ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಜಾತ್ರೆಗೆ ಮೆರುಗು ತರುವ ‘ಸ್ಲ್ಯಾಂಬೊ ರೈಡ್‌’

ಮಹಾದಾಸೋಹಿ ಜಾತ್ರೆಗೆ ಸಕಲ ಸಿದ್ಧತೆ: ಮಕ್ಕಳ ಆಟಿಕೆ, ಜೋಕಾಲಿಗಳ ಆಕರ್ಷಣೆ
ರಾಮಚಂದ್ರ ಸುತಾರ
Published 29 ಮಾರ್ಚ್ 2024, 5:30 IST
Last Updated 29 ಮಾರ್ಚ್ 2024, 5:30 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಮಹಾ ದಾಸೋಹಿ ಶರಣಬಸವೇಶ್ವರರ 202ನೇ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ಅಪ್ಪನ ಜಾತ್ರಾ ಮೈದಾನದಲ್ಲಿ ಮಕ್ಕಳ ಆಟಿಕೆ ಸಾಮಗ್ರಿ, ಬಳೆ, ತಿಂಡಿ–ತಿನಿಸು, ಅಲಂಕಾರಿಕ ಸೇರಿದಂತೆ ವಿವಿಧ ಮಳಿಗೆಗಳು ತೆರೆದುಕೊಳ್ಳುತ್ತಿವೆ.

ಜಿಲ್ಲೆ, ರಾಜ್ಯ ಮತ್ತು ಅಂತರರಾಜ್ಯ ಜಿಲ್ಲೆಗಳಿಂದ ಬಂದಿರುವ ವ್ಯಾಪಾರಸ್ಥರು ಜಾತ್ರಾ ಮೈದಾನದಲ್ಲಿ ಬೀಡುಬಿಟ್ಟಿದ್ದಾರೆ. ಜಾತ್ರಾ ಕಮಿಟಿಯಿಂದ ಪರವಾನಗಿ ಪಡೆದು ಮಳಿಗೆ ಸ್ಥಾಪಿಸುತ್ತಿದ್ದಾರೆ. ಮಹಾರಥೋತ್ಸವಕ್ಕೆ ಎರಡೇ ದಿನ ಬಾಕಿ ಇರುವುದರಿಂದ ಬಿಸಿಲನ್ನೂ ಲೆಕ್ಕಿಸದೇ ಕುಟುಂಬಸ್ಥರು ಸಾಥ್‌ ನೀಡುತ್ತಿದ್ದಾರೆ. ಕಾರ್ಮಿಕರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಅಪ್ಪನ ಜಾತ್ರಾ ಮೈದಾನದಲ್ಲಿ ಸಣ್ಣವರು– ದೊಡ್ಡವರೆನ್ನದೆ ಪ್ರತಿಯೊಬ್ಬರೂ ಕುಳಿತುಕೊಂಡು ಆನಂದಿಸುವ ಬಗೆಬಗೆಯ ಜೋಕಾಲಿಗಳು ತಲೆಎತ್ತುತ್ತಿವೆ. ಇವುಗಳಲ್ಲಿ ಟೋರಾಟೋರಾ, ನೇವಿ ಕೋಲಂಬಸ್‌, ಬ್ರೆಕ್‌ಡ್ಯಾನ್ಸ್, ಡ್ರ್ಯಾಗನ್‌, ಸ್ಲ್ಯಾಂಬೊ ರೈಡ್‌, ಟ್ರೇನ್‌, ಜಂಪಿಂಗ್‌ ಜಪಾಂಗ್‌, ಮಕ್ಕಳ ಜಲಕ್ರೀಡೆ ಆಕರ್ಷಣೀಯವಾಗಿವೆ. ಜನರನ್ನು ಆಕರ್ಷಿಸಲು ಬಣ್ಣಬಣ್ಣದ ವಿದ್ಯುತ್‌ ಬಲ್ಬ್‌ಗಳನ್ನು ಅಳವಡಿಸಲಾಗುತ್ತಿದೆ.

‌‘ಜಾತ್ರೆಯಲ್ಲಿ ಮಕ್ಕಳು ಮತ್ತು ಯುವಕರಿಗೆ ಸ್ಲ್ಯಾಂಬೊ ರೈಡ್‌ ಬಲು ಆಕರ್ಷಿತವಾಗಿದ್ದು, ಇದರಲ್ಲಿ 30ರಿಂದ 40 ಜನ ಕುಳಿತುಕೊಳ್ಳಬಹುದು. ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ತರಲಾಗಿದೆ’ ಎಂದು ಹೇಳುತ್ತಾರೆ ಮಲ್ಲು ಭಾಯ್. ‘ಕೊಲಂಬಸ್ ಎನ್ನುವ ಹಡಗಿನಲ್ಲಿ ಮಕ್ಕಳು ಕುಳಿತರೆ ಸಮುದ್ರದ ಹಡಗಿನಲ್ಲಿ ಕುಳಿತ ಅನುಭವವಾಗುತ್ತದೆ. ಇದು ಈಚೆಗೆ ಬಂದಿರುವ ಆಟವಾಗಿದೆ’ ಎಂದು ಅವರು ತಿಳಿಸಿದರು.

‘ಮಕ್ಕಳ ಮನರಂಜನೆಯ ಜೋಕಾಲಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಲಾತೂರ್‌ನಿಂದ 8 ವಾಹನಗಳಲ್ಲಿ ತರಲಾಗಿದೆ’ ಎಂದು ವಾಹನ ಚಾಲಕ ದಸ್ತಗೀರ ಪಟೇಲ್‌ ತಿಳಿಸಿದರು.

ಜಾತ್ರೆಯಲ್ಲಿ ಬಗೆಬಗೆಯ ಬೊಂಬೆ, ಕ್ಯಾಪ್‌, ಪ್ಲಾಸ್ಟಿಕ್‌ ಕಾರು ಸೇರಿದಂತೆ ಮಕ್ಕಳ ಆಟಿಕೆ ಸಾಮಗ್ರಿಗಳಿಗೂ ಬರ ಇಲ್ಲ. ಇನ್ನು ಬೇಸಿಗೆ ಇರುವುದರಿಂದ ತಂಪುಪಾನೀಯ ಮಳಿಗೆಗಳು ಆಗಲೇ ವ್ಯಾಪಾರ ಆರಂಭಿಸಿವೆ. ಲಿಂಬೆ ರಸ, ಸೋಡಾ, ಜೂಸ್ ಬಂಡಿಗಳು ಓಡಾಡುತ್ತಿವೆ. ಕಬ್ಬಿನ ಹಾಲಿನ ಅಂಗಡಿ ಹೆಚ್ಚು ತೆರೆದುಕೊಂಡಿವೆ.

‘ಜಾತ್ರೆಯಲ್ಲಿ ನಮ್ಮ ತಂದೆಯ ಕಾಲದಿಂದಲೂ ಕಬ್ಬಿನ ಹಾಲಿನ ಅಂಗಡಿ ಹಾಕುತ್ತಿದ್ದೇವೆ’ ಎಂದು ಶರಣು ಚೇಂಗಟಾ ತಿಳಿಸಿದರೆ, ‘25 ವರ್ಷಗಳಿಂದ ಜೂಸ್‌ ಮತ್ತು ಐಸ್‌ಕ್ರೀಮ್‌ ಅಂಗಡಿ ಹಾಕುತ್ತಿದ್ದೇವೆ’ ಎಂದು ಬಲಭೀಮ ಹಾಳಕೇರಿ ತಿಳಿಸಿದರು.

ಜಾತ್ರಾ ಸಮಿತಿಯಿಂದ ಸಕಲ ವ್ಯವಸ್ಥೆ

‘ಅಪ್ಪನ ಜಾತ್ರಾ ಮೈದಾನದಲ್ಲಿ ಸುಮಾರು 70–80 ಮಳಿಗೆ ಸ್ಥಾಪಿಸಲು ಮಾರ್ಕ್‌ ಮಾಡಲಾಗಿದ್ದು ವ್ಯಾಪಾರಸ್ಥರಿಗೆ ಪರವಾನಗಿ ನೀಡಲಾಗುತ್ತಿದೆ. ವಿದ್ಯುತ್‌ ನೀರು ಶೌಚಾಲಯದ ಸೌಕರ್ಯ ನೀಡಲಾಗಿದೆ. ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ. ಮುಖ್ಯವಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಜಾತ್ರಾ ಸಮಿತಿಯ ಉಸ್ತುವಾರಿ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಸುರೇಶಕುಮಾರ ನಂದಗಾಂವ ಮಾಹಿತಿ ನೀಡಿದರು.

ಜಾತ್ರಾ ಮೈದಾನದಲ್ಲಿ 10 ವರ್ಷಗಳಿಂದ ಕಬ್ಬಿನ ಹಾಲಿನ ಅಂಗಡಿ ಹಾಕುತ್ತಿದ್ದೇವೆ. ಈಗಾಗಲೇ 20X20 ಜಾಗದಲ್ಲಿ ಪರವಾನಗಿ ಪಡೆದಿದ್ದು ಕಬ್ಬು ತರುವುದಷ್ಟೇ ಬಾಕಿ ಇದೆ.
–ಗೋಪಿ ತಳವಾರ ಬಿದನೂರ, ಅಫಜಲಪುರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT