ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಬಾದ್‌–ಕಾಗಿಣಾ ಸಂಪರ್ಕಿಸುವ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

₹65 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಪೂರ್ಣ
ಸಿದ್ದರಾಜ ಎಸ್. ಮಲ್ಕಂಡಿ
Published 18 ಮೇ 2024, 7:12 IST
Last Updated 18 ಮೇ 2024, 7:12 IST
ಅಕ್ಷರ ಗಾತ್ರ

ವಾಡಿ: ವಾಡಿ–ಶಹಾಬಾದ್‌ ನಡುವಿನ ರಾಷ್ಟ್ರೀಯ ಹೆದ್ದಾರಿ 150ರ ಮೇಲೆ ಕಾಗಿಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಹೊಸ ಸೇತುವೆಯ ಮೇಲೆ ಬಸ್‌ ಹಾಗೂ ಇತರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದು, ವಾಹನ ಚಾಲಕರು ಹಾಗೂ ಜನರಲ್ಲಿ ಹರ್ಷ ಮೂಡಿದೆ.

ಕಳೆದ ಒಂದು ವಾರದಿಂದ ಸೇತುವೆಯ ಮೇಲೆ ಸಂಚಾರ ಆರಂಭಗೊಂಡಿದ್ದು, ನಿರ್ಮಾಣಕ್ಕಿಂತ ಮುಂಚೆ ಹಾಗೂ ನಿರ್ಮಾಣ ವಾಹನ ಸವಾರರು ಅನುಭವಿಸುತ್ತಿದ್ದ ಸಂಕಟಕ್ಕೆ ಮುಕ್ತಿ ಸಿಕ್ಕಿದೆ.

ರಸ್ತೆ ಮೇಲ್ದರ್ಜೆಗೇರಿದ್ದರೂ ಹೊಸ ಸೇತುವೆ ನಿರ್ಮಾಣವಾಗಿರಲಿಲ್ಲ. ಹೀಗಾಗಿ ಹಳೆಯ ಶಿಥಿಲಗೊಂಡಿದ್ದ ಸೇತುವೆಯ ಮೇಲೆಯೇ ಸಂಚರಿಸಬೇಕಿತ್ತು. ಹೆಚ್ಚು ವಾಹನಗಳ ಓಡಾಟದಿಂದ ಸೇತುವೆ ಹಾಗೂ ಸೇತುವೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದರಿಂದ ಸವಾರರು ಸಂಕಷ್ಟ ಅನುಭವಿಸಬೇಕಿತ್ತು. ಮಳೆ ಬಂದರೆ ಕಾಗಿಣಾ ನದಿ ಮಹಾಪೂರದಿಂದ ಸೇತುವೆ ಮುಳುಗಿ ಸಂಚಾರ ಕಡಿತಗೊಳ್ಳುತ್ತಿತ್ತು. ಈಗ ಸಂಚಾರ ಕಡಿತಗೊಳ್ಳುವ ಆತಂಕವಿಲ್ಲ.

ನೂರಾರು ಬಸ್‌ಗಳು ನಿತ್ಯ ಅಂತರರಾಜ್ಯ ಸಂಚಾರ ಮಾಡುತ್ತವೆ. ಹೀಗಾಗಿ ಹೊಸ ಸೇತುವೆ ನಿರ್ಮಿಸಿ, ಸಂಕಷ್ಟ ತಪ್ಪಿಸಬೇಕು ಎಂಬುದು ಜನರ ಒತ್ತಾಯವಾಗಿತ್ತು. ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಅಂದಿನ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲರಿಗೆ ಅನುದಾನ ಕೋರಿ ಮನವಿ ಮಾಡಿದ್ದರು. ಆಗ ಸಚಿವರು ಅನುದಾನ ಬಿಡುಗಡೆ ಮಾಡಿದ್ದರಿಂದ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು.

2022ರಲ್ಲಿ ಆರಂಭವಾಗಿದ್ದ ಕಾಮಗಾರಿ ಈಗ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಒಟ್ಟು 400 ಮೀಟರ್ ಉದ್ದ ಹಾಗೂ 16 ಮೀಟರ್ ಅಗಲದ ನಾಲ್ಕು ಪಥದ ಸೇತುವೆಯಾಗಿದೆ. ಮೇ. ಕೆಕೆಬಿ ಎಂಜಿನಿಯರಿಂಗ್ ಅಂಡ್ ಕನ್ಸ್ಟ್ರಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನಿರ್ಮಾಣ ಸಂಸ್ಥೆ ಕಾಮಗಾರಿ ಮುಗಿದಿದೆ. ಸೇತುವೆ ಅಧಿಕೃತವಾಗಿ ಲೋಕಾರ್ಪಣೆ ಬಾಕಿ ಉಳಿದಿದೆ.

ಹೊಸ ಸೇತುವೆ ನಿರ್ಮಾಣದಿಂದ ಯಾದಗಿರಿ ಕಲಬುರಗಿ ನಡುವಿನ ಸಂಚಾರ ಸರಳವಾಗಿದ್ದು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಕಲಬುರಗಿ ಪ್ರಯಾಣ ಮತ್ತಷ್ಟು ಹಗುರವಾಗಿದ್ದು, ಸಮಯವೂ ಉಳಿತಾಯ ಆಗಲಿದೆ. ಹೊಸ ಸೇತುವೆ ನಿರ್ಮಾಣದಿಂದ ವಾಹನ ಸವಾರರು ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿ–ರಾಯಚೂರು ನಡುವೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದ್ದು, ವಾಹನಗಳ ಓಡಾಟ ಹೆಚ್ಚಿದೆ. ಇದಕ್ಕೆ ಪೂರಕವಾಗಿ ಸೇತುವೆ ನಿರ್ಮಾಣದ ಅವಶ್ಯಕತೆ ಇತ್ತು. ಸೇತುವೆ ಪೂರ್ಣಗೊಂಡಿರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ
ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT