು ಹಾಗೂ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ಇದರ ಜತೆಗೆ ನೀರಿನ ಮೌಲ್ಯದ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಕೈಗೆತ್ತಿಕೊಳ್ಳಲಾಗಿದ್ದು, ಗುರು ತಿಪ್ಪೇಶನ ನಿತ್ಯಾಭಿಷೇಕಕ್ಕಾಗಿ ಮಳೆ ನೀರು ಸಂಗ್ರಹ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮಳೆನೀರು ಸಂಗ್ರಹದ ಯೋಜನೆ: ಚಿತ್ರದುರ್ಗದ ಜಲತಜ್ಞ ಎನ್.ಜೆ. ದೇವರಾಜರೆಡ್ಡಿ ಅವರ ತಾಂತ್ರಿಕ ಸಲಹೆ, ಸಹಕಾರ ಪಡೆದು ಪಟ್ಟಣದ ಒಳಮಠದ ಚಾವಣಿ (216 ಚದರ ಮೀಟರ್), ದಾಸೋಹ ಭವನದ ಚಾವಣಿ (300 ಚದರ ಮೀಟರ್) ವಿಸ್ತಿರ್ಣದಲ್ಲಿ ಬೀಳುವ ಮಳೆ ನೀರು ಸಂಗ್ರಹಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಇದೇ ರೀತಿ, ಹೊರಮಠದ ಯಾತ್ರಿ ನಿವಾಸ ಮತ್ತು ಸಮುದಾಯ ಭವನದ ಮೇಲೆ ಕೂಡ ಮಳೆ ನೀರು ಸಂಗ್ರಹದ ರೂಪುರೇಷೆ ತಯಾರಿಸಲಾಗಿದೆ.

‘ಈ ಯೋಜನೆ ಮೂಲಕ ವಾರ್ಷಿಕವಾಗಿ ಸುಮಾರು 2,58,000 ಲೀಟರ್‌ ಮಳೆನೀರನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ಮಳೆ ನೀರು ಸಂಗ್ರಹಕ್ಕೆ 54,000 ಸಾವಿರ ಲೀಟರ್ ಸಾಮರ್ಥ್ಯದ ಸಂಪ್‌ಗಳನ್ನು ನಿರ್ಮಿಸಲಾಗಿದೆ. ಈ ಯೋಜನೆಗೆ ತಗುಲಿರುವ ವೆಚ್ಚ ಕೇವಲ ₹ 99,000.  ಸ್ವಲ್ಪ ಕೆಲಸದಿಂದ ಅಪಾರ ಪ್ರಮಾಣದ ಅಮೂಲ್ಯ  ಪರಿಶುದ್ಧ ನೀರಿನ ಸಂಗ್ರಹ ಸಾಧ್ಯ’ ಎಂದು ಉಪ ವಿಭಾಗಾಧಿಕಾರಿ ಟಿ.ರಾಘವೇಂದ್ರ ಹೇಳಿದರು.

‘ಗುರು ತಿಪ್ಪೇರುದ್ರಸ್ವಾಮಿ ತೀರ್ಥ’ ಸಂಗ್ರಹ: ಒಳಮಠದ ಗರ್ಭಗುಡಿಯ ಮೇಲೆ ಮಳೆನೀರು ಸಂಗ್ರಹದ ಪೈಪ್‌ಲೈನ್‌ ಅಳವಡಿಸಲಾಗಿದೆ. ಗರ್ಭಗುಡಿಯ ಮೇಲೆ ಬಿದ್ದ ನೀರನ್ನು 5,000 ಲೀಟರ್‌ ಸಾಮರ್ಥ್ಯದ ಎರಡು ಟ್ಯಾಂಕ್‌ಗಳಲ್ಲಿ ಸಂಗ್ರಹವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಟ್ಯಾಂಕ್‌ಗಳಿಗೆ ‘ಗುರು ತಿಪ್ಪೇರುದ್ರಸ್ವಾಮಿ ತೀರ್ಥ ಸಂಗ್ರಹಾಗಾರ’ ಎಂದು ಹೆಸರಿಡಲಾಗಿದೆ. ಈ ನೀರಿನಲ್ಲಿ ದೇವರಿಗೆ ನಿತ್ಯ ಅಭಿಷೇಕ ಮಾಡುವ ಉದ್ದೇಶವನ್ನು ಹೊಂದಲಾಗಿದೆ.

ದೇವರಾಜರೆಡ್ಡಿ ‘ಪ್ರಜಾವಾಣಿ’ ಜತೆ ಮಾತನಾಡಿ, ‘ನೀರಿನ ಮಿತ ಬಳಕೆ ಮಾಡುವ ಹಲವು ಆಧುನಿಕ ವಿಧಾನಗಳಲ್ಲಿ ಮಳೆನೀರು ಸಂಗ್ರಹವೂ ಒಂದು. ಇದರಿಂದ ಅಪಾರ ಪ್ರಮಾಣದ ನೀರಿನ ಸಂಗ್ರಹ ಹಾಗೂ ಸಂರಕ್ಷಣೆ ಸಾಧ್ಯ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಈ ವಿಧಾನವನ್ನು ತಮ್ಮ ಮನೆಗಳ ಚಾವಣಿಗಳಲ್ಲಿ ಅಳವಡಿಸಿಕೊಂಡರೆ ಜಲಕ್ಷಾಮ ಹೋಗಲಾಡಿಸಿ ನೀರಿನ ಬವಣೆ ತಪ್ಪಿಸಬಹುದು’ ಎಂದು ಸಲಹೆ ನೀಡಿದರು.

**

ನೀರು ಅಮೂಲ್ಯವಾದದ್ದು. ಮಿತವಾಗಿ ಬಳಕೆ ಮಾಡಿ ಮುಂದಿನ ಪೀಳಿಗೆಗೂ ನೀಡುವ ಗುರುತರ ಜವಾಬ್ದಾರಿ ನಮ್ಮದಾಗಬೇಕು.

-ಟಿ.ರಾಘವೇಂದ್ರ, ಉಪ ವಿಭಾಗಾಧಿಕಾರಿ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT