ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಲಾ ಆರಂಭದಲ್ಲೇ ಎರಡು ಜೊತೆ ಸಮವಸ್ತ್ರ: ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಇಲಾಖೆ ಕ್ರಮ

ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published 26 ಮೇ 2024, 4:39 IST
Last Updated 26 ಮೇ 2024, 4:39 IST
ಅಕ್ಷರ ಗಾತ್ರ

ಕಲಬುರಗಿ: 2024–25ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆಗಳ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಈ ವರ್ಷದಿಂದ 1ರಿಂದ 10ನೇ ತರಗತಿ ಮಕ್ಕಳಿಗೆ ಶಾಲಾ ಆರಂಭದಲ್ಲೇ ಎರಡು ಜೊತೆ ಉಚಿತ ಸಮವಸ್ತ್ರಗಳನ್ನು ವಿತರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಸರ್ಕಾರಿ ಶಾಲೆಗಳ ಮಕ್ಕಳ ಹಾಜರಾತಿ ಹೆಚ್ಚಳ ಮತ್ತು ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿ ವರ್ಷ ಶಾಲಾ ಆರಂಭದಲ್ಲಿ ಒಂದು ಜೊತೆ ಬಟ್ಟೆ ವಿತರಿಸಿದರೆ, ಮತ್ತೊಂದು ಜೊತೆ ಬಟ್ಟೆ ಅಕ್ಟೋಬರ್‌ನಲ್ಲಿ ವಿತರಿಸಲಾಗುತ್ತಿತ್ತು. ಆದರೆ, ಈ ಬಾರಿ ಮಕ್ಕಳು ಶಾಲೆಗೆ ಬೇಗ ದಾಖಲಾಗಲಿ ಮತ್ತು ಶೈಕ್ಷಣಿಕ ವರ್ಷದ ಆರಂಭದಿಂದಲೇ ಶಾಲೆಗೆ ಹಾಜರಾಗಲಿ ಎಂದು ಈ ವಿನೂತನ ಕ್ರಮ ಕೈಗೊಳ್ಳಲಾಗಿದೆ.

6, 7ನೇ ತರಗತಿ ವಿದ್ಯಾರ್ಥಿನಿಯರಿಗೂ ಚೂಡಿದಾರ್‌: 8, 9 ಮತ್ತು 10ನೇ ತರಗತಿಗಳ ಹೆಣ್ಣುಮಕ್ಕಳಿಗೆ ವಿತರಿಸುತ್ತಿದ್ದ ಚೂಡಿದಾರ್‌ ಸಮವಸ್ತ್ರ ಈ ವರ್ಷದಿಂದ 6 ಮತ್ತು 7ನೇ ತರಗತಿಗಳ ವಿದ್ಯಾರ್ಥಿನಿಯರಿಗೂ ವಿಸ್ತರಿಸಿರುವುದು ವಿಶೇಷ. ಹೆಣ್ಣುಮಕ್ಕಳ ರಕ್ಷಣೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ವಿದ್ಯಾವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳ ಎಲ್ಲ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಿಸಲಾಗುತ್ತದೆ. ಪ್ರತಿ ತರಗತಿವಾರು ವಿವಿಧ ಅಳತೆಗಳಲ್ಲಿ ಸಮವಸ್ತ್ರ ಈಗಾಗಲೇ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ.

‘ನಮ್ಮ ಭಾಗಕ್ಕೆ ಈಗಾಗಲೇ ಪ್ರತಿ ವಿದ್ಯಾರ್ಥಿಗೆ ಎರಡು ಜೊತೆ ಬಟ್ಟೆ ಬಂದಿದೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದಿಂದ ಒಂದು ಜೊತೆ ಮತ್ತು ಇನ್ನೊಂದು ಜೊತೆ ‘ಕಾಂಚನ’ ಗಾರ್ಮೆಂಟ್ಸ್‌ನಿಂದ ಬಂದಿದೆ. ಗಾರ್ಮೆಂಟ್ಸ್‌ನಿಂದ ಬಂದ ಬಟ್ಟೆಗಳನ್ನು ಈಗಾಗಲೇ ಶಾಲೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಆದರೆ, ಗೃಹಕೈಗಾರಿಕೆ ಅಥವಾ ಮಿಲ್‌ಗಳಿಂದ ನಿಗಮದ ಮೂಲಕ ಬಂದಂತಹ ಸಮವಸ್ತ್ರ ಬಟ್ಟೆಗಳ ಗುಣಮಟ್ಟ ಪರೀಕ್ಷೆಗಾಗಿ ಪ್ರತಿ ತಾಲ್ಲೂಕಿನಿಂದ ರ್‍ಯಾಂಡಮ್‌ ಆಗಿ ಪಡೆದು ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿಗೆ ಕಳುಹಿಸಲಾಗಿದೆ. ಒಪ್ಪಿಗೆ ಸಿಕ್ಕ ನಂತರ ಅವುಗಳ ಹಂಚಿಕೆಗೂ ಕ್ರಮ ವಹಿಸಲಾಗುವುದು’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಸಕ್ರಪ್ಪಗೌಡ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿ ಬಾರಿ ಶಾಲೆ ಆರಂಭವಾಗಿ ಅರ್ಧ ಶೈಕ್ಷಣಿಕ ವರ್ಷ ಮುಗಿದರೂ ಮಕ್ಕಳಿಗೆ ಸಮವಸ್ತ್ರ ಹಂಚಿಕೆಯಾಗಿಲ್ಲ ಎಂಬ ಆರೋಪ ಪಾಲಕರಿಂದ ಕೇಳಿಬರುತ್ತಿತ್ತು. ಅಲ್ಲದೇ, ಈ ಬಾರಿ ಲೋಕಸಭಾ ಚುನಾವಣೆ ಮತ್ತು ವಿಧಾನ ಪರಿಷತ್‌ ಪದವೀಧರ ಕ್ಷೇತ್ರದ ಚುನಾವಣೆ ಹಾಗೂ ಬರ ಹಿನ್ನೆಲೆಯಲ್ಲಿ ಸಮವಸ್ತ್ರ ಸರಬರಾಜು ಮತ್ತಷ್ಟು ತಡವಾಗಬಹುದು ಎಂಬ ಆತಂಕ ಪಾಲಕರಲ್ಲಿತ್ತು.

ಇದಲ್ಲದೇ, ರಾಜ್ಯ ಸರ್ಕಾರ ಐದು ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನಕ್ಕೆ ಅನುದಾನ ಹೊಂದಿಸಲು ಪರದಾಡುತ್ತಿದ್ದು, ಇದರಿಂದಲೂ ಶೈಕ್ಷಣಿಕ ಚಟುವಟಿಕೆಗಳಿಗೆ ಅನುದಾನದ ಕೊರತೆ ಆಗಬಹುದು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿತ್ತು. ಈ ಎಲ್ಲವುಗಳನ್ನು ಮೆಟ್ಟಿ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳ ಸಕಾಲಿಕ ಕ್ರಮದಿಂದ ಶಾಲಾ ಸಮವಸ್ತ್ರಗಳು ಶೀಘ್ರ ಮಕ್ಕಳ ಕೈಸೇರಲಿವೆ.

ಜಿಲ್ಲೆಯಲ್ಲಿ 766 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು, 991 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 298 ಪ್ರೌಢಶಾಲೆಗಳು ಸೇರಿ 2,055 ಸರ್ಕಾರಿ ಶಾಲೆಗಳು ಇವೆ. ಕಳೆದ ಶೈಕ್ಷಣಿಕ ವರ್ಷದಲ್ಲಿ 2,44,145 ಮಕ್ಕಳ ದಾಖಲಾತಿ ಇತ್ತು. ಈ ವರ್ಷ ಹೆಚ್ಚು ಕಡಿಮೆ ಆಗಬಹುದು. ಕಳೆದ ಸಾಲಿನಲ್ಲಿ ಜಿಲ್ಲೆಯ ಮಕ್ಕಳ ಎಸ್‌ಎಟಿಎಸ್‌ ದಾಖಲಾತಿ ಅನ್ವಯ ಆಯಾ ತಾಲ್ಲೂಕುಗಳಿಗೆ ಸಮವಸ್ತ್ರ ಕಳುಹಿಸಿಕೊಡಲಾಗುತ್ತಿದೆ. ಅದರಂತೆ ತರಗತಿವಾರು ಮಕ್ಕಳಿಗೆ ಸಮವಸ್ತ್ರ ತಲುಪಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ.ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗಳಿಗೆ ಕಡ್ಡಾಯವಾಗಿ ದಾಖಲಾಗುವಂತೆ ಆಕರ್ಷಿಸಲು ಶಾಲಾ ಆರಂಭದಲ್ಲೇ ಸಮವಸ್ತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ಶಾಲೆಗಳಿಗೆ ಸಮವಸ್ತ್ರ ತಲುಪಲಿವೆ

ಸಕ್ರಪ್ಪಗೌಡ ಬಿರಾದಾರ
ಸಕ್ರಪ್ಪಗೌಡ ಬಿರಾದಾರ
ಎಲ್ಲಾ ಮಕ್ಕಳು ಸರ್ಕಾರಿ ಶಾಲೆಗಳಿಗೆ ಕಡ್ಡಾಯವಾಗಿ ದಾಖಲಾಗುವಂತೆ ಆಕರ್ಷಿಸಲು ಶಾಲಾ ಆರಂಭದಲ್ಲೇ ಸಮವಸ್ತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ಶಾಲೆಗಳಿಗೆ ಸಮವಸ್ತ್ರ ತಲುಪಲಿವೆ
ಸಕ್ರಪ್ಪಗೌಡ ಬಿರಾದಾರ ಡಿಡಿಪಿಐ
ಕಲಬುರಗಿ ದಕ್ಷಿಣದಲ್ಲಿ 172 ಶಾಲೆಗಳಿದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಮಾರ್ಗದರ್ಶನದಂತೆ ಅಂದಾಜು 22432 ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ವಿತರಿಸಲಾಗುವುದು. ಈಗಾಗಲೇ ಶೇ 70ರಷ್ಟು ಸಮವಸ್ತ್ರ ಹಂಚಿಕೆಯಾಗಿದೆ
ರಾಜಕುಮಾರ ಪಾಟೀಲ ಶಿಕ್ಷಣ ಸಂಯೋಜಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT