ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ | ‘ದ್ವೇಷಕ್ಕಲ್ಲ ಅಭಿವೃದ್ಧಿಗೆ ಬಳಸಿ’

ಸಂತೋಷ್ ಸಿ.ಬಿ.
Published 8 ಜೂನ್ 2024, 6:50 IST
Last Updated 8 ಜೂನ್ 2024, 6:50 IST
ಅಕ್ಷರ ಗಾತ್ರ

ಹಾಸನ: ‘ಪಾರದರ್ಶಕವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಚುನಾವಣಾ ಆಯೋಗವು, ಬೂತ್‌ ಮಟ್ಟದ ಮತದಾನದ ವಿವರವನ್ನು ಬಹಿರಂಗ ಪಡಿಸಿದ್ದು, ಕಡಿಮೆ ಮತಗಳು ಬಂದಿರುವ ಪಕ್ಷದವರು, ಆಯಾ ಬೂತ್‌ಗಳ ಸ್ಥಳೀಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆಗಳು ಹೆಚ್ಚಿವೆ’ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಯಾವ ಮತದಾರ ಮತದಾನ ಮಾಡಿಲ್ಲ’ ಎಂಬ ವಿಷಯ ತಿಳಿಸಲು ಹಾಗೂ ‘ಆ ಬೂತ್‌ನಲ್ಲಿ ಅಭ್ಯರ್ಥಿಗೆ ಎಷ್ಟು ಮತ‌ ಚಲಾವಣೆಯಾಗಿದೆ’ ಎಂಬ ಮಾಹಿತಿಯನ್ನು ನೀಡಲಾಗುತ್ತಿದೆ. ಅದೇ‌ ಮಾಹಿತಿಯನ್ನು‌ ಒಟ್ಟಾಗಿ ನೀಡುವ ಬದಲು, ಯಾವ ಅಭ್ಯರ್ಥಿಗೆ ಎಷ್ಟು ಮತ? ಮಹಿಳೆಯರು‌ -ಪುರುಷರು ಎಷ್ಟು? ಆ‌‌‌ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪ್ರತಿ‌‌ ಅಭ್ಯರ್ಥಿಗೆ ಚಲಾಯಿಸಿರುವ ಮತದಾನವೆಷ್ಟು ಎಂಬ ವಿವರ ನೀಡಲಾಗುತ್ತಿದೆ.

ಇದರಿಂದ‌ ಯಾವ ಮತದಾರ, ಯಾವ ಅಭ್ಯರ್ಥಿಗೆ ಮತ ನೀಡಿದ್ದಾರೆ? ಯಾವ ವಾರ್ಡ್, ‌ಗ್ರಾಮದ‌ ಮತದಾರರು ಯಾವ ಪಕ್ಷಕ್ಕೆ ಅಥವಾ ಅಭ್ಯರ್ಥಿಗೆ ಮತ ನೀಡಿದ್ದಾರೆ‌‌‌ ಎಂಬ ಮಾಹಿತಿ ಗೊತ್ತಾಗುತ್ತದೆ. ‘ಈ ಮೂಲಕ ಆ ಕ್ಷೇತ್ರದಲ್ಲಿ ಹಿಂದೆ ಆಯ್ಕೆಯಾದ ಅಭ್ಯರ್ಥಿ ‌ಗೆದ್ದರೆ‌ ಸರಿ, ಇಲ್ಲವಾದಲ್ಲಿ ಆ ಕ್ಷೇತ್ರ, ಗ್ರಾಮದ‌ ಅಥವಾ ‌ವಾರ್ಡ್ ಅಭಿವೃದ್ಧಿಗೆ ಗ್ರಹಣ ಹಿಡಿಯಲಿದೆ’ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ಇದಕ್ಕೆ ಉದಾಹರಣೆ ಎಂಬಂತೆ, ಒಂದು ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂಬ ಕಾರಣಕ್ಕೆ, ಹಾಸನ ತಾಲ್ಲೂಕಿನ ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಹಾಲನ್ನು ಪಡೆಯಲು ನಿರಾಕರಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಲವರು ದೂರುತ್ತಿದ್ದಾರೆ. ಪಟ್ಟಣ, ಪುರಸಭೆ ಚುನಾವಣೆಯಾದರೆ ವಾರ್ಡ್, ವಿಧಾನಸಭಾ‌ -ಲೋಕಸಭೆ ಚುನಾವಣೆಯಾದರೆ ಬೂತ್ ಅಥವಾ ಗ್ರಾಮದ‌‌ ಅಭಿವೃದ್ಧಿಗೆ ಕಡಿವಾಣ ಬೀಳುತ್ತದೆ‌. ನಮ್ಮ‌ ಪಕ್ಷಕ್ಕೆ ಅಥವಾ ಅಭ್ಯರ್ಥಿಗೆ ಮತ ಹಾಕಿಲ್ಲ ಎಂಬ ಕಾರಣಕ್ಕೆ ಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ. ರಾಜಕೀಯ ದ್ವೇಷಕ್ಕೂ ನಾಂದಿ ಆಗಲಿದೆ ಎನ್ನುವ ಅಭಿಪ್ರಾಯ ಜನರದ್ದು. ‘ಮತದಾನಕ್ಕೆ ಇವಿಎಂ ಬಳಸಲು ಆರಂಭಿಸುವ ಮುನ್ನ, ಪ್ರತಿ ಚುನಾವಣೆಯಲ್ಲಿ ಚಲಾವಣೆಯಾದ ಎಲ್ಲ ಮತಪತ್ರಗಳನ್ನು ಒಟ್ಟಾಗಿ ಕಲೆಹಾಕಿ ಎಣಿಕೆ ಮಾಡಲಾಗುತ್ತಿತ್ತು. ಬೂತ್ ಮಟ್ಟದ ಮತ ಎಣಿಕೆ ವಿವರ ಲಭ್ಯವಾಗುತ್ತಿರಲಿಲ್ಲ. ಆದರೆ ಈಗ ಎಲ್ಲ ವಿವರ ಬಹಿರಂಗವಾಗುತ್ತಿದೆ. ಇದರ ನೇರ ಪರಿಣಾಮ ಮತದಾ ರರ ಮೇಲೆ ಬೀಳುತ್ತಿದೆ‘ ಎನ್ನುತ್ತಾರೆ ಜನ.

‘ಮುಂಬರುವ ಚುನಾವಣೆಗಳಲ್ಲಿ ಗೆಲುವು ಪಡೆಯಲು ಅಥವಾ ತಮ್ಮ ತಪ್ಪು ಗಳನ್ನು ತಿದ್ದಿಕೊಳ್ಳಲು ಈ ಮಾಹಿತಿ ಅನುಕೂಲವಾಗಲಿದೆ ಆದರೆ, ಅದನ್ನು ಬಿಟ್ಟು ರಾಜಕೀಯದ್ವೇಷಕ್ಕೆ ಬಳಸಿಕೊಳ್ಳುವುದೇ ಹೆಚ್ಚಾಗಿದೆ’ ಎನ್ನುತ್ತಾರೆ ಬಿಜೆಪಿ ನಾಯಕರೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT