ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರ ಭೂಮಿ ಮೇಲೆ ರಿಯಲ್ ಎಸ್ಟೇಟ್ ಮಾಫಿಯಾ ದೃಷ್ಟಿ

ಸಣ್ಣಪುಟ್ಟ ರೈತರಿಗೆ ಒಕ್ಕಲೇಳುವ ಭೀತಿ; ವನ್ಯಜೀವಿಗಳ ಆವಾಸಕ್ಕೆ ಧಕ್ಕೆ
ಸಿದ್ದರಾಜ ಎಂ.ಮಲಕಂಡಿ
Published 12 ಜನವರಿ 2024, 6:54 IST
Last Updated 12 ಜನವರಿ 2024, 6:54 IST
ಅಕ್ಷರ ಗಾತ್ರ

ವಾಡಿ: ಚಿರತೆಗಳ ಅವಾಸಸ್ಥಾನ, ಸಿಹಿಯಾದ ಸೀತಾಫಲ ಹಣ್ಣುಗಳನ್ನು ನಾಡಿಗೆ ಒದಗಿಸುತ್ತಿದ್ದ ಯಾಗಾಪುರ ಗುಡ್ಡಗಾಡು ಪ್ರದೇಶದ ಮೇಲೆ ಈಗ ರಿಯಲ್ ಎಸ್ಟೇಟ್ ಮಾಫಿಯಾ ಕಣ್ಣು ಬಿದ್ದಿದೆ.

ಒಂದೆರಡು ಎಕರೆಯಲ್ಲಿ ಜೀವನ ಕಟ್ಟಿಕೊಂಡಿರುವ ಸಾವಿರಾರು ಕುಟುಂಬಗಳು ಇಲ್ಲಿವೆ. ಈಗ ಬದುಕಿಗೆ ಆಸರೆಯಾಗಿದ್ದ ಜಮೀನು ಕಳೆದುಕೊಳ್ಳುವ ಭೀತಿ ಉಂಟಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಗುಡ್ಡಗಾಡು ಪ್ರದೇಶದ ವಿವಿಧ ಗ್ರಾಮ ಹಾಗೂ ತಾಂಡಾಗಳಲ್ಲಿ ರೈತರ ಮನವೊಲಿಸಿ ಜಮೀನು ಪಡೆಯಲಾಗುತ್ತಿದೆ.

ಯಾಗಾಪುರ, ಶಿವನಗರ, ಬೆಳಗೇರಾ ಹಾಗೂ ಹಲವು ತಾಂಡಾಗಳ 4ರಿಂದ 5 ಸಾವಿರ ಎಕರೆ ಫಲವತ್ತಾದ ಜಮೀನು ರೈತರಿಂದ ಬಂಡವಾಳಶಾಹಿಗಳ ಪಾಲಾಗುವ ಆತಂಕ ಎದುರಾಗಿದೆ. ಜನರ ನೆಮ್ಮದಿ ಕೆಡಿಸಿರುವ ರಿಯಲ್ ಎಸ್ಟೇಟ್ ಏಜೆಂಟರು ವಿವಿಧ ಆಮಿಷ ತೋರಿಸಿ ಜಮೀನು ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಸಿನಿಮಾ ಶೂಟಿಂಗ್ ಪಾಯಿಂಟ್, ಪ್ರವಾಸಿ ತಾಣ, ಹೋಟೆಲ್ ಉದ್ಯಮ, ಆಯುರ್ವೇದಿಕ್ ಮತ್ತು ಅಲೋಪಥಿಕ್ ಮೆಡಿಕಲ್ ಹಬ್ ಹಾಗೂ ಸುಂದರ ಪ್ರಕೃತಿ ತಾಣ ನಿರ್ಮಿಸಲಾಗುವುದು ಎಂದು ರೈತರಿಗೆ ಹೇಳಿ ಜಮೀನು ತೆಗೆದುಕೊಳ್ಳಲಾಗುತ್ತಿದೆ. ಜಮೀನು ಅಭಿವೃದ್ಧಿಪಡಿಸಿ ನಿವೇಶನ ತಯಾರಿಸಿ ಮಾರಾಟ ಹಾಗೂ ವಾಣಿಜ್ಯ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ ಎನ್ನಲಾಗಿದೆ. ವ್ಯವಹಾರ ನಂಬಿಕೆ ದೃಷ್ಟಿಯಿಂದ ಸ್ಥಳೀಯ ಕೆಲವು ರೈತರನ್ನು ಹೈದರಾಬಾದ್‌ಗೆ ಸಹ ಕರೆದೊಯ್ಯಲಾಗಿದೆ. ನಿವೇಶನ ಅಭಿವೃದ್ಧಿಯ ವಿಡಿಯೊ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.

ಗುಡ್ಡಕ್ಕೆ ಹೊಂದಿಕೊಂಡಿರುವ ದಂಡಗುಂಡ, ಸಂಕನೂರು, ಯಾಗಾಪುರ, ಬೆಳಗೇರ, ಶಿವನಗರ, ಫತ್ತುನಾಯಕ ನಾಯಕ ಜಯರಾಂ ತಾಂಡಾ, ಗ್ರಾಮಗಳ ಸಾವಿರಾರು ಎಕರೆ ಫಲವತ್ತಾದ ಜಮೀನುಗಳ ಮೇಲೆ ಕಣ್ಣು ಹಾಕಿರುವ ರಿಯಲ್ ಎಸ್ಟೇಟ್ ಉದ್ಯಮಿಗಳು ಈಗಾಗಲೇ ಸುಮಾರು 100ಕ್ಕೂ ಅಧಿಕ ಎಕರೆ ಜಮೀನು ರೈತರಿಂದ ಖರೀದಿ ಮಾಡಿದ್ದಾರೆ. ಪ್ರತಿ ಎಕರೆಗೆ ₹ 5ರಿಂದ ₹ 7 ಲಕ್ಷದ ತನಕ ಹಣ ಕೊಟ್ಟು ಖರೀದಿ ಮಾಡಲಾಗಿದೆ.

ಕೆಲವು ರೈತರಿಗೆ ಮುಂಗಡವಾಗಿ ₹ 5ರಿಂದ ₹ 10 ಸಾವಿರ ಹಣ ಕೊಟ್ಟು ಒಪ್ಪಂದ ಮಾಡಿಕೊಳ್ಳಲಾಗಿದೆ. ಕುಟುಂಬದ ಇನ್ನಿತರ ಸದಸ್ಯರ ಅನುಮತಿ ಪಡೆಯದೇ ಖರೀದಿ ಪತ್ರ ಬರೆಸಿಕೊಂಡು ವ್ಯವಹಾರ ಮಾಡುತ್ತಿರುವುದು ಕೆಲವು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೃಷಿಯನ್ನೇ ನಂಬಿರುವ ಸುಮಾರು 10 ಸಾವಿರ ಕುಟುಂಬಗಳು ಇಲ್ಲಿವೆ. ರೈತರು ಜಮೀನು ಮಾರಾಟಕ್ಕೆ ಮುಂದಾಗಿರುವುದರಿಂದ ಮತ್ತಷ್ಟು ಗುಳೆ ಹೆಚ್ಚಲಿದೆ ಎಂದು ಆತಂಕ ತಲೆದೋರಿದೆ.

ಲಕ್ಷ್ಮಣ ಚವ್ಹಾಣ
ಲಕ್ಷ್ಮಣ ಚವ್ಹಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT