ಹಾಸನ: ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದು, ಈ ಬಾರಿಯ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಲು ಆರಂಭಿಸಿದೆ. ಜಿಲ್ಲೆಯ ಜೀವನಾಡಿ ಹೇಮಾವತಿ ನದಿಯಲ್ಲೂ ನೀರಿನ ಕೊರತೆ ಇದ್ದು, ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ನೀರಿನ ಸಮಸ್ಯೆ ಆರಂಭವಾಗಿದೆ.
ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿಯಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಗ್ರಾಮ ಪಂಚಾಯಿತಿಯ ಕೊಳವೆಬಾವಿ ಹಾಗೂ ಖಾಸಗಿಯಾಗಿ ಬಾಡಿಗೆ ಆಧಾರದಲ್ಲಿ ಕೊಳವೆಬಾವಿಗಳ ಮೂಲಕ ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ.
ಜಿಲ್ಲೆಯ ಅರಕಲಗೂಡು, ಬೇಲೂರು, ಹಾಸನ, ಆಲೂರು, ಹೊಳೆನರಸಿಪುರ, ಚನ್ನರಾಯಪಟ್ಟಣ ತಾಲ್ಲೂಕಿನ ಗ್ರಾಮಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದ್ದು, ಹಾಸನ ತಾಲ್ಲೂಕಿನಲ್ಲಿ ಅತಿ ಹೆಚ್ಚು 14 ಗ್ರಾಮಗಳಲ್ಲಿ, ಬೇಲೂರು ತಾಲ್ಲೂಕಿನ 8, ಅರಕಲಗೂಡಿನಲ್ಲಿ 4, ಚನ್ನರಾಯಪಟ್ಟಣ ತಾಲ್ಲೂಕಿನ 2, ಆಲೂರು ತಾಲ್ಲೂಕಿನ 1 ಗ್ರಾಮ ಪಂಚಾಯಿತಿ, ಹೊಳೆನರಸೀಪುರ ತಾಲ್ಲೂಕಿನ 1 ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಈ ಗ್ರಾಮಗಳಿಗೆ ಕೊಳವೆಬಾವಿಗಳ ಮೂಲಕ ನೀರು ಒದಗಿಸಲಾಗುತ್ತಿದೆ ಎಂದು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಬಹುತೇಕ ಗ್ರಾಮಗಳಲ್ಲಿ ಗ್ರಾಮಸ್ಥರೇ ಸ್ವಯಂಪ್ರೇರಿತರಾಗಿ ತಮ್ಮ ಕೊಳವೆಬಾವಿಗಳಿಂದ ಗ್ರಾಮಗಳಿಗೆ ನೀರು ಕೊಡಲು ಅನುಮತಿ ನೀಡಿದ್ದು, ನೀರಿನ ಸಮಸ್ಯೆ ಅಷ್ಟೊಂದು ಉಲ್ಬಣಿಸಿಲ್ಲ. ಕೆಲವು ಖಾಸಗಿ ಕೊಳವೆಬಾವಿಗಳಿಗೆ ಗ್ರಾಮ ಪಂಚಾಯಿತಿಯಿಂದ ಮಾಸಿಕ ಬಾಡಿಗೆ ಪಾವತಿಸುವ ಮೂಲಕ ನೀರನ್ನು ಒದಗಿಸಲಾಗಿದೆ. ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕವೂ ಅಗತ್ಯ ನೀರು ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನೀರಿನ ಸಮಸ್ಯೆ ಉಂಟಾಗದಂತೆ ಆಯಾ ಗ್ರಾಮ ಪಂಚಾಯಿತಿಗಳಿಗೆ ಈಗಾಗಲೇ ಕಟ್ಟುನಿಟ್ಟಾಗಿ ನಿರ್ದೇಶನ ನೀಡಲಾಗಿದ್ದು, ಜಿಲ್ಲಾ ಪಂಚಾಯಿತಿಯಿಂದಲೂ ಕಾಲಕಾಲಕ್ಕೆ ನೀರಿನ ಸಮಸ್ಯೆ ಕುರಿತು ಬರುವ ದೂರಿಗೆ ಸಮರ್ಪಕವಾಗಿ ಸ್ಪಂದಿಸಲಾಗುತ್ತಿದೆ ಎಂದು ತಿಳಿಸಿದರು.
ಬರಿದಾದ ಹೇಮಾವತಿ: ಹೇಮಾವತಿ ಜಲಾಶಯ ಕಳೆದ ವರ್ಷ ಭರ್ತಿ ಆಗದೇ ಇರುವುದು ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ. ಮಳೆಯ ಕೊರತೆಯಿಂದಾಗಿ ಹೇಮಾವತಿ ನದಿಯ ಒಳಹರಿವು ನಿಗದಿಗಿಂತ ಕಡಿಮೆ ಇತ್ತು. ಅದರ ಜೊತೆಗೆ ಕಾಲುವೆಯ ಮೂಲಕ ಕೆರೆಗಳನ್ನು ತುಂಬಿಸಲು ನೀರು ಹರಿಸಲಾಗಿದ್ದು, ಸದ್ಯಕ್ಕೆ 9.887 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಾಗಿದೆ.
ಇರುವ ನೀರನ್ನು ಹಾಸನ ಜಿಲ್ಲೆಯ ಜೊತೆಗೆ ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಯ ಪಟ್ಟಣಗಳಿಗೂ ಕುಡಿಯುವ ಉದ್ದೇಶಕ್ಕಾಗಿ ಪೂರೈಕೆ ಮಾಡಬೇಕಾಗಿದೆ. ಒಂದು ವೇಳೆ ಮೇ ಒಳಗೆ ಮಳೆ ಬಾರದೇ ಇದ್ದಲ್ಲಿ, ಈ ಬಾರಿಯ ಬೇಸಿಗೆ ಮತ್ತಷ್ಟು ದುಸ್ತರವಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.ಹಾಸನ ತಾಲ್ಲೂಕಿನ 26 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ದೊಡ್ಡ ಮಟ್ಟದ ಸಮಸ್ಯೆ ಇರುವೆಡೆ ಕೂಡಲೇ ಕುಡಿಯುವ ನೀರಿನ ಸರಬರಾಜಿಗೆ ತಿಳಿಸಲಾಗಿದೆ. ಸ್ವರೂಪ್ ಪ್ರಕಾಶ್ ಶಾಸಕ
ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು ಕುಡಿಯುವ ನೀರು ಒದಗಿಸಬೇಕು. 15 ದಿನಕ್ಕೊಮ್ಮೆ ಬಿಲ್ ಸಲ್ಲಿಸಿದಲ್ಲಿ ಎಸ್.ಡಿ.ಆರ್.ಎಫ್.ನಡಿ ಹಣ ಪಾವತಿ ಮಾಡಲಾಗುವುದು.ಸಿ.ಸತ್ಯಭಾಮಾ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಸುಮಾರು 30 ಗ್ರಾಮಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದ್ದು ಕಳೆದ ಕೆಲ ತಿಂಗಳಿಂದ ಬೋರ್ವೆಲ್ ಮೂಲಕ ನೀರನ್ನು ಒದಗಿಸಲಾಗುತ್ತಿದೆ.ಕೃಷ್ಣಮೂರ್ತಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ
ಹಾಸನ ತಾಲ್ಲೂಕಿನ 26 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ದೊಡ್ಡ ಮಟ್ಟದ ಸಮಸ್ಯೆ ಇರುವೆಡೆ ಕೂಡಲೇ ಕುಡಿಯುವ ನೀರಿನ ಸರಬರಾಜಿಗೆ ತಿಳಿಸಲಾಗಿದೆ.ಸ್ವರೂಪ್ ಪ್ರಕಾಶ್ ಶಾಸಕ
ಹೊಸ ಕೊಳವೆಬಾವಿಗಿಲ್ಲ ಅವಕಾಶ ಬರದಿಂದ ತತ್ತರಿಸುವ ಜಿಲ್ಲೆಯಲ್ಲಿ ಕುಡಿಯುವ ನೀರು ಜಾನುವಾರು ಮೇವು ಸೇರಿದಂತೆ ಅಗತ್ಯ ಸಿದ್ಧತೆಗಾಗಿ ಸರ್ಕಾರ ₹8 ಕೋಟಿಯಿಂದ ₹10 ಕೋಟಿ ಮಂಜೂರು ಮಾಡಿದೆ. ಪ್ರತಿ ತಾಲ್ಲೂಕಿಗೆ ತಲಾ ₹60 ಲಕ್ಷದಂತೆ ಹಂಚಿಕೆ ಮಾಡಲಾಗುತ್ತಿದೆ. ಟಾಸ್ಕ್ ಫೋರ್ಸ್ ಸಭೆ ನಡೆಸಿ ಅಗತ್ಯ ಇರುವಲ್ಲಿ ಈ ಅನುದಾನ ಖರ್ಚು ಮಾಡಲಾಗುತ್ತಿದೆ. ಆದರೆ ಈ ಬಾರಿ ಅನುದಾನ ಬಿಡುಗಡೆ ಆಗಿದ್ದರೂ ಹೊಸ ಕೊಳವೆಬಾವಿ ಕೊರೆಯಲು ಅವಕಾಶ ನೀಡಿಲ್ಲ. ಇದೀಗ ಬೇಸಿಗೆಯಲ್ಲಿ ಗ್ರಾಮಗಳ ನೀರಿನ ಬವಣೆ ನೀಗಿಸುವುದು ಹೇಗೆ ಎನ್ನುವ ಪ್ರಶ್ನೆ ಜನಪ್ರತಿನಿಧಿಗಳನ್ನು ಕಾಡುತ್ತಿದೆ. ‘ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿರುವುದರಿಂದ ಹೊಸದಾಗಿ ಕೊಳವೆಬಾವಿ ಕೊರೆಸುವ ಮೂಲಕ ನೀರು ಒದಗಿಸಲು ಸರ್ಕಾರದಿಂದ ಅನುಮತಿ ಬೇಕಿದೆ. ಸೋಮವಾರದಿಂದ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು ಕೊಳವೆಬಾವಿ ಕೊರೆಯಲು ಹಾಗೂ ಪೈಪ್‌ಲೈನ್ ಅಳವಡಿಕೆಗೆ ಅವಕಾಶ ಕೋರಲಾಗುವುದು’ ಎಂದು ಶಾಸಕ ಸ್ವರೂಪ್ ಪ್ರಕಾಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.