ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಯ್ಲಿಗೆ ಮುನ್ನವೇ ಅರಳುತ್ತಿರುವ ಹೂವು

ಉದುರುತ್ತಿರುವ ಕಾಫಿ ಹಣ್ಣು: ಮಳೆಯಿಂದ ಬೆಳೆಗಾರರು ಹೈರಾಣ
ಎಂ.ಪಿ. ಹರೀಶ್
Published 12 ಜನವರಿ 2024, 7:26 IST
Last Updated 12 ಜನವರಿ 2024, 7:26 IST
ಅಕ್ಷರ ಗಾತ್ರ

ಆಲೂರು: ಕಾಫಿ ಕೊಯ್ಲು ಕೆಲಸ ಮುಕ್ತಾಯವಾಗುವ ಮುನ್ನವೇ ಅಕಾಲಿಕ ಮಳೆಯಾಗಿದ್ದು, ಒಂದೆಡೆ ಹಣ್ಣು ಗಿಡದಿಂದ ಉದುರುತ್ತಿದೆ. ಇನ್ನೊಂದೆಡೆ ಹದ ಮಳೆಯಾದ್ದರಿಂದ ಗಿಡದಲ್ಲಿ ಮೊಗ್ಗು ಅರಳಲು ಪ್ರಾರಂಭವಾಗಿದ್ದು, ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.

ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಅರೇಬಿಕ ಕಾಫಿ ಹಣ್ಣು ಕೊಯ್ಲು ಪ್ರಾರಂಭವಾಗಿ ಡಿಸೆಂಬರ್ ತಿಂಗಳ ವೇಳೆಗೆ ಮುಕ್ತಾಯವಾಗುತ್ತದೆ. ಜನವರಿಯಿಂದ ರೋಬಸ್ಟ್‌ ಕಾಫಿ ಕೊಯ್ಲು ಪ್ರಾರಂಭವಾಗುತ್ತದೆ. ಕೆಲ ದಶಕಗಳ ಹಿಂದೆ ಕೊಯ್ಲು ಸಮಯದಲ್ಲಿ ಅಪರೂಪದಂತೆ ಮಳೆ ಬಂದು ಹೋಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಯಿಂದ ಕೊಯ್ಲು ಸಮಯದಲ್ಲಿ ಮಳೆ ಆಗುತ್ತಿರುವುದರಿಂದ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಕೊಯ್ಲು ಮಾಡಿದ ನಂತರ ಪಲ್ಪರ್ ಮಾಡಿದ ಕಾಫಿ ಬೀಜವನ್ನು ಬಿಸಿಲು ಇಲ್ಲದೇ ಶೇ 50 ರಷ್ಟು ಒಣಗಿಸಲು ಸಾಧ್ಯವಾಗುತ್ತಿಲ್ಲ. ಬೀಜ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಗಿಡದ ಬಳಿ ಬಿದ್ದಿರುವ ಹಣ್ಣನ್ನು ಹೆರಕಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಣ್ಣು ಕೊಳೆತು ನಾರುತ್ತಿದೆ. ಮೊಗ್ಗು ಅರಳಿದ ನಂತರ ಹೂ ಆಗುತ್ತದೆ. 15 ದಿನದೊಳಗೆ ಹದ ಮಳೆಯಾದರೆ ಕಾಳುಗಟ್ಟುತ್ತದೆ. ಮಳೆಯಾದರೆ ಕೊಯ್ಲು ಮಾಡದೇ ಉಳಿದಿರುವ ಕಾಫಿ ಹಣ್ಣು ಉದುರಿ ಕರಗುತ್ತದೆ.

ತಾಲ್ಲೂಕಿನ ಕೆ. ಹೊಸಕೋಟೆ, ಪಾಳ್ಯ ಹೋಬಳಿ ಮತ್ತು ಗಡಿ ಭಾಗದ ಬಿಕ್ಕೋಡು, ಅರೆಹಳ್ಳಿ ಹೋಬಳಿಯಲ್ಲಿ ಶೇ 80 ಕ್ಕೂ ಹೆಚ್ಚು ಕಾಫಿ ಬೆಳೆಯಲಾಗುತ್ತದೆ. ಆಲೂರು ತಾಲ್ಲೂಕಿನಲ್ಲಿ ಸುಮಾರು ಐದು ದಶಕಗಳಿಂದ ಕಾಡಾನೆ ಹಾವಳಿಯಿಂದ ಬೆಳೆಗಾರರು ನಲುಗಿದ್ದಾರೆ. ಬಿಕ್ಕೋಡು, ಅರೆಹಳ್ಳಿ ಹೋಬಳಿಯಲ್ಲಿ ಎರಡು ವರ್ಷಗಳಿಂದ ಕಾಡಾನೆಗಳ ಹಾವಳಿ ಎದುರಾಗಿದೆ. ಸರ್ಕಾರದ ಕೆಲವು ಗ್ಯಾರಂಟಿ ಯೋಜನೆಯಿಂದ ಕೃಷಿ ಕಾರ್ಮಿಕರ ಅಭಾವ ತೀವ್ರ ತಲೆದೋರಿದೆ ಎಂದು ಬೆಳೆಗಾರರು ದೂರುತ್ತಿದ್ದಾರೆ.

ಈ ಮೊದಲು ದಿನದ ಎಂಟು ಗಂಟೆಗಳ ಕಾಲ ಕಾರ್ಮಿಕರು ಕೃಷಿ ಕೆಲಸ ಮಾಡುತ್ತಿದ್ದರು. ಈಗ ಕೇವಲ ಆರು ಗಂಟೆಗಳ ಕಾಲ ಮಾತ್ರ ಕೆಲಸ ಮಾಡುತ್ತಿದ್ದಾರೆ. ಸಂಬಳವೂ ಅಧಿಕವಾಗಿದೆ. ಸಕಾಲಕ್ಕೆ ಕಾರ್ಮಿಕರು ದೊರಕದೇ ಕೆಲಸ ಏರುಪೇರಾಗಿದೆ ಎಂದು ಹೇಳುತ್ತಿದ್ದಾರೆ.

Cut-off box - ಕಂಗೆಡಿಸಿದ ಹವಾಮಾನ ವೈಪರೀತ್ಯ 3–4 ದಶಕಗಳ ಹಿಂದೆ ಸಕಾಲಕ್ಕೆ ಮಳೆಯಾಗುತ್ತಿತ್ತು. ಸಂಪದ್ಬರಿತ ಬೆಳೆಯಾಗುತ್ತಿತ್ತು. ಈಗ ಕಾರ್ಮಿಕರ ಅಭಾವ ಕಾಡಾನೆ ಹಾವಳಿ ಹವಾಮಾನ ವೈಪರೀತ್ಯದಿಂದ ಕೃಷಿಯಲ್ಲಿ ವರ್ಷದಿಂದ ವರ್ಷಕ್ಕೆ ಭಾರಿ ಹಿನ್ನಡೆಯಾಗುತ್ತಿದೆ ಎಂದು ಹೊಳಲು ಎಸ್ಟೇಟ್ ಕಾಫಿ ಬೆಳೆಗಾರ ಎಚ್.ಎ. ಯೋಗೇಶ್ ಹೇಳುತ್ತಾರೆ. ವರ್ಷವಿಡೀ ಖರ್ಚು ಮಾಡಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ರಕ್ಷಿಸಿ ಉತ್ತಮ ಬೆಲೆಗೆ ಮಾರಾಟ ಮಾಡಲು ಆಗುತ್ತಿಲ್ಲ. ಒಳ್ಳೆಯ ಬೆಳೆ ಸಿಗದೇ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ. ರೈತರ ಸ್ಥಿತಿ ಅಧೋಗತಿಗೆ ತಲುಪುತ್ತಿದೆ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT